ಭಾರತದ ಚಂದ್ರಯಾನ -2(Chandrayaan-2) ಬಾಹ್ಯಾಕಾಶ ನೌಕೆ ಚಂದ್ರನ ಸುತ್ತ 9,000ಕ್ಕಿಂತ ಹೆಚ್ಚು ಕಕ್ಷೆಗಳನ್ನು ಪೂರ್ಣಗೊಳಿಸಿದೆ, ಮತ್ತು ನೌಕೆಯಲ್ಲಿರುವ ಇಮೇಜಿಂಗ್ ಮತ್ತು ವೈಜ್ಞಾನಿಕ ಉಪಕರಣಗಳು ಅತ್ಯುತ್ತಮ ಡೇಟಾ ಒದಗಿಸುತ್ತಿವೆ ಎಂದು ಇಸ್ರೋ(ISRO) ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಚಂದ್ರನ ಕಕ್ಷೆಯ ಸುತ್ತ ಚಂದ್ರಯಾನ -2 ಬಾಹ್ಯಾಕಾಶ ನೌಕೆಯ 2 ವರ್ಷಗಳ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ನೆನಪಿಗಾಗಿ ಸೋಮವಾರದಿಂದ ಆರಂಭವಾದ ಎರಡು ದಿನಗಳ ಚಂದ್ರ ವಿಜ್ಞಾನ ಕಾರ್ಯಾಗಾರ 2021 (Lunar Science Workshop)ಅನ್ನು ನಡೆಸುತ್ತಿದ್ದು, ಇಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಚಂದ್ರಯಾನ -2 ಬಾಹ್ಯಾಕಾಶ ನೌಕೆಯಲ್ಲಿರುವ 8 ಪೇಲೋಡ್ಗಳು ಚಂದ್ರನ ಮೇಲ್ಮೈಯಿಂದ ಸುಮಾರು 100 ಕಿಮೀ ಎತ್ತರದಲ್ಲಿ ಚಂದ್ರನ ದೂರಸ್ಥ ಸಂವೇದನೆ ಮತ್ತು ಅವಲೋಕನಗಳನ್ನು ನಡೆಸುತ್ತಿವೆ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್ ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು.
ಇಲ್ಲಿಯವರೆಗೆ, ಚಂದ್ರಯಾನ -2 ಚಂದ್ರನ ಸುತ್ತ 9,000ಕ್ಕೂ ಹೆಚ್ಚು ಕಕ್ಷೆಗಳನ್ನು ಪೂರ್ಣಗೊಳಿಸಿದೆ" ಎಂದು ಬಾಹ್ಯಾಕಾಶ ಇಲಾಖೆಯ (DoS) ಕಾರ್ಯದರ್ಶಿಯೂ ಆಗಿರುವ ಶಿವನ್ ಹೇಳಿದರು. ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯುಳ್ಳ ಇಸ್ರೋ ಪ್ರಕಾರ, ಚಂದ್ರಯಾನ -2 ಆರ್ಬಿಟರ್ ಪೇಲೋಡ್ಗಳ ದತ್ತಾಂಶದೊಂದಿಗೆ ಡೇಟಾ ಉತ್ಪನ್ನ ಮತ್ತು ವಿಜ್ಞಾನ ದಾಖಲೆಗಳನ್ನು ಶಿವನ್ ಬಿಡುಗಡೆ ಮಾಡಿದ್ದಾರೆ.
"ಚಂದ್ರಯಾನ -2 ಮಿಷನ್ನಿಂದ ಹೆಚ್ಚಿನ ವಿಜ್ಞಾನ ಹೊರತರಲು ಹೆಚ್ಚಿನ ಭಾಗವಹಿಸುವಿಕೆಗಾಗಿ ಅಕಾಡೆಮಿ ಮತ್ತು ಸಂಸ್ಥೆಗಳಿಂದ ವೈಜ್ಞಾನಿಕ ಮಾಹಿತಿ ಲಭ್ಯವಾಗುತ್ತಿವೆ" ಎಂದು ಇಸ್ರೋ ಹೇಳಿದೆ. ಮತ್ತು, ತಾವು ವಿಜ್ಞಾನ ಫಲಿತಾಂಶಗಳನ್ನು ಪರಿಶೀಲಿಸಿದ್ದಾಗಿಯೂ ಹಾಗೂ ಅವುಗಳು "ತುಂಬಾ ಪ್ರೋತ್ಸಾಹದಾಯಕ'' ವಾಗಿದೆ ಎಂದೂ ಶಿವನ್ ಮಾಹಿತಿ ನೀಡಿದ್ದಾರೆ.
ಇನ್ನು, ಚಂದ್ರಯಾನ -2 ಉಪಗ್ರಹದಲ್ಲಿರುವ ಇಮೇಜಿಂಗ್ ಮತ್ತು ವೈಜ್ಞಾನಿಕ ಉಪಕರಣಗಳು ಅತ್ಯುತ್ತಮ ಡೇಟಾವನ್ನು ಒದಗಿಸುತ್ತಿವೆ ಎಂದು ಇಸ್ರೋದ ಅಪೆಕ್ಸ್ ಸೈನ್ಸ್ ಬೋರ್ಡ್ ಮುಖ್ಯಸ್ಥ ಎ.ಎಸ್. ಕಿರಣ್ ಕುಮಾರ್ ಹೇಳಿದ್ದಾರೆ. "ಚಂದ್ರಯಾನ -2 ನಿಜವಾಗಿಯೂ ತನ್ನ ಸಾಧನಗಳಲ್ಲಿ ಹಲವು ಹೊಸ ವೈಶಿಷ್ಟ್ಯಗಳನ್ನು ಅಳವಡಿಸಿಕೊಂಡಿದೆ. ಇದು ಚಂದ್ರಯಾನ -1 ರಂದು ನಡೆಸಿದ ಅವಲೋಕನಗಳನ್ನು ಹೊಸ ಮತ್ತು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿದೆ" ಎಂದು ಇಸ್ರೋ ಮಾಜಿ ಮುಖ್ಯಸ್ಥರೂ ಆಗಿರುವ ಕಿರಣ್ ಕುಮಾರ್ ಹೇಳಿದರು.
ಆರ್ಬಿಟರ್ನ ಎಲ್ಲಾ ಉಪ-ವ್ಯವಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ನಾವು ಇನ್ನೂ ಹಲವು ವರ್ಷಗಳ ಕಾಲ ಬಾಹ್ಯಾಕಾಶ ನೌಕೆಯಿಂದ ಉತ್ತಮ ಡೇಟಾ ಪಡೆಯಬಹುದು ಎಂದು ನಾವು ಭಾವಿಸುತ್ತೇವೆ ಎಂದು ಚಂದ್ರಯಾನ -2ರ ಯೋಜನಾ ನಿರ್ದೇಶಕಿ ವನಿತಾ ಎಂ. ಹೇಳಿದರು.
ಅಲ್ಲದೆ, ಆರ್ಬಿಟರ್ನ ಇಮೇಜಿಂಗ್ ಪೇಲೋಡ್ಗಳು-ಟಿಎಂಸಿ -2 (ಟೆರೈನ್ ಮ್ಯಾಪಿಂಗ್ ಕ್ಯಾಮೆರಾ -2), ಐಐಆರ್ಎಸ್ (ಇಮೇಜಿಂಗ್ ಐಆರ್ ಸ್ಪೆಕ್ಟ್ರೋಮೀಟರ್) ಮತ್ತು ಒಎಚ್ಆರ್ಸಿ (ಆರ್ಬಿಟರ್ ಹೈ ರೆಸಲ್ಯೂಶನ್ ಕ್ಯಾಮೆರಾ) ನಮಗೆ ಚಂದ್ರನ ಅತ್ಯಾಕರ್ಷಕ ಚಿತ್ರಗಳನ್ನು ಕಳುಹಿಸಿವೆ ಎಂದು ವನಿತಾ ಹೇಳಿದರು. ಇಸ್ರೋ ಆಯೋಜಿಸಿರುವ ಎರಡು ದಿನಗಳ ಕಾರ್ಯಾಗಾರವನ್ನು ಬಾಹ್ಯಾಕಾಶ ಸಂಸ್ಥೆಯ ವೆಬ್ಸೈಟ್ ಮತ್ತು ಫೇಸ್ಬುಕ್ ಪೇಜ್ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು, ಅಕಾಡೆಮಿ ಮತ್ತು ಸಂಸ್ಥೆಗಳನ್ನು ಪರಿಣಾಮಕಾರಿಯಾಗಿ ತಲುಪಲು ಮತ್ತು ಚಂದ್ರಯಾನ -2 ಡೇಟಾ ವಿಶ್ಲೇಷಿಸಲು ವೈಜ್ಞಾನಿಕ ಸಮುದಾಯವನ್ನು ತೊಡಗಿಸಿಕೊಳ್ಳುವ ಉದ್ದೇಶ ಹೊಂದಿದೆ ಎಂದೂ ಅವರು ಹೇಳಿದರು.
8 ಪೇಲೋಡ್ಗಳ ವಿಜ್ಞಾನ ಫಲಿತಾಂಶಗಳನ್ನು ವಿಜ್ಞಾನಿಗಳು ವರ್ಚುವಲ್ ಆಗಿ ನಡೆಯುತ್ತಿರುವ ಕಾರ್ಯಾಗಾರದಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಇದರ ಜೊತೆಗೆ, ಚಂದ್ರಯಾನ -2 ಮಿಷನ್, ಟ್ರ್ಯಾಕಿಂಗ್, ಕಾರ್ಯಾಚರಣೆಗಳು ಮತ್ತು ಡೇಟಾ ಆರ್ಕೈವಲ್ ಅಂಶಗಳ ಕುರಿತು ಉಪನ್ಯಾಸಗಳು ಇರುತ್ತವೆ ಎಂದು ತಿಳಿದುಬಂದಿದೆ.
ಇಸ್ರೋ/DoSನ ವಿಜ್ಞಾನಿಗಳ ಜೊತೆಗೆ, ಚಂದ್ರ ವಿಜ್ಞಾನದ ಕುರಿತು ಉಪನ್ಯಾಸಗಳನ್ನು ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಕೋಲ್ಕತ್ತಾ, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು, ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆ, ರೂರ್ಕಿಯಿಂದ ನೀಡಲಾಗುವುದು ಎಂದೂ ಇಸ್ರೋ ಮಾಹಿತಿ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ