• Home
 • »
 • News
 • »
 • national-international
 • »
 • Cancer: 16 ಕೀಮೋ, ಸರ್ಜರಿ, ರೇಡಿಯೇಷನ್, ಕೋವಿಡ್: ಗರ್ಭದಲ್ಲಿದ್ದ ಕಂದನಿಗಾಗಿ ಕ್ಯಾನ್ಸರ್‌ಗೇ ಸಡ್ಡು ಹೊಡೆದ ತಾಯಿ!

Cancer: 16 ಕೀಮೋ, ಸರ್ಜರಿ, ರೇಡಿಯೇಷನ್, ಕೋವಿಡ್: ಗರ್ಭದಲ್ಲಿದ್ದ ಕಂದನಿಗಾಗಿ ಕ್ಯಾನ್ಸರ್‌ಗೇ ಸಡ್ಡು ಹೊಡೆದ ತಾಯಿ!

ಕ್ಯಾನ್ಸರ್​ ಗೆದ್ದ ದೀಪಿಕಾ ತನ್ನ ಕಂdನೊಂದಿಗೆ

ಕ್ಯಾನ್ಸರ್​ ಗೆದ್ದ ದೀಪಿಕಾ ತನ್ನ ಕಂdನೊಂದಿಗೆ

ದೀಪಿಕಾಗೆ 28 ವರ್ಷ ಹಾಗೂ ಸುಗತ್‌ಗೆ 32 ವರ್ಷ ಪೋಷಕರಾಗಲು ಸೂಕ್ತವಯಸ್ಸು ಕೂಡ ಅದಾಗಿತ್ತು. ಆದರೆ ವಿಧಿಯಾಟವೇ ಬೇರೆ ಇರುತ್ತದೆ ಎಂಬ ಮಾತಿನಂತೆ ಗರ್ಭವತಿಯಾಗಿದ್ದ ದೀಪಿಕಾ ಅಪರೂಪದ ಕ್ಯಾನ್ಸರ್‌ಗೆ ತುತ್ತಾದರು.

 • Share this:

  ಇಂಜಿನಿಯರಿಂಗ್ ಪದವೀಧರರಾಗಿರುವ ದೀಪಿಕಾ ಗೋಪನಾರಾಯಣ್ ಹಾಗೂ ಅವರ ಪತಿ ಸುಗತ್ ತಮ್ಮ ಜೀವನದ ಬಗ್ಗೆ ಹೆಚ್ಚಿನ ಕನಸು ಕಂಡಿದ್ದರು. ಬಯಸಿದ ಉದ್ಯೋಗ ಹೊಂದಿ, ವಿವಾಹಿತರಾಗಿ ಪುಣೆಯಲ್ಲಿ ನೆಲೆಸಿದ ಐದು ವರ್ಷಗಳ ತರುವಾಯ ಪುಟ್ಟ ಕಂದನಿಗೆ ಜನ್ಮ ಕೊಟ್ಟು ದಾಂಪತ್ಯ ಜೀವನವನ್ನು ಇನ್ನಷ್ಟು ಆನಂದಗೊಳಿಸುವ ಇರಾದೆ ಹೊಂದಿದ್ದರು. ದೀಪಿಕಾಗೆ 28 ವರ್ಷ ಹಾಗೂ ಸುಗತ್‌ಗೆ 32 ವರ್ಷ ಪೋಷಕರಾಗಲು ಸೂಕ್ತವಯಸ್ಸು ಕೂಡ ಅದಾಗಿತ್ತು. ಆದರೆ ವಿಧಿಯಾಟವೇ ಬೇರೆ ಇರುತ್ತದೆ ಎಂಬ ಮಾತಿನಂತೆ ಗರ್ಭವತಿಯಾಗಿದ್ದ ದೀಪಿಕಾ ಅಪರೂಪದ ಕ್ಯಾನ್ಸರ್‌ಗೆ ತುತ್ತಾದರು.


  ಒಂದು ವರ್ಷ ಹೋರಾಟ ನಡೆಸಿದ ದೀಪಿಕಾ


  ನಂತರ ದೀಪಿಕಾ ಅನುಭವಿಸಿದ ಬವಣೆ ಅಷ್ಟಿಷ್ಟಲ್ಲ. ಚಿಕಿತ್ಸೆಯ ಅಂಗವಾಗಿ 16 ಕೀಮೋಥೆರಪಿ, ಒಂದು ವಿಕಿರಣ ಶಸ್ತ್ರಚಿಕಿತ್ಸೆ ಹಾಗೂ ಕೋವಿಡ್‌ನ ದಾಳಿಗೆ ತುತ್ತಾದ ದೀಪಿಕಾ ಒಂದು ವರ್ಷ ಹೋರಾಟ ನಡೆಸಿದ್ದಾರೆ. ಇದರ ನಡುವೆ ಆಕೆ ಆರೋಗ್ಯವಂತ ಗಂಡು ಮಗುವಿಗೆ ಜನ್ಮನೀಡಿದ ಗಟ್ಟಿಗಿತ್ತಿ. ತನ್ನ ದೇಹ ಹಿಂಡುತ್ತಿದ್ದ ನೋವಿನಲ್ಲೂ ಆಕೆ ತನ್ನ ಪತಿ ಹಾಗೂ ಮುಂದೆ ಬರಲಿದ್ದ ಕಂದನಿಗಾಗಿ ನಗುಮುಖದಿಂದ ಇದ್ದರು. ದೀಪಿಕಾ ಹೇಳುವಂತೆ ತನ್ನ ಪತಿಯ ಬೆಂಬಲವೇ ಇಂದು ನಾನು ಜೀವಂತವಾಗಿರಲು ಕಾರಣ ಎಂದು ಹೇಳುತ್ತಾರೆ. ನನ್ನನ್ನು ಹಾಗೂ ನನ್ನೊಳಗಿದ್ದ ರೋಗವನ್ನು ಅರ್ಥಮಾಡಿಕೊಂಡ ಸುಗತ್, ಮನೆಯ ಎಲ್ಲಾ ಕೆಲಸಗಳನ್ನು ನಿಭಾಯಿಸಿದರು ಹಾಗೂ ನನ್ನಲ್ಲಿ ಶಕ್ತಿತುಂಬಿ ಚೇತರಿಕೆಯತ್ತ ಗಮನಹರಿಸಲು ತಿಳಿಸಿದರು ಎಂದು ಹೇಳುತ್ತಾರೆ.


  ಇದನ್ನೂ ಓದಿ: Cancer: 36 ವರ್ಷದಲ್ಲಿ 12 ಬಾರಿ ಕ್ಯಾನ್ಸರ್‌ಗೆ ತುತ್ತಾದ ಮಹಿಳೆ; ಸಂಶೋಧನೆ ನಡೆಸಿದವರಿಗೆ ಕಾದಿತ್ತು ಅಚ್ಚರಿ!


  ಪುಣೆಯ ಜುಪಿಟರ್ ಆಸ್ಪತ್ರೆಯ ಸ್ತನ ಶಸ್ತ್ರಚಿಕಿತ್ಸಕ ಡಾ.ಪ್ರಾಂಜಲಿ ಗಾಡ್ಗಿಲ್ ಹೇಳುವಂತೆ ದೀಪಿಕಾ ಅಪರೂಪದ ಗರ್ಭಾವಸ್ಥೆಗೆ ಸಂಬಂಧಿತವಾಗಿದ್ದ ಸ್ತನ ಕ್ಯಾನ್ಸರ್‌ನಿಂದ (PABC) ಬಳಲುತ್ತಿದ್ದರು ಎಂದು ತಿಳಿಸಿದ್ದಾರೆ. ಸುಮಾರು 3000 ಗರ್ಭಿಣಿಯರಲ್ಲಿ ಒಬ್ಬರಿಗೆ ಮಾತ್ರವೇ ಬರುವ ಅಪರೂಪದ ಕ್ಯಾನ್ಸರ್ ಕಾಯಿಲೆ ದೀಪಿಕಾರಿಗೆ ಬಂದಿತ್ತು. ದೀಪಿಕಾ ಹಾಗೂ ಸುಗತ್ ಅವರ ತಾಳ್ಮೆ ಹಾಗೂ ರೋಗವನ್ನು ಜಯಿಸುವ ತಾಕತ್ತನ್ನು ಶ್ಲಾಘಿಸುವ ವೈದ್ಯರು ತಮ್ಮ ತಂಡದ ಪ್ರತಿಯೊಂದು ನಿಯಮಗಳನ್ನು ಇಬ್ಬರೂ ದಂಪತಿಗಳು ಚಾಚೂ ತಪ್ಪದೆ ಪಾಲಿಸುತ್ತಿದ್ದರು ಹೀಗಾಗಿ ಕ್ಯಾನ್ಸರ್ ಅನ್ನು ಜಯಿಸಲು ದೀಪಿಕಾರೊಂದಿಗೆ ನಮಗೂ ಸಾಧ್ಯವಾಯಿತು ಎಂದು ಹೇಳುತ್ತಾರೆ.


  ರೋಗನಿರ್ಣಯದ ಆಘಾತ


  2020ರ ಸಾಂಕ್ರಾಮಿಕ ರೋಗದ ಉತ್ತುಂಗದ ಅವಧಿಯಲ್ಲಿಯೇ ದೀಪಿಕಾ ಗರ್ಭವತಿಯಾಗಿದ್ದರು. ಆಕೆ ಆರು ತಿಂಗಳ ಗರ್ಭಿಣಿಯಾಗಿದ್ದಾಗ ಸ್ತನದಲ್ಲಿ ಒಂದು ಗಡ್ಡೆ ಕಾಣಿಸಿಕೊಂಡಿತು. ಹಾಲುಣಿಸಲು ತಯಾರಿ ನಡೆಸುವ ಅಂಗಾಂಶದ ಗಂಟು ಎಂದೇ ಆಕೆ ಭಾವಿಸಿದ್ದರು. ಆದರೆ ಈ ಗಡ್ಡೆ ಆಕೆಗೆ ನೋವನ್ನುಂಟು ಮಾಡುತ್ತಿತ್ತು ಇದರಿಂದ ಪತಿ ಸುಗತ್ ದೀಪಿಕಾರನ್ನು ಆಸ್ಪತ್ರೆಗೆ ಸೇರಿಸಿದರು. ದೀಪಿಕಾ ಕುಟುಂಬದಲ್ಲಿ ಯಾರಿಗೂ ಕ್ಯಾನ್ಸರ್ ಇರಲಿಲ್ಲ ಎಂದು ಹೇಳುವ ವೈದ್ಯರಾದ ಗಾಡ್ಗಿಲ್, ಗಡ್ಡೆಯು ವಾರಗಳಲ್ಲಿ 1 ಸೆಂಟಿಮೀಟರ್‌ನಿಂದ 5 ಸೆಂಟಿಮೀಟರ್‌ಗೆ ಬೆಳೆದಾಗ ಸೂಜಿಯ ಬಯಾಪ್ಸಿ ಮಾಡಿದರು ಎಂದು ತಿಳಿಸಿದ್ದಾರೆ.


  ಇದನ್ನೂ ಓದಿ: ಹೊಟ್ಟೆ ಸಮಸ್ಯೆ ತಪ್ಪಿಸಲು ಅಗಸೆ ಬೀಜಗಳನ್ನು ಆಹಾರದಲ್ಲಿ ಈ ರೀತಿ ಸೇರಿಸಿ ಸೇವಿಸಿ!


  ಗರ್ಭಾವಸ್ಥೆಯಲ್ಲಿ ಹೇರಳವಾಗಿರುವ ಹಾರ್ಮೋನುಗಳು ಮತ್ತು ಬೆಳವಣಿಗೆಯ ಅಂಶಗಳ ಪ್ರಭಾವಕ್ಕೆ ಒಳಗಾಗಿ ಕ್ಯಾನ್ಸರ್ ಗೆಡ್ಡೆ ಅಭಿವೃದ್ಧಿಯಾಗುತ್ತದೆ ಎಂಬುದು ಗಡ್ಗಿಲ್ ಅಭಿಪ್ರಾಯವಾಗಿದೆ. ಈ ಕ್ಯಾನ್ಸರ್ ಹೆಚ್ಚಾಗಿ ಕಾಡುವುದು 32-38 ರ ಹರೆಯದ ಮಹಿಳೆಯರನ್ನು ಎಂದು ಹೇಳುವ ಗಾಡ್ಗಿಲ್ ಗರ್ಭಾವಸ್ಥೆಯಲ್ಲಿ ಕಾಡುವ ಅಪರೂಪದ ಕ್ಯಾನ್ಸರ್‌ಗೆ 28 ರ ಹರೆಯದಲ್ಲಿಯೇ ತುತ್ತಾಗಿದ್ದರು. ಗರ್ಭಿಣಿಯಾಗಿದ್ದಾಗ ಸ್ತನ ಕ್ಯಾನ್ಸರ್‌ಗೆ ವಿಕಿರಣ ಚಿಕಿತ್ಸೆಯನ್ನು ನೀಡಲಾಗುವುದಿಲ್ಲ. ಕೀಮೋಥೆರಪಿಯನ್ನು ಮೊದಲ ತ್ರೈಮಾಸಿಕದಲ್ಲಿ, ಬೆಳವಣಿಗೆಯ ನಿರ್ಣಾಯಕ ಹಂತಗಳಲ್ಲಿ ನಿರ್ವಹಿಸಲಾಗುವುದಿಲ್ಲ. 5.5 ಸೆಂ.ಮೀ ಬೆಳೆದಿದ್ದ ಗಡ್ಡೆಯಿಂದ ಸ್ತನವನ್ನು ಪೂರ್ಣವಾಗಿ ತೆಗೆದುಹಾಕಬೇಕಾಗಿತ್ತು ಅಂತೆಯೇ ತೆಗೆದ ಸ್ತನವನ್ನು ಬದಲಿಸಲು ಶಸ್ತ್ರಚಿಕಿತ್ಸೆ ಕೂಡ ನಡೆಸಬೇಕಾಗಿತ್ತು ಆದರೆ ದೀಪಿಕಾ ಗರ್ಭಿಣಿಯಾಗಿದ್ದು ಇದೆಲ್ಲಕ್ಕೂ ಆಸ್ಪದವಿರಲಿಲ್ಲ ಎಂಬುದು ವೈದ್ಯರ ಹೇಳಿಕೆ.


  ದೀಪಿಕಾ ಹಾಗೂ ಆಕೆಯ ಮಗುವನ್ನು ಉಳಿಸಿದ ಕೀಮೋ


  ದೀಪಿಕಾರ ಸ್ತನದ ಗಡ್ಡೆಯನ್ನು ಹೊರತೆಗೆಯಲು ನಿಯೋಡ್ಜುವಂಟ್ ಕಿಮೊಥೆರಪಿಯನ್ನು ಅವರಿಗೆ ಮಾಡಲಾಯಿತು. ದೀಪಿಕಾ ಯಾವುದೇ ತೊಂದರೆಗಳಿಲ್ಲದೆ ಕೀಮೋ ಚಿಕಿತ್ಸೆಯನ್ನು ಪೂರ್ಣಗೊಳಿಸಿದರು. ಪತಿ ಸುಗತ್ ಕೂಡ ದೀಪಿಕಾಗೆ ಹೆಚ್ಚಿನ ಬೆಂಬಲ ನೀಡಿದರು. ದಂಪತಿಗಳು ಚಿಕಿತ್ಸೆಗೆ ಸಕಾರಾತ್ಮಕ ಬೆಂಬಲವನ್ನೇ ನೀಡಿದ್ದರು ಎಂಬುದು ವೈದ್ಯರಾದ ಗಾಡ್ಗೀಲ್ ಮಾತಾಗಿದೆ.


  ಸ್ತ್ರೀರೋಗತಜ್ಞರು ಭ್ರೂಣದ ಬೆಳವಣಿಗೆಯ ಮೇಲೆ ನಿಗಾವಹಿಸಿದರು ಅಂತೆಯೇ ಔಷಧಿಗಳನ್ನು ಸರಿಯಾದ ಸಮಯಕ್ಕೆ ನೀಡುತ್ತಾ, ತಜ್ಞರು ಆಹಾರದ ಯೋಜನೆಯನ್ನು ರೂಪಿಸಿದರು. ಜೊತೆಗೆ ಮಾನಸಿಕ ಸಲಹೆಗಾರರು ದೀಪಿಕಾಳ ನೋವು ಮತ್ತು ಮಾನಸಿಕ ಬೆಂಬಲಕ್ಕೆ ನೆರವಾದರು. ಕೀಮೋಥೆರಪಿಯಲ್ಲಿ 5.6 ಸೆಂ.ಮೀ ಇದ್ದ ಗಡ್ಡೆಯನ್ನು 2 ಸೆಂ.ಮೀಗಿಂತ ಕಡಿಮೆಗೆ ತಗ್ಗಿಸಲಾಯಿತು. ಭವಿಷ್ಯದಲ್ಲಿ ಇದರ ಪರಿಣಾಮವನ್ನು ಕಡಿಮೆ ಮಾಡಲು ಅನುವಂಶಿಕ ಪರೀಕ್ಷೆಯನ್ನು ವೈದ್ಯರು ಕೈಗೊಂಡಿದ್ದಾರೆ ಆದರೆ ಈ ವರದಿಗಳು ಧನಾತ್ಮಕವಾಗಿದ್ದವು ಎಂಬುದು ವೈದ್ಯರ ಮಾತಾಗಿದೆ.


  ಕೀಮೀಥೆರಪಿಯ 12 ಆವರ್ತನಗಳಿಗೆ ಒಳಗಾಗಿದ್ದ ದೀಪಿಕಾ ಇದರಿಂದ ಉಂಟಾಗಬಹುದಾದ ಆರಂಭಿಕ ಹೆರಿಗೆ ನೋವಿನ ಬಗ್ಗೆ ಚಿಂತಿತರಾಗಿದ್ದರು. ಕೀಮೋದ ಅಡ್ಡಪರಿಣಾಮದಿಂದ ಮೂಳೆ ಸೀಳುತ್ತಿರುವ ನೋವನ್ನು ಅನುಭವಿಸುತ್ತಿದ್ದೆ ಎಂದು ಹೇಳುವ ದೀಪಿಕಾ, ಮಗು ದೊಡ್ಡದಾಗುತ್ತಿದ್ದಂತೆ ಬೇರೆ ಬೇರೆ ಬಗೆಯ ನೋವುಗಳಿಗೆ ಒಳಗಾಗುತ್ತಿದ್ದರು ಎಂದು ತಿಳಿಸಿದ್ದಾರೆ. ಆದರೆ ಮಗುವಿಗೆ ಜನ್ಮನೀಡಬೇಕೆಂಬ ಉದ್ದೇಶ ನನ್ನಲ್ಲಿ ಇದ್ದುದರಿಂದ ನಾನು ಆ ನೋವನ್ನೆಲ್ಲಾ ಸಹಿಸಿಕೊಂಡೆ ಎಂದು ದೀಪಿಕಾ ಆ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ವೈದ್ಯರು ನನಗೆ ಆದ್ಯತೆ ನೀಡಿದ್ದರು ಆದರೆ ನಾನು ನನ್ನ ಪುಟ್ಟ ಕಂದನಿಗೆ ಆದ್ಯತೆ ನೀಡಿದ್ದೆ. ಹಾಗಾಗಿ ನನ್ನ ಕಂದನ ಆರೋಗ್ಯಕ್ಕಾಗಿ ಯಾವ ಔಷಧ ತೆಗೆದುಕೊಳ್ಳಬೇಕು? ಮಗುವನ್ನು ಸುರಕ್ಷಿತವಾಗಿರಿಸಲು ಯಾವ ಔಷಧ ನೆರವು ಎಂದು ಅವರನ್ನು ಕೇಳುತ್ತಿದ್ದೆ ಎಂದು ದೀಪಿಕಾ ಹೇಳುತ್ತಾರೆ.


  ಕೀಮೋಥೆರಪಿ ಅವಧಿಯ ನಂತರ ಮಗುವನ್ನು ಪರೀಕ್ಷಿಸುವ ಸಮಯದಲ್ಲಿ ನನ್ನ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿತ್ತು ಎಂದು ತಿಳಿಸುವ ದೀಪಿಕಾ ಎಲ್ಲಾ ಮುಗಿದ ನಂತರ ನೆಮ್ಮದಿಯ ನಿಟ್ಟುಸಿರು ಬಿಟ್ಟೆ ಎಂದು ಗದ್ಗದಿತರಾಗಿ ಹೇಳುತ್ತಾರೆ. ನೀವು ಆಂತರ್ಯದಲ್ಲಿ ಛಲಗಾರರಾಗಿದ್ದರೆ ಹಾಗೂ ಅಚಲ ನಂಬಿಕೆ ನಿಮ್ಮಲ್ಲಿ ಮನೆಮಾಡಿದ್ದರೆ ಶಕ್ತಿ ನಿಮ್ಮಲ್ಲಿ ತುಂಬುತ್ತದೆ. ಆ ಇಚ್ಛಾಶಕ್ತಿಯ ಮುಂದೆ ಎಲ್ಲವೂ ಸೋಲುತ್ತದೆ ಎಂಬುದು ದೀಪಿಕಾ ಮಾತಾಗಿದೆ.


  ಮಗು ಜನಿಸಿದರೂ ದೀಪಿಕಾ ಅಗ್ನಿಪರೀಕ್ಷೆ ಮುಗಿದಿರಲಿಲ್ಲ


  ಮಗು ಜನಿಸುವ ಸಮಯ ಹತ್ತಿರವಾಗುತ್ತಿದ್ದಂತೆ ಹೊಸ ಸವಾಲುಗಳು ಎದುರಾಗುತ್ತಿದ್ದವು ಎಂದು ತಿಳಿಸಿರುವ ಪತಿ ಸುಗತ್ ಒಮ್ಮೆ ದೀಪಿಕಾ ತೀವ್ರ ಎದೆನೋವಿಗೆ ಪ್ರಜ್ಞೆತಪ್ಪಿ ಬಿದ್ದೇಬಿಟ್ಟಿದ್ದರು ಎಂದು ಹೇಳುತ್ತಾರೆ. ಹೃದಯ ಸ್ತಂಭನದ ಭಯದಿಂದ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಆಕೆ ತುಂಬಾ ನಿಶಕ್ತಿ ಹೊಂದಿದ್ದಳು ಹಾಗಾಗಿ ದೀಪಿಕಾ ಆ ದಿನ ನೋವಿನಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಳು ಎಂದು ಸುಗತ್ ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ದೀಪಿಕಾಗೆ ಹೆರಿಗೆ ನೋವು ಬಂದ ದಿನವನ್ನು ಮರೆಯಲೂ ಸಾಧ್ಯವಿಲ್ಲ ಎಂದು ಹೇಳುವ ಸುಗತ್ ಪ್ರಸವಪೂರ್ವ ತಪಾಸಣೆಯ ಸಮಯದಲ್ಲಿ ಆಕೆಗೆ ಕೋವಿಡ್-19 ಇರುವುದು ಖಚಿತವಾಯ್ತು ಎಂದು ಹೇಳಿದ್ದಾರೆ.


  ಲಾಕ್‌ಡೌನ್ ಮಧ್ಯದಲ್ಲಿಯೇ ಕೋವಿಡ್ ಗರ್ಭಿಣಿ ರೋಗಿಯು ಮಗುವನ್ನು ಹೆರುವ ಸೌಕರ್ಯಕ್ಕಾಗಿ ನಾವು ಸಾಕಷ್ಟು ಓಡಾಟ ನಡೆಸಿದ್ದೆವು ಎಂದು ಹೇಳಿದ್ದಾರೆ. ಸಾಮಾನ್ಯ ಹೆರಿಗೆ ನೋವನ್ನು ಆಯ್ದುಕೊಂಡಿದ್ದ ದೀಪಿಕಾ 40 ಗಂಟೆಗಳ ಕಾಲ ಹೆರಿಗೆ ನೋವನ್ನು ಸಹಿಸಿಕೊಂಡಿದ್ದಾರೆ. ಸಿ-ಸೆಕ್ಷನ್ ಮಾಡಿಸುವುದು ಬೇಡವೆಂದೇ ಆಕೆ ನಿರ್ಧರಿಸಿದ್ದರು. ಇನ್ನು ಕ್ಯಾನ್ಸರ್‌ನ ಬೆಳವಣಿಗೆಯನ್ನು ತೆಗೆದುಹಾಕಲು ಇನ್ನೊಂದು ಶಸ್ತ್ರಚಿಕಿತ್ಸೆಗೆ ದೀಪಿಕಾ ಒಳಗಾಗಬೇಕು ಎಂಬುದು ಆಕೆಗೆ ಅರಿವಿತ್ತು ಎಂದು ಹೇಳುವ ಪತಿ, ಅದಕ್ಕಾಗಿ ದೀಪಿಕಾ ಮನಸ್ಸನ್ನು ಗಟ್ಟಿಗೊಳಿಸಿದ್ದರು ಎಂದು ಹೇಳುತ್ತಾರೆ.


  ಮೂರು ವರ್ಷಗಳ ಕಾಲ ತಾವು ಹಾಗೂ ಮಡದಿ ಕ್ಯಾನ್ಸರ್ ಹೋರಾಡಲು ಹೇಗೆ ಮನಸ್ಸನ್ನು ಗಟ್ಟಿಗೊಳಿಸಿದರು ಹಾಗೂ ಜೀವನ ಸಾಕೆನ್ನುವವರಿಗೆ ಸ್ಫೂರ್ತಿಯಾಗಬಯಸಲು ಸುಗತ್ ಇದೀಗ ಪುಸ್ತಕ ಬರೆಯುತ್ತಿದ್ದಾರೆ. ಜನವರಿ 2021 ರಂದು ದೀಪಿಕಾ 3.35 ಕೆಜಿ ತೂಕದ ಗಂಡುಮಗುವಿಗೆ ಜನ್ಮನೀಡಿದರು. ಕ್ಯಾನ್ಸರ್ ಬೆಳೆಯಲು ಬಿಡದ ಕೀಮೋಥೆರಪಿ ನನ್ನ ಮಗುವನ್ನು ಉಳಿಸಿದೆ ಎಂದು ತಿಳಿಸಿರುವ ದೀಪಿಕಾ, ತಮ್ಮ ಔಷಧಗಳ ಪ್ರಭಾವದಿಂದ ಮಗುವಿಗೆ ರಕ್ತಸ್ರಾವ ಉಂಟಾಗಬಹುದು ಎಂದು ಊಹಿಸಿದ್ದ ವೈದ್ಯರು ಮಗುವಿನ ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿದರು ಅಂತೆಯೇ ಎಲ್ಲಾ ಪರೀಕ್ಷೆಗಳ ವರದಿಗಳು ಧನಾತ್ಮಕವಾದ ನಂತರವೇ ವೈದ್ಯರು ಮಗುವನ್ನು ತಮಗೆ ಒಪ್ಪಿಸಿದರು ಎಂದು ಹೇಳಿದ್ದಾರೆ.


  ಇದನ್ನೂ ಓದಿ: ಕೈಗಳಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳು ಮಧುಮೇಹ ಕಾಯಿಲೆಯ ಸಂಕೇತಗಳಾಗಿರಬಹುದು ಎಚ್ಚರ!


  ತಾನು ಸಂಪೂರ್ಣವಾಗಿ ಕ್ಯಾನ್ಸರ್‌ನಿಂದ ಮುಕ್ತರಾಗಿಲ್ಲ ಎಂಬುದನ್ನು ಘೋಷಿಸಲು ವೈದ್ಯರಿಗೆ ಸಾಧ್ಯವಿಲ್ಲದೇ ಇದ್ದುದರಿಂದ ಮಗುವಿಗೆ ಎದೆಹಾಲು ನೀಡಲು ಸಾಧ್ಯವಾಗಲಿಲ್ಲ ಎಂದು ದೀಪಿಕಾ ತಿಳಿಸಿದ್ದಾರೆ ಫಾರ್ಮುಲಾ ಆಹಾರವನ್ನೇ ನೀಡಬೇಕಾಯಿತು. ಏಪ್ರಿಲ್ 2021 ರಲ್ಲಿ, ಅವರು ಉಳಿದಿರುವ ಗಡ್ಡೆ ಮತ್ತು ದುಗ್ಧರಸ ಗ್ರಂಥಿಗಳನ್ನು ತೆಗೆದುಹಾಕಲು ಆರು ಗಂಟೆಗಳ ಶಸ್ತ್ರಚಿಕಿತ್ಸೆಗೆ ಒಳಗಾದರು. ಇದಾದ ನಂತರ ರೇಡಿಯೇಷನ್ ಚಿಕಿತ್ಸೆಗೆ ದೀಪಿಕಾ ಒಳಗಾದರು. ಈಗ ದೀಪಿಕಾಗೆ 31 ವರ್ಷ ವಯಸ್ಸು ಹಾಗೂ ಸುಗತ್‌ಗೆ 35 ವರ್ಷ ವಯಸ್ಸು. ದೀರ್ಘಾವಧಿಯ ಚಿಕಿತ್ಸೆಗೆ ದಂಪತಿಗಳು ತಮ್ಮ ಅಲ್ಪ ಸ್ವಲ್ಪ ಉಳಿತಾಯವನ್ನು ಮುಗಿಸಿದ್ದು, ವಿಮೆಯ ಮೊತ್ತವನ್ನು ಖಾಲಿಮಾಡಿದ್ದಾರೆ. ಆದರೆ ದಂಪತಿ ಕ್ಯಾನ್ಸರ್ ಗೆದ್ದ ಖುಷಿ ಹೊಂದಿದ್ದಾರೆ. ಅಂತೆಯೇ ಕ್ಯಾನ್ಸರ್‌ನಿಂದ ಜೀವನ ಉತ್ಸಾಹ ಕಳೆದುಕೊಂಡಿರುವ ಅದೆಷ್ಟೋ ಜನರಿಗೆ ದಾರಿದೀಪವಾಗಿದ್ದಾರೆ.

  Published by:Precilla Olivia Dias
  First published: