ಪ್ರೇಯಸಿ ಕೈ ಕೊಟ್ಲು ಅಂತ ಸೇಡಿಗೆ Laptop ಕದಿಯುವ ಚಾಳಿ ಬೆಳಸಿಕೊಂಡ ಭಗ್ನಪ್ರೇಮಿ

ಇದರಿಂದ ಆಘಾತಕ್ಕೊಳಗಾದ ಭಗ್ನೆ ಪ್ರೇಮಿ ಮುಂದೆ ಕಳ್ಳತನವನ್ನೇ ತನ್ನ ವೃತ್ತಿಯನ್ನಾಗಿ ಮಾಡಿಕೊಂಡು ಮೊದಲಿಗೆ 2018 ರಲ್ಲಿ ಗುಜರಾತಿನ ಕಾಲೇಜೊಂದರಲ್ಲಿ ತನ್ನ ಕರಾಮತ್ತು ತೋರಿಸಿದ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರೀತಿಗೆ (Love) ಎಂತಹವರನ್ನು ಬದಲಿಸಬಹುದಾದ ಶಕ್ತಿ ಇದೆ ಎಂಬ ನಂಬಿಕೆ (Trust) ಹಲವರಲ್ಲಿದೆ. ಅದಕ್ಕೆ ಪುಷ್ಟಿ ನೀಡುವ ಅನೇಕ ಉದಾಹರಣೆಗಳನ್ನು ಸಹ ಘಟಿಸಿರುವುದನ್ನು ನಾವು ನೋಡಿದ್ದೇವೆ. ಆದರೆ, ಯಾವಾಗಲೂ ಇದು ಹೀಗೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ, ಈ ಪದವೀಧರ ಕಳ್ಳನೊಬ್ಬನ (Thief)  ಕಥೆ ಕೇಳಿದರೆ ನಿಮಗೆ ಇದು ಅರ್ಥವಾಗಬಹುದು.

ತಮಿಳುನಾಡಿನ ತಿರುವರೂರು ಜಿಲ್ಲೆಯ ಪುಲಿವೆಲಂ ಎಂಬ ಊರಿನ ತಮಿಳುಸೆಲ್ವನ್ ಬಿ.ಎ ಎಕಾನಾಮಿಕ್ಸ್ ಪದವೀಧರ. ಆದರೆ ವೃತ್ತಿ ಮಾತ್ರ ಕಳ್ಳತನ, ಅದರಲ್ಲೂ ವಿಶೇಷವಾಗಿ ಲ್ಯಾಪ್‌ಟಾಪ್‌ಗಳನ್ನು ಕದಿಯುವ ಮಹಾಕಳ್ಳ ಈತ. 25 ವರ್ಷ ಪ್ರಾಯದ ಈ ಭೂಪ ತನ್ನದೇ ಆದ ಒಂದು ಟಾರ್ಗೆಟ್ ಇಟ್ಟುಕೊಂಡಿದ್ದ. ಅದೇನೆಂದರೆ, ದೇಶದಲ್ಲಿರುವ ಎಲ್ಲ ವೈದ್ಯಕೀಯ ಕಾಲೇಜುಗಳಿಂದ ಲ್ಯಾಪ್‌ಟಾಪ್‌ಗಳನ್ನು ಕದಿಯುವುದು. ಹೌದು, ಇಂತಹ ದುರುದ್ದೇಶ ಹೊಂದಿದ್ದ ಆ ಕಳ್ಳ ಈಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಶಾಲೆಯಿಂದ ಹೊರ ಹೋದ್ರು ಚಾಳಿ ಬಿಡಲಿಲ್ಲ

ಆ ಕಳ್ಳ ಪೊಲೀಸರ ಮುಂದೆ ಹೇಳಿರುವಂತೆ ಅವನು ಚಿಕ್ಕವನಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದಾನಂತೆ. ನಂತರ ಸಂಬಂಧಿಕರ ನೆರವಿನಿಂದ ಆತ ಚೆನ್ನೈಗೆ ಬಂದು ವಿದ್ಯಾಭ್ಯಾಸ ಪ್ರಾರಂಭಿಸಿದ. ಅವನಿಗೆ ಸಹೋದರನೂ ಸಹ ಒಬ್ಬನಿದ್ದು ಅವನು ತನ್ನ ಸ್ವಂತ ಊರಿನಲ್ಲಿಯೇ ಎಂಜಿನಿಯರಿಂಗ್ ಮಾಡುತ್ತಿದ್ದಾನಂತೆ. ಪೊಲೀಸರು ಹೇಳುವಂತೆ ತಮಿಳಸೆಲ್ವನ್ ಚೆನ್ನೈನ ಮೊಗಪ್ಪೈರ್ ಎಂಬಲ್ಲಿ ಹನ್ನೊಂದನೇ ತರಗತಿಯಲ್ಲಿ ಓದುತ್ತಿರುವಾಗಲೇ ಕಳ್ಳತನದ ಅಭ್ಯಾಸ ರೂಢಿಸಿಕೊಂಡಿದ್ದನಂತೆ. ಆ ವಿಚಾರ ಶಾಲೆಗೆ ಗೊತ್ತಾಗಿ ಶಾಲಾ ಆಡಳಿತ ಮಂಡಳಿಯು ಅವನನ್ನು ಶಾಲೆಯಿಂದ ಹೊರಹಾಕಿದರೂ ಅವನು ಕಳ್ಳತನದ ಚಾಳಿ ಬಿಟ್ಟಿರಲಿಲ್ಲ.

ಕೊನೆಗೂ ಅದು ಹೇಗೋ ಮಾಡಿ ಮದಂಬಕ್ಕಂನಲ್ಲಿ ಆತ 12 ನೇ ತರಗತಿ ಪೂರ್ಣಗೊಳಿಸಿ ಮುಂದಿನ ಅಭ್ಯಾಸಕ್ಕಾಗಿ ದೆಹಲಿಗೆ ತೆರಳಿದ. ಅಲ್ಲಿ ಬಿಎ ಎಕನಾಮಿಕ್ಸ್ ಪದವಿ ಪಡೆದ. ಈ ಸಂದರ್ಭದಲ್ಲೇ ಅವನಿಗೆ ಅಲ್ಲಿನ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳೊಂದಿಗೆ ಸ್ನೇಹವಾಗಿ ಪ್ರೇಮಾಂಕುರವಾಯಿತು. ಆ ವಿದ್ಯಾರ್ಥಿನಿಗೆ ತಮಿಳುಸೆಲ್ವನ್ನಿನ ಹಿನ್ನೆಲೆ ತಿಳಿದಾಗ ಆಕೆ ಅವನನ್ನು ತ್ಯಜಿಸಿದಳಂತೆ.

ಪ್ರೀತಿಯಿಂದ ಭಗ್ನಗೊಂಡ ಕಳ್ಳತನವೇ ವೃತ್ತಿ ಮಾಡಿಕೊಂಡ

ಇದರಿಂದ ಆಘಾತಕ್ಕೊಳಗಾದ ಭಗ್ನೆ ಪ್ರೇಮಿ ಮುಂದೆ ಕಳ್ಳತನವನ್ನೇ ತನ್ನ ವೃತ್ತಿಯನ್ನಾಗಿ ಮಾಡಿಕೊಂಡು ಮೊದಲಿಗೆ 2018 ರಲ್ಲಿ ಗುಜರಾತಿನ ಕಾಲೇಜೊಂದರಲ್ಲಿ ತನ್ನ ಕರಾಮತ್ತು ತೋರಿಸಿ ಬಂದ ಹಣದಿಂದ ಐಷಾರಾಮಿ ಜೀವನ ಸಾಗಿಸುತ್ತಿದ್ದ. ತದನಂತರ ಅವನು ವಿವಿಧ ವೈದ್ಯಕೀಯ ಕಾಲೇಜುಗಳ ಹಾಸ್ಟೆಲ್‌ಗಳನ್ನ ಟಾರ್ಗೆಟ್ ಮಾಡಿ ಲ್ಯಾಪ್‌ಟಾಪ್‌ಗಳನ್ನು ಕದ್ದಿರುವುದಾಗಿ ತಿಳಿದುಬಂದಿದೆ. ಸರ್ಕಾರಿ ವೈದ್ಯಕೀಯ ಕಾಲೇಜು, ಸರ್ಕಾರಿ ಸ್ಟ್ಯಾನ್ಲಿ ಕಾಲೇಜು ಮುಂತಾದೆಡೆಯಲ್ಲ ಈ ಭೂಪ ಕಳ್ಳತನ ಎಸಗಿದ್ದಾನೆನ್ನಲಾಗಿದೆ.

ಕದ್ದ ಲ್ಯಾಪ್​ಟಾಪ್​ ಮಾರಾಟ

ತಮಿಳುಸೆಲ್ವನ್ ತಾನು ಕದಿಯುತ್ತಿದ್ದ ಲ್ಯಾಪ್‌ಟಾಪ್‌ಗಳನ್ನು ಆನ್ಲೈನ್‌ನಲ್ಲಿ 20-30 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದ. ಕಣ್ಣೂರು ಹಾಗೂ ಗುಜರಾತ್‌ಗಳಲ್ಲಿ ಲ್ಯಾಪ್‌ಟಾಪ್‌ ಕದ್ದ ಆರೋಪದ ಮೇಲೆ 2018 ರಲ್ಲಿ ಈತನನ್ನು ಎರಡು ಸಲ ಬಂಧಿಸಿಯೂ ಆಗಿತ್ತು ಎಂದು ತಿಳಿದುಬಂದಿದೆ.

ಇದನ್ನು ಓದಿ: Tirupati ವೆಂಕಟೇಶ್ವರ ದೇವಾಲಯಗೆ 5 ಕೋಟಿ ಮೌಲ್ಯದ ವಿದೇಶದ ಭೂಮಿ ದಾನ

ಅಂತರಾಜ್ಯಗಳಲ್ಲಿ ಲ್ಯಾಪ್​​ಟಾಪ್​ ಕದ್ದ 

ಕಳೆದ ಶನಿವಾರದಂದು ಅವನ ಬಗ್ಗೆ ಪತ್ತೆಹಚ್ಚಿದ ಚೆನ್ನೈನ ವಾಶರ್ಪೇಟ್ ಪ್ಪೊಲೀಸರು ತಮಿಳುಸೆಲ್ವಂನನ್ನು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಅವನ ಬಳಿಯಿಂದ 31 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದು ಅದರ ಮಾರುಕಟ್ಟೆ ಮೌಲ್ಯ ಒಂದು ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಪೊಲೀಸ್ ತಂಡವು ಈ ಬಗ್ಗೆ ಇನ್ನೂ ವಿಚಾರಣೆ ನಡೆಸುತ್ತಿದ್ದು ಅವನು ಏನಿಲ್ಲವೆಂದರೂ ಬೆಂಗಳೂರು, ಕೋಲ್ಕತ್ತ, ಚೆನ್ನೈ, ಹೈದರಾಬಾದ್, ವೈಜಾಗ್, ದೆಹಲಿ, ಕೇರಳ, ಕಾಕಿನಾಡ ಮುಂತಾದೆಡೆಗಳಿಂದ ಕನಿಷ್ಠ ನೂರು ಲ್ಯಾಪ್‌ಟಾಪ್‌ಗಳನ್ನು ಕದ್ದಿರಬಹುದೆಂಬ ಶಂಕೆ ವ್ಯಕ್ತಪಡಿಸಿದೆ.

ಇದನ್ನು ಓದಿ: ಮನೆಯಲ್ಲಿ ಇದೇ ಕಾರಣಕ್ಕೆ ಕುದುರೆ ಲಾಳ ನೇತುಹಾಕುವುದು

ಅವನು ಸಿಕ್ಕಿ ಬಿದ್ದಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸರು ಹೇಳುವ ಪ್ರಕಾರ, ಕಳೆದ ಶುಕ್ರವಾರದಂದು ತಮಿಳುಸೆಲ್ವಂ ಸರ್ಕಾರಿ ಸ್ಟ್ಯಾನ್ಲಿ ಆಸ್ಪತ್ರೆಯ ಹಾಸ್ಟೆಲ್ ಒಳಗೆ "ಗುರುತಿನ ಚೀಟಿ" ಧರಿಸಿ ಪ್ರವೇಶಿಸಿದ್ದು ಈ ಸಂದರ್ಭದಲ್ಲಿ ರುತೇಶ್ ಹಾಗೂ ಅಕ್ಷಯ್ ಎಂಬ ಇಬ್ಬರು ವಿದ್ಯಾರ್ಥಿಗಳು ಹಂಚಿಕೊಂಡಿದ್ದ ಕೋಣೆಯು ತೆರೆದಿರುವುದನ್ನು ಗಮನಿಸಿ ಅದರ ಒಳಗೆ ಹೊಕ್ಕಿ ಎರಡು ಲ್ಯಾಪ್‌ಟಾಪ್‌ ಕದ್ದು ಹೊರ ಹೋಗಿದ್ದಾನೆ.

ಸಿಸಿಟಿವಿಯಲ್ಲಿ ದೃಶ್ಯ ದಾಖಲು

ಲ್ಯಾಪ್‌ಟಾಪ್‌ ಕಳೆದುಕೊಂಡ ಆ ಇಬ್ಬರೂ ವಿದ್ಯಾರ್ಥಿಗಳು ದೂರನ್ನು ದಾಖಲಿಸಿದಾಗ ಸಿಸಿಟಿವಿ ಫೂಟೇಜ್‌ನಲ್ಲಿ ತಮಿಳುಸೆಲ್ವಂ ಕೋಣೆಗೆ ಹೊಕ್ಕಿ ಹದಿನೈದು ನಿಮಿಷಗಳ ನಂತರ ಹೊರ ಹೋಗುತ್ತಿರುವುದು ಕಂಡುಬಂದಿದೆ. ಮೊದಲಿಗೆ ಪೊಲೀಸರು ಈತನೂ ಸಹ ವಿದ್ಯಾರ್ಥಿ ಎಂದೇ ತಿಳಿದಿದ್ದರು. ತದನಂತರ ಗೊತ್ತಾಯಿತು ಈತ ವಿದ್ಯಾರ್ಥಿಯಲ್ಲ ಎಂಬ ವಿಚಾರ.

ತದನಂತರ ಯಮುನಾ ಎಂಬ ಇನ್ಸ್ಪೆಕ್ಟರ್ ಅವರ ನೇತೃತ್ವದಲ್ಲಿ ಈ ಕಳ್ಳನನ್ನು ಹಿಡಿಯಲು ತಂಡ ರಚಿಸಲಾಯಿತು. ಶನಿವಾರದಂದು ತಮಿಳುಸೆಲ್ವಂ ಹಾಸ್ಟೆಲ್ ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವಾಗ ಪೊಲೀಸರು ಇವನನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ. ತದನಂತರ ವಿಚಾರಣೆಯ ಸಂದರ್ಭದಲ್ಲಿ ಈ ಕಳ್ಳ ಸತ್ಯವನ್ನೆಲ್ಲ ಬಿಚ್ಚಿಟ್ಟಿದ್ದಾನೆ.
Published by:Seema R
First published: