Agriculture- ರೈತರ ಸಮಸ್ಯೆ ಪರಿಹಾರಕ್ಕೆ ಸಮಿತಿ ರಚಿಸುತ್ತೇನೆ, ಪ್ರತಿಭಟನೆ ಕೈಬಿಡಿ- ಕೇಂದ್ರ ಮನವಿ

Farmers Protest- ಕೃಷಿ ಕಾಯ್ದೆ ರದ್ದಾದ ಬಳಿಕ ಮುಂದಿನ ಹೆಜ್ಜೆಯಾಗಿ, ಎಂಎಸ್ಪಿ ವ್ಯವಸ್ಥೆ ಬಲಪಡಿಸುವುದು, ಶೂನ್ಯ ಕೃಷಿ ಪದ್ಧತಿ ರೂಪಿಸುವುದು ಇವೇ ಮುಂತಾದ ವಿಚಾರಗಳಲ್ಲಿ ಸಮಾಲೋಚನೆ ನಡೆಸಲು ಸಮಿತಿಯೊಂದನ್ನ ರಚಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

 • News18
 • Last Updated :
 • Share this:
  ನವದೆಹಲಿ, ನ. 27: ಪ್ರಧಾನಿ ನರೇಂದ್ರ ಮೋದಿ ಕೆಲ ದಿನಗಳ ಹಿಂದೆ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನ ಹಿಂಪಡೆಯುವುದಾಗಿ ಘೋಷಿಸಿದ್ದರು. ಆದರೂ ರೈತ ಸಂಘಟನೆಗಳು ತಮ್ಮ ಪ್ರತಿಭಟನೆಗಳನ್ನ ವಿವಿಧ ಕಾರಣಕ್ಕೆ ಮುಂದುವರಿಸುತ್ತಿವೆ. ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರೈತರ ವಿವಿಧ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಮಿತಿಯೊಂದನ್ನು ರಚಿಸುವುದಾಗಿ ಇಂದು ಶನಿವಾರ ತಿಳಿಸಿದೆ. ಈ ಘೋಷಣೆ ಬೆನ್ನಲ್ಲೇ, ರೈತರು ತಮ್ಮ ಪ್ರತಿಭಟನೆಗಳನ್ನ ಕೈಬಿಟ್ಟು ಮನೆಗೆ ಹೋಗುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿದ್ದಾರೆ.

  ಕೇಂದ್ರ ರಚಿಸುತ್ತಿರುವ ಸಮಿತಿಯಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳೂ ಇರಲಿದ್ದಾರೆ. ಕೃಷಿ ಕಾಯ್ದೆ ರದ್ದಾದ ಬಳಿಕ ಕೃಷಿನ ಕ್ಷೇತ್ರದ ಬೆಳವಣಿಗೆಗೆ ಮುಂದಿನ ಹೆಜ್ಜೆಗಳು ಏನು ಎಂಬುದನ್ನು ಈ ಸಮಿತಿ ಸಮಾಲೋಚಿಸಿ ತೀರ್ಮಾನಿಸುವ ಸಾಧ್ಯತೆ ಇದೆ. ಕನಿಷ್ಠ ಬೆಂಬಲ ಬೆಲೆ (MSP- Minimum Support Price) ವ್ಯವಸ್ಥೆಯನ್ನ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವುದು, ಕೃಷಿ ಬೆಳೆ ವೈವಿಧ್ಯತೆ (Crop Diversification), ಶೂನ್ಯ ಬಂಡವಾಳ ಕೃಷಿ ವ್ಯವಸ್ಥೆ ಇವೇ ಇತ್ಯಾದಿ ಗಂಭೀರ ವಿಚಾರಗಳನ್ನ ಈ ಸಮಿತಿ ಸಮಾಲೋಚಿಸಲಿದೆ.

  “ಬೆಳೆ ವೈವಿಧ್ಯತೆ, ಶೂನ್ಯ ಬಂಡವಾಳ ಕೃಷಿ ಮತ್ತು ಎಂಎಸ್​ಪಿ ವ್ಯವಸ್ಥೆಯನ್ನ ಇನ್ನಷ್ಟು ಪರಿಣಾಮಕಾರಿ ಮತ್ತು ಪಾದರ್ಶಕವಾಗಿ ಮಾಡುವ ವಿಚಾರಗಳಲ್ಲಿ ಚರ್ಚಿಸಲು ಸಮಿತಿಯೊಂದನ್ನ ರಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಈ ಸಮಿತಿಯಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳು ಇರಲಿದ್ದಾರೆ” ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿಕೆ ನೀಡಿದ್ದಾರೆಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.


  ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಸುಧಾರಣೆಯ ದೃಷ್ಟಿಯಿಂದ ಮೂರು ಕಾಯ್ದೆಗಳನ್ನ ರೂಪಿಸಿತ್ತು. ರೈತರು ಸ್ಥಳೀಯ ಎಪಿಎಂಸಿಯಲ್ಲಷ್ಟೇ ಅಲ್ಲ, ದೇಶದ ಯಾವುದೇ ಪ್ರದೇಶಕ್ಕೆ ಹೋಗಿ ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡುವ ಅವಕಾಶವನ್ನು ಹೊಸ ಕಾಯ್ದೆ ನೀಡಿತ್ತು. ಕೃಷಿ ಕ್ಷೇತ್ರಕ್ಕೆ ಖಾಸಗಿ ಕಂಪನಿಗಳಿಗೂ ಮಣೆಹಾಕಲಾಗಿತ್ತು. ಆದರೆ, ಅನೇಕ ರೈತ ಸಂಘಟನೆಗಳು ಕೇಂದ್ರ ಕೃಷಿ ಕಾಯ್ದೆಗಳನ್ನ ಬಲವಾಗಿ ವಿರೋಧಿಸಿಕೊಂಡು ಬಂದಿವೆ. ಒಂದು ವರ್ಷ ನಿರಂತರವಾಗಿ ಪ್ರತಿಭಟನೆ ನಡೆಸಿವೆ.

  ಇದನ್ನೂ ಓದಿ: Coronavirus: ನ್ಯೂಯಾರ್ಕ್​ನಲ್ಲಿ ಹೆಚ್ಚಾಯ್ತು ಹೊಸ ತಳಿ ಆತಂಕ : `ವಿಪತ್ತು ತುರ್ತುಸ್ಥಿತಿ’ ಘೋಷಿಸಿದ ಗರ್ವನರ್​!

  ಯಾಕೆ ವಿರೋಧ?

  ಸರ್ಕಾರ ಎಪಿಎಂಸಿ ಮಂಡಿಗಳನ್ನ ಮುಚ್ಚುವ ದೂರೋದ್ದೇಶ ಹೊಂದಿದೆ. ಆ ಮೂಲಕ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನೇ ಕೈಬಿಡುವ ದೂರಾಲೋಚನೆ ಹೊಂದಿದೆ. ಕೃಷಿಕರ ಜುಟ್ಟನ್ನ ಖಾಸಗಿಯವರಿಗೆ ಒಪ್ಪಿಸುವ ಹುನ್ನಾರ ನಡೆದಿದೆ ಎಂಬುದು ರೈತ ಮುಖಂಡರ ಪ್ರಮುಖ ಆಕ್ಷೇಪ.

  ಸರ್ಕಾರ ಈ ಕೃಷಿ ಕಾಯ್ದೆಗಳನ್ನ ವಾಪಸ್ ಪಡೆಯಲಾಗುತ್ತದೆ ಎಂದು ಭರವಸೆ ನೀಡಿದರೂ ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶದ ಕೆಲ ಭಾಗಗಳಲ್ಲಿ ಒಂದು ವರ್ಷದಿಂದ ನಡೆಸಿಕೊಂಡು ಬರಲಾಗುತ್ತಿರುವ ಪ್ರತಿಭಟನೆಯನ್ನ ಕೈಬಿಡಲು ರೈತ ಮುಖಂಡರು ಸಿದ್ಧರಿಲ್ಲ. ಸರಕಾರ ಮೊದಲು ಸಂಸತ್​ನಲ್ಲಿ ಕೃಷಿ ಕಾಯ್ದೆಯನ್ನ ರದ್ದುಗೊಳಿಸಲಿ. ಎಂಎಸ್​ಪಿ ಇವೇ ಮುಂತಾದ ಹಲವು ವಿಚಾರಗಳಲ್ಲಿ ರೈತರ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಒದಗಿಸಲಿ. ಅಲ್ಲಿಯವರೆಗೆ ಪ್ರತಿಭಟನೆ ಕೈಬಿಡಲ್ಲ ಎಂದು ರೈತ ಸಂಘಟನೆಗಳು ಹೇಳುತ್ತಿವೆ.

  ರೈತರ ಬೇಡಿಕೆ ಈಡೇರಿಸುತ್ತಿದ್ದೇವೆ, ಪ್ರತಿಭಟನೆ ಯಾಕೆ ಎಂದ ಕೃಷಿ ಸಚಿವ:

  ರೈತರ ಹಲವು ಬೇಡಿಕೆಗಳನ್ನ ಕೇಂದ್ರ ಸರ್ಕಾರ ಈಡೇರಿಸುತ್ತಿದೆ. ಹೀಗಿರುವಾಗ ರೈತ ಸಂಘಟನೆಗಳು ಪ್ರತಿಭಟನೆ ಮುಂದುವರಿಸುವುದರಲ್ಲಿ ಅರ್ಥ ಇಲ್ಲ. ಕೂಡಲೇ ಮುಷ್ಕರ ಕೈಬಿಟ್ಟು ರೈತರು ತಮ್ಮ ಮನೆಗಳಿಗೆ ವಾಪಸ್ ಹೋಗಬೇಕು ಎಂದು ಕೃಷಿ ಸಚಿವ ತೋಮರ್ ಮನವಿ ಮಾಡಿದ್ದಾರೆ.

  ಇದನ್ನೂ ಓದಿ: Tomato Price: ಶೀಘ್ರದಲ್ಲೇ ಕಡಿಮೆಯಾಗಲಿದೆ ಟೊಮೆಟೊ ಬೆಲೆ, ಯಾವಾಗ ಗೊತ್ತಾ?

  ”ಸಮಿತಿ ರಚನೆಯೊಂದಿಗೆ ಎಂಎಸ್​ಪಿ ವಿಚಾರದಲ್ಲಿ ರೈತರ ಬೇಡಿಕೆ ಈಡೇರಿದೆ. ಬೆಳೆ ತ್ಯಾಜ್ಯ ಸುಡುವುದು ಅಪರಾಧ ಅಲ್ಲ ಎಂಬ ಕಾನೂನು ಮಾಡಬೇಕು ಎಂದು ರೈತ ಸಂಘಟನೆಗಳು ಬೇಡಿಕೆ ಇಟ್ಟಿದ್ದವು. ಕೇಂದ್ರ ಸರ್ಕಾರ ಆ ಬೇಡಿಕೆಯನ್ನೂ ಒಪ್ಪಿದೆ. ಪ್ರತಿಭಟನೆ ಮುಂದುವರಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ರೈತರು ತಮ್ಮ ಪ್ರತಿಭಟನೆ ಕೈಬಿಟ್ಟು ಮನೆಗೆ ಹೋಗಬೇಕೆಂದು ಒತ್ತಾಯಿಸುತ್ತೇನೆ” ಎಂದು ಕೃಷಿ ಸಚಿವರು ಹೇಳಿಕೆ ನೀಡಿದ್ಧಾರೆ.

  ರೈತರ ಇತರ ಬೇಡಿಕೆಗಳು:

  ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದ ರೈತರ ಮೇಲೆ ವಿವಿಧೆಡೆ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳನ್ನ ಕೈಬಿಡಬೇಕು. ಸಮರ್ಪಕ ಬೆಳೆ ನಷ್ಟ ಪರಿಹಾರ ವ್ಯವಸ್ಥೆ ರೂಪಿಸಬೇಕು ಎಂಬುದು ರೈತ ಪ್ರತಿಭಟನಾಕಾರರ ಇತರ ಪ್ರಮುಖ ಬೇಡಿಕೆಗಳಾಗಿವೆ.

  ಇದರ ಬಗ್ಗೆ ಪ್ರತಿಕ್ರಿಯಿಸಿದ ನರೇಂದ್ರ ಸಿಂಗ್ ತೋಮರ್, ಕಳೆದ ಒಂದು ವರ್ಷದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ದಾಖಲಾಗಿರುವ ಪ್ರಕರಣಗಳಲ್ಲಿ ಆಯಾ ಠಾಣೆ ವ್ಯಾಪ್ತಿಯ ರಾಜ್ಯ ಸರ್ಕಾರಗಳು ನಿರ್ಧಾರ ತೆಗೆದುಕೊಳ್ಳಬಹುದು. ರೈತರ ಬೆಳೆ ನಷ್ಟಕ್ಕೆ ಪರಿಹಾರ ಎಷ್ಟೆಂಬ ನಿರ್ಧಾರವನ್ನೂ ರಾಜ್ಯ ಸರ್ಕಾರಕ್ಕೆ ಬಿಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
  Published by:Vijayasarthy SN
  First published: