Chandrayaan 2: ಕೊನೆಯ ಕ್ಷಣದಲ್ಲಿ ಚಂದ್ರಯಾನ-2 ವಿಫಲ; ಚಂದ್ರನ ದಕ್ಷಿಣ ಗೋಳಾರ್ಧ ಅಧ್ಯಯನ ಮಾಡುವ ಇಸ್ರೋ ಕನಸು ಭಗ್ನ

ಈ ವರೆಗೆ ಚಂದ್ರನಲ್ಲಿಗೆ ರಷ್ಯಾ, ಅಮೆರಿಕ ಮತ್ತು ಚೀನಾ ಈ ಮೂರೇ ರಾಷ್ಟ್ರಗಳು ರೋವರ್​ ಕಳುಹಿಸಿವೆ. ಆದರೆ, ಚಂದ್ರನ ದಕ್ಷಿಣ ಧ್ರುವಕ್ಕೆ ಯಾವ ರಾಷ್ಟ್ರವೂ ಕಾಲಿಟ್ಟಿರಲಿಲ್ಲ. ಈಗ ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಮೊದಲ ರಾಷ್ಟ್ರ ಎನ್ನುವ ಖ್ಯಾತಿಗೆ ಭಾರತ ಪಾತ್ರವಾಗುವುದರಲ್ಲಿತ್ತು. ಆದರೆ, ಈ ಪ್ರಯತ್ನ ಈಗ ಕೊನೆಯ ಕ್ಷಣದಲ್ಲಿ ವಿಫಲವಾಗಿದೆ. . 

ಚಂದ್ರಯಾನ 2

ಚಂದ್ರಯಾನ 2

  • Share this:
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಕನಸಿನ ಕೂಸು ಚಂದ್ರಯಾನ 2 ಕೊನೆಯ ಕ್ಷಣದಲ್ಲಿ ವಿಫಲವಾಗಿದೆ. ಈ ಮೂಲಕ ಚಂದ್ರನ ಅಧ್ಯಯನ ಮಾಡುವ ಉದ್ದೇಶ ಕೊನೆಗೂ ಸಫಲವಾಗಿಲ್ಲ.

ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಆಗಮಿಸಿದ್ದರು. ಈ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವುದರಲ್ಲಿದ್ದರು. ಆದರೆ, ಈಗ ಚಂದ್ರಯಾನ ಕೊನೆಯ ಕ್ಷಣದಲ್ಲಿ ವಿಫಲವಾಗಿರುವುದು ಬೇಸರ ಮೂಡಿಸಿದ್ದರೂ ಇಸ್ರೋದ ಪ್ರಯತ್ನಕ್ಕೆ ಇಡೀ ದೇಶವೇ ಹೆಮ್ಮೆ ಪಡುವಂತಾಗಿದೆ.

ವಿಕ್ರಮ್ ಲ್ಯಾಂಡರ್ ಚಂದ್ರನಿಂದ 2.1 ಕಿ.ಮೀ ದೂರದಲ್ಲಿರುವಾಗ ಎಲ್ಲವೂ ಸಾಮಾನ್ಯವಾಗಿತ್ತು. ಆನಂತರ ಲ್ಯಾಂಡರ್​ ಹಾಗೂ ಭೂಮಿ ನಡುವೆ ಇದ್ದ  ಸಂಪರ್ಕ ಕಡಿತಗೊಂಡಿದೆ. ಇದರ ದತ್ತಾಂಶ ವಿಶ್ಲೇಷಣೆ ಮಾಡಬೇಕಿದೆ ಎಂದು ಇಸ್ರೋ ಮುಂಜಾನೆ 2.15ಕ್ಕೆ ಹೇಳಿಕೆ ನೀಡಿತ್ತು. ಈಗ ಯೋಜನೆ ಯಶಸ್ವಿಯಾಗಿಲ್ಲ ಎಂದು ಇಸ್ರೋ ಅಧಿಕೃತವಾಗಿ ಘೋಷಿಸಿದೆ.

ಈ ವರೆಗೆ ಚಂದ್ರನಲ್ಲಿಗೆ ರಷ್ಯಾ, ಅಮೆರಿಕ ಮತ್ತು ಚೀನಾ ಈ ಮೂರೇ ರಾಷ್ಟ್ರಗಳು ರೋವರ್​ ಕಳುಹಿಸಿವೆ. ಆದರೆ, ಚಂದ್ರನ ದಕ್ಷಿಣ ಧ್ರುವಕ್ಕೆ ಯಾವ ರಾಷ್ಟ್ರವೂ ಕಾಲಿಟ್ಟಿರಲಿಲ್ಲ. ಈಗ ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಮೊದಲ ರಾಷ್ಟ್ರ ಎನ್ನುವ ಖ್ಯಾತಿಗೆ ಭಾರತ ಪಾತ್ರವಾಗುವುದರಲ್ಲಿತ್ತು. ಆದರೆ, ಈ ಪ್ರಯತ್ನ ಕೊನೆಯ ಕ್ಷಣದಲ್ಲಿ ವಿಫಲವಾಗಿದೆ.

ಇದನ್ನೂ ಓದಿ: ಚಂದ್ರನ ಸ್ಪರ್ಶಕ್ಕೆ ಕೆಲವೇ ಗಂಟೆಗಳು ಬಾಕಿ; ಜಾಗತಿಕ ಬಾಹ್ಯಾಕಾಶದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಗೆ ಇಸ್ರೋ ಸಜ್ಜು

 ಚಂದ್ರಯಾನ 2 ನಡೆದು ಬಂದ ಹಾದಿ: 

ಜುಲೈ 15: ಚಂದ್ರಯಾನ ಯೋಜನೆ ಹಾರಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದಕ್ಕೆ ಯೋಜನೆ ಮುಂದೂಡಲ್ಪಟ್ಟಿತ್ತು.

ಜುಲೈ 22: ಜು.22ರಂದು ಮಧ್ಯಾಹ್ನ 2:43ಕ್ಕೆ ಚಂದ್ರಯಾನ್-2 ಗಗನನೌಕೆ ಹೊತ್ತ ಜಿಎಸ್​ಎಲ್​ವಿ-MkIII-M1 ರಾಕೆಟ್ ನಭಕ್ಕೆ ಹಾರಿತ್ತು. ಶ್ರೀಹರಿಕೋಟಾದ ಸತೀಶ್​ ಧವನ್​ ಕೇಂದ್ರದಿಂದ ಉಪಗ್ರಹ ಹಾರಿತ್ತು.

ಆಗಸ್ಟ್​ 20: ತಿಂಗಳ ಹಿಂದೆ ಆಗಸಕ್ಕೆ ನೆಗೆದಿದ್ದ ಚಂದ್ರಯಾನ 2 ನೌಕೆಯನ್ನು ಆ.22ರಂದು ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿತ್ತು. ಬೆಳಗ್ಗೆ 8.30-9.30ರ ಅವಧಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಚಂದ್ರಯಾನ 2 ಉಪಗ್ರಹವನ್ನು ಚಂದ್ರನ ಕಕ್ಷೆಗೆ ಸೇರಿಸುವ ಕೆಲಸ ಮಾಡಿತ್ತು. ಇದೊಂದು ಕಷ್ಟದ ಕೆಲಸ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್​ ತಿಳಿಸಿದ್ದರು.

ಆಗಸ್ಟ್ 22: ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದ ಚಂದ್ರಯಾನ-2 ಉಪಗ್ರಹ ಆ.22ರಂದು ಮೊದಲ ಬಾರಿ ಚಂದ್ರನ ಚಿತ್ರಣವನ್ನು ಸೆರೆಹಿಡಿದು ಕಳುಹಿಸಿತ್ತು. ಚಂದ್ರನಿಂದ 2,650 ಕಿ.ಮೀ ದೂರದಿಂದ ಚಂದ್ರನ ಮೇಲ್ಮೆಯನ್ನು  "ವಿಕ್ರಮ್​ ಲ್ಯಾಂಡರ್​" ಸೆರೆಹಿಡಿದಿತ್ತು.

ಆಗಸ್ಟ್​ 31: ಚಂದ್ರನ ನಾಲ್ಕನೇ ಕಕ್ಷೆಗೇರುವಲ್ಲಿಯೂ ಚಂದ್ರಯಾನ-2 ನೌಕೆ ಆ.31ರಂದು ಯಶಸ್ವಿಯಾಗಿತ್ತು.

ಸೆಪ್ಟೆಂಬರ್​ 7: ಚಂದ್ರಯಾನದ ಲ್ಯಾಂಡರ್​, ಸೆಪ್ಟೆಂಬರ್ 7ರ ಮಧ್ಯರಾತ್ರಿ ಸುಮಾರು 1:30ರಿಂದ 2:30ರ ನಡುವೆ ಇಳಿಯಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಯೋಜನೆ ವಿಫಲವಾಗಿದೆ.

2007ರಲ್ಲಿ ಯೋಜನೆಗೆ ಸಿಕ್ಕಿತ್ತು ಅನುಮೋದನೆ:

ಭಾರತ ಹಾಗೂ ರಷ್ಯಾ 2007ರಲ್ಲಿ ಚಂದ್ರಯಾನ 2 ಯೋಜನೆ ಸಿದ್ಧಪಡಿಸಲು ಸಹಿ ಹಾಕಿದ್ದವು. ಭಾರತ ಆರ್ಬಿಟರ್​ ಹಾಗೂ ರೋವರ್​ ಸಿದ್ಧಪಡಿಸುವ ಜವಾಬ್ದಾರಿ ಪಡೆದಿದ್ದರೆ ರಷ್ಯಾ ಲ್ಯಾಂಡರ್​ ನೀಡುವುದಾಗಿ ಒಪ್ಪಂದದಲ್ಲಿ ತಿಳಿಸಿತ್ತು. ಆಗಸ್ಟ್​ 2009ರಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ, ರಷ್ಯಾ ಲ್ಯಾಂಡರ್​ ನೀಡಲು ವಿಳಂಬ ಮಾಡಿದ್ದರಿಂದ 2013ಕ್ಕೆ ಯೋಜನೆಯನ್ನು ಮುಂದೂಡಲಾಗಿತ್ತು. ನಂತರ 2016ಕ್ಕೆ ಯೋಜನೆಯನ್ನು ನಿಗದಿ ಮಾಡಲಾಗಿತ್ತು. ಕೊನೆಗೆ ರಷ್ಯಾ ಲ್ಯಾಂಡರ್​ ನೀಡಲು ವಿಫಲವಾದ್ದರಿಂದ ಭಾರತವೇ ಅದನ್ನು ಸಿದ್ಧಪಡಿಸಿತ್ತು.

 ಯೋಜನೆಯ ವೆಚ್ಛವೆಷ್ಟು?:

ಈ ಯೋಜನೆಗೆ ತಗುಲುತ್ತಿರುವ ಒಟ್ಟು ವೆಚ್ಛ 978 ಕೋಟಿ ರೂಪಾಯಿ. ಅಂದರೆ ಹಾಲಿವುಡ್​ನ  'ಅವೆಂಜರ್​ ಎಂಡ್​​ಗೇಮ್​ ' ಸಿನಿಮಾ ಬಜೆಟ್​ಗಿಂತ ಕಡಿಮೆ ಮೊತ್ತದಲ್ಲಿ ಈ ಯೋಜನೆ ಸಿದ್ಧಗೊಂಡಿದೆ. 'ಅವೆಂಜರ್​ ಎಂಡ್​​ಗೇಮ್​ ' ಸಿನಿಮಾಗೆ 2400 ಕೋಟಿ ರೂ. ವೆಚ್ಛ ಮಾಡಲಾಗಿತ್ತು. 386 ಕೋಟಿ ರೂಪಾಯಿ  ಬಜೆಟ್​ನಲ್ಲಿ ಚಂದ್ರಯಾನ 1 ಯೋಜನೆ ಸಿದ್ಧಗೊಂಡಿತ್ತು.

ದಾಖಲೆ ಬರೆಯುವ ಕನಸು ನುಚ್ಚು ನೂರು:

ಈವರೆಗೆ ಚಂದ್ರನಲ್ಲಿಗೆ ರಷ್ಯಾ, ಅಮೆರಿಕ ಮತ್ತು ಚೀನಾ ಈ ಮೂರೇ ರಾಷ್ಟ್ರಗಳು ರೋವರ್​ ಕಳುಹಿಸಿವೆ. ಈಗ ಈ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗುವುದರಲ್ಲಿತ್ತು. ಈ ಯೋಜನೆ ಯಶಸ್ವಿಯಾಗಿದ್ದರೆ ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಕಳುಹಿಸಿದ ಮೊದಲ ರಾಷ್ಟ್ರ ಎನ್ನುವ ಖ್ಯಾತಿಗೆ ಭಾರತ ಪಾತ್ರವಾಗುತ್ತಿತ್ತು.
First published: