ಚೈನ್ನೈನಲ್ಲಿನ (Chennai) ದೇವಸ್ಥಾನ ಮತ್ತು ಖಾಸಗಿ ಆನೆಗಳ ಪಾಲನೆಗೆ ಸಂಬಂಧಿಸಿದ ಅಕ್ರಮಗಳ ಕುರಿತು ಮತ್ತಷ್ಟು ಸುದ್ದಿ ದೊರಕಿದ್ದು ಚೆನ್ನೈನ ಮಠವೊಂದರ ಮರಿ ಆನೆಯನ್ನು ಕೇರಳದ (Kerala) ತ್ರಿಶೂರ್‌ನಲ್ಲಿರುವ ಧಾರ್ಮಿಕ ಸಂಸ್ಥೆಗೆ ಸಾಗಿಸಲಾಗಿದೆ ಎಂದು ಆರೋಪಿಸಲಾಗಿದೆ. ಆರೋಪವನ್ನು ಮುಚ್ಚಿಹಾಕುವ ಪ್ರಯತ್ನದಲ್ಲಿ ಆನೆಯ ಹೆಸರನ್ನು ಬದಲಾಯಿಸುವ ಪ್ರಯತ್ನ ಕೂಡ ನಡೆದಿದ್ದು ಮಾಲೀಕತ್ವವನ್ನು ಬದಲಾಯಿಸುವ ಪ್ರಯತ್ನವೂ ನಡೆದಿದೆ ಎಂಬುದಾಗಿ ಸುದ್ದಿ ದೊರಕಿದೆ.
ಆನೆಯನ್ನು ಪತ್ತೆಹಚ್ಚಿ ಕರೆತರಲು ಅರಣ್ಯ ಇಲಾಖೆ ಆದೇಶ
ಆನೆಯನ್ನು ಪತ್ತೆ ಮಾಡಿ ಕರೆತರುವಂತೆ ತಮಿಳುನಾಡು ರಾಜ್ಯ ಅರಣ್ಯ ಇಲಾಖೆ ಆದೇಶಿಸಿದೆ. ಸುದ್ದಿಮಾಧ್ಯಮಗಳಿಗೆ ಸಿಕ್ಕಮಾಹಿತಿಯಂತೆ ಅಧಿಕೃತ ದಾಖಲೆಗಳ ಪ್ರಕಾರ, 2015 ರಲ್ಲಿ ತಾಂಬರಂನಲ್ಲಿರುವ ಅಹೋಬಿಲ ಮಠವು 19 ವರ್ಷದ ಮಲೋಲನ್ ಹೆಸರಿನ ಗಂಡು ಆನೆಯನ್ನು ಆರೈಕೆ ಮತ್ತು ನಿರ್ವಹಣೆ ವಿಷಯವಾಗಿ ಕೇರಳದ ತ್ರಿಶೂರ್‌ನಲ್ಲಿರುವ ಮನುಸ್ವಾಮಿ ಮಠಕ್ಕೆ ಕಳುಹಿಸಲು ಆಗಿನ ಮುಖ್ಯ ವನ್ಯಜೀವಿ ವಾರ್ಡನ್‌ನಿಂದ ಸಾರಿಗೆ ಪರವಾನಗಿಯನ್ನು ಪಡೆದುಕೊಂಡಿದೆ. ಜನವರಿ 28, 2020 ರಂದು ಪರ್ಮಿಟ್ ಅವಧಿ ಮುಗಿದಿದೆ ಆದರೂ ಆನೆ ಇನ್ನೂ ರಾಜ್ಯಕ್ಕೆ ಹಿಂತಿರುಗಿಲ್ಲ ಎಂಬುದು ತಿಳಿದು ಬಂದಿದೆ.
ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಆಂಟೋನಿ ಕ್ಲೆಮೆಂಟ್ ರೂಬಿನ್ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅರಣ್ಯ ಇಲಾಖೆಯೊಂದಿಗೆ ಅಕ್ರಮದ ಕುರಿತು ಔಪಚಾರಿಕ ಸಂವಹನ ನಡೆಸಿರುವುದಾಗಿಯೂ ತಿಳಿದುಬಂದಿದ್ದು ಅವರ ಪತ್ರವನ್ನು ಆಧರಿಸಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಶ್ರೀನಿವಾಸ ಆರ್ ರೆಡ್ಡಿ ಅವರು ಅಹೋಬಿಲ ಮಠಕ್ಕೆ ನೋಟಿಸ್ ನೀಡಿದ್ದರು.
ಇದನ್ನೂ ಓದಿ: Siddaramaiah: ಹೂವಿನ ಹಾಸಿಗೆಯಲ್ಲ ಸಿಎಂ ಸ್ಥಾನ! ಸಿದ್ದು ಮುಂದಿದೆ ಸಾಲು-ಸಾಲು ಸವಾಲು
ವನ್ಯಜೀವಿ (ರಕ್ಷಣೆ) ಕಾಯಿದೆ ಅಡಿಯಲ್ಲಿ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ
ನೋಟಿಸ್‌ನಲ್ಲಿ, ಪಿಸಿಸಿಎಫ್ ಕೇರಳದಿಂದ ಆನೆಯನ್ನು ಮರಳಿ ತರಲು ಮಠಕ್ಕೆ ಸೂಚಿಸಿದೆ, ಇಲ್ಲದಿದ್ದರೆ ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಅಡಿಯಲ್ಲಿ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದೆ.
ಮಠವು ಈ ಎಚ್ಚರಿಕೆಯ ನೋಟೀಸ್‌ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡದೇ ಇರುವ ಹಿನ್ನಲೆಯಲ್ಲಿ ವರ್ಷದ ಮಾರ್ಚ್‌ವರೆಗೆ ಗಡುವು ನೀಡಿತ್ತು. ಆದರೆ ಯಾವುದೇ ಉತ್ತರ ದೊರೆಯದೇ ಇದ್ದ ಕಾರಣ ಪಿಸಿಸಿಎಫ್, ಚೆನ್ನೈ ಅರಣ್ಯ ಸಂರಕ್ಷಣಾಧಿಕಾರಿ ಕೆ ಗೀತಾಂಜಲಿಯವರಿಗೆ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದೆ.
ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ನಡುವೆ, ಸುದ್ದಿಮಾಧ್ಯಮಕ್ಕೆ ದೊರೆತ ಮಾಹಿತಿಯ ಪ್ರಕಾರ ತ್ರಿಶೂರ್ ಮಠವು ಆನೆಯ ಹೆಸರನ್ನು ಲಕ್ಷ್ಮಿ ನಾರಾಯಣನ್ ಎಂದು ಬದಲಾಯಿಸಿದೆ ಮತ್ತು ಕೇರಳ ಅರಣ್ಯ ಇಲಾಖೆಯಿಂದ ಮಾಲೀಕತ್ವ ಪ್ರಮಾಣಪತ್ರವನ್ನು ಪಡೆಯಲು ದಾಖಲೆಗಳನ್ನು ಸಿದ್ಧಪಡಿಸುತ್ತಿದೆ ಎಂದು ವರದಿಯಾಗಿದೆ.
ಷರತ್ತು ದುರುಪಯೋಗಪಡಿಸಿಕೊಳ್ಳುತ್ತಿರುವ ಆನೆ ಮಾಲೀಕರು
ವನ್ಯಜೀವಿ ಸಂರಕ್ಷಣಾ ಕಾಯಿದೆ, 1972 ರ ಸೆಕ್ಷನ್ 40 (2) ರ ಪ್ರಕಾರ ರಾಜ್ಯದ ಮುಖ್ಯ ವನ್ಯಜೀವಿ ವಾರ್ಡನ್ ಅವರ ಲಿಖಿತ ಅನುಮತಿಯಿಲ್ಲದೆ ಸೆರೆಯಲ್ಲಿರುವ ಆನೆಯನ್ನು ಸ್ವಾಧೀನಪಡಿಸಿಕೊಳ್ಳುವುದು ಹಾಗೂ ವರ್ಗಾವಣೆಯನ್ನು ನಿಷೇಧಿಸುತ್ತದೆ.
ಇದನ್ನೂ ಓದಿ: DCM: ಉಪಮುಖ್ಯಮಂತ್ರಿ ಅನ್ನೋದು ಅಧಿಕಾರವಿಲ್ಲದ ಅಲಂಕಾರಿಕ ಹುದ್ದೆಯೇ? ಡಿಸಿಎಂಗೆ ಯಾವ ಪವರ್ ಇರುತ್ತದೆ?
ಅರಣ್ಯ ಇಲಾಖೆಗೆ ಆನೆಯ ಅನುವಂಶಿಕತೆಯನ್ನು ಘೋಷಿಸಲು ಮಾಲೀಕರಿಗೆ 90 ದಿನಗಳ ಕಾಲಾವಕಾಶವನ್ನು ನೀಡಲಾಗುತ್ತದೆ. ಆದರೆ ಆನೆಗಳ ಅಕ್ರಮ ಸಾಗಾಣಿಕೆ ಮತ್ತು ಶೋಷಣೆಯಲ್ಲಿ ತೊಡಗಿರುವ ಆನೆ ಮಾಲೀಕರು ಈ ಷರತ್ತನ್ನು ಹೆಚ್ಚಾಗಿ ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬುದು ವರದಿಯಾಗಿದೆ.
ಅಹೋಬಿಲ ಮಠದ ಹಿರಿಯ ಸದಸ್ಯರು ತಿಳಿಸಿರುವಂತೆ ಪ್ರಾಣಿಗಳ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಆನೆಯನ್ನು ತ್ರಿಶೂರ್ ಮಠಕ್ಕೆ ಉಡುಗೊರೆಯಾಗಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಆರಂಭದಲ್ಲಿ ಆನೆಯನ್ನು ಐದು ವರ್ಷಗಳ ಕಾಲ ಆರೈಕೆ ಹಾಗೂ ನಿರ್ವಹಣೆಗಾಗಿ ಕಳುಹಿಸಲಾಗಿದೆ ಆದರೆ ತ್ರಿಶೂರ್ ಮಠದಲ್ಲಿ ಆನೆಗೆ ಬೇಕಾಗಿರುವ ಎಲ್ಲಾ ಸವಲತ್ತುಗಳು ಇರುವುದರಿಂದ ಅದನ್ನು ಉಡುಗೊರೆಯಾಗಿ ನೀಡಲು ತೀರ್ಮಾನಿಸಲಾಯಿತು ಎಂದು ತಿಳಿಸಿದ್ದಾರೆ.
ಉಡುಗೊರೆ ನೀಡಿದ ಯಾವುದೇ ದಾಖಲೆಗಳಿಲ್ಲ
ಪಿಸಿಸಿಎಫ್ ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಶ್ರೀನಿವಾಸ್ ಆರ್ ರೆಡ್ಡಿ ಕಾನೂನಿನ ಅನ್ವಯ ಯಾರೂ ಆನೆಯನ್ನು ಉಡುಗೊರೆಯಾಗಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಐದು ವರ್ಷಗಳ ಆರೈಕೆ ಹಾಗೂ ನಿರ್ವಹಣೆ ಪರವಾನಗಿಯನ್ನು ಮಾತ್ರವೇ ನೀಡಲಾಗಿದ್ದು ಉಡುಗೊರೆ ನೀಡುವ ಬಗ್ಗೆ ಇಲಾಖೆಗೆ ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ.
ಆನೆಯನ್ನು ಪತ್ತೆಹಚ್ಚಿ ಅದರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುತ್ತೇವೆ. ಅಗತ್ಯವಿದ್ದರೆ ಇಲಾಖೆಯು ಪ್ರಾಣಿಯನ್ನು ವಶಪಡಿಸಿಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.
ಮಠದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುವ ಅವರು, ತ್ರಿಶೂರ್ ಮಠವು ಆನೆಯ ಹೆಸರನ್ನು ಬದಲಾಯಿಸಲು ಮತ್ತು ಮಾಲೀಕತ್ವವನ್ನು ಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ