ದೀಪಾವಳಿಗೆ ಮುನ್ನ ಕೇಂದ್ರ ಸರ್ಕಾರದಿಂದ ಮತ್ತೊಂದು ಸುತ್ತಿನ ಉತ್ತೇಜಕ ಪ್ಯಾಕೇಜ್ ಘೋಷಣೆ ಸಾಧ್ಯತೆ

ಉದ್ಯೋಗ ಸೃಷ್ಟಿಸಬಲ್ಲ ವಿವಿಧ ಸ್ತರಗಳ ನಗರಗಳಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ಹೂಡಿಕೆ ಹಾಕುವಂಥ ಉತ್ತೇಜಕ ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ದೀಪಾವಳಿ ಉಡುಗೊರೆಯಾಗಿ ಪ್ರಕಟಿಸುವ ಸಾಧ್ಯತೆ ಇದೆ.

ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್

 • News18
 • Last Updated :
 • Share this:
  ನವದೆಹಲಿ(ಅ. 26): ಕೊರೋನಾ ಸಂಕಷ್ಟದಲ್ಲಿರುವ ಜನತೆ ಮತ್ತು ಆರ್ಥಿಕತೆಗೆ ಪುಷ್ಟಿ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಉತ್ತೇಜಕ ಪ್ಯಾಕೇಜ್​ಗಳನ್ನ ಘೋಷಿಸುವ ಸಾಧ್ಯತೆ ಇದೆ. ದೀಪಾವಳಿ ಹಬ್ಬಕ್ಕೂ ಮುನ್ನ ಈ ಬೆಳವಣಿಗೆ ಆಗುವ ನಿರೀಕ್ಷೆ ಇದೆ. ನಗರ ಯೋಜನೆಗಳು ಸೇರಿದಂತೆ ಮೂಲ ಸೌಕರ್ಯಕ್ಕೆ ಇಂಬು ಕೊಡಬಹುದು. ಪ್ರವಾಸೋದ್ಯಮ ಮೊದಲಾದ ವಲಯಗಳಿಗೂ ಪುಷ್ಟಿ ಸಿಗಬಹುದು. ಉತ್ಪಾದನೆ ಸಂಬಂಧಿತ ಉತ್ತೇಜನ (ಪಿಎಲ್​ಐ) ಯೋಜನೆ ವಿಸ್ತರಣೆ ಇತ್ಯಾದಿಯನ್ನು ನಿರೀಕ್ಷಿಸಬಹುದು. ಇಂಥ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಉತ್ತೇಜಕ ಪ್ಯಾಕೇಜ್ ರೂಪಿಸುತ್ತಿದೆ ಎಂದು ಮನಿ ಕಂಟ್ರೋಲ್ ಜಾಲತಾಣದ ವರದಿಯಲ್ಲಿ ತಿಳಿಸಲಾಗಿದೆ. ಕೊರೋನಾ ಸಂಕಷ್ಟದಲ್ಲಿ ಕೇಂದ್ರ ಸರ್ಕಾರ ಹೊರಡಿಸಲಿರುವ ನಾಲ್ಕನೇ ಉತ್ತೇಜಕ ಪ್ಯಾಕೇಜ್ ಇದಾಗಿರಲಿದೆ.

  ಇದೇ ವೇಳೆ, ನಗರ ವಲಯದ ಉದ್ಯೋಗ ಯೋಜನೆ ರೂಪಿಸುವ ಪ್ರಸ್ತಾವನೆಯನ್ನು ಸರ್ಕಾರ ಕೈಬಿಡಲು ನಿರ್ಧರಿಸಿದೆ. ನಗರ ಯೋಜನೆಗಳಲ್ಲಿ ಆಗುವ ಹೂಡಿಕೆಯಿಂದಲೇ ಅವಶ್ಯ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇರುವುದರಿಂದ ಉದ್ಯೋಗ ಸೃಷ್ಟಿಗೆಂದೇ ಪ್ರತ್ಯೇಕ ಯೋಜನೆಯ ಅಗತ್ಯ ಇಲ್ಲ ಎಂಬ ದೃಷ್ಟಿಯಿಂದ ಆ ಪ್ರಸ್ತಾವವನ್ನು ಹಿಂಪಡೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

  ಇದನ್ನೂ ಓದಿ: ದೆಹಲಿ ವಾಯುಮಾಲಿನ್ಯ ತಡೆಯಲು ಹೊಸ ಕಾನೂನು: ಸುಪ್ರೀಂಗೆ ತಿಳಿಸಿದ ಕೇಂದ್ರ

  ಮಹಾನಗರಗಳಂಥ ಮೊದಲ ಸ್ತರದ (ಟಯರ್ 1) ನಗರಗಳಿಂದ ಹಿಡಿದು ನಾಲ್ಕನೇ ಸ್ತರದ ನಗರಗಳಲ್ಲಿ ಇರುವ ಮೂಲಸೌಕರ್ಯ ಯೋಜನೆಗಳ ಮೇಲೆ ಗಮನ ಹರಿಸಲಾಗುತ್ತಿದೆ. ಬಹಳಷ್ಟು ಹೂಡಿಕೆ ಬೇಡುವ 20-20 ಸೌಕರ್ಯ ಯೋಜನೆಗಳನ್ನ ಗುರುತಿಸಲಾಗಿದೆ. ನವಿ ಮುಂಬೈನಿಂದ ಹಿಡಿದು ಗ್ರೇಟರ್ ನೋಯ್ಡಾವರೆಗೆ ಪ್ರಸ್ತಾವಿತ ಏರ್​ಪೋರ್ಟ್ ನಿರ್ಮಾಣ ಯೋಜನೆಗಳೂ ಇದರಲ್ಲಿ ಒಳಗೊಂಡಿವೆ. ಇದರಿಂದ ಬಹಳಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  ಈ ಮೊದಲು ಕೇಂದ್ರ ಸರ್ಕಾರ ಕೆಲ ಉತ್ತೇಜಕ ಪ್ಯಾಕೇಜ್​ಗಳನ್ನ ಘೋಷಿಸಿದೆ. ಹೂಡಿಕೆಯ ಅಗತ್ಯ ಬೀಳುವಂಥ ಕ್ರಮಗಳನ್ನ ಕೈಗೊಳ್ಳಲಾಗಿದೆ. 1.70 ಲಕ್ಷ ಕೋಟಿ ರೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಪ್ರಕಟಿಸಿತ್ತು. ಕೋವಿಡ್​ನಿಂದ ಬಾಧಿತರಾದ ಬಡವರು ಮತ್ತು ಅಶಕ್ತ ವರ್ಗದವರನ್ನು ರಕ್ಷಿಸಲು ಈ ಯೋಜನೆ ರೂಪಿಸಲಾಗಿದೆ. ಅದಾದ ಬಳಿಕ 21 ಲಕ್ಷ ಮೊತ್ತದ ಆತ್ಮನಿರ್ಭರ್ ಭಾರತ ಅಭಿಯಾನದ ಪ್ಯಾಕೇಜ್ ಘೋಷಿಸಿತು. ದೂರದೃಷ್ಟಿಯಿಂದ ವಿವಿಧ ಕ್ರಮಗಳ ಸಂಯೋಜನೆಯಾಗಿದೆ ಆ ಮೆಗಾ ಪ್ಯಾಕೇಜ್.
  Published by:Vijayasarthy SN
  First published: