ನವದೆಹಲಿ (ಜುಲೈ 13): ಆರೋಪಿಗಳಿಂದ ಬಾಯಿ ಬಿಡಿಸಲು ಪೊಲೀಸರು ಥರ್ಡ್ ಡಿಗ್ರಿ ಟ್ರೀಟ್ಮೆಂಟ್ (Third Degree Treatment) ಕೊಡುವುದನ್ನು ನಾವು ನೋಡಿರುತ್ತೇವೆ. ಥರ್ಡ್ ಡಿಗ್ರಿ ವಿಚಾರಣೆಯಲ್ಲಿ ಆರೋಪಿಗಳಿಗೆ ವಿಪರೀತ ಹಿಂಸೆ ನೀಡಲಾಗುತ್ತದೆ. ಹಲವು ಪ್ರಕರಣಗಳಲ್ಲಿ ನಿರಪರಾಧಿಗಳೇ ಆರೋಪಿ ಸ್ಥಾನದಲ್ಲಿ ನಿಂತ ಇಂಥ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ಗೆ ಒಳಗಾಗಿದ್ದು ಉಂಟು. ಕೇಂದ್ರ ಸರ್ಕಾರ ಈಗ ಇಂಥ ಹಿಂಸಾತ್ಮಕ ವಿಚಾರಣೆಯನ್ನೇ ಕೈಬಿಡುವ ಚಿಂತನೆಯಲ್ಲಿದೆ. ಸದ್ಯ ಪೊಲೀಸ್ ವ್ಯವಸ್ಥೆಯಲ್ಲಿ ಇರುವ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಇತ್ಯಾದಿ ಅನೇಕ ಅಂಶಗಳು ಇತಿಹಾಸ ಪುಟಕ್ಕೆ ಸೇರುವ ಕಾಲ ಬಂದಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳು ಈಗಿನ ಕಾಲಕ್ಕೆ ಸರಿ ಹೊಂದುವ ರೀತಿಯಲ್ಲಿ ಬದಲಾವಣೆಗಳನ್ನ ತರಲು ಕೇಂದ್ರ ಸರ್ಕಾರ ಯೋಜಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ (NFSU - National Forensic Science University)ಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಕೇಂದ್ರ ಗೃಹ ಮಂತ್ರಿಗಳು, “…ಥರ್ಡ್ ಡಿಗ್ರಿ ಹಿಂಸೆಯ ಕಾಲಗಳು ಗತಿಸುತ್ತವೆ” ಎಂದು ತಿಳಿಸಿದ್ದಾರೆ. ಹಾಗೆಯೇ, ಆರಕ್ಕಿಂತ ಹೆಚ್ಚು ವರ್ಷ ಶಿಕ್ಷೆಯ ಸಾಧ್ಯತೆ ಇರುವ ಯಾವುದೇ ಅಪರಾಧ ಪ್ರಕರಣದಲ್ಲಿ ವಿಧಿ ವಿಜ್ಞಾನ (ಫೋರೆನ್ಸಿಕ್) ತಂಡದಿಂದ ತನಿಖೆ ಆಗುವುದು ಕಡ್ಡಾಯಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ ಎಂದು ಅಮಿತ್ ಶಾ ಮಾಹಿತಿ ನೀಡಿದ್ಧಾರೆ.
“ಐಪಿಸಿ, ಸಿಆರ್ಪಿಸಿ ಮತ್ತು ಎವಿಡೆನ್ಸ್ ಆ್ಯಕ್ಟ್ನಲ್ಲಿ ಸಕಾರಾತ್ಮಕ ಬದಲಾವಣೆಗಳನ್ನ ತರಲು ಭಾರತ ಸರ್ಕಾರ ಚರ್ಚೆ ನಡೆಸುತ್ತದ. ಈ ಅಪರಾಧ ಸಂಹಿತೆ ಮತ್ತು ಕಾಯ್ದೆಗಳು ಕಾಲಕ್ಕೆ ತಕ್ಕಂತೆ ಬದಲಾಗಬೇಕಾಗುತ್ತದೆ. ಅನಾವಶ್ಯಕ ಅಂಶಗಳನ್ನ ನೀಗಿಸಿ, ಇವತ್ತಿನ ಕಾಲದ ಸವಾಲುಗಳನ್ನ ಸಮರ್ಪಕವಾಗಿ ಎದುರಿಸುವಂತೆ ಹೊಸ ಸೆಕ್ಷನ್ಗಳನ್ನ ಸೇರಿಸುವುದು ಅಗತ್ಯವಾಗಿದೆ. ಆರು ವರ್ಷಕ್ಕಿಂತ ಹೆಚ್ಚು ಶಿಕ್ಷೆ ಇರುವ ಪ್ರಕರಣಗಳಲ್ಲಿ ಫೋರೆನ್ಸಿಕ್ ತಂಡ ಪರೀಕ್ಷೆ ನಡೆಸುವ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಬೇಕೆಂದು ನಾನು ಬಹಳ ಕಾಲದಿಂದ ಸಲಹೆ ನೀಡುತ್ತಿದ್ದೇವೆ” ಎಂದು ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ: ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದ ಯುವಕ ಕೋಮು ಭಾಷಣಕ್ಕಾಗಿ ಮತ್ತೆ ಅರೆಸ್ಟ್
ವೈಜ್ಞಾನಿಕ ಸಾಕ್ಷ್ಯ ಬಹಳ ಮುಖ್ಯ. ಫೋರೆನ್ಸಿಕ್ ಪರೀಕ್ಷೆಯನ್ನ ಸರಿಯಾಗಿ ಮಾಡಿದಲ್ಲಿ ಎಂಥದ್ದೇ ಹಾರ್ಡ್ ಕೋರ್ ಕ್ರಿಮಿನಲ್ ಆದರೂ ಸಾಕ್ಷ್ಯಕ್ಕೆ ಬಾಗಲೇಬೇಕಾಗುತ್ತದೆ ಎಂದು ಹೇಳಿದ ಅಮಿತ್ ಶಾ, ಇವತ್ತು ಪೊಲೀಸರು ನಿಷ್ಕ್ರಿಯರಾಗಿರುತ್ತಾರೆ ಅಥವಾ ವಿಪರೀತ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ಆರೋಪ ಇವತ್ತು ಹೆಚ್ಚು ಕೇಳಿಬರುತ್ತದೆ. ಆದರೆ, ತನಿಖೆಯಲ್ಲಿ ವೈಜ್ಞಾನಿಕ ಸಾಕ್ಷ್ಯದತ್ತಲೇ ಹೆಚ್ಚು ಗಮನ ಕೊಟ್ಟರೆ ಸ್ವಾಭಾವಿಕ ಕ್ರಮ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ಧಾರೆ.
ವಿಧಿವಿಜ್ಞಾನ ಯೂನಿವರ್ಸಿಟಿಯಲ್ಲಿ ನೂತನ ರೀಸರ್ಚ್ ಅಂಡ್ ಅನಾಲಿಸಿಸ್ ಸೆಂಟರ್ ಅನ್ನ ಸ್ಥಾಪಿಸಲಾಗಿದೆ. ಇದರ ಬಗ್ಗೆ ಮಾತನಾಡಿದ ಅಮಿತ್ ಶಾ, ದೇಶದ ಕ್ರಿಮಿನಲ್ ಜಸ್ಟಿಸ್ ವ್ಯವಸ್ಥೆ ಬಲಪಡಿಸಲು ಇಂಥದ್ದೊಂದು ಕೇಂದ್ರದ ಸ್ಥಾಪನೆ ಅತ್ಯವಶ್ಯವಿತ್ತು. ಈ 21ನೇ ಶತಮಾನದಲ್ಲಿ ಭಾರತದ ಮುಂದೆ ಹಲವು ಸವಾಲುಗಳಿವೆ. ಅವುಗಳನ್ನ ಎದುರಿಸಲು ನಮ್ಮ ಅಪರಾಧ ನ್ಯಾಯ ವ್ಯವಸ್ಥೆಯನ್ನು ಸರಿಪಡಿಸಬೇಕಾಗುತ್ತದೆ ಎಂದಿದ್ಧಾರೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ