ಚಂದ್ರನ ಸ್ಪರ್ಶಕ್ಕೆ ಕೆಲವೇ ಗಂಟೆಗಳು ಬಾಕಿ; ಜಾಗತಿಕ ಬಾಹ್ಯಾಕಾಶದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಗೆ ಇಸ್ರೋ ಸಜ್ಜು

ಸದ್ಯದ ಗಮನಾರ್ಹ ಸಂಗತಿಯೆಂದರೇ ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಯಾವುದೇ ದೇಶ ತಲುಪಿಲ್ಲ. ಈ ಪ್ರದೇಶಕ್ಕೆ ಭಾರತವೂ ಇನ್ನೇನು ಕೆಲವೇ ಗಂಟೆಗಳಲ್ಲಿ ತಲುಪುತ್ತಿದೆ.

ಚಂದ್ರಯಾನ-2

ಚಂದ್ರಯಾನ-2

  • News18
  • Last Updated :
  • Share this:
ಬೆಂಗಳೂರು(ಸೆ.06): ಭಾರತದ ಬಹುನಿರೀಕ್ಷಿತ ಯೋಜನೆ ಚಂದ್ರಯಾನ-2 (ಲ್ಯಾಂಡರ್-ವಿಕ್ರಮ್) ಚಂದ್ರನ ಮೇಲೆ ಇಳಿಯಲು ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಇಲ್ಲಿಯವರೆಗೂ ಪ್ರಪಂಚದ ಯಾವ ದೇಶವೂ ತಲುಪಿರದ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಭಾರತದ ಚಂದ್ರಯಾನದ ಲ್ಯಾಂಡರ್​, ಸೆಪ್ಟೆಂಬರ್ 7ರ ಮಧ್ಯರಾತ್ರಿ ಸುಮಾರು 1:30ರಿಂದ 2:30ರ ನಡುವೆ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧಿಕೃತವಾಗಿ ಘೋಷಿಸಿದೆ.

ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿರುವ ಇಸ್ರೋ ಸಂಸ್ಥೆಗೆ ಆಗಮಿಸಲಿದ್ದಾರೆ. ಖುದ್ದು ಪ್ರಧಾನಿಯವರೇ ಚಂದ್ರಯಾನ-2 ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯುವುದನ್ನು ನೋಡಲಿದ್ದಾರೆ ಎಂಬುದು ವಿಶೇಷ.

ವಿಶ್ವದ ಕೆಲವೇ ಕೆಲವು ದೇಶಗಳು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿವೆ. ಈ ಪೈಕಿ ರಷ್ಯಾ, ಅಮೆರಿಕ, ಚೀನಾ ಮಾತ್ರ ಸುಲಲಿತವಾಗಿ ಚಂದ್ರನನ್ನು ತಲುಪಿವೆ. ಸದ್ಯದ ಗಮನಾರ್ಹ ಸಂಗತಿಯೆಂದರೇ ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಯಾವುದೇ ದೇಶ ತಲುಪಿಲ್ಲ. ಈ ಪ್ರದೇಶದಲ್ಲಿ ಭಾರತದ ಲ್ಯಾಂಡರ್​ ಇನ್ನೇನು ಕೆಲವೇ ಗಂಟೆಗಳಲ್ಲಿ ಇಳಿಯುವ ಮೂಲಕ ಜಾಗತಿಕ ಬಾಹ್ಯಾಕಾಶದಲ್ಲಿ ಭಾರತ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವ ಪ್ರದೇಶ ತಲುಪಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಲಿದೆ.

ಇತ್ತೀಚೆಗೆ ಎರಡು ದಿನಗಳ ಹಿಂದೆಯಷ್ಟೇ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಕೊನೆಯ ಹಂತದ ಕಾರ್ಯಾಚರಣೆ ಯಶಸ್ವಿ ಕಂಡಿತ್ತು. ಮೊದಲ ಹಂತದ ಮೂನ್ ಲ್ಯಾಂಡರ್ ಡಿ-ಆರ್ಬಿಟ್ ಮೆನೋವರ್ ಪ್ರಕ್ರಿಯೆಯನ್ನು ವಿಜ್ಞಾನಿಗಳು ಮಂಗಳವಾರ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಬಳಿಕ ಚಂದ್ರಯಾನ 2 ಆರ್ಬಿಟರ್​​ನಿಂದ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದರು ವಿಜ್ಞಾನಿಗಳು. ಈ ಬೆನ್ನಲ್ಲೇ ಚಂದ್ರಯಾನ-2 ಚಂದ್ರನ ಮೇಲ್ಮೈನತ್ತ ಮೂನ್ ಲ್ಯಾಂಡರ್ ಅನ್ನು ತಳ್ಳುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು.

ಇದನ್ನೂ ಓದಿ: Chandrayaan-2: ಚಂದ್ರಯಾನ-2 ಉಡಾವಣೆಯ ಜವಾಬ್ದಾರಿ ಹೊತ್ತ ಮಹಿಳೆಯರು!

ಚಂದ್ರಯಾನ-2 ಸುಮಾರು 978 ಕೋಟಿ ವೆಚ್ಚದ ಯೋಜನೆಯಾಗಿದೆ. ಇದನ್ನು ಹೊತ್ತೊಯ್ಯಲು ಸಿದ್ಧವಾಗಿರುವ ಜಿಎಸ್​ಎಲ್​ವಿ ಎಂಕೆ111 ಭಾರತದ ಅತ್ಯಂತ ಶಕ್ತಿಶಾಲಿ ರಾಕೆಟ್ ಎನಿಸಿದೆ. 43.43 ಮೀಟರ್ ಎತ್ತರದ ಈ ರಾಕೆಟನ್ನು ಬಾಹುಬಲಿ ಎಂದೇ ಕರೆಯಲಾಗುತ್ತಿದೆ. ಇನ್ನು ಚಂದ್ರಯಾನ-2 ಉಪಗ್ರಹವು 3,850 ಕಿಲೋ ತೂಕವಿದ್ದು, ಇದರಲ್ಲಿ ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್​ಗಳನ್ನು ಸೇರಿಸಲಾಗಿದೆ.

ಇದೇ ಜುಲೈ 22ರಂದು ಸೋಮವಾರ ಮಧ್ಯಾಹ್ನ ಸರಿಯಾಗಿ 2:43ಕ್ಕೆ ನಭಕ್ಕೆ ಜಿಗಿದಿದ್ದ ರಾಕೆಟು ಸುಮಾರು 16 ನಿಮಿಷಗಳಲ್ಲಿ ಗಗನನೌಕೆಯನ್ನು ಭೂಮಿಯಿಂದ 170 ಕಿಮೀ ಎತ್ತರದಲ್ಲಿರುವ ಭೂ ಕಕ್ಷೆಗೆ ಸೇರಿಸಿತ್ತು.

ಜಗತ್ತಿನಲ್ಲಿ ಈಗಾಗಲೇ ಹಲವು ಬಾರಿ ಚಂದ್ರನಲ್ಲಿಗೆ ಉಪಗ್ರಹಗಳನ್ನ ಕಳುಹಿಸಲಾಗಿದೆ. ಆದರೆ, ಇದೂವರೆಗೂ ಚಂದ್ರನ ದಕ್ಷಿಣ ಧ್ರುವಕ್ಕೆ ಯಾರೂ ಹೋಗಿಲ್ಲ. ಭಾರತದ ಚಂದ್ರಯಾನ-2 ಇದೇ ಜಾಗಕ್ಕೆ ಹೋಗುತ್ತಿರುವುದು ಗಮನಾರ್ಹ. ಇಲ್ಲಿ ಚಂದ್ರನ ಬಗ್ಗೆ ಹೊಸ ಸುಳಿವು ಮತ್ತು ವಿಚಾರಗಳು ಸಿಕ್ಕಬಹುದೆಂದು ನಂಬಲಾಗಿದೆ. ಹಾಗೆಯೇ, ಚಂದ್ರನಲ್ಲಿ ಲ್ಯಾಂಡರ್ ಇಳಿಸಿರುವುದು ಇದೂವರೆಗೂ ಬರೇ ಮೂರು ದೇಶಗಳು ಮಾತ್ರ. ಹೀಗಾಗಿ, ಭಾರತಕ್ಕೆ ಇದು ಪ್ರತಿಷ್ಠೆಯ ವಿಷಯವೂ ಹೌದು.

ಇದನ್ನೂ ಓದಿ: ಇಸ್ರೋ ಸಾಧನೆಗೆ ವಿಶ್ವವೇ ಬೆರಗು; ಭಾರತದ ಚಂದ್ರಯಾನದ ರೋಚಕ ಕಥನ

ಹನ್ನೊಂದು ವರ್ಷಗಳ ಹಿಂದೆ, ಭಾರತ ಚಂದ್ರಯಾನ-1 ಉಪಗ್ರಹವನ್ನು ಕಳುಹಿಸಿತ್ತು. ಆದರೆ, ಅದು ಚಂದ್ರನ ನೆಲದ ಮೇಲೆ ಇಳಿಯದೆ ಮೇಲ್ಮೈನಲ್ಲಿ ಸುತ್ತಾಡಿತ್ತು. 312 ದಿನಗಳ ಕಾಲ ಚಾಲನೆಯಲ್ಲಿದ್ದ ಆ ಉಪಗ್ರಹ ಚಂದ್ರನ ಸುತ್ತ ದಾಖಲೆಯ 3,400 ಕ್ಕಿಂತ ಹೆಚ್ಚು ಬಾರಿ ಪ್ರದಕ್ಷಿಣೆ ಹಾಕಿತ್ತು. ಚಂದ್ರನಲ್ಲಿ ನೀರಿತ್ತೆಂಬ ಸ್ಪಷ್ಟ ಸಾಕ್ಷ್ಯವನ್ನು ವಿಶ್ವಕ್ಕೇ ಮೊದಲು ನೀಡಿದ ಹೆಗ್ಗಳಿಕೆ ಆಗ ಸಂದಾಯವಾಗಿತ್ತು. ಈಗ ಚಂದ್ರಯಾನ-2 ಉಪಗ್ರಹ ಕೂಡ ಇಂಥದ್ದೇನಾದರೂ ಹೊಸ ಸುಳಿವನ್ನು ಪತ್ತೆಹಚ್ಚಬಹುದು ಎಂದು ಭಾರತವಷ್ಟೇ ಅಲ್ಲ, ಜಗತ್ತಿನ ವಿಜ್ಞಾನಿಗಳೆಲ್ಲರೂ ಕಾತರರಾಗಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
------------
First published: