CM Channi- ಬಿಜೆಪಿಯಂತೆ ಅಚ್ಚರಿ ಕೊಟ್ಟ ಕಾಂಗ್ರೆಸ್; ದಲಿತ ನಾಯಕ ಚನ್ನಿ ನೂತನ ಪಂಜಾಬ್ ಸಿಎಂ

Surprise CM for Punjab- ಪಂಜಾಬ್​ನಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ದಲಿತ ವರ್ಗಗಳನ್ನ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಚರಣ್ ಜೀತ್ ಸಿಂಗ್ ಚನ್ನಿ ಅವರನ್ನ ಮುಂದಿನ ಸಿಎಂ ಸ್ಥಾನಕ್ಕೆ ಏರಿಸಿದೆ.

ಚರಣಜೀತ್ ಸಿಂಗ್ ಚನ್ನಿ

ಚರಣಜೀತ್ ಸಿಂಗ್ ಚನ್ನಿ

 • News18
 • Last Updated :
 • Share this:
  ಅಮೃತಸರ: ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆಯಿಂದ ತೆರವಾಗಿರುವ ಪಂಜಾಬ್ ಸಿಎಂ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ಅಚ್ಚರಿಯ ಹೆಸರು ಘೋಷಿಸಿದೆ. ನವಜೋತ್ ಸಿಂಗ್ ಸಿಧು ಮತ್ತು ಸುಖಜಿಂದರ್ ಸಿಂಗ್ ರಾಂಧವ ಹೆಸರು ಸಿಎಂ ಸ್ಥಾನಕ್ಕೆ ದಟ್ಟವಾಗಿ ಕೇಳಿಬರುತ್ತಿತ್ತು. ಆದರೆ, ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಚರಣ್​ಜೀತ್ ಸಿಂಗ್ ಚನ್ನಿ ಅವರನ್ನ ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿದೆ. ಇಂದು ಭಾನುವಾರ ಸಂಜೆ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಅವರು ಚರಣ್​ಜೀತ್ ಸಿಂಗ್ ಚನ್ನಿ ಮುಂದಿನ ಪಂಜಾಬ್ ಸಿಎಂ ಎಂದು ಹೆಸರು ಪ್ರಕಟಿಸಿದರು. ಎರಡು ದಿನಗಳ ಕಾಲ ಇದ್ದ ಊಹಾಪೋಹಗಳಿಗೆ ಕೊನೆಗೂ ತೆರೆಬಿದ್ದಿದೆ.

  ಪ್ರಮುಖ ದಲಿತ ಮುಖಂಡರಾದ ಚನ್ನಿ ಅವರು ಇದ್ದದ್ದರಲ್ಲಿ ಕಾಂಗ್ರೆಸ್ ಪಾಲಿಗೆ ಇದ್ದ ಸೇಫ್ ಆಯ್ಕೆಯಾಗಿದೆ. ಪಂಜಾಬ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಚರಣಜೀತ್ ಸಿಂಗ್ ಚನ್ನಿ ಅವರನ್ನ ಒಮ್ಮತದಿಂದ ಆಯ್ಕೆ ಮಾಡಲಾಯಿತು. ಚನ್ನಿ ಅವರು ಪಂಜಾಬ್ ರಾಜ್ಯದ ಮೊದಲ ದಲಿತ ಸಿಎಂ ಎಂಬ ದಾಖಲೆಗೆ ಬಾಜನರಾಗಿದ್ಧಾರೆ.

  ನವಜೋತ್ ಸಿಂಗ್ ಸಿಧು ಅವರೂ ಸಿಎಂ ಸ್ಥಾನಕ್ಕೆ ಪ್ರಯತ್ನಿಸಿದ್ದರು. ಗಾಂಧಿ ಕುಟುಂಬಕ್ಕೆ ನಿಕಟವಾಗಿರುವ ಸಿಧು ಅವರಿಗೆ ಸಿಎಂ ಸ್ಥಾನ ಸದ್ಯಕ್ಕೆ ಸಿಗಲಿಲ್ಲವಾದರೂ ಮುಂದಿನ ದಿನಗಳಲ್ಲಿ ಪಂಜಾಬ್ ಅಧಿಕಾರದಲ್ಲಿ ಅವರ ಪಾತ್ರ ಮಹತ್ತರ ಇರಲಿದೆ. ಸಿಧು ಅವರ ಆಪ್ತರೊಬ್ಬರ ಪ್ರಕಾರ, ಪಂಜಾಬ್ ಕಾಂಗ್ರೆಸ್​ನಲ್ಲಿ ಯಾರು ಬಾಸ್ ಎಂಬುದು ಈಗ ಸ್ಪಷ್ಟವಾಗಿದೆ. ಯಾರೇ ಸಿಎಂ ಆಗಲಿ ಸಿಧು ಅವರೇ ಮ್ಯಾನ್ ಆಫ್ ದ ಮ್ಯಾಚ್ ಆಗುತ್ತಾರೆ ಎಂದು ಕೆಲ ಹೊತ್ತಿನ ಮೊದಲು ಹೇಳಿದ್ದರು.

  ನವಜೋತ್ ಸಿಂಗ್ ಸಿಧು ಅವರನ್ನ ಸಿಎಂ ಮಾಡಲು ಗಾಂಧಿ ಕುಟುಂಬದ ಸದಸ್ಯರು ಒಲವು ತೋರಿದ್ದರು. ಮುಂದಿನ ಚುನಾವಣೆ ದೃಷ್ಟಿಯಿಂದ ಸಿಧು ಸಿಎಂ ಆಗುವುದು ಒಳ್ಳೆಯದು ಎಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ, ಸಾಕಷ್ಟು ಅಳೆದು ತೂಗಿ ಜಾತಿ ಲೆಕ್ಕಾಚಾರ ಹಾಕಲಾಯಿತು. ಸುನೀಲ್ ಜಖರ್, ಅಂಬಿಕಾ ಸೋನಿ, ನವಜೋತ್ ಸಿಂಗ್ ಸಿಂಧು, ಸುಖಜಿಂದರ್ ಸಿಂಗ್ ರಂಧವಾ, ಚರಣ್​ಜೀತ್ ಸಿಂಗ್ ಚನ್ನಿ ಅವರ ಹೆಸರು ಈ ವೇಳೆ ಚರ್ಚೆಗೆ ಬಂದವು. ಈ ವೇಳೆ ಸಿಧು ಬೆಂಬಲಿಗರೆನಿಸಿದ ಪ್ರಬಲ ಜಾಟ್ ಸಮುದಾಯದ ರಂಧವಾ ಹೆಸರು ಬಹುತೇಕ ಖಚಿತ ಎಂಬಂತಿತ್ತು. ಬಹುತೇಕ ಎಲ್ಲಾ ಶಾಸಕರ ಬೆಂಬಲ ಅವರಿಗಿದೆ ಎನ್ನಲಾಗುತ್ತಿತ್ತು. ಆದರೆ, ಅಂತಿಮವಾಗಿ ದಲಿತ ಸಮುದಾಯದ ಚನ್ನಿಗೆ ಕಾಂಗ್ರೆಸ್ ಕೈಹಿಡಿದಿದೆ. ಪಂಜಾಬ್​ನ ಎಲ್ಲಾ ಧರ್ಮಗಳನ್ನ ಪರಿಗಣಿಸಿದರೆ ದಲಿತ ವರ್ಗದವರ ಸಂಖ್ಯೆ ಮೂರನೇ ಒಂದರಷ್ಟಿದೆ. ಅಂದರೆ ಪಂಜಾಬ್​ನ ಅತಿ ದೊಡ್ಡ ಸಮುದಾಯವಾಗಿರುವ ದಲಿತ ವ್ಯಕ್ತಿಯನ್ನ ಸಿಎಂ ಸ್ಥಾನಕ್ಕೇರಿಸಿದರೆ ಮುಂದಿನ ಚುನಾವಣೆಯಲ್ಲಿ ಬೆಂಬಲ ಹೆಚ್ಚಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಪಕ್ಷದ್ದಾಗಿದೆ.

  ಇದನ್ನೂ ಓದಿ: Sonu Sood- ಬೋಗಸ್ ಕಂಪನಿ, ಬೋಗಸ್ ಸಾಲ, ಕೋಟಿಕೋಟಿ ತೆರಿಗೆ ವಂಚನೆ: ಸೋನು ಸೂದ್ ಕರ್ಮಕಾಂಡ ಬಯಲು

  ಚನ್ನಿ ಮತ್ತು ಮೀಟೂ ಆರೋಪ:


  ಸಿಎಂ ಸ್ಥಾನಕ್ಕೆ ಚನ್ನಿ ಹೆಸರು ಖಚಿತವಾದಂತೆ ಅವರ ಮೇಲೆ ಈ ಹಿಂದೆ ಬಂದಿದ್ದ ಮೀಟೂ ಆರೋಪದ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಮುನ್ನೆಲೆಗೂ ಬಂದಿದೆ. ಮೂರು ವರ್ಷಗಳ ಹಿಂದೆ 2018ರಲ್ಲಿ ಚರಣ್​ಜೀತ್ ಸಿಂಗ್ ಚನ್ನಿ ಅವರು ಮಹಿಳಾ ಐಎಎಸ್ ಅಧಿಕಾರಿಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪ ಎದುರಿಸಿದ್ದರು. ಈ ವಿಚಾರವನ್ನು ತಮ್ಮ ಟ್ವೀಟ್​ನಲ್ಲಿ ಪ್ರಸ್ತಾಪಿಸಿದ ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ, ಮುಚ್ಚಿಹಾಕಲಾಗಿದ್ದ ಚನ್ನಿಯ ಮೀಟೂ ಪ್ರಕರಣ ಪಂಜಾಬ್ ಮಹಿಳಾ ಆಯೋಗ ನೀಡಿದ ನೋಟೀಸ್ ಬಳಿಕ ಮತ್ತೆ ಪ್ರತ್ಯಕ್ಷವಾಗಿತ್ತು ಎಂದಿದ್ದಾರೆ. ಹಾಗೆಯೇ ರಾಹುಲ್ ಗಾಂಧಿ ಅವರಿಗೂ ವ್ಯಂಗ್ಯವಾಡಿದ್ದಾರೆ.
  Published by:Vijayasarthy SN
  First published: