HOME » NEWS » National-international » CENTRAL GOVERNMENT ASKS SUPREME COURT TO STOP JANUARY 26 FARMERS TRACTOR RALLY MAK

Farmers Protest: ರೈತರು ಆಯೋಜಿಸಿರುವ ಜನವರಿ 26ರ ಟ್ರ್ಯಾಕ್ಟರ್​ ರ‍್ಯಾಲಿಯನ್ನು ತಡೆಯುವಂತೆ ಸುಪ್ರೀಂಗೆ ಕೇಂದ್ರ ಸರ್ಕಾರ ಮನವಿ

ಕೇಂದ್ರ ಸರ್ಕಾರ ಇದೀಗ ನ್ಯಾಯಾಲಯದ ಮೊರೆ ಹೋಗಿದ್ದು, ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಗಣರಾಜ್ಯೋತ್ಸವದ ಸಾಂವಿಧಾನಿಕ ಮತ್ತು ಐತಿಹಾಸಿಕ ಮಹತ್ವವನ್ನು ಉಲ್ಲೇಖಿಸಿದೆ. ಅಲ್ಲದೆ, ರೈತರ ಈ ರ‍್ಯಾಲಿಯ ಮೂಲಕ ಸಂವಿಧಾನದ ಗೌರವಕ್ಕೆ ಧಕ್ಕೆಯಾಗಲಿದೆ ಎಂದು ತಿಳಿಸಲಾಗಿದೆ.

news18-kannada
Updated:January 12, 2021, 9:12 AM IST
Farmers Protest: ರೈತರು ಆಯೋಜಿಸಿರುವ ಜನವರಿ 26ರ ಟ್ರ್ಯಾಕ್ಟರ್​ ರ‍್ಯಾಲಿಯನ್ನು ತಡೆಯುವಂತೆ ಸುಪ್ರೀಂಗೆ ಕೇಂದ್ರ ಸರ್ಕಾರ ಮನವಿ
ರೈತ ಮೆರವಣಿಗೆಗೆ ಸಿದ್ದವಾಗಿರುವ ಟ್ರ್ಯಾಕ್ಟರ್​ಗಳು.
  • Share this:
ನವ ದೆಹಲಿ: ದೆಹಲಿಯಲ್ಲಿ ಬೀಡುಬಿಟ್ಟಿರುವ ರೈತ ಹೋರಾಟಗಾರರು ಜನವರಿ 26ರ ಗಣರಾಜ್ಯೋತ್ಸವ ದಿನದಂದು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್​ ರ‍್ಯಾಲಿಯನ್ನು ತಡೆಯುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ ಮನವಿ ಸಲ್ಲಿಸಿದೆ. ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಮತ್ತು ಕನಿಷ್ಟ ಬೆಂಬಲ ಬೆಲೆಯನ್ನು ಕಾನೂನುಗೊಳಿಸಬೇಕು ಎಂದು ಒತ್ತಾಯಿಸಿ ಕಳೆದ 6 ವಾರಗಳಿಂದ ದೇಶದ ರೈತರು ಸತತ ಹೋರಾಟ ನಡೆಸುತ್ತಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ರೈತರ ನಡುವೆ 7 ಸುತ್ತಿನ ಮಾತುಕತೆ ನಡೆದರೂ ಸಹ ಯಾವುದೂ ಫಲ ನೀಡಿಲ್ಲ. ಈ ನಡುವೆ ಜನವರಿ 26ರ ಒಳಗಾಗಿ ಈ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ತಾವು ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ ಟ್ರ್ಯಾಕ್ಟರ್​ ರ‍್ಯಾಲಿ ನಡೆಸುವುದಾಗಿ ರೈತ ಹೋರಾಟಗಾರರು ಈಗಾಗಲೇ ಸರ್ಕಾರಕ್ಕೆ ಬೆದರಿಕೆ ಒಡ್ಡಿದ್ದಾರೆ. ಈ ಹೋರಾಟದಲ್ಲಿ ಪಂಜಾಬ್ ಮತ್ತು ಹರಿಯಾಣದ ಪ್ರತಿ ಹಳ್ಳಿಗಳಿಂದ ಒಂದು ಟ್ರ್ಯಾಕ್ಟರ್​ ರ‍್ಯಾಲಿಯ ಭಾಗವಾಗಲಿದೆ. ಈ ಮೂಲಕ ರ‍್ಯಾಲಿಗೆ ಕನಿಷ್ಠ 20,000 ಟ್ರಾಕ್ಟರುಗಳು ಸೇರುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

ಹೀಗಾಗಿ ಕೇಂದ್ರ ಸರ್ಕಾರ ಇದೀಗ ನ್ಯಾಯಾಲಯದ ಮೊರೆ ಹೋಗಿದ್ದು, ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಗಣರಾಜ್ಯೋತ್ಸವದ ಸಾಂವಿಧಾನಿಕ ಮತ್ತು ಐತಿಹಾಸಿಕ ಮಹತ್ವವನ್ನು ಉಲ್ಲೇಖಿಸಿದೆ. ಅಲ್ಲದೆ, ರೈತರ ಈ ರ‍್ಯಾಲಿಯ ಮೂಲಕ ಸಂವಿಧಾನದ ಗೌರವಕ್ಕೆ ಧಕ್ಕೆಯಾಗಲಿದೆ ಎಂದು ತಿಳಿಸಲಾಗಿದೆ.

ಅಲ್ಲದೆ, ಸರ್ಕಾರದ ಅಫಿಡವಿಟ್​ನಲ್ಲಿ "ಜನವರಿ 23 ರಂದು ಗಣರಾಜ್ಯೋತ್ಸ ಪೆರೇಡ್​ಗೆ ಪೂರ್ವಾಭ್ಯಾಸ ನಡೆಸಲಾಗುತ್ತದೆ. ಜನವರಿ 26 ರಂದು ಗಣರಾಜ್ಯೋತ್ಸವ ಸಂಭ್ರಮ, ಜನವರಿ 28 ರಂದು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ರ‍್ಯಾಲಿ, ಜನವರಿ 29 ರಂದು ಬೀಟಿಂಗ್ ದಿ ರಿಟ್ರೀಟ್ ಮತ್ತು ಜನವರಿ 30 ರಂದು "ಹುತಾತ್ಮರ ದಿನ" ವನ್ನು ಆಚರಿಸಲಾಗುತ್ತದೆ. ಈ ಕಾರ್ಯಕ್ರಮಗಳಿಗೆ ಯಾವುದೇ ಅಡೆತಡೆಗಳು ಅಡಚಣೆಗಳು ಇರಬಾರದು. ಒಂದು ವೇಳೆ ಈ ಸಮಾರಂಭಗಳಲ್ಲಿ ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವಲ್ಲಿ ನಾವು ಎಡವಿದರೆ ಅದು ಇಡೀ ರಾಷ್ಟ್ರಕ್ಕೆ ದೊಡ್ಡ ಮುಜುಗರವಾಗಿ ಪರಿಣಮಿಸುತ್ತದೆ" ಎಂದು ಉಲ್ಲೇಖಿಸಲಾಗಿದೆ.

ಈ ವೇಳೆ ಕೃಷಿ ಕಾನೂನುಗಳ ಬಗ್ಗೆಯೂ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, "ಈ ಕಾನೂನುಗಳನ್ನು ಅವಸರದಿಂದ ಮಾಡಲಾಗಿಲ್ಲ. ಈ ಕಾಯ್ದೆಗಳು ಎರಡು ದಶಕಗಳ ಚರ್ಚೆಯ ಫಲಿತಾಂಶ. ದೇಶದ ರೈತರಿಗೆ ಇದರಿಂದ ಹೆಚ್ಚಿ ಅನುಕೂಲವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಯಾವುದೇ ಪಟ್ಟಭದ್ರ ಹಿತಾಸಕ್ತಿಗಳಿಂದ ಈ ಕಾಯ್ದೆಗಳನ್ನು ಹಿಂಪಡೆಯುವಂತೆ ಮಾಡಲಾಗುವುದಿಲ್ಲ. ಅಲ್ಲದೆ, ರೈತರ ಮನಸ್ಸಿನಲ್ಲಿರುವ ಯಾವುದೇ ತಪ್ಪು ಗ್ರಹಿಕೆಗಳು ಮತ್ತು ಅನುಮಾನಗಳನ್ನು ತೆಗೆದುಹಾಕಲು ರೈತರೊಂದಿಗೆ ಮಾತುಕತೆ ನಡೆಸಲು ಸರ್ಕಾರ ಪ್ರಯತ್ನಿಸಿದೆ" ಎಂದು ಸ್ಪಷ್ಟಪಡಿಸಲಾಗಿದೆ.

ಹಿಂದಿನ ದಿನದ ವಿಚಾರಣೆಯ ಸಮಯದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಟ್ರ್ಯಾಕ್ಟರ್ ರ‍್ಯಾಲಿಯಿಂದ ಉಂಟಾಗಬಹುದಾದ ಸಮಸ್ಯೆಯನ್ನು ಎತ್ತಿದ ನಂತರ ಕೇಂದ್ರಕ್ಕೆ ಅಫಿಡವಿಟ್ ಸಲ್ಲಿಸಲು ತಿಳಿಸಲಾಯಿತು.

ಇದನ್ನೂ ಓದಿ: Rajinikanth: ನಾನು ರಾಜಕೀಯಕ್ಕೆ ಬರಲೇಬೇಕೆಂಬ ನಿಮ್ಮ ಹೋರಾಟವನ್ನು ನಿಲ್ಲಿಸಿ; ಅಭಿಮಾನಿಗಳಲ್ಲಿ ರಜನೀಕಾಂತ್ ಒತ್ತಾಯ

ರೈತರ ರ‍್ಯಾಲಿಗೆ ಸಂಬಂಧಿಸಿದಂತೆ ಒಂದು ಗುಂಪಿನ ಅರ್ಜಿಗಳನ್ನು ಆಲಿಸುತ್ತಿದ್ದ ಸುಪ್ರೀಂ ಕೋರ್ಟ್, ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿಚಾರಣೆಯಲ್ಲಿ ತಡೆಹಿಡಿಯಬೇಕೆಂದು ಸೂಚಿಸಿತ್ತು. ಈ ಕುರಿತು ಮಾತುಕತೆ ನಡೆಸಲು ಸಮಿತಿಯೊಂದನ್ನು ರಚಿಸುವಂತೆ ನ್ಯಾಯಾಲಯ ಸೂಚಿಸಿದೆ. ಆದಾಗ್ಯೂ, ಆಂತರಿಕ ಸಭೆಯ ನಂತರ ರೈತರು ಸಮಿತಿಯಲ್ಲಿ ಭಾಗವಹಿಸಲು ನಿರಾಕರಿಸಿದರು.
Youtube Video

ಈ ವೇಳೆ ಕೇಂದ್ರದ ವಿರುದ್ಧ ಕಠಿಣವಾದ ಹೇಳಿಕೆಯೊಂದನ್ನು ನೀಡಿದ್ದ ಸುಪ್ರೀಂ ಕೋರ್ಟ್​, "ಕೃಷಿ ಕಾನೂನುಗಳನ್ನು ನೀವು ತಡೆಹಿಡಿಯುತ್ತೀರಾ ಅಥವಾ ಆ ಕೆಲಸವನ್ನು ನಾವೇ ಮಾಡಬೇಕೆ? ಎಂದು ನಮಗೆ ತಿಳಿಸಿ. ಈ ವಿಚಾರದಲ್ಲಿ  ಪ್ರತಿಷ್ಠೆಯ ಸಮಸ್ಯೆ ಏಕೆ?" ಎಂದು ಕೇಂದ್ರದ ವಿರುದ್ಧ ಚಾಟಿ ಬೀಸಿತ್ತು.
Published by: MAshok Kumar
First published: January 12, 2021, 9:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories