ಕಿಸಾನ್‌ ಯೋಜನೆಯಡಿ ಏಪ್ರಿಲ್‌-ಆಗಸ್ಟ್‌ ನಡುವೆ ರೈತರ ಖಾತೆಗೆ 38,282 ಕೋಟಿ ಹಣ ವರ್ಗಾಯಿಸಲಾಗಿದೆ; ಕೇಂದ್ರ ಸರ್ಕಾರ

ತಮಿಳುನಾಡಿನ ಕಡಲೂರು ಜಿಲ್ಲೆಯ ಫಲಾನುಭವಿಗಳಿಗೆ ಮೀಸಲಾಗಿರುವ ನಕಲಿ ಪಿಎಂ-ಕಿಸಾನ್ ಖಾತೆಗಳ ಹಣವನ್ನು ಇತ್ತೀಚೆಗೆ ಸಿಫೋನ್ ಮಾಡುವ ಮೂಲಕ ಭ್ರಷ್ಟಾಚಾರ ಎಸಗಿರುವ ಪ್ರಕರಣದ ಬಗ್ಗೆ ಕೇಂದ್ರಕ್ಕೆ ಮಾಹಿತಿ ಇದೆ ಎಂದು ಸಚಿವ ನರೇಂದ್ರ ಸಿಂಗ್ ತೋಮರ್‌ ತಿಳಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ನವ ದೆಹಲಿ; ಈ ಹಣಕಾಸು ವರ್ಷದಲ್ಲಿ ಏಪ್ರಿಲ್‌ - ಆಗಸ್ಟ್ ನಡುವೆ ಪಿಎಂ-ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರ ರೈತರ ಖಾತೆಗಳಿಗೆ 38,282 ಕೋಟಿ ಹಣವನ್ನು ವರ್ಗಾವಣೆ ಮಾಡಿದೆ. ಆದರೆ, ಉಳಿದ ಕಂತುಗಳ ಪಾವತಿಯನ್ನು ಮುಂಗಡವಾಗಿ ನೀಡುವ ಅಥವಾ ಈ ಮೊತ್ತವನ್ನು ಹೆಚ್ಚಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ-ಕಿಸಾನ್) ಅಡಿಯಲ್ಲಿ ಸರ್ಕಾರವು 14 ಕೋಟಿ ರೈತರಿಗೆ ಮೂರು ಸಮಾನ ಕಂತುಗಳಲ್ಲಿ ವಾರ್ಷಿಕವಾಗಿ 6,000 ರೂ ನೀಡುತ್ತಿದೆ. ನೇರ ಲಾಭ ವರ್ಗಾವಣೆ (ಡಿಬಿಟಿ) ಕ್ರಮದ ಮೂಲಕ ರೈತರ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರೈತರಿಗೆ ಹಣವನ್ನು ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡುವ ಉಪಕ್ರಮದ ಕುರಿತು ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ತೋಮರ್, "ಈ ಹಣಕಾಸಿನ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಈ ಯೋಜನೆಯಡಿ ವಿವಿಧ ಫಲಾನುಭವಿಗಳಿಗೆ ಒಟ್ಟು 38,282 ಕೋಟಿ ಹಣವನ್ನು ಅವರ ಖಾತೆಗೆ ವರ್ಗಾಯಿಸಲಾಗಿದೆ. ಪಿಎಂ-ಕಿಸಾನ್ ಯೋಜನೆಯಡಿ ಸುಮಾರು 9.24 ಕೋಟಿ ರೈತ ಕುಟುಂಬಗಳಿಗೆ ಲಾಭವಾಗಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ನಡುವೆ ಕೊರೋನಾ ಸಂದರ್ಭದಲ್ಲಿ ರೈತರಿಗೆ ಮುಂದಿನ ಕಂತಿನ ಹಣವನ್ನು ಮುಂಗಡವಾಗಿ ನೀಡಬೇಕು ಮತ್ತು ವಾರ್ಷಿಕ ಪರಿಹಾರವನ್ನು 12,000 ರೂ. ಗೆ ಏರಿಸಬೇಕು ಎಂಬ ಒತ್ತಾಯವೂ ಸಾಮಾಜಿಕ ವಲಯದಲ್ಲಿ ಕೇಳಿ ಬರುತ್ತಿದೆ. ಆದರೆ, ಇದಕ್ಕೆ ಲೋಕಸಭೆಯಲ್ಲಿ ಉತ್ತರಿಸಿರುವ ಸಚಿವ ತೋಮರ್‌, "2020-21ರ ಹಣಕಾಸು ವರ್ಷದ ಉಳಿದ ಕಂತುಗಳನ್ನು ಮುಂಗಡವಾಗಿ ಪಾವತಿಸುವ ಯಾವುದೇ ಪ್ರಸ್ತಾಪವಿಲ್ಲ. ಅಲ್ಲದೆ, ಈ ಪರಿಹಾರದ ಹಣವನ್ನು ಹೆಚ್ಚಿಸಲೂ ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ನಕಲಿ ಖಾತೆಯ ಮೂಲಕ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಲಾಭ ಪಡೆಯುವವರ ಕುರಿತು ಸದನಕ್ಕೆ ಮಾಹಿತಿ ನೀಡಿದ ಅವರು, "ತಮಿಳುನಾಡಿನ ಕಡಲೂರು ಜಿಲ್ಲೆಯ ಫಲಾನುಭವಿಗಳಿಗೆ ಮೀಸಲಾಗಿರುವ ನಕಲಿ ಪಿಎಂ-ಕಿಸಾನ್ ಖಾತೆಗಳ ಹಣವನ್ನು ಇತ್ತೀಚೆಗೆ ಸಿಫೋನ್ ಮಾಡುವ ಮೂಲಕ ಭ್ರಷ್ಟಾಚಾರ ಎಸಗಿರುವ ಪ್ರಕರಣದ ಬಗ್ಗೆ ಕೇಂದ್ರಕ್ಕೆ ಮಾಹಿತಿ ಇದೆ.

ಬಳಕೆದಾರರ ಹೆಸರು ರುಜುವಾತುಗಳನ್ನು ಕದಿಯುವ ಮೂಲಕ ಅನರ್ಹ ಫಲಾನುಭವಿಗಳನ್ನು ಕೆಲವು ಜಿಲ್ಲೆಗಳಲ್ಲಿ ಪಿಎಂ-ಕಿಸಾನ್ ಪೋರ್ಟಲ್‌ನಲ್ಲಿ ನೋಂದಾಯಿಸಲಾಗಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ವಂಚನೆ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಲಾಗುವುದು" ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ಕೊರೋನಾದಿಂದ ಮುಗ್ಗರಿಸಿರುವ ಜಾಗತಿಕ ಆರ್ಥಿಕತೆ ಚೇತರಿಕೆಗೆ ಕನಿಷ್ಠ 5 ವರ್ಷ ಬೇಕು; ವಿಶ್ವಬ್ಯಾಂಕ್

"ಈವರೆಗೆ ತಮಿಳುನಾಡಿನಲ್ಲಿ ನಕಲಿ ಖಾತೆ ಮೂಲಕ ವಂಚನೆ ಎಸಗಲಾದ ಪ್ರಕರಣದ ಪೈಕಿ 47 ಕೋಟಿ ಮೊತ್ತವನ್ನು ವಸೂಲಿ ಮಾಡಲಾಗಿದೆ. ತಮಿಳುನಾಡಿನ ಅಪರಾಧ ಶಾಖೆ ಸಿಐಡಿ (ಸಿಬಿ-ಸಿಐಡಿ) 10 ಪ್ರಕರಣಗಳನ್ನು ದಾಖಲಿಸಿದ್ದು, ಪ್ರಕರಣದಲ್ಲಿ 16 ಆರೋಪಿಗಳನ್ನು ಬಂಧಿಸಿದೆ. ಜಿಲ್ಲಾ ಮಟ್ಟದ ಮತ್ತು ಬ್ಲಾಕ್ ಮಟ್ಟದ ಪಿಎಂ-ಕಿಸಾನ್ ಲಾಗಿನ್ ಐಡಿಗಳು ನಿಷ್ಕ್ರಿಯಗೊಳಿಸಲಾಗಿದೆ.

ಇದಲ್ಲದೆ, ವಿಲ್ಲುಪುರಂ, ಕಲ್ಲಕುರಿಚಿ ಮತ್ತು ಕಡಲೂರು ಜಿಲ್ಲೆಗಳಲ್ಲಿ ಈ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ವರದಿಯಾಗಿರುವ 19 ಗುತ್ತಿಗೆ ಸಿಬ್ಬಂದಿಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ. ಮೇಲ್ವಿಚಾರಣೆಯ ಕೊರತೆ ಮತ್ತು ಮೇಲಧಿಕಾರಿಗಳಿಗೆ ಮೋಸದ ಚಟುವಟಿಕೆಗಳ ಬಗ್ಗೆ ತಿಳಿಸದ ಕಾರಣ ಮೂವರು ಬ್ಲಾಕ್ ಮಟ್ಟದ ಸಹಾಯಕ ನಿರ್ದೇಶಕರನ್ನು ಅಮಾನತುಗೊಳಿಸಲಾಗಿದೆ" ಎಂದು ಸಚಿವ ತೋಮರ್‌ ಸದನಕ್ಕೆ ತಿಳಿಸಿದ್ದಾರೆ.
Published by:MAshok Kumar
First published: