ಜುಲೈ 7ಕ್ಕೆ  ಕೇಂದ್ರ ಸಚಿವ ಸಂಪುಟ ಪುನರ್​ರಚನೆ ಸಾಧ್ಯತೆ; ರಾಜ್ಯದಿಂದ ಯಾರಿಗೆ ಅವಕಾಶ

ಸದ್ಯ 53 ಸಚಿವರು ಮಾತ್ರ ಇದ್ದಾರೆ. ಇನ್ನೂ 28 ಜನರಿಗೆ ಸಚಿವ ಸ್ಥಾನ ನೀಡುವ ಅವಕಾಶ ಇದೆ. ಆದರೆ ಈಗ ಕೇವಲ 15 ರಿಂದ 20 ಸ್ಥಾನ ತುಂಬಿಕೊಳ್ಳುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ‌ ರಾಜ್ಯದ 9 ಸಂಸದರು ಕೇಂದ್ರ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

  • Share this:
ನವದೆಹಲಿ, ಜು. 5: ಸುಮಾರು ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೇಂದ್ರ ಸಚಿವ ಸಂಪುಟ ಪುನರ್ರಚನೆಗೆ ಕ್ಷಣಗಣನೆ ಶುರುವಾಗಿದೆ. ಜುಲೈ 7ರಂದೇ ಸಂಪುಟ ಪುನರ್ರಚನೆ ಆಗಲಿದೆ. ಸಚಿವ ಸಂಪುಟ ಪುನರ್ರಚನೆಗೆ ಎಲ್ಲಾ ತಯಾರಿಗಳು ಮುಗಿದಿದ್ದು ಪ್ರಧಾನ ಮಂತ್ರಿಗಳ ಕಚೇರಿಯಿಂದ ಅಧಿಕೃತ ಪ್ರಕಟಣೆ ಹೊರಬೀಳುವುದು ಮಾತ್ರ ಬಾಕಿ ಇದೆ. ಜುಲೈ 6ರಂದೇ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದ್ದು ಹೊಸದಾಗಿ ಸಚಿವ ಸ್ಥಾನ ಪಡೆದುಕೊಳ್ಳುವವರಿಗೆ ಪ್ರಧಾನ ಮಂತ್ರಿಗಳ ಕಚೇರಿಯಿಂದ ಕರೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಸಚಿವ ಸಂಪುಟದಲ್ಲಿ ಒಟ್ಟು 81 ಸ್ಥಾನಗಳಿದ್ದು ಸದ್ಯ 53 ಸಚಿವರು ಮಾತ್ರ ಇದ್ದಾರೆ. ಇನ್ನೂ 28 ಜನರಿಗೆ ಸಚಿವ ಸ್ಥಾನ ನೀಡುವ ಅವಕಾಶ ಇದೆ. ಆದರೆ ಈಗ ಕೇವಲ 15 ರಿಂದ 20 ಸ್ಥಾನ ತುಂಬಿಕೊಳ್ಳುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ‌ ರಾಜ್ಯದ 9 ಸಂಸದರು ಕೇಂದ್ರ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ತಮಗೆ ಈ ಕಾರಣಗಳಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರವನ್ನೂ ಹಾಕಿಕೊಂಡಿದ್ದಾರೆ. ಅದರ ಸಂಪೂರ್ಣ ವಿವರ ಈ ರೀತಿ ಇದೆ.

ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ, ಹಾವೇರಿ ಸಂಸದ ಶಿವಕುಮಾರ್ ಉದಾಸಿ, ಕೊಪ್ಪಳ ಸಂಸದ ಕರಡಿ‌ ಸಂಗಣ್ಣ, ಗುಲ್ಬರ್ಗ ಸಂಸದ ಉಮೇಶ್ ಜಾಧವ್, ಬೀದರ್ ಸಂಸದ ಭಗವಂತ ಖೂಬಾ, ಬಾಗಲಕೋಟೆ ಸಂಸದ ಪಿ ಸಿ  ಗದ್ದೀಗೌಡರ್, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪ್ರಮುಖ ಆಕಾಂಕ್ಷಿಗಳು. ಈ ಪೈಕಿ ಇಬ್ಬರು ಸಂಸದರಿಗೆ ಮಾತ್ರ ಅವಕಾಶ ಸಿಗುವ ಸಾಧ್ಯತೆ.‌ ರಾಜ್ಯದಿಂದ ಕೇಂದ್ರ ಸಚಿವರಾಗುವ ಅದೃಷ್ಟ ಯಾರಿಗೆ ಸಿಗಲಿದೆ? ಇವರು ಯಾವ ಆಧಾರದ ಮೇಲೆ ತಮಗೆ ಅವಕಾಶ ಸಿಗಲಿದೆ ಎಂದುಕೊಂಡಿದ್ದಾರೆ ಎಂಬ ವಿವರ ಹೀಗಿದೆ.

ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಒಂದೊಮ್ಮೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಬದಲಿಸಲು ತೀರ್ಮಾನಿಸಿದರೆ ಅವರ ಪುತ್ರ ಬಿ.ವೈ ರಾಘವೇಂದ್ರ ಅವರಿಗೆ ಸಚಿವ ಸ್ಥಾನ ಸಿಗುವ ಸಂಭವ ಇದೆ ಎನ್ನಲಾಗುತ್ತಿದೆ.
ಲಿಂಗಾಯತ, ವಿದ್ಯಾವಂತ ಮತ್ತು ಸಂಸದೀಯ ಸ್ಥಾಯಿ ಸಮಿತಿಗಳಲ್ಲಿ ಸಕ್ರೀಯ ಎನ್ನುವ ಕಾರಣಕ್ಕೆ ಶಿವಕುಮಾರ್ ಉದಾಸಿಗೆ ಅವಕಾಶ ಸಿಗಬಹುದು. ತಮ್ಮ ವಿರುದ್ಧ ಬಂಡೆದ್ದಿರುವ ಪಂಚಮಸಾಲಿಗಳನ್ನು ವಿಶ್ವಾಸಕ್ಕೆ ಪಡೆಯಲು ಕರಡಿ ಸಂಗಣ್ಣ ಅವರ ಪರವಾಗಿ ಸಿಎಂ ಯಡಿಯೂರಪ್ಪ ಲಾಭಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಹಿರಿಯ ನಾಯಕ, ಮುತ್ಸದಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ಕಾರಣಕ್ಕೆ ಉಮೇಶ್ ಜಾಧವ್ ಅವರಿಗೆ ಅವಕಾಶ ಲಭಿಸುವ ಸಾಧ್ಯತೆ ಇದೆ. ಬಾಬಾ ರಾಮದೇವ್ ಶಿಫಾರಸು ಫಲಿಸಿದರೆ ಭಗವಂತ ಖೂಬಾಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಲಿಂಗಾಯತ, ಹಿರಿತರನ, ಉತ್ತರ ಕರ್ನಾಟಕದವರು ಎಂಬ ಕಾರಣಗಳಿಂದ ಪಿ.ಸಿ. ಗದ್ದೀಗೌಡರ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: Delta plus: ಮಹಾರಾಷ್ಟ್ರ, ಕೇರಳ ರಾಜ್ಯದಿಂದ ಕೋಲಾರಕ್ಕೆ ಕಾಡುತ್ತಿದೆ ಡೆಲ್ಪಾ ಪ್ಲಸ್ ಭೀತಿ

ಸದಾನಂದಗೌಡರಿಗೆ ಕೋಕ್ ನೀಡಿದರೆ ತಮಗೆ ಅವಕಾಶ ಸಿಗಬಹುದೆಂಬುದು ಶೋಭಾ ಕರಂದ್ಲಾಜೆ ಮತ್ತು ಪ್ರತಾಪ್ ಸಿಂಹ ನಿರೀಕ್ಷೆ.‌ ಪುದುಚೇರಿಯಲ್ಲಿ ಎನ್ ಡಿಎ ಗೆಲುವಿಗೆ ಕಾರ್ಯತಂತ್ರ ರೂಪಿಸಿದ ಕಾರಣಕ್ಕೆ ತನಗೆ ಸಚಿವ ಸ್ಥಾನ ನೀಡಬಹುದೆಂಬುದು ರಾಜೀವ್ ಚಂದ್ರಶೇಖರ್ ಅವರ ನಿರೀಕ್ಷೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: