news18-kannada Updated:January 28, 2021, 8:36 PM IST
ಮಲ್ಲಿಕಾರ್ಜುನ ಖರ್ಗೆ
ನವದೆಹಲಿ (ಜ.28): ಗಣರಾಜ್ಯೋತ್ಸವದ ದಿನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಖರ್ಗೆ ಅವರು, ರೈತರು ನಿರಂತರವಾಗಿ ಮತ್ತು ಶಾಂತವಾಗಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ಹಿಂಸಾಚಾರ, ಘರ್ಷಣೆಗಳು ನಡೆಯಲು ಪರೋಕ್ಷವಾಗಿ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಗಣರಾಜ್ಯೋತ್ಸವದ ದಿನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಭದ್ರತಾ ವ್ಯವಸ್ಥೆ ಮಾಡಿರಲಾಗುತ್ತದೆ. ಅದರಲ್ಲೂ ಕೆಂಪು ಕೋಟೆಯಂಥ ಪ್ರದೇಶಗಳ ಮೇಲೆ ವಿಶೇಷ ನಿಗಾ ವಹಿಸಲಾಗಿರುತ್ತದೆ. ಆದರೂ ಟ್ರ್ಯಾಕ್ಟರ್ ನಲ್ಲಿ ಗುಂಪು ಬಂದು ಕೆಂಪು ಕೋಟೆ ಪ್ರವೇಶಿಸುತ್ತಾರೆ ಎಂದರೆ ಇದರ ಬಗ್ಗೆ ಕೇಂದ್ರ ಸರ್ಕಾರದ ಬಳಿ ಮಾಹಿತಿ ಇರಲಿಲ್ಲವೇ? ಗುಪ್ತಚರ ಇಲಾಖೆಗೆ ಗೊತ್ತಿರಲಿಲ್ಲವೇ? ಅವರೆಲ್ಲಾ ಕೆಂಪು ಕೋಟೆಯ ಒಳಗೆ ಹೇಗೆ ಹೋದರು? ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.
ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದವರು ಅಲ್ಲಿಗೆ ಸೈಕಲ್ ಅಥವಾ ಸ್ಕೂಟರ್ನಲ್ಲಿ ಹೋಗಿಲ್ಲ. ಟ್ರ್ಯಾಕ್ಟರ್ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಹೋಗಿದ್ದಾರೆ. ಅಲ್ಲಿ ಅವರನ್ನು ಪೊಲೀಸರು ಏಕೆ ತಡೆಯಲಿಲ್ಲ? ಅವರಿಗೆ ಕೆಂಪು ಕೋಟೆ ಪ್ರವೇಶ ಮಾಡಲು ಅವಕಾಶ ಮಾಡಿಕೊಟ್ಟಿದ್ದೇಕೆ? ಎಂದು ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವೈಫಲ್ಯ ಎಂದರು.
ಇದನ್ನು ಓದಿ; ರೈತ ಹೋರಾಟದ ಮೇಲೆ ಅನಿಶ್ಚಿತತೆ ಉಂಟುಮಾಡಿದ ದೆಹಲಿ ಘರ್ಷಣೆ
ಕೆಂಪು ಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ ದೀಪ್ ಸಿಧು ಬಗ್ಗೆಯೂ ಗಮನ ಸೆಳೆದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನೆಯಲ್ಲಿ ಈಗ ಕೇಂದ್ರ ಸಚಿವರು ಮತ್ತು ಸಂಸದರಿಗೆ ಪ್ರವೇಶ ಇಲ್ಲ. ಅಂಥದ್ದರಲ್ಲಿ ದೀಪ್ ಸಿಧು ಪ್ರಧಾನಿ ಮನೆಗೆ ಹೋಗಿದ್ದಾನೆ. ಪ್ರಧಾನಿ ಮೋದಿ ಜೊತೆ ದೀಪ್ ಸಿಧು ಫೋಟೋ ತೆಗೆಸಿಕೊಂಡಿದ್ದಾನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಸೋಫಾದಲ್ಲಿ ಕುಳಿತುಕೊಂಡಿದ್ದಾನೆ. ಆತ ಪ್ರಧಾನಿ ಮೋದಿ ಮತ್ತು ಅಮಿತ್ ಶಾಗೆ ಚೆನ್ನಾಗಿ ಗೊತ್ತಿರುವ ವ್ಯಕ್ತಿಯೇ ಆಗಿದ್ದಾನೆ. ಆತನಿಂದಲೇ ಈ ಕುಕೃತ್ಯ ನಡೆದಿರುವುದರಿಂದ ಗಣರಾಜ್ಯೋತ್ಸವದ ದಿನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಹೇಳಿದರು.
ಇಷ್ಟೆಲ್ಲಾ ಮಾಡಿರುವ ಬಿಜೆಪಿಗೆ ಈಗ ತನ್ನ ನಡೆಗಳನ್ನು ಸಮರ್ಥಿಸಿಕೊಳ್ಳಲು ಕಾರಣಗಳಿಲ್ಲದೆ ವಿಪಕ್ಷಗಳ ಮೇಲೆ ಆರೋಪ ಮಾಡುತ್ತಿದೆ. ವಿಶೇಷವಾಗಿ ಕಾಂಗ್ರೆಸ್ ಪಕ್ಷದ ಕಡೆಗೆ ಬೊಟ್ಟು ತೋರಿಸುತ್ತಿದೆ. ಕಾಂಗ್ರೆಸ್ ಎಂದು ಕೂಡ ಈ ರೀತಿಯ ಕೆಲಸಗಳಿಗೆ ಕುಮ್ಮಕು ಕೊಡುವುದಿಲ್ಲ ಎಂದರು. ಅಲ್ಲದೇ ಗಣರಾಜ್ಯೋತ್ಸವದ ದಿನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ ಎಂದು ಕೂಡ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
Published by:
HR Ramesh
First published:
January 28, 2021, 8:36 PM IST