ಅಮರಾವತಿ(ಫೆ.04): ತೀವ್ರ ವಿರೋಧದ ನಡುವೆಯೂ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸರ್ಕಾರ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ "ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ" ಕುರಿತಾದ ಮಸೂದೆಗೆ ಹಿಂದೆಯೇ ಅಂಗೀಕಾರ ಸಿಕ್ಕಿದೆ. ಇದಾದ ಮೂರು ವಾರಗಳ ನಂತರ ಕೇಂದ್ರ ಸರ್ಕಾರ ಆಂಧ್ರಕ್ಕೆ ಮೂರು ರಾಜಧಾನಿ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಅಭಿಪ್ರಾಯ ತಿಳಿಸಿದೆ. ಸಿಎಂ ಜಗನ್ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸರ್ಕಾರ ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ ಯೋಜನೆ ಕುರಿತಂತೆ ಕೈಗೊಂಡ ನಿರ್ಧಾರಕ್ಕೆ ನಮ್ಮ ವಿರೋಧವಿಲ್ಲ. ಈ ವಿಚಾರದಲ್ಲಿ ನಾವು ಯಾವುದೇ ಕಾರಣಕ್ಕೂ ಮಧ್ಯ ಪ್ರವೇಶಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇಂದು ಸಂಸತ್ನಲ್ಲಿ ಆಂಧ್ರಕ್ಕೆ ಮೂರು ರಾಜಧಾನಿ ಯೋಜನೆ ಸಂಬಂಧ ಮಧ್ಯಸ್ಥಿಕೆ ವಹಿಸುವ ಯಾವುದಾದರೂ ತೀರ್ಮಾನ ಕೇಂದ್ರ ಸರ್ಕಾರ ತಗೆದುಕೊಂಡಿಯೇ ಎಂದು ಟಿಡಿಪಿ ಸಂಸದ ಜಯದೇವ್ ಗಲ್ಲಾ ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಕೇಂದ್ರ ಸಚಿವ ನಿತ್ಯಾನಂದ ರೈ, ಪ್ರತಿಯೊಂದು ರಾಜ್ಯಕ್ಕೂ ತನ್ನ ಪ್ರಾದೇಶಿಕ ವ್ಯಾಪ್ತಿಯಲ್ಲಿ ರಾಜಧಾನಿ ರಚಿಸಿಕೊಳ್ಳುವ ಪರಮಾಧಿಕಾರ ಸಂವಿಧಾನ ನೀಡಿದೆ. ಈ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎನ್ನುವ ಮೂಲಕ ಸಿಎಂ ಜಗನ್ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.
ಈ ಹಿಂದೆಯೇ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸರ್ಕಾರ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ "ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ" ಕುರಿತಾದ ಮಸೂದೆ ಮಂಡಿಸಿತ್ತು. ವಿಧಾನಸಭೆಯಲ್ಲಿ ಆಂಧ್ರಪ್ರದೇಶ ಹಣಕಾಸು ಸಚಿವ ಬುಗ್ಗನ್ ರಾಜೇಂದ್ರನಾಥ್ ರೆಡ್ಡಿಯವರೇ ಖುದ್ದು ರಾಜ್ಯಾಡಳಿತ ವಿಕೇಂದ್ರಿಕರಣ ಮಸೂದೆ ಮಂಡಿಸಿದ್ದರು. ಇದಕ್ಕೆ ವಿಧಾನಸಭೆಯಲ್ಲಿ ಅನುಮೋದನೆಯೂ ಸಿಕ್ಕಿತ್ತು.
ಇದನ್ನೂ ಓದಿ:
‘ರಾಜಾಹುಲಿಗೆ ಸಂಪುಟ ವಿಸ್ತರಣೆ ಯಾವ ಲೆಕ್ಕಾ‘: ಸಿಎಂ ಬಿಎಸ್ ಯಡಿಯೂರಪ್ಪ ಹೊಗಳಿದ ಆರ್. ಅಶೋಕ್
ಎರಡು ತಿಂಗಳ ಹಿಂದೆಯೇ ಸಿಎಂ ಜಗನ್ ಮೋಹನ್ ರೆಡ್ಡಿ ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿ ಮಾಡುವುದಾಗಿ ಘೋಷಿಸಿದ್ದರು. ಅದಾದ ಬಳಿಕ ರಾಜ್ಯದಲ್ಲಿ ಪರಿಸ್ಥಿತಿ ಭಾರೀ ಗಂಭೀರವಾಗಿತ್ತು. ಮಸೂದೆ ಪ್ರಕಾರ ಅಮರಾವತಿಯನ್ನು ಶಾಸಕಾಂಗ ರಾಜಧಾನಿಯನ್ನಾಗಿ; ವಿಶಾಖಪಟ್ಟಣವನ್ನು ಕಾರ್ಯಾಂಗ ರಾಜಧಾನಿಯನ್ನಾಗಿ ಮತ್ತು ಕರ್ನೂಲ್ ನ್ಯಾಯಾಂಗ ರಾಜಧಾನಿಯನ್ನಾಗಿ ಮಾಡಲು ಉದ್ದೇಶಿಸಲಾಗಿತ್ತು.
ವಿಧಾನಸಭಾ ಅಧಿವೇಶನಕ್ಕೂ ಮುನ್ನವೇ ಜಗನ್ ನೇತೃತ್ವದ ಸಚಿವ ಸಂಪುಟ ಈ ಮಸೂದೆಗೆ ಅಸ್ತು ಎಂದಿತ್ತು. ಹಾಗೆಯೇ ರಾಜಧಾನಿಗೆ ಸಂಬಂಧಿಸಿದ ಸಚಿವರು ಮತ್ತು ತಜ್ಞರ ಸಮಿತಿಗಳ ಶಿಫಾರಸುಗಳಿಗೂ ಸಂಪುಟ ಸಮ್ಮತಿ ನೀಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ