ನವದೆಹಲಿ(ಜುಲೈ 01): ಇಲ್ಲಿಯ ಲುಟ್ಯೆನ್ಸ್ ಪ್ರದೇಶದಲ್ಲಿ ತಾನು ವಾಸವಿರುವ ಸರ್ಕಾರಿ ಬಂಗಲೆಯನ್ನು ತೊರೆಯಬೇಕೆಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಅತ್ಯುಚ್ಚ ವಿಶೇಷ ಭದ್ರತೆ ಸೌಲಭ್ಯ ವಾಪಸ್ ಪಡೆದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಂಗಲೆ ಖಾಲಿ ಮಾಡಿ ಹೋಗಲು ಪ್ರಿಯಾಂಕಾ ಗಾಂಧಿ ಅವರಿಗೆ ಆಗಸ್ಟ್ 1ರ ಗಡುವು ನೀಡಲಾಗಿದೆ.
ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿದ್ದ ಎಸ್ಪಿಜಿ ಹಂತದ ಭದ್ರತೆಯನ್ನ ಕಳೆದ ವರ್ಷ ಸರ್ಕಾರ ಹಿಂಪಡೆದುಕೊಂಡು ಝಡ್+ ಸೆಕ್ಯೂರಿಟಿ ನೀಡಿತ್ತು. ಎಸ್ಪಿಜಿ ಭದ್ರತೆ ಹೊಂದಿದವರಿಗೆ ಸರ್ಕಾರಿ ಬಂಗಲೆಯಲ್ಲಿ ವಾಸವಿರಲು ಅವಕಾಶ ಕೊಡಲಾಗುತ್ತದೆ. ಅಂದರಂತೆ 1997ರಲ್ಲಿ ಹೊಸ ದಿಲ್ಲಿಯ ಲುಟ್ಯೆನ್ಸ್ ಪ್ರದೇಶದಲ್ಲಿರುವ ಲೋಧಿ ಎಸ್ಟೇಟ್ನ 35ನೇ ನಂಬರ್ನ ಬಂಗಲೆಯನ್ನ ಪ್ರಿಯಾಂಕಾ ಗಾಂಧಿಗೆ ಒದಗಿಸಲಾಗಿತ್ತು. ಆದರೆ, ಎಸ್ಪಿಜಿ ಭದ್ರತೆ ವಾಪಸ್ ಪಡೆದ ಹಿನ್ನೆಲೆಯಲ್ಲಿ ಸರ್ಕಾರಿ ಬಂಗಲೆ ಸೌಕರ್ಯವನ್ನೂ ಹಿಂಪಡೆದುಕೊಳ್ಳಲಾಗಿದೆ.
ಝಡ್ ಪ್ಲಸ್ ಸೆಕ್ಯೂರಿಟಿ ಹೊಂದಿದವರಿಗೆ ಸರ್ಕಾರಿ ಬಂಗಲೆ ಕೊಡುವ ಅವಕಾಶ ಇರುವುದಿಲ್ಲ. ಕ್ಯಾಬಿನೆಟ್ ವಸತಿ ಸಮಿತಿ(ಸಿಸಿಎ) ವಿಶೇಷ ವಿನಾಯಿತಿ ನೀಡಲು ಅಂಗೀಕರಿಸಿದರೆ ಮಾತ್ರ ಝಡ್+ ಭದ್ರತೆ ಹೊಂದಿದವರಿಗೆ ಸರ್ಕಾರಿ ಬಂಗಲೆಯ ಸೌಲಭ್ಯ ಇರುತ್ತದೆ. ಆದರೆ, ಇಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ಅಂಥ ಯಾವುದೇ ವಿನಾಯಿತಿ ಸಿಕ್ಕಿಲ್ಲ.
ಇದನ್ನೂ ಓದಿ: ಸೇನಾ ಜನರಲ್ ಎಂಎಂ ನರವಾನೆ ಜೊತೆ ಶುಕ್ರವಾರ ಲಡಾಖ್ಗೆ ಭೇಟಿ ನೀಡಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್-ಎಸ್ಪಿಜಿ ಭಾರತದ ಅತ್ಯುಚ್ಚ ಭದ್ರತಾ ವ್ಯವಸ್ಥೆಯಾಗಿದೆ. ಅತಿಹೆಚ್ಚು ಪ್ರಾಣಾಪಾಯ ಇರುವವರಿಗೆ ಇದನ್ನು ಒದಗಿಸಲಾಗುತ್ತದೆ. ಅತ್ಯುತ್ತಮ ಕಮಾಂಡೋಗಳು ಭದ್ರತೆ ಒದಗಿಸುತ್ತಾರೆ. ಎಸ್ಪಿಜಿಗಿಂತ ಒಂದು ಹಂತ ಕೆಳಗಿನ ಭದ್ರತಾ ವ್ಯವಸ್ಥೆ ಎಂದರೆ ಝಡ್ ಪ್ಲಸ್. ಇಲ್ಲಿ ಸಿಆರ್ಪಿಎಫ್ ಪಡೆಯ ಯೋಧರಿಂದ ಭದ್ರತೆ ಒದಗಿಸಲಾಗುತ್ತದೆ.
ಗಾಂಧಿ ಕುಟುಂಬದ ಎಲ್ಲರಿಗೂ ಈಗ ಝಡ್ ಪ್ಲಸ್ ಸೆಕ್ಯೂರಿಟಿ ಇದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯನ್ನ ಹಿಂಪಡೆದುಕೊಳ್ಳಲಾಗಿದೆ. ಕಳೆದ 28 ವರ್ಷದಲ್ಲಿ ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬದ ಸದಸ್ಯರಿಗೆ ಎಸ್ಪಿಜಿ ಭದ್ರತೆ ಇಲ್ಲದಂತಾಗಿದೆ. ಸದ್ಯ ದೇಶದಲ್ಲಿ ನರೇಂದ್ರ ಮೋದಿ ಅವರಿಗೆ ಮಾತ್ರವೇ ಎಸ್ಪಿಜಿ ಭದ್ರತೆ ಇರುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ