ಹೊಸದಿಲ್ಲಿ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಶ್ರದ್ಧಾ ವಾಕರ್ ಭೀಕರ ಹತ್ಯೆ (Shraddha Walker Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 6,600 ಪುಟಗಳ ಚಾರ್ಜ್ ಶೀಟ್ (Police Chargesheet) ಅನ್ನು ಸಲ್ಲಿಸಿದ್ದಾರೆ. ಶ್ರದ್ಧಾ ಡಿಎನ್‌ಎ (Sharddha DNA) ವರದಿಗಳ ಹೊರತಾಗಿಯೂ ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಲಾದ ವಿಧಿವಿಜ್ಞಾನ ಸಾಕ್ಷ್ಯಗಳ ಪಟ್ಟಿಯನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದ್ದು, ಆರೋಪಿಯು (Aftab Amin Poonawala) ತನ್ನ ಶ್ರದ್ಧಾಳ ಮೃತದೇಹವನ್ನು ಹೇಗೆ ವಿಲೇವಾರಿ ಮಾಡಿದ ಎಂಬಿತ್ಯಾದಿ ವಿವರಗಳನ್ನು ದಾಖಲಿಸಲಾಗಿದೆ.
ಇದನ್ನೂ ಓದಿ: Shocking News: 58 ವರ್ಷದ ಮಹಿಳೆಯ ಭೀಕರ ಕೊಲೆ, ಶವದ ಮೇಲೆ ಅತ್ಯಾಚಾರ ಮಾಡಿದ 16ರ ಬಾಲಕ!
ದೆಹಲಿ ಪೊಲೀಸರು ಸಲ್ಲಿಸಿರುವ 6,636 ಪುಟಗಳ ಚಾರ್ಜ್‌ಶೀಟ್ ಪ್ರಕಾರ, ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾ ಮೃತ ಶ್ರದ್ಧಾಳ ತಲೆ ಮತ್ತು ಮುಂಡವನ್ನು ಬ್ಲೋ ಟಾರ್ಚ್ ಬಳಸಿ ಸುಟ್ಟು ವಿರೂಪಗೊಳಿಸಿದ್ದು ಮಾತ್ರವಲ್ಲದೇ, ಮಾರ್ಬಲ್ ಗ್ರೈಂಡರ್ ಬಳಸಿ ಆಕೆಯ ದೇಹದ ಮೂಳೆಗಳನ್ನು ಪುಡಿಪುಡಿ ಮಾಡಿದ್ದಾನೆ ಎಂಬ ಆಘಾತಕಾರಿ ಅಂಶಗಳನ್ನೂ ದಾಖಲಿಸಲಾಗಿದೆ.
ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿನ ಕೆಲ ಆಘಾತಕಾರಿ ವಿವರಗಳು
- 2022 ರ ಮೇ 18 ರಂದು ಛತ್ತರ್‌ಪುರ ಪಹಾಡಿಯಲ್ಲಿನ ಬಾಡಿಗೆ ಮನೆಯಲ್ಲಿ ಶ್ರದ್ಧಾಳನ್ನು ಕೊಲೆ ಮಾಡಿದ ನಂತರ, ಸುಳ್ಳು ಹೇಳಿಕೆ ನೀಡುವ ಮೂಲಕ ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದಾಗಿ ಅಫ್ತಾಬ್ ತಪ್ಪೊಪ್ಪಿಕೊಂಡಿದ್ದಾನೆ.
- ಶ್ರದ್ಧಾಳನ್ನು ಕೊಂದ ನಂತರ, ‘ನಾನು ಸಂಜೆ 07:45 ರ ಸುಮಾರಿಗೆ ಮನೆಯ ಮುಖ್ಯ ಬಾಗಿಲನ್ನು ಮುಚ್ಚಿ ಹತ್ತಿರದ ಹಾರ್ಡ್‌ವೇರ್ ಅಂಗಡಿಗೆ ಹೋಗಿ ಒಂದು ಗರಗಸ, ಮೂರು ಬ್ಲೇಡ್‌ಗಳು, ಸುತ್ತಿಗೆ ಮತ್ತು ಪ್ಲಾಸ್ಟಿಕ್ ಕ್ಲಿಪ್ ಖರೀದಿಸಿದೆ’ ಎಂದು ಅಫ್ತಾಬ್ ಹೇಳಿದ್ದಾನೆ ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.
- ಮತ್ತೆ ಫ್ಲಾಟ್‌ಗೆ ಬಂದು ಶ್ರದ್ಧಾಳ ದೇಹವನ್ನು ಬಾತ್‌ರೂಂಗೆ ಸಾಗಿಸಿ ಗರಗಸದಿಂದ ಆಕೆಯ ದೇಹದ ಭಾಗಗಳನ್ನು ಕತ್ತರಿಸಿ ಬಿಳಿ ಪಾಲಿಥಿನ್‌ನಲ್ಲಿ ಇರಿಸಿದ್ದ ಎಂದು ಹೇಳಲಾಗಿದೆ.
- ಶ್ರದ್ಧಾ ಮೃತದೇಹದ ಮಣಿಕಟ್ಟುಗಳನ್ನು ಗರಗಸದಿಂದ ಕತ್ತರಿಸುವಾಗ ಎಡಗೈಗೆ ಸಣ್ಣ ಗಾಯವಾಗಿತ್ತು ಎಂದು ಅಫ್ತಾಬ್ ಬಹಿರಂಗಪಡಿಸಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
- ನಾನು ಶ್ರದ್ಧಾಳ ಎರಡೂ ಕೈಗಳನ್ನು ಹೊಂದಿರುವ ಪಾಲಿಥಿನ್ ಅನ್ನು ಅಡುಗೆಮನೆಯ ಕೆಳಗಿನ ಕ್ಯಾಬಿನೆಟ್‌ನಲ್ಲಿ ಇರಿಸಿದ್ದೆ. ಕೊಲೆಯಾದ ಮರುದಿನ ರಾತ್ರಿ ಸುಮಾರು 2 ಗಂಟೆಗೆ, ಮೃತದೇಹದ ಒಂದು ತೊಡೆಯ ಭಾಗವನ್ನು ಚತ್ತರ್‌ಪುರ ಪಹಾರಿ ಕಾಡಿನಲ್ಲಿ ವಿಲೇವಾರಿ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
- ಶ್ರದ್ಧಾ ದೇಹದ ಉಳಿದ ಭಾಗಗಳು ದುರ್ನಾತ ಬೀರುವುದನ್ನು ತಪ್ಪಿಸಲು ಹಾಗೂ ಕೊಳೆಯದಂತೆ ನೋಡಿಕೊಳ್ಳಲು ಮೇ 19, 2022 ರಂದು ರೆಫ್ರಿಜರೇಟರ್ ಅನ್ನು ಖರೀದಿಸಿದ್ದೆ ಎಂದು ಆಫ್ತಾಬ್ ಹೇಳಿದ್ದಾನೆ ಎನ್ನಲಾಗಿದೆ.
- ಕೊಲೆ ಮಾಡಿದ ನಂತರ, ಆಫ್ತಾಬ್ ಡೇಟಿಂಗ್ ಅಪ್ಲಿಕೇಶನ್ ಬಂಬಲ್ ಮೂಲಕ ಮಹಿಳೆಯೊಬ್ಬಳನ್ನು ಸಂಪರ್ಕ ಮಾಡಿದ್ದಾನೆ. ಅಷ್ಟೇ ಅಲ್ಲದೇ ಆಕೆಯನ್ನು ಅನೇಕ ಬಾರಿ ತನ್ನ ಫ್ಲಾಟ್‌ಗೆ ಕರೆಸಿ ಹಲವು ಬಾರಿ ರಾತ್ರಿ ವೇಳೆಯೂ ಉಳಿಸಿಕೊಂಡಿದ್ದ.
- ಆ ಮಹಿಳೆ ಫ್ಲಾಟ್‌ಗೆ ಭೇಟಿ ನೀಡಿದಾಗಲೆಲ್ಲಾ ತಾನು ರೆಫ್ರಿಜರೇಟರ್ ಸ್ವಚ್ಛಗೊಳಿಸುತ್ತಿದ್ದೆ. ಶ್ರದ್ಧಾ ಮೃತದೇಹದ ಭಾಗಗಳನ್ನು ಅಡುಗೆ ಮನೆಯ ಕೆಳಗಿನ ಕ್ಯಾಬಿನೆಟ್‌ನಲ್ಲಿ ಇಡುತ್ತಿದ್ದೆ ಎಂಬುದಾಗಿ ಅಫ್ತಾಬ್ ವಿವರ ನೀಡಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
- ಶ್ರದ್ಧಾ ನಾಪತ್ತೆ ಪ್ರಕರಣದ ವಿಚಾರಣೆಗೆ ಅಫ್ತಾಬ್ ಮಹಾರಾಷ್ಟ್ರಕ್ಕೆ ಹೋಗುವಾಗ ದಾರಿಯಲ್ಲಿ ಆಕೆಯ ಫೋನ್ ಎಸೆದು ಆಕೆಯ ಕ್ರೆಡಿಟ್ ಕಾರ್ಡ್‌ಗಳನ್ನು ನಾಶಪಡಿಸಿದ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
- ಚಾರ್ಜ್‌ಶೀಟ್‌ನಲ್ಲಿ ದೆಹಲಿ ಪೊಲೀಸರು ಮೇ 18, 2022 ರಂದು ಅಫ್ತಾಬ್ ಮತ್ತು ಶ್ರದ್ಧಾ ಅವರ ಫೋನ್‌ಗಳ ಲೊಕೇಶನ್‌ಗಳನ್ನು ಲಗತ್ತಿಸಿದ್ದಾರೆ
- ಆರೋಪ ಪಟ್ಟಿಯಲ್ಲಿ ಶ್ರದ್ಧಾ ಪೋಷಕರ ಹೇಳಿಕೆಗಳನ್ನೂ ಉಲ್ಲೇಖ ಮಾಡಲಾಗಿದೆ. ‘ನಾನು ಹಾಗೂ ನನ್ನ ಪತ್ನಿ (ಶ್ರದ್ಧಾಳ ತಾಯಿ) ಇಬ್ಬರೂ ಈ ಸಂಬಂಧ ಬೇಡ ಎಂದು ಮಗಳಿಗೆ ಹೇಳಿದ್ದೆವು’ ಎಂದು ಶ್ರದ್ಧಾ ಪೋಷಕರು ಹೇಳಿದ್ದಾರೆ.
- ನಾವು ಕೋಲಿ ಸಮುದಾಯದ ಹಿಂದೂಗಳು ಮತ್ತು ಅಫ್ತಾಬ್ ಮುಸ್ಲಿಂ ಎಂದು ನಾನು ನನ್ನ ಮಗಳಿಗೆ ಹೇಳಿದ್ದೆ. ಅದಕ್ಕೆ ಆಕೆ ನಾನು ವಯಸ್ಕಳು. ನಿಮ್ಮ ಮಗಳು ಇನ್ನಿಲ್ಲ ಎಂದುಕೊಳ್ಳಿ ಎಂದು ಹೇಳಿ ಮನೆಬಿಟ್ಟು ಹೋಗಿದ್ದಳು ಎಂಬುದಾಗಿ ಶ್ರದ್ಧಾ ತಂದೆ ಹೇಳಿಕೆ ನೀಡಿದ್ದಾರೆ.
- ಚಾರ್ಜ್‌ಶೀಟ್‌ನ ಪ್ರಕಾರ, ಶ್ರದ್ಧಾ ಮತ್ತು ಆಫ್ತಾಬ್‌ನ ಜಗಳದ ಹಿಂದಿನ ಪ್ರಮುಖ ಕಾರಣವೆಂದರೆ ಆತ ಅನೇಕ ಹುಡುಗಿಯರೊಂದಿಗೆ ಸ್ನೇಹ ಬೆಳೆಸುತ್ತಿದ್ದದ್ದು. ಇದು ಆಕೆಗೆ ಇಷ್ಟವಿರಲಿಲ್ಲ.
- ಶ್ರದ್ಧಾಳನ್ನು ಕೊಲೆ ಮಾಡಿದ ದಿನ ಆಫ್ತಾಬ್ ತನಗಾಗಿ ಝೊಮ್ಯಾಟೋದಿಂದ ಚಿಕನ್ ರೋಲ್ ಅನ್ನು ಆರ್ಡರ್ ಮಾಡಿದ್ದ. ಅಲ್ಲದೇ ಮೂರು ದಿನಗಳವರೆಗೆ ಹಲವಾರು ನೀರಿನ ಬಾಟಲಿಗಳನ್ನು ಸಹ ಆರ್ಡರ್ ಮಾಡಿದ್ದಾನೆ.
- ನಾನು ಆಕೆಯನ್ನು ಎರಡೂ ಕೈಗಳಿಂದ ಬಿಗಿಯಾಗಿ ಕತ್ತು ಹಿಸುಕಿ ಸಾಯಿಸಿದ್ದು, ನಂತರ ಆಕೆಯ ಮೃತದೇಹವನ್ನು ಬಾತ್‌ರೂಮ್‌ನಲ್ಲಿ ಬಚ್ಚಿಟ್ಟಿದ್ದೆ ಎಂಬುದಾಗಿ ಅಫ್ತಾಬ್ ಹೇಳಿದ್ದಾನೆ.
- ಶಾಪಿಂಗ್ ಅಪ್ಲಿಕೇಶನ್ ಬ್ಲಿಂಕಿಟ್‌ನಿಂದ ಹಾರ್ಪಿಕ್, ಟಾಯ್ಲೆಟ್ ಕ್ಲೀನರ್ ಬ್ಲೀಚ್‌ನ ಎರಡು ಬಾಟಲಿಗಳು, ಚಾಪಿಂಗ್ ಬೋರ್ಡ್, ಎರಡು ಬಾಟಲ್ ಗ್ಲಾಸ್ ಕ್ಲೀನರ್, ಲಿಕ್ವಿಡ್ ಹ್ಯಾಂಡ್ ವಾಶ್ ಬಾಟಲಿಯನ್ನು ತರಿಸಿಕೊಂಡಿದ್ದ ಎಂಬುದಾಗಿ ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.
- ಶ್ರದ್ಧಾ ಮೃತದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಅಫ್ತಾಬ್ ಅದನ್ನು ವಿವಿಧ ಭಾಗಗಳಲ್ಲಿ ಎಸೆದಿದ್ದಾನೆ.