• Home
  • »
  • News
  • »
  • national-international
  • »
  • BBC Documentary: ಪ್ರಧಾನಿ ಟೀಕಿಸುವ ಬಿಬಿಸಿ ಸಾಕ್ಷ್ಯಚಿತ್ರದ ವಿಡಿಯೋಗೆ ತುರ್ತು ಅಧಿಕಾರ ಬಳಸಿ ನಿರ್ಬಂಧ ವಿಧಿಸಿದ ಕೇಂದ್ರ!

BBC Documentary: ಪ್ರಧಾನಿ ಟೀಕಿಸುವ ಬಿಬಿಸಿ ಸಾಕ್ಷ್ಯಚಿತ್ರದ ವಿಡಿಯೋಗೆ ತುರ್ತು ಅಧಿಕಾರ ಬಳಸಿ ನಿರ್ಬಂಧ ವಿಧಿಸಿದ ಕೇಂದ್ರ!

 ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

‘ಇಂಡಿಯಾ: ದಿ ಮೋದಿ ಕ್ವಶ್ಚನ್’ ಎಂಬ ಶೀರ್ಷಿಕೆಯಲ್ಲಿ ಗುಜರಾತ್ ಗಲಭೆ ಮತ್ತು ನರೇಂದ್ರ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಎಲ್ಲಾ ಲಿಂಕ್‌ಗಳನ್ನು ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣದ ದಿಗ್ಗಜರಾದ ಯೂಟ್ಯೂಬ್ ಮತ್ತು ಟ್ವಿಟ್ಟರ್‌ಗೆ ಕೇಂದ್ರ ಸರ್ಕಾರ ಆದೇಶಿಸಿದೆ.

  • Share this:

ದೆಹಲಿ: 2002ರಲ್ಲಿ ನಡೆದ ಗುಜರಾತ್ ಗಲಭೆ (Gujarat Riots) ಮತ್ತು ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಈಗಿನ ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತು ಮಾಡಲಾಗಿದ್ದ ಬಿಬಿಸಿ ಸಾಕ್ಷ್ಯಚಿತ್ರದ (BBC Documentary) ಎಲ್ಲಾ ಲಿಂಕ್‌ಗಳನ್ನು ತೆಗೆದು ಹಾಕುವಂತೆ ಯೂಟ್ಯೂಬ್ ಮತ್ತು ಟ್ವಿಟ್ಟರ್‌ಗೆ (Youtube and Twitter) ಕೇಂದ್ರ ಸರ್ಕಾರ (BJP Govt) ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಈ ಡಾಕ್ಯುಮೆಂಟರಿ ಚಿತ್ರದ ವಿಡಿಯೋ ಅಥವಾ ಲಿಂಕ್‌ಗಳನ್ನು ಯಾರಾದರೂ ಪುನಃ ಅಪ್ಲೋಡ್ ಮಾಡಿದರೆ ಅವುಗಳನ್ನೂ ತೆಗೆದು ಹಾಕುವಂತೆ ಟ್ವಿಟ್ಟರ್ ಮತ್ತು ಯೂಟ್ಯೂಬ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ.


ಟ್ವಿಟ್ಟರ್, ಯೂಟ್ಯೂಬ್‌ನಲ್ಲಿ ವಿಡಿಯೋ ಮಾಯ!


‘ಇಂಡಿಯಾ: ದಿ ಮೋದಿ ಕ್ವಶ್ಚನ್’ ಎಂಬ ಶೀರ್ಷಿಕೆಯಲ್ಲಿ ಗುಜರಾತ್ ಗಲಭೆ ಕುರಿತ ಬಿಬಿಸಿ ಮಾಡಿದ್ದ ಸಾಕ್ಷ್ಯಚಿತ್ರದ ಸಾವಿರಾರು ಟ್ವೀಟ್‌ಗಳು ಮತ್ತು ಯೂಟ್ಯೂಬ್ ವಿಡಿಯೋಗಳು ಸದ್ಯ ಮೈಕ್ರೋ ಬ್ಲಾಗಿಂಗ್ ಮತ್ತು ವಿಡಿಯೋ ಹಂಚಿಕೆಯ ವೆಬ್‌ಸೈಟ್‌ಗಳಲ್ಲಿ ಕಾಣಿಸುತ್ತಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಿಯಾನ್, ‘ಸೆನ್ಸಾರ್‌ಶಿಪ್‌. ಬಿಬಿಸಿ ಸಾಕ್ಷ್ಯಚಿತ್ರದ ನನ್ನ ಟ್ವೀಟ್‌ ಅನ್ನು ಟ್ವಿಟ್ಟರ್ ತೆಗೆದು ಹಾಕಿದೆ. ಇದು ಲಕ್ಷಗಟ್ಟಲೆ ವೀವ್ಸ್‌ಗಳನ್ನು ಪಡೆದುಕೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಪಸಂಖ್ಯಾತರನ್ನು ಹೇಗೆ ದ್ವೇಷಿಸುತ್ತಾರೆ ಎಂಬುದನ್ನು ಒಂದು ಗಂಟೆಯ ಬಿಬಿಸಿ ಸಾಕ್ಷ್ಯಚಿತ್ರವು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ:Narendra Modi-Amit Shah: ಮುಂದಿನ ಬಾರಿಯೂ ನರೇಂದ್ರ ಮೋದಿಯವರೇ ಪ್ರಧಾನಿ! ಕೇಂದ್ರ ಸಚಿವ ಅಮಿತ್ ಶಾ ವಿಶ್ವಾಸ


ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಗುಜರಾತ್ ಹತ್ಯಾಕಾಂಡದ ಕುರಿತ ಸಾಕ್ಷ್ಯ ಚಿತ್ರದ ಮೊದಲ ಸಂಚಿಕೆಯನ್ನು ಬ್ಲಾಕ್ ಮಾಡುವಂತೆ ಸಾಮಾಜಿಕ ಮಾಧ್ಯಮದ ಎರಡು ದೈತ್ಯ ಸಂಸ್ಥೆಗಳಾದ ಟ್ವಿಟ್ಟರ್ ಮತ್ತು ಯೂಟ್ಯೂಬ್‌ಗೆ ಸೂಚನೆ ನೀಡಿದ್ದು, ಅತ್ತ ಬ್ರಿಟನ್ ಪ್ರಧಾನಿ ರಿಷಿ ಸುನಾಕ್‌ ಅವರು ಈ ವಿವಾದಾತ್ಮಕ ಸಾಕ್ಷ್ಯಚಿತ್ರದಿಂದ ಅಂತರ ಕಾಪಾಡಿಕೊಂಡಿದ್ದಾರೆ. ಬ್ರಿಟನ್ ಸಂಸತ್‌ನಲ್ಲಿ ಪಾಕ್ ಮೂಲದ ಸಂಸದ ಇಮ್ರಾನ್ ಹುಸೇನ್ ಅವರು ಭಾರತದ ಪ್ರಧಾನಿಯ ವ್ಯಕ್ತಿತ್ವದ ಬಗ್ಗೆ ನೀಡಿರುವ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದೂ ರಿಷಿ ಸುನಕ್ ಹೇಳಿದ್ದಾರೆ.


ತುರ್ತು ಅಧಿಕಾರ ಬಳಸಿದ ಕೇಂದ್ರ!


ಗುಜರಾತ್ ಗಲಭೆಯ ಸಾಕ್ಷ್ಯಚಿತ್ರದ ಕುರಿತು ಬ್ರಿಟನ್‌ನ ರಾಷ್ಟ್ರೀಯ ಪ್ರಸಾರ ಸಂಸ್ಥೆ ಬಿಬಿಸಿ ಮಾಡಿರುವ 50ಕ್ಕೂ ಹೆಚ್ಚು ಟ್ವೀಟ್‌ಗಳನ್ನು ಅಳಿಸಿ ಹಾಕುವಂತೆ ಟ್ವಿಟ್ಟರ್‌ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸೂಚಿಸಿದ್ದು, ಈ ಡಾಕ್ಯುಮೆಂಟರಿ ಕುರಿತು ಸಂಸದ ಡೆರೆಕ್ ಓಬ್ರಿಯಾನ್ ಸೇರಿದಂತೆ ಕೆಲವು ವಿರೋಧ ಪಕ್ಷದ ನಾಯಕರು ಮಾಡಿದ್ದ ಟ್ವೀಟ್‌ಗಳನ್ನು ಕೂಡ ಅಳಿಸಲಾಗಿದೆ. 2021ರ ಮಾಹಿತಿ ತಂತ್ರಜ್ಞಾನ ನಿಯಮದ ಅಡಿಯಲ್ಲಿನ ತುರ್ತು ಅಧಿಕಾರವನ್ನು ಬಳಸಿಕೊಂಡು ಸಚಿವಾಲಯ ಈ ಆದೇಶ ನೀಡಿದ್ದು, ಟ್ವಿಟ್ಟರ್ ಮತ್ತು ಯೂಟ್ಯೂಬ್ ಎರಡೂ ಈ ಆದೇಶ ಪಾಲನೆಗೆ ಒಪ್ಪಿಕೊಂಡಿವೆ ಎಂದು ಬಲ್ಲ ತಿಳಿದು ಬಂದಿದೆ. 


ಇದನ್ನೂ ಓದಿ: Narendra Modi: ಜಾಹೀರಾತಿನಲ್ಲಿ ನರೇಂದ್ರ ಮೋದಿಗೆ ಆಯ್ತಾ ಅಪಮಾನ? ಜೋರಾಯ್ತು #BoycottCadbury ಅಭಿಯಾನ!


ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೊರತಾಗಿ ಗೃಹ ಮತ್ತು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಕೂಡ ಈ ಸಾಕ್ಷ್ಯ ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದು, ಇದು ಸುಪ್ರೀಂ ಕೋರ್ಟ್‌ನ ಅಧಿಕಾರ ಮತ್ತು ವಿಶ್ವಾಸಾರ್ಹತೆಯ ಮೇಲೆ ಬೇರೆ ಅಭಿಪ್ರಾಯ ಬರುವಂತೆ ಮಾಡಲು ಮತ್ತು ಭಾರತದಲ್ಲಿನ ಸಮುದಾಯಗಳ ಮಧ್ಯೆ ವಿಭಜನೆಯ ಬೀಜ ಬಿತ್ತಲು ಮಾಡಿರುವ ಆಧಾರ ರಹಿತ ಆರೋಪಗಳ ಪ್ರಯತ್ನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




ಬಿಬಿಸಿ ಸಾಕ್ಷ್ಯ ಚಿತ್ರದಲ್ಲೇನಿದೆ?


ಬಿಬಿಸಿ ಸಂಸ್ಥೆ ತಯಾರಿಸಿರುವ 2002ರ ಗುಜರಾತ್ ಗಲಭೆಯ ಕುರಿತ ಸಾಕ್ಷ್ಯಚಿತ್ರದಲ್ಲಿ, ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಗಲಭೆಯಲ್ಲಿ ನೇರ ಪಾತ್ರ ವಹಿಸಿದ್ದರು. ಮುಸ್ಲಿಮರ ವಿರುದ್ಧದ ಹಿಂಸಾಚಾರಕ್ಕೆ ಅವರು ಕುಮ್ಮಕ್ಕು ನೀಡಿದ್ದರು. ನರೇಂದ್ರ ಮೋದಿ ಅವರು ಅಲ್ಪ ಸಂಖ್ಯಾತರ ವಿರೋಧಿ ಎಂದು ಡಾಕ್ಯುಮೆಂಟರಿ ಚಿತ್ರದಲ್ಲಿ ನಿರೂಪಿಸಿದ್ದರು. ಹೀಗಾಗಿ ಇದು ಬಿಜೆಪಿ ಸೇರಿದಂತೆ ಸಂಘಪರಿವಾರ ಮತ್ತು ಮಿತ್ರ ಪರಿವಾರಗಳ ಕೆಂಗಣ್ಣಿಗೆ ಗುರಿಯಾಗಿತ್ತು.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು