ನವದೆಹಲಿ(ಸೆ. 07): ಈ ವರ್ಷ ಪ್ರಾರಂಭಿಸಬೇಕಿದ್ದ ಮೂರನೇ ಚಂದ್ರಯಾನ ಯೋಜನೆಯನ್ನ ಮುಂದೂಡಲಾಗಿದೆ. 2021ರ ವರ್ಷದ ಆರಂಭದಲ್ಲಿ ಚಂದ್ರಯಾನ ಉಡಾವಣೆಯಾಗಲಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಈ ವಿಚಾರ ತಿಳಿಸಿದ್ದಾರೆ. ಕೊರೋನಾ ವೈರಸ್ ಬಿಕ್ಕಟ್ಟು ಉದ್ಭವಿಸಿದ ಹಿನ್ನೆಲೆಯಲ್ಲಿ ಚಂದ್ರಯಾನ ಯೋಜನೆಯನ್ನ ಮುಂದೂಡಲಾಗಿದೆ. ಆದರೆ, ಚಂದ್ರಯಾನ-3 ಯಲ್ಲಿ ಆರ್ಬಿಟರ್ ಇರುವುದಿಲ್ಲ. ರೋವರ್ ಮತ್ತು ಲ್ಯಾಂಡರ್ ಮಾತ್ರ ಇರಲಿದೆ. ಭಾರತದ ಚಂದ್ರಯಾನ ಯೋಜನೆಗಳು ಚಂದ್ರನ ಬಗ್ಗೆ ಕೆಲವು ಮಹತ್ವದ ಸಂಗತಿಗಳನ್ನ ಬೆಳಕಿಗೆ ತಂದಿವೆ. ಮೊದಲ ಚಂದ್ರಯಾನವು ಚಂದ್ರನಲ್ಲಿ ನೀರು ಇರುವ ಸುಳಿವನ್ನು ಜಗತ್ತಿಗೆ ಮೊದಲ ಬಾರಿಗೆ ತೋರಿಸಿತು. ಹಾಗೆಯೇ, ಚಂದ್ರನ ಒಂದು ಭಾಗದಲ್ಲಿರುವ ಕಬ್ಬಿಣದ ಕಲ್ಲುಗಳು ತುಕ್ಕು ಹಿಡಿಯುತ್ತಿರುವ ಸಂಗತಿಯನ್ನೂ ಮೊದಲ ಚಂದ್ರಯಾನ ಈಗ ಬಯಲಿಗೆ ಎಳೆದಿದೆ.
ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಚಂದ್ರನ ದಕ್ಷಿಣ ಧ್ರುವ ಭಾಗವನ್ನು ಜಾಲಾಡಲು ಹೊರಟ ಎರಡನೇ ಚಂದ್ರಯಾನವು ಚಂದ್ರನಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಲು ವಿಫಲವಾದರೂ ಅದರ ಆರ್ಬಿಟರ್ ಈಗಲೂ ಕಾರ್ಯನಿರ್ವಹಿಸುತ್ತಿದೆ. ಚಂದ್ರನ ಮೇಲಿನ ಕಕ್ಷೆಯೊಂದರಿಂದ ಈ ಆರ್ಬಿಟರ್ ಕೆಲ ಮಹತ್ವದ ಡಾಟಾಗಳನ್ನ ಭೂಮಿಗೆ ರವಾನಿಸುತ್ತಿದೆ.
ಇದನ್ನೂ ಓದಿ: Railway Recruitment: 1.40 ಲಕ್ಷ ಹುದ್ದೆಗಳನ್ನು ತುಂಬಲು ಮುಂದಾದ ರೈಲ್ವೆ; ಯಾವ ಹುದ್ದೆ, ಪರೀಕ್ಷೆ ಯಾವಾಗ?, ಇಲ್ಲಿದೆ ಮಾಹಿತಿ
ಈಗ ಭಾರತದ ಮೂರನೇ ಚಂದ್ರಯಾನ ಯೋಜನೆ ಬಗ್ಗೆ ಜಗತ್ತಿನ ಹಲವು ವಿಜ್ಞಾನಿಗಳು ಕುತೂಹಲದ ಒಂದು ಕಣ್ಣು ನೆಟ್ಟಿದ್ದಾರೆ. ಇನ್ನು, ಭಾರತದ ಮೊತ್ತಮೊದಲ ಮಾನವ ಸಹಿತ ಗಗನಯಾನ ಯೋಜನೆಗೆ ತಯಾರಿ ಜೋರಾಗಿ ನಡೆಯುತ್ತಿದೆ. ಇದರ ಗಗನಯಾತ್ರಿಗಳ ತರಬೇತಿ ಕಾರ್ಯಗಳು ಚಾಲನೆಯಲ್ಲಿವೆ. ಕೋವಿಡ್ ಕಾರಣದಿಂದ ತುಸು ಹಿನ್ನಡೆಯಾದರೂ 2022ರ ಆಸುಪಾಸಿನ ವೇಳೆಗೆ ಮಾನವಸಹಿತ ಗಗನಯಾನ ಲಾಂಚ್ ಆಗುವ ನಿರೀಕ್ಷೆ ಇದೆ.
2019ರ ಸೆಪ್ಟೆಂಬರ್ನಲ್ಲಿ ಉಡಾವಣೆಗೊಂಡಿದ್ದ ಎರಡನೇ ಚಂದ್ರಯಾನ ಕೆಲವಾರು ವಿಚಾರಗಳಿಗೆ ಮಹತ್ವ ಪಡೆದಿತ್ತು. ಅತ್ಯಂತ ಕಡಿಮೆ ಬಜೆಟ್ನಲ್ಲಿ ಯೋಜನೆ ಪೂರ್ಣಗೊಂಡಿತ್ತು. ಹಾಗೆಯೇ, ಈವರೆಗೆ ಯಾರೂ ಹೋಗದ ಚಂದ್ರನ ಸೌತ್ ಪೋಲ್ಗೆ ಇದು ಕಾಲಿಟ್ಟಿತು. ಆದರೆ, ಎಲ್ಲವೂ ಅಂದುಕೊಂಡಂತೆ ಆಗುತ್ತಿದೆ ಎನ್ನುವಷ್ಟರಲ್ಲಿ ಲ್ಯಾಂಡಿಂಗ್ ಆಗುವ ವೇಳೆ ತುಸು ಯಡವಟ್ಟಾಗಿ ಲ್ಯಾಂಡರ್ ನಿಯಂತ್ರಣ ತಪ್ಪಿ ಕೆಳಗೆ ಕುಸಿದುಬಿತ್ತು. ಆದರೆ, ಚಂದ್ರನ ಕಕ್ಷೆಯ ಮೇಲಿದ್ದ ಆರ್ಬಿಟರ್ ಸುರಕ್ಷಿತವಾಗಿದ್ದು, ಅಲ್ಲಿಂದಲೇ ಚಂದ್ರನ ಚಿತ್ರಗಳನ್ನ ಸೆರೆ ಹಿಡಿದು ಇಸ್ರೋದ ಸೆಂಟರ್ಗೆ ರವಾನಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ