ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ನಿಧಾನಕ್ಕೆ ಬಿಜೆಪಿಯಲ್ಲೇ ಅಸಮಾಧಾನ ಹೊರಬರುತ್ತಿದ್ದು ಸಿಂಘು ಗಡಿಯಲ್ಲಿ ನಡೆಯುತ್ತಿರುವ ಬೃಹತ್ ರೈತರ ಆಂದೋಲನವನ್ನು ಬಿಜೆಪಿ ನಾಯಕರೊಬ್ಬರು ಬೆಂಬಲಿಸಿದ್ದಾರೆ ಮತ್ತು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮೂರು ಕರಾಳ ಕೃಷಿ ಕಾನುನುಗಳನ್ನು ಹಿಂತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.
"ರೈತರು ಕೇಂದ್ರ ಸರ್ಕಾರದ ಮುಂದೆ ಇಟ್ಟಿರುವ ಎಲ್ಲಾ ಬೇಡಿಕೆಗಳು ಸರಿಯಾಗಿವೆ. ವಿಧಾನಸಭೆ ಚುನಾವಣೆ ಮತ್ತು ರೈತರಿಗೆ ಬಿಜೆಪಿ ಸರ್ಕಾರದ ವಿರುದ್ದ ಮೂಡಿರುವ ಕೋಪವನ್ನು ಶಮನ ಮಾಡುವ ನಿಟ್ಟಿನಲ್ಲಿ ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರವು (ಹೊಸ) ಕೃಷಿ ಕಾನೂನುಗಳನ್ನು ಹಿಂಪಡೆಯಬಹುದು "ಎಂದು ಯುಪಿ ಬಿಜೆಪಿ ಕಾರ್ಯಕಾರಿ ಸಮಿತಿಯ ಸದಸ್ಯ ರಾಮ್ ಇಕ್ಬಾಲ್ ಸಿಂಗ್ ಭಾನುವಾರ ರಾತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆ, ಬಿಜೆಪಿಯ ವಿರುದ್ದದ ಪ್ರತಿಭಟನೆಯಾಗಿ ರೂಪುಗೊಂಡಿದೆ. ಬಿಜೆಪಿ ನಾಯಕರು ಪಶ್ಚಿಮ ಉತ್ತರ ಪ್ರದೇಶದ ಹಳ್ಳಿಗಳಿಗೆ ಚುನಾವಣಾ ಪ್ರಚಾರ ಅಥವಾ ಇನ್ಯಾವುದೇ ಕೆಲಸಗಳಿಗೆ ಹೋದರು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ, ಹೋದ ಕಡೆಯೆಲ್ಲಾ ಜನರು ಬಿಜೆಪಿ ನಾಯಕರನ್ನು ದೂರ ಇಡುತ್ತಿದ್ದಾರೆ, ಅಲ್ಲದೇ ಮುಂದಿನ ದಿನಗಳಲ್ಲಿ ಬಿಜೆಪಿಯ ನಾಯಕರನ್ನು ಸಂಪೂರ್ಣವಾಗಿ ರೈತರು ಘೇರಾವ್ ಮಾಡಬಹುದು ಎಂದು ಅವರು ಹೇಳಿದರು.
ಪೆಗಾಸಸ್ ಹಗರಣದ ಕುರಿತು ಸಂಸತ್ತಿನಲ್ಲಿ ಕೋಲಾಹಲ ಕಡಿಮೆಯಾದ ಹೊತ್ತಿನಲ್ಲಿ, ಸಿಂಗ್ ಅವರು ವಿರೋಧ ಪಕ್ಷದ ಬೇಡಿಕೆಯನ್ನು ಪ್ರಜಾಪ್ರಭುತ್ವ ದೇಶವಾದ ನಮ್ಮ ಭಾರತದಲ್ಲಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.
ಕೋವಿಡ್ -19 ರ ಮೂರನೇ ಅಲೆ ಸಿದ್ಧತೆಗಳನ್ನು ಪ್ರಶ್ನಿಸಿದ ಸಿಂಗ್, ಯುಪಿ ರಾಜ್ಯ ಸರ್ಕಾರವು ಎರಡನೇ ತರಂಗದಿಂದ ಕೊಂಚವೂ ಬುದ್ದಿ ಕಲಿಯಲಿಲ್ಲ ಮತ್ತು ಅಪಾಯದ ಪರಿಸ್ಥಿತಿ ಎದುರಿಸಲು ಯಾವುದೇ ಪರಿಣಾಮಕಾರಿ ವ್ಯವಸ್ಥೆಗಳನ್ನು ಮಾಡಲಾಗಿಲ್ಲ, ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ ಪ್ರಕರಣಗಳ ಸಂಖ್ಯೆ ಹೆಚ್ಚಳ ಆಗಬಹುದು, ಇನ್ನಾದರೂ ಯೋಗಿ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದರು.
ಇದನ್ನೂ ಓದಿ: ಪಂಜಾಬ್ ಗಡಿ ಬಳಿ ಡ್ರೋನ್ ಮೂಲಕ ಟಿಫಿನ್ ಬಾಕ್ಸ್ ಬಾಂಬ್ ರವಾನೆ; ಭಯೋತ್ಪಾದಕ ಸಂಚು ವಿಫಲ
ಅಲ್ಲದೇ ಮುಂದಿನ ಎರಡು ವರ್ಷಗಳಲ್ಲಿ ದೇಶದ ಅನೇಕ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಎದುರಾಗಲಿವೆ. ಅಲ್ಲದೇ ಪ್ರತಿಭಟನೆ ನಡೆಯುತ್ತಿರುವ ಪ್ರಮುಖ ಸ್ಥಳಗಳಾದ ಪಂಜಾಬ್, ಸೇರಿದಂತೆ, ಉತ್ತರ ಪ್ರದೇಶದಲ್ಲಿ ಚುನಾವಣೆ ಎದುರಾಗಲಿದ್ದು, ಬಿಜೆಪಿಗೆ ಇಲ್ಲೆಲ್ಲಾ ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಇಚೇಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಅಸ್ಸಾಂ ಹೊರತಾಗಿ ಇನ್ನೆಲಿಯೂ ಗಣನೀಯ ಸಾಧನೆ ಮಾಡದ ಬಿಜೆಪಿ ಪ್ರಮುಖ ರಾಜ್ಯವಾದ ಯುಪಿಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಈಗ ತರಲು ಹೊರಟಿರುವ ಕೃಷಿ ಕಾನೂನುಗಳನ್ನು ಹಿಂಪಡೆಯಬಹುದು ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ