All Party Meet: ಅಫ್ಘಾನಿಸ್ತಾನ್ ಬಿಕ್ಕಟ್ಟಿನ ಸಂಬಂಧ ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ; ಭಾರತದ ನಿಲುವೇನು?

Afghanistan Crisis : ಆಗಸ್ಟ್ 26ರಂದು ಗುರುವಾರ ಸರ್ವಪಕ್ಷಗಳ ಸಭೆಯ ನಡೆಯಲಿದೆ. ಆ ಸಮಯದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಸರ್ವ ಪಕ್ಷಗಳ ನಾಯಕರನ್ನು ಉದ್ದೇಶಿಸಿ ಮಾತನಾಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ, ಆ. 23:  ಅಫ್ಘಾನಿಸ್ತಾನದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಮತ್ತು ಈ ವಿಷಯದಲ್ಲಿ ಭಾರತ ಯಾವ ನಿಲುವಿಗೆ ಬರಬೇಕು ಎಂಬ ವಿಷಯಗಳಿಗೆ ಸಂಬಂಧಿಸಿದಂತೆ ಸರ್ವ ಪಕ್ಷಗಳ ನಾಯಕರ ಜೊತೆ ಸಭೆ (All Party Meet ) ನಡೆಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಸಭೆ ಆಗಸ್ಟ್ 26ರಂದು ನಡೆಯಲಿದೆ. ಒಕ್ಕೂಟ ಸರ್ಕಾರವು ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಲು ಉದ್ದೇಶಿಸಿದೆ. ಈ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸಮನ್ವಯ ಸಾಧಿಸಲಿದ್ದಾರೆ ಎಂದು ಜೈಶಂಕರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಸಂಸತ್ತಿನ ಮುಖ್ಯ ಸಮಿತಿಯ ಕೊಠಡಿಯಲ್ಲಿ ಆಗಸ್ಟ್ 26ರಂದು ಗುರುವಾರ ಸರ್ವಪಕ್ಷಗಳ ಸಭೆಯ ನಡೆಯಲಿದೆ. ಆ ಸಮಯದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಸರ್ವ ಪಕ್ಷಗಳ ನಾಯಕರನ್ನು ಉದ್ದೇಶಿಸಿ ಮಾತನಾಡುತ್ತಾರೆ. ಸಂಬಂಧಿಸಿದವರಿಗೆ ಇಮೇಲ್ ಮೂಲಕ ಆಹ್ವಾನಗಳನ್ನು ಕಳುಹಿಸಲಾಗುತ್ತಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ(parliamentary affairs minister Pralhad Joshi) ಟ್ವೀಟ್ ಮಾಡಿದ್ದಾರೆ.





ಸಂಸತ್ತಿನ ಮುಂಗಾರು ಅಧಿವೇಶನದ ಆರಂಭಕ್ಕೆ ಮುನ್ನವೇ ಒಕ್ಕೂಟ ಸರ್ಕಾರವು ರಾಜಕೀಯ ಪಕ್ಷಗಳನ್ನು ಗಡಿಯುದ್ದಕ್ಕೆ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಚೀನಾಕ್ಕೆ ಸಂಬಂಧಿಸಿದಂತೆ ಭಾರತ ತೆಗೆದುಕೊಳ್ಳಬೇಕಾದ ನಿಲುವಿನ ಬಗ್ಗೆ   ಚರ್ಚೆ ಮಾಡಬೇಕಿತ್ತು. ಪೂರ್ವಭಾವಿಯಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹಿರಿಯ ನಾಯಕರಾದ ಎಕೆ ಆಂಟನಿ ಮತ್ತು ಶರದ್ ಪವಾರ್ ಸೇರಿದಂತೆ ಮಾಜಿ ರಕ್ಷಣಾ ಸಚಿವರೊಂದಿಗೆ ಸಭೆ ನಡೆಸಿದ್ದರು.

ಸುರಕ್ಷಿತವಾಗಿ ಭಾರತಕ್ಕೆ ಬಂದ 537 ಜನ

ಭಾರತ, ಅಮೆರಿಕ ಸೇರಿದಂತೆ ವಿವಿಧ ದೇಶಗಳು ತಮ್ಮ ನಾಗರಿಕರನ್ನು ಅಫ್ಘಾನಿಸ್ತಾನದಿಂದ ವಾಪಸ್ ಕರೆಸಿಕೊಳ್ಳುವ ಪ್ರಯತ್ನದಲ್ಲಿವೆ. ಭಾರತ ವಿವಿಧ ರೀತಿಯಲ್ಲಿ ತನ್ನ ನಾಗರಿಕರನ್ನು ಅಲ್ಲಿಂದ ತೆರವುಗೊಳಿಸಿ ವಾಪಸ್ ಕರೆಸಿಕೊಳ್ಳುತ್ತದೆ. ಸೋಮವಾರ ಬೆಳಿಗ್ಗೆ ಎರಡು ವಿಮಾನಗಳ ಮೂಲಕ ಒಟ್ಟು 145 ಜನ‌ ಅಫ್ಘಾನಿಸ್ತಾನದಿಂದ ಭಾರತಕ್ಕೆ ಆಗಮಿಸಿದ್ದಾರೆ. ಇದರಿಂದ ಈವರೆಗೆ ಆಫ್ಘಾನಿಸ್ತಾನದಿಂದ ಭಾರತಕ್ಕೆ ಸುರಕ್ಷಿತವಾಗಿ ಮರಳಿದವರ ಸಂಖ್ಯೆ 537ಕ್ಕೆ ಏರಿದೆ. ಇದರಲ್ಲಿ ಕೆಲವರು ವಿದೇಶಿಗರೂ ಇದ್ದಾರೆ. ಅವರು ಭಾರತಕ್ಕೆ ಬಂದು ನಂತರ ಅವರವರ ದೇಶಕ್ಕೆ ಮರಳುತ್ತಿದ್ದಾರೆ.

ಏಳು ಮಂದಿ ಕನ್ನಡಿಗರ ರಕ್ಷಣೆ

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಅಲ್ಲಿನ‌ ಪರಿಸ್ಥಿತಿ ಭೀಕರವಾಗಿದ್ದು ವಿದೇಶಿಗರು ಮಾತ್ರವಲ್ಲದೆ ಅಫ್ಘಾನಿಸ್ತಾನಿಗಳೇ ದೇಶ ಬಿಟ್ಟು ತೆರಳುತ್ತಿದ್ದಾರೆ. ಇದರಿಂದ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಲ್ತುಳಿತ ಮತ್ತು ಗುಂಡಿನ ದಾಳಿ‌ ಕೂಡ ನಡೆದಿದೆ. ಇಂಥ ಧಾರುಣ ಪರಿಸ್ಥಿತಿಯಿಂದ ಈವರೆಗೆ ಆಫ್ಘಾನಿಸ್ತಾನದಿಂದ 537 ಜನ ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದು ಈ ಪೈಕಿ ಭಾನುವಾರ ಕಾಬೂಲ್ ವಿಮಾನ ನಿಲ್ದಾಣದಿಂದ 168 ಮಂದಿಯನ್ನು ಬಂದಿದ್ದಾರೆ. ಅದರಲ್ಲಿ 7 ಜನ ಕನ್ನಡಿಗರು ಸುರಕ್ಷಿತವಾಗಿ ಮರಳಿದ್ದಾರೆ ಎಂದು ತಿಳಿದುಬಂದಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: