ನವ ದೆಹಲಿ (ಜೂನ್ 01); ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ನಡುವಿನ ಮುಸುಕಿನ ಗುದ್ದಾಟ ಮುಗಿಯುವ ಯಾವುದೇ ಲಕ್ಷಣಗಳೂ ಗೋಚರಿಸುತ್ತಿಲ್ಲ. ಯಾಸ್ ಚಂಡ ಮಾರುತ ಇತ್ತೀಚೆಗೆ ಇಡೀ ಪಶ್ಚಿಮ ಬಂಗಾಳದ ಕರಾವಳಿ ತೀರವನ್ನು ಇನ್ನಿಲ್ಲದಂತೆ ಕಾಡಿತ್ತು. ಪರಿಣಾಮ ಬಂಗಾಳದ ಜನ ನೂರಾರು ಕೋಟಿ ಮೌಲ್ಯದ ಆಸ್ತಿ-ಪಾಸ್ತಿಗಳನ್ನು ಕಳೆದುಕೊಳ್ಳುವಂತಾಗಿತ್ತು. ಹೀಗಾಗಿ ಈ ಚಂಡ ಮಾರುತದಿಂದ ಉಂಟಾದ ಹಾನಿಯ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಸಭೆ ಕರೆದಿದ್ದರು. ಆದರೆ, ಮೋದಿ ವರ್ತನೆಯನ್ನು ವಿರೋಧಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್ ಬಂಧೋಪಾಧ್ಯಾಯ ಈ ಸಭೆಗೆ ಗೈರು ಹಾಜರಾ ಗಿದ್ದರು. ಹೀಗಾಗಿ ಸಭೆಗೆ ಗೈರಾದ ಬಗ್ಗೆ ವಿವರಿಸುವಂತೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್ ಬಂಧೋಪಾಧ್ಯಾಯ ಅವರಿಗೆ ಕೇಂದ್ರ ಸರ್ಕಾರ ಇಂದು ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಆದರೆ, ಸೋಮವಾರದ ವರೆಗೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ನಿರ್ವಹಿಸಿದ್ದ ಅಲಪನ್ ಬಂಧೋಪಾಧ್ಯಾಯ ಅದೇ ದಿನ ನಿವೃತ್ತಿ ಹೊಂದಿದ್ದಾರೆ. ಅಲ್ಲದೆ, ಇದೀಗ ಅವರನ್ನು ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಸಲಹೆಗಾರರಾಗಿ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ ನೇಮಕ ಮಾಡಿದೆ. ಆದರೂ ಕೇಂದ್ರ ಸರ್ಕಾರ ಅಲಪನ್ ಬಂಧೋಪಾಧ್ಯಾಯ ಅವರಿಗೆ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಶೋಕಾಸ್ ನೊಟೀಸ್ ನೀಡಿದ್ದು, ಮೂರು ದಿನಗಳಲ್ಲಿ ಅದಕ್ಕೆ ಸೂಕ್ತ ವಿವರಣೆ ನೀಡುಬೇಕು ಎಂದು ತಾಕೀತು ಮಾಡಿದೆ.
ಅಲಪನ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆಗೆ ಮೋದಿಯನ್ನು ಭೇಟಿ ಮಾಡಿ ಯಾಸ್ ಚಂಡಮಾರುತದಿಂದ ಉಂಟಾದ ಹಾನಿ ಕುರಿತಾಗಿ ವರದಿ ಸಲ್ಲಿಸಿದ್ದರು. ಆದರೆ, ಕೇಂದ್ರವು ಕರೆದಿದ್ದ ಪುನರ್ ಪರಿಶೀಲಿನೆ ಸಭೆಗೆ ಅವರು ಗೈರಾಗಿದ್ದರು. ಇದು ಸಾಮಾನ್ಯವಾಗಿ ಕೇಂದ್ರ ಸರ್ಕಾರಕ್ಕೆ ಮುಜುಗರವನ್ನು ಉಂಟು ಮಾಡಿತ್ತು. ಹೀಗಾಗಿ ಈ ಪ್ರಸಂಗದ ಬೆನ್ನಲ್ಲೆ ಅವರನ್ನು ಕೇಂದ್ರಕ್ಕೆ ವಾಪಾಸ್ ಕಳುಹಿಸಬೇಕು ಎಂದು ಕೇಂದ್ರವು ರಾಜ್ಯವನ್ನು ಕೇಳಿಕೊಂಡಿತ್ತು.
ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು, ಮುಖ್ಯ ಕಾರ್ಯದರ್ಶಿಯನ್ನು ವಾಪಸ್ ಕರೆಸಿಕೊಳ್ಳುವ ಕೇಂದ್ರದ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಕೋರಿದ್ದರು. ಜೊತೆಗೆ ಅವರನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದಿಲ್ಲ ಎಂದು ತಿಳಿಸಿದ್ದರು. ಆದರೆ ಕೇಂದ್ರ ಸರ್ಕಾರವು ವರ್ಗಾವಣೆ ಆದೇಶವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗೆ ಪ್ರತ್ಯುತ್ತರಿಸಿತ್ತು. ಅಲಪನ್ ಅವರ ಸ್ಥಾನಕ್ಕೆ ಹೆ.ಕೆ. ದ್ವಿವೇದಿಯವರು ಪಶ್ಚಿಮ ಬಂಗಾಳದ ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಇದನ್ನೂ ಓದಿ: ಬ್ಲಾಕ್ ಫಂಗಸ್: ಭಾರತದ ನೀತಿಯನ್ನು ಪ್ರಶ್ನಿಸಿ ಕೇಂದ್ರದ ಎದುರು 3 ಪ್ರಶ್ನೆಗಳನ್ನಿಟ್ಟ ರಾಹುಲ್ ಗಾಂಧಿ!
ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ಸೋಮವಾರ ಬೆಳಗ್ಗೆ 10 ಗಂಟೆಯ ಒಳಗೆ ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರದ ಸೇವೆಯಿಂದ ಬಿಡುಗಡೆಗೊಂಡು ಕೇಂದ್ರ ಸರ್ಕಾರದ ಸೇವೆಗೆ ವರದಿ ಮಾಡಿಕೊಳ್ಳಬೇಕಿದ್ದ ಅಲಪನ್ ಬಂದೋಪಾದ್ಯಾಯ್ ತಮ್ಮ ಉದ್ಯೋಗದಿಂದಲೇ ನಿವೃತ್ತಿಗೊಂಡಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬಂದೋಪಾದ್ಯಾಯ ಅವರನ್ನು ತಮ್ಮ ಮಖ್ಯ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ