ದೆಹಲಿ: ಭಾರತ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸುತ್ತಿದ್ದು, ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ನಗರಗಳತ್ತ (City development) ವಲಸೆ ಬರುವವರ ಸಂಖ್ಯೆ ಕೂಡ ಹೆಚ್ಚಾಗಿದ್ದು, ನಗರೀಕರಣದ ಸವಾಲನ್ನು ಪರಿಹರಿಸುವ ನಿಟ್ಟಿನಲ್ಲಿ ಹೊಸ ನಗರಗಳ ನಿರ್ಮಾಣಕ್ಕೆ ಪ್ರಸ್ತಾಪವೊಂದನ್ನು ಎರಡು ವರ್ಷಗಳ ಹಿಂದೆ ಸರ್ಕಾರದ (Government) ಮುಂದೆ ಇಡಲಾಗಿತ್ತು.
ಹೌದು, ಭಾರತದಲ್ಲಿ ಹೊಸ ನಗರಗಳನ್ನು ನಿರ್ಮಾಣ ಮಾಡುವ ಸಲುವಾಗಿ 15 ನೇ ಹಣಕಾಸು ಆಯೋಗವು 8,000 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲು 2021ರಲ್ಲಿ ಸೂಚಿಸಿತ್ತು. ಆಯೋಗವು 2021-26 ರ ವರದಿಯನ್ನು 1 ಫೆಬ್ರವರಿ 2021 ರಂದು ಸಂಸತ್ತಿನಲ್ಲಿ ಮಂಡಿಸುವ ಮೂಲಕ ಎಂಟು ಹೊಸ ನಗರಗಳ ಉಗಮದ ಬಗ್ಗೆ ಪ್ರಸ್ತಾವನೆಯನ್ನು ಎರಡು ವರ್ಷದ ಹಿಂದೆ ಲೋಕಸಭೆಯಲ್ಲಿ ಸಲ್ಲಿಸಿತ್ತು.
ಕೇಂದ್ರದಲ್ಲಿ 21 ರಾಜ್ಯಗಳ 26 ಪ್ರಸ್ತಾವನೆಗಳ ಪರಿಶೀಲನೆ
ಪ್ರಸ್ತುತ ಎರಡು ವರ್ಷಗಳ ಹಿಂದಿನ ಪ್ರಸ್ತಾವನೆ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪ್ರಸ್ತುತ ಹೊಸ ನಗರಗಳ ಸ್ಥಾಪನೆಗಾಗಿ 21 ರಾಜ್ಯಗಳು ಸಲ್ಲಿಸಿದ 26 ಪ್ರಸ್ತಾವನೆಗಳನ್ನು ಪರಿಶೀಲನೆ ಮಾಡುತ್ತಿದೆ ಎಂದು ಸರ್ಕಾರದ ಮೂಲಗಳು ಬಹಿರಂಗಪಡಿಸಿವೆ.
ರಾಜ್ಯಗಳು ಸಲ್ಲಿಸಿದ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರ ಈಗ ಮೌಲ್ಯಮಾಪನ ಮಾಡುತ್ತಿದೆ. ವಾಸ್ತವವಾಗಿ ಕಳೆದ ಎರಡು ವರ್ಷಗಳ ಹಿಂದೆ ಮಂಡಿಸಿದ ಪ್ರಸ್ತಾವನೆ ಕಾರ್ಯರೂಪಕ್ಕೆ ಬರುವುದರ ಬಗ್ಗೆ ಭರವಸೆ ಮೂಡಿದೆ. ಹಾಗೆಯೇ ಈ ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ದೇಶವು ಹೊಸ ಎಂಟು ನಗರಗಳ ಉದಯಕ್ಕೆ ಸಾಕ್ಷಿಯಾಗಲಿದೆ.
ಸಚಿವರು ಹೇಳುವುದೇನು?
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರು ಸೋಮವಾರ (ಮಾರ್ಚ್ 27) ಈ ಬಗ್ಗೆ ರಾಜ್ಯಸಭೆಗೆ ಮಾಹಿತಿ ನೀಡಿದ್ದು, ಹೊಸ ನಗರಗಳ ರಚನೆಗಾಗಿ 21 ರಾಜ್ಯಗಳು ಸಲ್ಲಿಸಿದ 26 ಪ್ರಸ್ತಾವನೆಗಳಿಗೆ ಸಚಿವಾಲಯವು ಬಿಡ್ ನಿಯತಾಂಕಗಳನ್ನು ಮತ್ತು ಕನಿಷ್ಠ ಅರ್ಹತಾ ಮಾನದಂಡಗಳನ್ನು ಯೋಜಿಸುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: Court Judgment: ಬರೋಬ್ಬರಿ 28 ವರ್ಷಗಳ ನಂತರ ಮರಣದಂಡನೆ ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
"ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳಲ್ಲಿನ ಸಣ್ಣ ನಗರ ಜನಸಂಖ್ಯೆಯನ್ನು ಪರಿಗಣಿಸಿ, ಎರಡು ವಿಭಿನ್ನ ರಾಜ್ಯಗಳಿಗೆ ಎರಡು ಹೊಸ ನಗರಗಳಿಗೆ ತಲಾ 500 ಅಥವಾ 1,000 ಕೋಟಿ ರೂ.ಗಳನ್ನು ಪ್ರಸ್ತಾಪಿಸಲಾಗಿದೆ" ಎಂದು ಸಚಿವರು ಮಾಹಿತಿ ನೀಡಿದರು. 500 ಅಥವಾ 1,000 ಕೋಟಿ ನಿಧಿಯಲ್ಲಿ ರಾಜ್ಯದಲ್ಲಿ ಕೇವಲ ಒಂದು ಹೊಸ ನಗರವನ್ನು ಸ್ಥಾಪಿಸಬಹುದು. ಹೀಗಾಗಿ ಒಂಬತ್ತು ರಾಜ್ಯಗಳಲ್ಲಿ ಗರಿಷ್ಠ ಒಂಬತ್ತು ಹೊಸ ನಗರಗಳನ್ನು ಆಯ್ಕೆ ಮಾಡಬಹುದು ಎಂದು ಅವರು ಹೇಳಿದರು.
ಯಾವೆಲ್ಲಾ ರಾಜ್ಯಗಳು ಪ್ರಸ್ತಾವನೆ ಸಲ್ಲಿಸಿವೆ?
ಗುರ್ಗಾಂವ್ (ಹರಿಯಾಣ), ಜಬಲ್ಪುರ್ (ಮಧ್ಯಪ್ರದೇಶ), ಅಯೋಧ್ಯೆ (ಉತ್ತರ ಪ್ರದೇಶ), ಗಿಫ್ಟ್ ಸಿಟಿ ವಿಸ್ತರಣೆ (ಗುಜರಾತ್), ನಾಗಕಿ ಗ್ಲೋಬಲ್ ಸಿಟಿ (ನಾಗಾಲ್ಯಾಂಡ್), ನ್ಯೂ MOPA ಆಯುಷ್ ಸಿಟಿ (ಗೋವಾ) ಮತ್ತು ಬಂಟಲ ಗ್ರೀನ್‌ಫೀಲ್ಡ್ ಸಿಟಿ (ಪಶ್ಚಿಮ ಬಂಗಾಳ) ಸೇರಿದಂತೆ ಹೊಸ ನಗರಗಳ ರಚನೆ ಅಥವಾ ಅಸ್ತಿತ್ವದಲ್ಲಿರುವ ನಗರಗಳ ವಿಸ್ತರಣೆಗೆ ಪ್ರಸ್ತಾವನೆಗಳನ್ನು ಈ ರಾಜ್ಯಗಳು ಸಲ್ಲಿಸಿವೆ.
ಇದನ್ನೂ ಓದಿ: Twitter: ಪಾಕಿಸ್ತಾನದ ಸರ್ಕಾರಿ ಟ್ವೀಟ್ ಖಾತೆಗೆ ಭಾರತದಲ್ಲಿ ನಿರ್ಬಂಧ
2011 ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆಯ ಶೇಕಡಾ 31.2 ರಷ್ಟು ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಈ ನಗರೀಕರಣ ಸಮಸ್ಯೆಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಈ ಉಪಕ್ರಮವನ್ನು ಮಂಡಿಸಲಾಗಿದೆ ಎಂದು ವಸತಿ ಕಾರ್ಯದರ್ಶಿ ಮಿಶ್ರಾ ಕಳೆದ ಎರಡು ವರ್ಷಗಳ ಹಿಂದೆ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ