ನವದೆಹಲಿ(ಆ. 22): ದೇಶದ ಆರ್ಥಿಕತೆ ಯಥಾಸ್ಥಿತಿಗೆ ಬರಲಾಗುವಂತೆ ಕೇಂದ್ರ ಸರ್ಕಾರ ಬಹುತೇಕ ನಿರ್ಬಂಧಗಳನ್ನ ಸಡಿಲಗೊಳಿಸಿದೆ. ಆದಾಗ್ಯೂ ಕೊರೋನಾ ಭೀತಿಯಲ್ಲಿ ಕೆಲ ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ಅಲ್ಲಲ್ಲಿ ಜನಸಂಚಾರ ಇತ್ಯಾದಿಗಳಿಗೆ ನಿರ್ಬಂಧ ಹೇರಲಾಗಿದೆ. ಆದರೆ, ಜನ ಸಂಚಾರ ಮತ್ತು ಸರಕು ಸಾಗಣೆಗೆ ಯಾವುದೇ ರೀತಿಯ ನಿರ್ಬಂಧಗಳನ್ನ ವಿಧಿಸಬೇಡಿ ಎಂದು ಎಲ್ಲಾ ರಾಜ್ಯ ಸರ್ಕಾರಗಳಿಗೂ ಕೇಂದ್ರ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ ಮೂರನೇ ಹಂತದ ಅನ್ಲಾಕ್ ಮಾರ್ಗಸೂಚಿಗಳನ್ನ ಉಲ್ಲೇಖಿಸಿಸುತ್ತಾ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಬಳ್ಳ, ಅಂತರರಾಜ್ಯ ಮತ್ತು ಸ್ಥಳೀಯ ಸಂಚಾರಕ್ಕೆ ನಿರ್ಬಂಧ ವಿಧಿಸದಿರಿ ಎಂದು ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಿದ್ದಾರೆ.
ಅಂತಾರಾಜ್ಯ ಸರಕು ಸಾಗಣೆಗೆ ನಿರ್ಬಂಧ ಹೇರಿರುವುದರಿಂದ ಸರಬರಾಜು ಸರಪಳಿಗೆ (ಸಪ್ಲೈ ಚೈನ್) ಧಕ್ಕೆಯಾಗಿ ಆರ್ಥಿಕ ಚಟುವಟಿಕೆ ಮತ್ತು ಉದ್ಯೋಗ ಸೃಷ್ಟಿಗೆ ಹಿನ್ನಡೆ ತರುತ್ತಿದೆ. ಕೇಂದ್ರ ಸರ್ಕಾದ ಅನ್ಲಾಕ್ ಮಾರ್ಗಸೂಚಿಯಲ್ಲಿ ಜನಸಂಚಾರ ಮತ್ತು ಸರಕು ಸಾಗಣೆಗೆ ಯಾವುದೇ ನಿರ್ಬಂಧ ಇರಬಾರದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹಾಗೊಂದು ವೇಳೆ ನಿರ್ಬಂಧ ವಿಧಿಸಿದರೆ ಅದು ಮಾರ್ಗಸೂಚಿ ಉಲ್ಲಂಘನೆ ಆಗುತ್ತದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ತಮ್ಮ ಪತ್ರದಲ್ಲಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಪಾಕ್ ಗಡಿಭಾಗದಿಂದ ಪಂಜಾಬ್ಗೆ ಒಳನುಸುಳಿದ್ದ ಐವರನ್ನು ಕೊಂದ ಭಾರತದ ಭದ್ರತಾ ಪಡೆ
ದೇಶದಲ್ಲಿ ಕೊರೋನಾ ವೈರಸ್ ಸೋಂಕು ಹರಡಲು ಪ್ರಾರಂಭವಾಗುತ್ತಿರುವಂತೆಯೇ ಮಾರ್ಚ್ 25ರಂದು ಕೇಂದ್ರ ಸರ್ಕಾರ ದೇಶವ್ಯಾಪಿ ಲಾಕ್ಡೌನ್ ಘೋಷಣೆ ಮಾಡಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಕ್ಡೌನ್ ಅವಧಿಯನ್ನು ಮೇ 31ರವರೆಗೆ ವಿಸ್ತರಣೆ ಮಾಡುತ್ತಾ ಹೋಗಿತ್ತು. ಈ ಅವಧಿಯಲ್ಲಿ ಕೃಷಿ ಹೊರತುಪಡಿಸಿ ಬಹುತೇಕ ಎಲ್ಲಾ ಚಟುವಟಿಕೆಗಳು ಸ್ತಬ್ದಗೊಂಡಿದ್ದವು. ಆರ್ಥಿಕ ಪರಿಸ್ಥಿತಿ ಚಿಂತಾಜನಕ ಮಟ್ಟ ತಲುಪಿದಾಗ ಜೂನ್ 1ರಿಂದ ಹಂತ ಹಂತವಾಗಿ ಲಾಕ್ಡೌನ್ ತೆರವು ಮಾಡಲು ಪ್ರಾರಂಭಿಸಿತು. ಮೊದಲಿಗೆ ಔದ್ಯಮಿಕ ವಲಯ ತೆರೆದುಕೊಂಡಿತು. ನಂತರ ಹಂತ ಹಂತವಾಗಿ ವಿವಿಧ ಚಟುವಟಿಕೆಗಳಿಗೆ ಅನುಮತಿ ನೀಡಲಾಯಿತು. ಈಗ ಶಿಕ್ಷಣ ಸಂಸ್ಥೆ, ಚಿತ್ರಮಂದಿರ ಇತ್ಯಾದಿ ಕೆಲವೇ ಕೆಲವು ಹೊರತುಪಡಿಸಿ ಬಹುತೇಕ ಎಲ್ಲಾ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಐಸಿಸ್ ಶಂಕಿತ ಉಗ್ರನ ಬಂಧನ; ಭಾರೀ ಪ್ರಮಾಣದ ಸ್ಫೋಟಕ ವಶ
ಈ ಮಧ್ಯೆ, ದೇಶದಲ್ಲಿ ಕೊರೋನಾ ಪರಿಸ್ಥಿತಿ ಬಹುತೇಕ ಕೈಮೀರಿ ಹೋಗಿದೆ. ಈಗ ದಿನಕ್ಕೆ ಬರೋಬ್ಬರಿ 70 ಸಾವಿರ ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ಸ್ವಲ್ಪ ಸಮಾಧಾನದ ವಿಷಯವೆಂದರೆ ಚೇತರಿಕೆಗೊಳ್ಳುತ್ತಿರುವ ಮಂದಿಯ ಸಂಖ್ಯೆಯೂ ದೊಡ್ಡದಾಗುತ್ತಾ ಹೋಗುತ್ತಿದೆ. ಈಗ ದೇಶಾದ್ಯಂತ ಸಕ್ರಿಯ ಕೋವಿಡ್ ಕೇಸ್ಗಳ ಸಂಖ್ಯೆ 7 ಲಕ್ಷ ಗಡಿ ಸಮೀಪದಲ್ಲಿದೆ. ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 55 ಸಾವಿಕ್ಕೂ ಹೆಚ್ಚಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ