Cultural Politics: ಗಣರಾಜ್ಯೋತ್ಸವದ ಪರೇಡ್​​ನಲ್ಲಿ ನಾರಾಯಣಗುರು, ನೇತಾಜಿ ಸ್ತಬ್ಧಚಿತ್ರಕ್ಕೆ ಅವಕಾಶ ಏಕಿಲ್ಲ?

ಸಮಾಜ ಸುಧಾರಕ ನಾರಾಯಣಗುರು ಅವರ ಸ್ಥಬ್ಧಚಿತ್ರ ಮಾಡಲು ಕೇರಳ ಸರ್ಕಾರ ಮತ್ತು  ಸ್ಚತಂತ್ರ್ಯ ಸೇನಾನಿ ನೇತಾಜಿ ಸುಬಾಸ್ ಚಂದ್ರ ಬೋಸ್ ಅವರ ಸ್ಥಬ್ಧಚಿತ್ರ ಮಾಡಲು ಪಶ್ಚಿಮ ಬಂಗಾಳ ಸರ್ಕಾರ ಪ್ರಸ್ತಾಪ ಮಾಡಿದ್ದವು‌.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ, ಜ. 16: ಬಿಜೆಪಿ ಚುನಾವಣಾ ರಾಜಕೀಯದಷ್ಟೇ ಪ್ರಾಮುಖ್ಯತೆಯನ್ನು ಸಾಂಸ್ಕೃತಿಕ ರಾಜಕೀಯಕ್ಕೂ (Cultural Politics) ನೀಡುತ್ತದೆ ಎಂಬುದಕ್ಕೆ ಇದೊಂದು ಒಳ್ಳೆಯ ಉದಾಹರಣೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ (Union Government) ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವದ ಪರೇಡ್ ನಲ್ಲಿ (Republic Day Parade) ಈ ಬಾರಿ ಸಮಾಜಸುಧಾರಕ ನಾರಾಯಣಗುರು (Narayanaguru) ಅವರ ಸ್ಥಬ್ಧಚಿತ್ರ ಮಾಡಲು ಕೇರಳ ಸರ್ಕಾರಕ್ಕೆ (Kerala Government) ಅವಕಾಶ ಮಾಡಿಕೊಟ್ಟಿಲ್ಲ. ಅದೇ ರೀತಿ ಸ್ಚತಂತ್ರ್ಯ ಸೇನಾನಿ ನೇತಾಜಿ ಸುಬಾಸ್ ಚಂದ್ರ ಬೋಸ್ (Subhaschandra Bose) ಅವರ ಸ್ಥಬ್ಧಚಿತ್ರ ಮಾಡಲು ಪಶ್ಚಿಮ ಬಂಗಾಳ ಸರ್ಕಾರಕ್ಕೆ (West Bengal Government) ಅನುವು ಮಾಡಿಕೊಟ್ಟಿಲ್ಲ. ಇದೀಗ ವಿವಾದಕ್ಕೆ ಕಾರಣವಾಗಿದೆ.

ಕೇಂದ್ರ ಸರ್ಕಾರದ ನಡೆ ಬಗ್ಗೆ ಅಸಮಾಧಾನ
ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಯಾವ ರೀತಿಯ ಸ್ಥಬ್ಧಚಿತ್ರ ಇರಬೇಕು ಎಂದು ನಿರ್ಣಯಿಸಲು ರಕ್ಷಣಾ ಇಲಾಖೆಯ ಸಮಿತಿ ಇರುತ್ತದೆ‌. ಈ ಸಮಿತಿ ಮುಂದೆ ಸಮಾಜ ಸುಧಾರಕ ನಾರಾಯಣಗುರು ಅವರ ಸ್ಥಬ್ಧಚಿತ್ರ ಮಾಡಲು ಕೇರಳ ಸರ್ಕಾರ ಮತ್ತು  ಸ್ಚತಂತ್ರ್ಯ ಸೇನಾನಿ ನೇತಾಜಿ ಸುಬಾಸ್ ಚಂದ್ರ ಬೋಸ್ ಅವರ ಸ್ಥಬ್ಧಚಿತ್ರ ಮಾಡಲು ಪಶ್ಚಿಮ ಬಂಗಾಳ ಸರ್ಕಾರ ಪ್ರಸ್ತಾಪ ಮಾಡಿದ್ದವು‌. ಆದರೆ ಕೇಂದ್ರ ಸರ್ಕಾರ ಅತಾರ್ಥ್ ರಕ್ಷಣಾ ಇಲಾಖೆಯ ಸಮಿತಿ ಈ ಬಾರಿ ಈ ಎರಡೂ ಸ್ಥಬ್ಧಚಿತ್ರಗಳನ್ನು ಮಾಡಲು ಅನುಮತಿ ನೀಡಿಲ್ಲ. ಆದುದರಿಂದ ಕೇಂದ್ರ ಸರ್ಕಾರದ ನಡೆಗೆ ಕೇರಳ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಅಸಮಾಧಾನ ವ್ಯಕ್ತಪಡಿಸಿವೆ.

ಇದನ್ನೂ ಓದಿ: Collision: ಯುಎಇಯಿಂದ ಭಾರತಕ್ಕೆ ತೆರಳುತ್ತಿದ್ದ ವಿಮಾನಗಳ ನಡುವೆ ತಪ್ಪಿದ ಅಪಘಾತ, ಜಸ್ಟ್ ಮಿಸ್!

3ನೇ ಸಲ ಕೇರಳಕ್ಕೆ ಸಿಗದ ಅವಕಾಶ
ಈ ಬಾರಿ ಮಹಿಳೆಯರ ಸುರಕ್ಷತೆಯ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದ ಜಟಾಯು ಪಕ್ಷಿ ಮತ್ತು ನಾರಾಯಣ ಗುರು ಸ್ಥಬ್ಧಚಿತ್ರ ಮಾಡಲು ಸಿದ್ಧತೆ ನಡೆಸಿತ್ತು. ಆದರೆ ಕೇಂದ್ರ ಸರ್ಕಾರವು ಶಂಕರಾಚಾರ್ಯರ ಮೂರ್ತಿಯನ್ನು ಸ್ಥಬ್ಧಚಿತ್ರ ಮಾಡಿ ಎಂದು ಹೇಳಿದೆ. ಈ ವಿಷಯವಾಗಿ ಕೇಂದ್ರ ಮತ್ತು ಕೇರಳ ಸರ್ಕಾರದ ನಡುವೆ ಘರ್ಷಣೆ ಆಗಿದೆ. ಇನ್ನೊಂದು ಮಹತ್ವದ ವಿಷಯ ಏನೆಂದರೆ ಕೇರಳ ಸರ್ಕಾರ ನಾರಾಯಣಗುರು ಅವರ ಸ್ಥಬ್ಧಚಿತ್ರ ಮಾಡುವುದಾಗಿ ಮೂರು ವರ್ಷಗಳಿಂದ ಅವಕಾಶ ಕೇಳುತ್ತಿದೆ. ಆದರೆ ಕೇಂದ್ರ ಸರ್ಕಾರ ನಾರಾಯಣಗುರು ಸ್ಥಬ್ಧಚಿತ್ರ ಮಾಡಲು ಸುತಾರಾಂ ಒಪ್ಪುತ್ತಿಲ್ಲ. ಕೇಂದ್ರ ಸರ್ಕಾರದ ನಡೆಗೆ ಕೆರಳಿರುವ ಕೇರಳ ಸರ್ಕಾರ ಈ ಬಾರಿಯ ಗಣರಾಜ್ಯೋತ್ಸವದ ಪರೇಡ್ ಅನ್ನೇ ಬಹಿಷ್ಕಾರ ಮಾಡಲು ನಿರ್ಧರಿಸಿದೆ.

ಕ್ಷಮೆ ಕೇಳುವಂತೆ ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ
ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಮಾಡಲು ಕೇರಳ ಸರ್ಕಾರಕ್ಕೆ ಅವಕಾಶ ನೀಡದೆ ಇರುವುದು ನಾರಾಯಣಗುರುಗೆ ಮಾಡಿದ ಅಪಮಾನ, ಆದುದರಿಂದ ಕೇಂದ್ರ ಸರ್ಕಾರ ಕೂಡಲೇ ಕ್ಷಮೆ ಕೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದಾಮಯ್ಯ‌ ಆಗ್ರಹಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಸಿದ್ದರಾಮಯ್ಯ ಅವರು 'ಕೇಂದ್ರ ಸರ್ಕಾರ ಸಮಾಜ ಸುಧಾರಕನನ್ನು ಅವಮಾನಿಸಿದ ಕಾರಣಕ್ಕೆ ದೇಶದ ಜನರ ಕ್ಷಮೆ ಯಾಚಿಸಿ, ನಾರಾಯಣ ಗುರುಗಳ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು' ಎಂದು ಒತ್ತಾಯಿಸಿದ್ದಾರೆ.

ಹಿಂದೂ ವಿರೋಧಿ ಬಿಜೆಪಿ
ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವುದು ತಳಸಮುದಾಯದ ಮಹಾಪುರುಷರ ಬಗ್ಗೆ  ಬಿಜೆಪಿ ಪಕ್ಷ ಮತ್ತು ಕೇಂದ್ರ ಸರ್ಕಾರಕ್ಕೆ ಇರುವ ಪೂರ್ವಗ್ರಹ ಮತ್ತು ತಿರಸ್ಕಾರಕ್ಕೆ ಸಾಕ್ಷಿ. ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಯಾವ ಕಾರಣಕ್ಕಾಗಿ ಅವಕಾಶ ನಿರಾಕರಿಸಲಾಗಿದೆ? ನಾರಾಯಣ ಗುರುಗಳು ಹಿಂದೂ ಧರ್ಮಕ್ಕೆ ಸೇರಿದವರಲ್ಲವೇ? ಅಂತಹ ಅಭಿಪ್ರಾಯವನ್ನು ಬಿಜೆಪಿ ಪಕ್ಷ ಹೊಂದಿದ್ದರೆ ಹಾಗೆಂದು ಮುಕ್ತವಾಗಿ ಹೇಳುವ ಧೈರ್ಯ ತೋರಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮೋದಿಗೆ ಸಿದ್ದರಾಮಯ್ಯ ಸವಾಲು
ಹಿಂದೂ ಧರ್ಮದ ಸುಧಾರಕ ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಅವಕಾಶ ನಿರಾಕರಿಸಿ ಅವಮಾನಿಸಿರುವುದು 'ಹಿಂದು ಹೃದಯ ಸಾಮ್ರಾಟ' ಎಂದು ಕರೆಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ಇ‌ನ್ನೂ ಬಂದಿಲ್ಲವೇ? ಶತಮಾನದ ಹಿಂದೆಯೇ ಅಸ್ಪೃಶ್ಯತೆ ಮತ್ತು ಪುರೋಹಿತಷಾಹಿ ವ್ಯವಸ್ಥೆ ವಿರುದ್ದ ಸಿಡಿದೆದ್ದು ಹಿಂದೂ ಧರ್ಮದ ಸುಧಾರಣೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದ ನಾರಾಯಣ ಗುರುಗಳಿಗೆ ಅವಮಾನಿಸಿರುವ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ಹಿಂದೂ ಧರ್ಮದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ? ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: Yogini: ಕಳುವಾಗಿದ್ದ ಮೇಕೆ ಮುಖದ ಯೋಗಿನಿ ವಿಗ್ರಹ ವಿದೇಶದಿಂದ ಭಾರತಕ್ಕೆ ವಾಪಸ್

ತಮ್ಮ ಮೂಗಿನಡಿಯಲ್ಲಿಯೇ ನಾರಾಯಣ ಗುರುಗಳಿಗೆ ಮಾಡಿರುವ ಅವಮಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇನ್ನೂ ಪ್ರತಿಕ್ರಿಯಿಸದೆ ಇರುವುದು ಆಶ್ಚರ್ಯಕರ. ಇದನ್ನು ಹೇಗೆ ಅರ್ಥೈಸಬೇಕು? ಈ ಅವಮಾನಕ್ಕೆ ಸಹಮತ ಇದೆಯೆಂದೇ? ಎಂದಿರುವ ಸಿದ್ದರಾಮಯ್ಯ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ನಾರಾಯಣ ಗುರುಗಳ ಜಯಂತಿಯನ್ನು ರಾಜ್ಯ ಸರ್ಕಾರವೇ ಅಧಿಕೃತವಾಗಿ ಆಚರಿಸಬೇಕೆಂಬ ನಿರ್ಧಾರ ಕೈಗೊಂಡೆ. ಇದರಿಂದಾಗಿ ಇಂದು ರಾಜ್ಯದ ಮೂಲೆಮೂಲೆಗೆ ಗುರುಗಳ ಚಿಂತನೆಯ ಸಂದೇಶ ತಲುಪುತ್ತಿದೆ‌ ಎಂಬ ಹೆಮ್ಮೆ ಮತ್ತು ತೃಪ್ತಿ ನನ್ನದು ಎಂದು ಹೇಳುವ ಮೂಲಕ ಪರೋಕ್ಷವಾಗಿ ನೀವು ನಾರಾಯಣಗುರು ಪರವಾದ ನಿಲುವು ತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದಾರೆ. ಜೊತೆಗೆ ನಾರಾಯಣ ಗುರುಗಳಿಗೆ ಮಾಡಿರುವ ಅವಮಾನಕ್ಕಾಗಿ ಕೇಂದ್ರ ಸರ್ಕಾರ ದೇಶದ ಕ್ಷಮೆ ಕೇಳಬೇಕು.ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ಪ್ರಾಧಾನ್ಯ ಕೊಟ್ಟು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮೋದಿಗೆ ಪತ್ರ ಬರೆದು ಆಕ್ಷೇಪಿಸಿರುವ ಮಮತಾ
ಪಶ್ಚಿಮ ಬಂಗಾಳ ಸರ್ಕಾರ ಸ್ಚತಂತ್ರ್ಯ ಸೇನಾನಿ ಹಾಗೂ ಪಶ್ಚಿಮ‌ ಬಂಗಾಳದ ಹೆಮ್ಮೆಯ ಪುತ್ರ ನೇತಾಜಿ ಸುಬಾಸ್ ಚಂದ್ರ ಬೋಸ್ ಅವರ ಸ್ಥಬ್ಧಚಿತ್ರ ಮಾಡಲು ಅವಕಾಶ ಕೇಳಿತ್ತು. ಆದರೆ ಕೇಂದ್ರ ಸರ್ಕಾರ ನೇತಾಜಿ ಸುಬಾಸ್ ಚಂದ್ರ ಬೋಸ್ ಅವರ ಸ್ಥಬ್ಧಚಿತ್ರ ಮಾಡುವುದಕ್ಕೂ ಅವಕಾಶ ನೀಡಿಲ್ಲ. ಇದರಿಂದ ಆಕ್ರೋಶಗೊಂಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೇರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Published by:Kavya V
First published: