ನವ ದೆಹಲಿ: ಸುಪ್ರೀಂ ಕೋರ್ಟ್ (Supreme Court) ಮತ್ತು ಕೇಂದ್ರ ಸರ್ಕಾರದ (Central Govt) ನಡುವಿನ ಸಂಘರ್ಷ ಕೊನೆಗೂ ತಾರ್ಕಿಕ ಅಂತ್ಯ ಕಂಡಿದ್ದು, ಸುಪ್ರೀಂಕೋರ್ಟ್‌ಗೆ ಐವರು ನ್ಯಾಯಮೂರ್ತಿಗಳ (SC Judges) ನೇಮಕಕ್ಕೆ ಕೇಂದ್ರ ಸರ್ಕಾರ ಶನಿವಾರ ಅಂಗೀಕಾರ ನೀಡಿದೆ. ಸುಪ್ರೀಂಕೋರ್ಟ್ ಕೊಲಿಜಿಯಂ (SC Collegium) ಶಿಫಾರಸು ಮಾಡಿದ ಎರಡು ತಿಂಗಳ ಬಳಿಕ ಕೇಂದ್ರ ಸರ್ಕಾರ ಈ ಅನುಮೋದನೆ ದೊರಕಿದೆ.
ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಂಕಜ್ ಮಿತ್ತಲ್, ಪಟ್ನಾ ಹೈಕೋರ್ಟ್ ಸಿಜೆ ಸಂಜಯ್ ಕರೋಲ್, ಮಣಿಪುರ ಹೈಕೋರ್ಟ್ ಸಿಜೆ ಪಿವಿ ಸಂಜಯ್ ಕುಮಾರ್, ಪಟನಾ ಹೈಕೋರ್ಟ್ ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಮುಂಬಡ್ತಿ ಪಡೆದಿದ್ದು, ಆ ಮೂಲಕ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆ ವಿಚಾರದಲ್ಲಿ ನ್ಯಾಯಾಂಗ ಹಾಗೂ ಕೇಂದ್ರದ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಬಿದ್ದಿದೆ.
ಇದನ್ನೂ ಓದಿ: Explained: ಅಪ್ರಾಪ್ತರ ಮೇಲಿನ ಮದುವೆ ಕಾನೂನು ಪರಿಶೀಲಿಸುತ್ತಿರುವ ಸುಪ್ರೀಂ, ಕಾರಣವಾದ್ರೂ ಏನು? ಇಲ್ಲಿದೆ ಮಾಹಿತಿ
ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ
ಈಗಾಗಲೇ ಸುಪ್ರೀಂ ಕೋರ್ಟ್ ಐವರು ನ್ಯಾಯಮೂರ್ತಿಗಳ ನೇಮಕಾತಿಗೆ ನೀಡಿದ್ದ ಶಿಫಾರಸುಗಳನ್ನು ಬಾಕಿ ಉಳಿಸಿಕೊಂಡ ಬಗ್ಗೆ ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಭಾನುವಾರದ ವೇಳೆಗೆ ಐವರು ಹೈಕೋರ್ಟ್ ನ್ಯಾಯಮೂರ್ತಿಗಳ ಪದೋನ್ನತಿ ಪಟ್ಟಿಯನ್ನು ಅನುಮೋದಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆಗೆ ಮಾಡಿದ್ದ ಶಿಫಾರಸುಗಳಿಗೆ ಒಪ್ಪಿಗೆ ನೀಡಲು ವಿಳಂಬ ಮಾಡುತ್ತಿರುವುದರ ಬಗ್ಗೆ ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್ ಮತ್ತು ಎಎಸ್ ಓಕಾ ಅಸಮಾಧಾನ ವ್ಯಕ್ತಪಡಿಸಿ ‘ಇದು ಬಹಳ ಗಂಭೀರ ಸಮಸ್ಯೆ’ ಎಂದು ಹೇಳಿದ್ದರಲ್ಲದೇ, ಇದರಿಂದ ಆಡಳಿತಾತ್ಮಕ ಮತ್ತು ನ್ಯಾಯಾಂಗದ ಕಾರ್ಯಗಳು ಎರಡಕ್ಕೂ ತೊಂದರೆ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಕಳೆದ ಡಿಸೆಂಬರ್‌ನಲ್ಲಿ ಶಿಫಾರಸು ಮಾಡಿದ್ದ ಕೊಲಿಜಿಯಂ
ಕೇಂದ್ರ ಸರ್ಕಾರದಿಂದ ಶನಿವಾರ ಅನುಮೋದನೆಗೊಂಡ ಐವರು ನ್ಯಾಯಮೂರ್ತಿಗಳ ಹೆಸರನ್ನು ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಕೊಲಿಜಿಯಂ ಕಳೆದ ಡಿಸೆಂಬರ್ 13ರಂದು ಸುಪ್ರೀಂಕೋರ್ಟ್‌ಗೆ ಪದೋನ್ನತಿ ಮಾಡಲು ಶಿಫಾರಸುಗೊಳಿಸಿತ್ತು. ಎರಡು ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ, ಸುಪ್ರೀಂಕೋರ್ಟ್ ಕೊಲಿಜಿಯಂನ ಶಿಫಾರಸುಗಳ ಸ್ಥಿತಿ ಬಗ್ಗೆ ಪ್ರಶ್ನಿಸಲಾಗಿತ್ತು. ಅಲ್ಲದೇ, ಇನ್ನೆರಡು ದಿನಗಳಲ್ಲಿ ಐದು ನ್ಯಾಯಮೂರ್ತಿಗಳ ನೇಮಕಾತಿಗೆ ಅನುಮೋದನೆ ಸಿಗಬಹುದು ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ತಿಳಿಸಿದ್ದರು.
ಇದನ್ನೂ ಓದಿ: SC Collegium: ಸುಪ್ರೀಂಕೋರ್ಟ್‌ಗೆ ಕನ್ನಡಿಗ ಜಸ್ಟೀಸ್ ಅರವಿಂದ್ ಕುಮಾರ್ ಸೇರಿದಂತೆ ಇಬ್ಬರ ಹೆಸರು ಶಿಫಾರಸು
ಕೇಂದ್ರ ಸರ್ಕಾರದಿಂದ ಶನಿವಾರ ಅನುಮೋದನೆಗೊಂಡ ಐವರು ನ್ಯಾಯಮೂರ್ತಿಗಳ ಹೆಸರನ್ನು ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಕೊಲಿಜಿಯಂ ಕಳೆದ ಡಿಸೆಂಬರ್ 13ರಂದು ಸುಪ್ರೀಂಕೋರ್ಟ್‌ಗೆ ಪದೋನ್ನತಿ ಮಾಡಲು ಶಿಫಾರಸುಗೊಳಿಸಿತ್ತು. ಕಳೆದ ಮಂಗಳವಾರ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಹಾಗೂ ಕರ್ನಾಟಕ ಮೂಲದವರಾದ ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ಹೆಸರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ಮಾಡಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು.
ಅಲ್ಲದೇ ಈಗಾಗಲೇ ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ಹಿಂದೆ ಕಳುಹಿಸಿದ್ದ ಐದು ಹೆಸರುಗಳು ಇನ್ನೂ ಕೇಂದ್ರದ ಬಳಿ ಅನುಮೋದನೆಗೆ ಬಾಕಿ ಇದ್ದ ಕಾರಣ, ಈಗ ನೂತನವಾಗಿ ಶಿಫಾರಸು ಮಾಡಿರುವ ಎರಡು ಹೆಸರುಗಳಿಗಿಂತ ಈ ಹಿಂದೆ ಬಾಕಿ ಇದ್ದ ಹೆಸರುಗಳನ್ನು ಮೊದಲು ಅನುಮೋದನೆ ಮಾಡಿ ಅಧಿಸೂಚನೆ ಹೊರಡಿಸಬಹುದು ಎಂದು ಸುಪ್ರೀಂ ಕೊಲಿಜಿಯಂ ಮಂಗಳವಾರ ಹೇಳಿತ್ತು. ಜೊತೆಗೆ ಈ ಎರಡೂ ಪಟ್ಟಿಗಳನ್ನು ಪ್ರತ್ಯೇಕವಾಗಿ ನೋಟಿಫೈ ಮಾಡುವಂತೆ ಶಿಫಾರಸಿನಲ್ಲಿ ಉಲ್ಲೇಖ ಮಾಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ