ಸಾಲದ ಮೇಲಿನ ಚಕ್ರ ಬಡ್ಡಿ ಭರಿಸಲು ಕೇಂದ್ರದಿಂದ ನಿರ್ಧಾರ ಸಾಧ್ಯತೆ ದಟ್ಟ

ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ ಮೊರಾಟೊರಿಯಂ ಅವಧಿಯಲ್ಲಿನ ನಿರ್ದಿಷ್ಟ ಸಾಲಗಳ ಮರುಪಾವತಿ ಕಂತುಗಳ ಬಡ್ಡಿ ಮೇಲಣ ಬಡ್ಡಿಯನ್ನು ಮನ್ನಾ ಮಾಡಲು ಕೇಂದ್ರ ಸಂಪುಟದಲ್ಲಿ ಒಪ್ಪಲಾಗಿದೆ ಎಂದು ಮೂಲಗಳು ತಿಳಿಸಿವೆ.

ನರೇಂದ್ರ ಮೋದಿ ಮತ್ತು ನಿರ್ಮಲಾ ಸೀತಾರಾಮನ್

ನರೇಂದ್ರ ಮೋದಿ ಮತ್ತು ನಿರ್ಮಲಾ ಸೀತಾರಾಮನ್

 • News18
 • Last Updated :
 • Share this:
  ನವದೆಹಲಿ(ಅ. 21): ಕೊರೋನಾ ಲಾಕ್​ಡೌನ್ ವೇಳೆ ಪ್ರಕಟಿಸಲಾಗಿದ್ದ ಆರು ತಿಂಗಳ ಮೊರಟೋರಿಯಂ ಅವಧಿಯಲ್ಲಿ ಸಾಲದ ಕಂತುಗಳ ಮೇಲಿನ ಚಕ್ರ ಬಡ್ಡಿ ಹಣವನ್ನು ಭರಿಸಲು ಕೇಂದ್ರ ಸರ್ಕಾರ ಒಪ್ಪುವ ಸಾಧ್ಯತೆ ದಟ್ಟವಾಗಿದೆ. ಇಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಿದ್ದು, ಚಕ್ರಬಡ್ಡಿಯ ಹಣದ ಹೊರೆಯನ್ನು ಸರ್ಕಾರವೇ ಹೊತ್ತುಕೊಳ್ಳಲು ಸಮ್ಮತಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಆದರೆ, ಈ ವಿಚಾರ ನ್ಯಾಯಾಲಯದ ಅಂಗಳದಲ್ಲಿ ಇರುವುದರಿಂದ ಅಂತಿಮ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಮುಂದೆ ತಿಳಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಮೂಲಗಳು ಹೇಳಿವೆ. ಅಕ್ಟೋಬರ್ 14ರಂದು ನಡೆದ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಆದಷ್ಟೂ ಶೀಘ್ರದಲ್ಲಿ ಬಡ್ಡಿ ಮನ್ನಾ ಯೋಜನೆ ಜಾರಿಗೊಳಸಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಇದಕ್ಕೆ ಒಂದು ತಿಂಗಳು ಸಮಯ ಕೇಳಿದ ಕೇಂದ್ರವನ್ನು ತರಾಟೆಗೆ ತೆಗೆದಕೊಂಡ ನ್ಯಾ| ಅಶೋಕ್ ಭೂಷಣ್, ನ್ಯಾ| ಆರ್ ಎಸ್ ರೆಡ್ಡಿ ಮತ್ತು ನ್ಯಾ| ಎಂ ಆರ್ ಶಾ ಅವರಿದ್ದ ಸುಪ್ರೀಂ ನ್ಯಾಯಪೀಠ, ಮುಂದಿನ ವಿಚಾರಣೆ ಇರುವ ನ. 2ರೊಳಗೆ ನಿರ್ಧಾರ ತಿಳಿಸಬೇಕೆಂದು ನಿರ್ದೇಶನ ನೀಡಿದೆ.

  ಲೋನ್ ಮೊರಟೋರಿಯಂ ಅವಧಿಯಲ್ಲಿನ ನಿರ್ದಿಷ್ಟ ಸಾಲಗಳ ಮರುಪಾವತಿ ಕಂತುಗಳಿಗೆ ಸರ್ಕಾರದ ಚಕ್ರಬಡ್ಡಿ ಮನ್ನಾ ಯೋಜನೆ ಅನ್ವಯವಾಗಲಿದೆ. ಸರಳ ಬಡ್ಡಿ ಮತ್ತು ಚಕ್ರಬಡ್ಡಿ ನಡುವಿನ ವ್ಯತ್ಯಾಸ ಹಣವನ್ನು ಮಾತ್ರ ಕೇಂದ್ರ ಭರಿಸುತ್ತದೆ. ಅಂದರೆ, ಹೆಚ್ಚುವರಿ ಬಡ್ಡಿ ಮಾತ್ರ ಮನ್ನಾ ಆಗುತ್ತದೆ. ಸಾಲಗಾರರು ತಮ್ಮ ಇಎಂಐ ಮೇಲಿನ ಮಾಮೂಲಿಯ ಸರಳ ಬಡ್ಡಿಯನ್ನು ಕಟ್ಟಲೇ ಬೇಕಾಗುತ್ತದೆ. ಗ್ರಾಹಕರಿಗೆ ಬಡ್ಡಿಯ ಮೇಲೆ ಬಡ್ಡಿಯ ಹೊರೆ ಬೀಳುವುದಿಲ್ಲ ಅಷ್ಟೇ.

  ಇದನ್ನೂ ಓದಿ: 3,737 ಕೋಟಿ ಬೋನಸ್ ಪ್ರಕಟ; ಸರ್ಕಾರಿ ನೌಕರರಿಗೆ ಕೇಂದ್ರದಿಂದ ದಸರಾ ಉಡುಗೊರೆ

  ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ ಆರು ತಿಂಗಳ ಮೊರಾಟೊರಿಯಂ ಅವಧಿಯಲ್ಲಿನ ನಿರ್ದಿಷ್ಟ ಸಾಲಗಳಿಗೆ ಈ ಯೋಜನೆ ಅನ್ವಯ ಆಗುತ್ತದೆ. ಕಳೆದ ವಿಚಾರಣೆ ವೇಳೆಯೇ ಕೇಂದ್ರ ಸರ್ಕಾರ ಚಕ್ರಬಡ್ಡಿ ಮನ್ನಾ ಮಾಡಲು ನಿರ್ಧರಿಸಿರುವುದಾಗಿ ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿತ್ತು. ಆದರೆ, ವಿವಿಧ ವಿಭಾಗಗಳ ಸಾಲಗಳಿಗೆ ಬೇರೆ ಬೇರೆ ನಿಯಮಗಳಿರುವುದರಿಂದ ಮನ್ನಾ ಯೋಜನೆ ರೂಪಿಸಲು ಸಮಯ ಬೇಕಾಗುತ್ತದೆ ಎಂದು ಒಂದು ತಿಂಗಳು ಗಡುವು ಕೇಳಿತ್ತು. ಇದಕ್ಕೆ ಒಪ್ಪದ ನ್ಯಾಯಪೀಠ, ಜನರ ದೀಪಾವಳಿ ಸಂಭ್ರಮ ಈಗ ನಿಮ್ಮ ಕೈಯಲ್ಲೇ ಇದೆ. ಆದಷ್ಟೂ ಬೇಗ ಬಡ್ಡಿ ಮನ್ನಾ ಯೋಜನೆ ಜಾರಿಗೊಳಿಸಲು ಸೂಚಿಸಿತ್ತು. ಒಟ್ಟಾರೆ, ಕೇಂದ್ರ ಸರ್ಕಾರ ಚಕ್ರಬಡ್ಡಿ ಮನ್ನಾ ಮೂಲಕ ಹೊತ್ತುಕೊಳ್ಳುವ ಹೊರೆಯ ಮೊತ್ತ ಸುಮಾರು 2 ಕೋಟಿ ರೂ ಇರಲಿದೆ.
  Published by:Vijayasarthy SN
  First published: