ಕೇಂದ್ರ ಕೃಷಿ ಮಸೂದೆ; ಸೆ.28ಕ್ಕೆ ಭಾರತ್ ಬಂದ್, ಇಂದಿನಿಂದ ಸೆ.29ರ ವರೆಗೆ ಪಂಜಾಬ್ನಲ್ಲಿ ರೈಲ್ ರೋಖೋ ಚಳುವಳಿ
ಈಗಾಗಲೇ ಉತ್ತರ ರೈಲ್ವೇ ವಿಭಾಗ ಈ ಭಾಗದಲ್ಲಿ ಸಂಚರಿಸುವ ಕೆಲವು ರೈಲುಗಳನ್ನ ರದ್ದುಗೊಳಿಸಿದೆ. ಪಂಜಾಂಬ್ ಸಿಎಂ ಅಮರೀಂದರ್ ಸಿಂಗ್ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಪ್ರತಿಭಟನಾಕಾರಲ್ಲಿ ಮನವಿ ಮಾಡಿದ್ದಾರೆ. ಆದರೆ, ಪ್ರತಿಭಟನಾಕಾರರು ಮಾತ್ರ ಯಾವ ಮನವಿಗೂ ಕಿವಿಗೊಡುವಂತೆ ಕಾಣಿಸುತ್ತಿಲ್ಲ.
ನವ ದೆಹಲಿ (ಸೆಪ್ಟೆಂಬರ್ 25); ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಮಸೂದೆಗಳಿಗೆ ಸಂಸತ್ನಲ್ಲಿ ಅಂಗೀಕಾರ ಸಿಕ್ಕಿದೆ. ಆದರೆ, ಈ ಮಸೂದೆಯನ್ನು ವಿರೋಧಿಸಿ ದೇಶದಾದ್ಯಂತ ದೊಡ್ಡ ಮಟ್ಟದ ರೈತ ಹೋರಾಟ ನಡೆಯುತ್ತಿದೆ. ಇನ್ನೂ ಪಂಜಾಬ್ ಹರಿಯಾಣ ರಾಜ್ಯಗಳಲ್ಲಿ ಪರಿಸ್ಥಿತಿ ಕೈಮೀರಿದೆ. ರೈತ ಹೋರಾಟದಲ್ಲಿ ಕೆಲವು ರೈತರು ಸಾವನ್ನಪ್ಪಿದ ಪ್ರಕರಣಗಳೂ ವರದಿಯಾಗುತ್ತದೆ. ರಾಜ್ಯದಲ್ಲೂ ಸಹ ಕೃಷಿ ಮಸೂದೆಗಳು ಮತ್ತು ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯಾದ್ಯಂತ ರೈತರು ಬೀದಿಗಿಳಿದಿದ್ದಾರೆ. ಸರ್ಕಾರದ ವಿರುದ್ಧ ತೀವ್ರ ಹೋರಾಟಕ್ಕಿಳಿದಿದ್ದಾರೆ. ಅಲ್ಲದೆ, ಸೆಪ್ಟೆಂಬರ್ 28 ರಂದು ಈ ಕಾಯ್ದೆಯನ್ನು ವಿರೋಧಿಸಿ ಭಾರತ್ ಬಂದ್ ಮಾಡಲು ಎಲ್ಲಾ ರೈತ ಸಂಘಟನೆಗಳು ನಿರ್ಧರಿಸಿವೆ.ಒಂದೆಡೆ ಕೇಂದ್ರ ಕೃಷಿ ಮಸೂದೆಯನ್ನು ವಿರೋಧಿಸಿ ರೈತ ಸಂಘಟನೆಗಳು ಭಾರತ್ ಬಂದ್ ಮಾಡಲು ಮುಂದಾಗಿದ್ದರೆ, ಪಂಜಾಬ್ ರಾಜ್ಯದಲ್ಲಿ ಮಾತ್ರ ರೈತರು ಸತತ ಮೂರು ದಿನಗಳ ‘ರೈಲ್ ರೋಖೋ’ ಚಳುವಳಿ ನಡೆಸುವ ಮೂಲಕ ರೈಲು ಸಂಚಾರವನ್ನೇ ಪಂಜಾಬ್ನಲ್ಲಿ ಸ್ಥಗಿತಗೊಳಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ ಇಂದು ಮಸೂದೆ ಕುರಿತು ರೈತರ ಮನವೊಲಿಸಲು ಸಂಜೆ ಮುಖ್ಯಮಂತ್ರಿಗಳು ಮತ್ತು ರೈತ ಮುಖಂಡರ ಸಭೆ ನಡೆದಿದ್ದು, ರೈತರ ಮನವೊಲಿಸುವಲ್ಲಿ ಸಿಎಂ ವಿಫಲರಾಗಿದ್ದಾರೆ. ಹಾಗಾಗಿ ರೈತನಾಯಕರು ಎಪಿಎಂಸಿ, ಭೂಸುಧಾರಣಾ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆಗಳನ್ನು ಹಿಂಪಡೆಯುವಂತೆ ಪಟ್ಟು ಹಿಡಿದಿದ್ದು, ಸೆ.28ರಂದು ಕರ್ನಾಟಕ ಬಂದ್ ನಡೆಸಲು ನಿರ್ಧಾರ ಕೈಗೊಂಡಿದ್ದಾರೆ. ಯಡಿಯೂರಪ್ಪ ಅವರು ಬಿಲ್ಗಳನ್ನು ವಾಪಸ್ ಪಡೆಯುವ ಬಗ್ಗೆ ಯಾವುದೇ ಭರವಸೆ ನೀಡಲಿಲ್ಲ. ಅವರು ಪ್ರಧಾನಿ ಮೋದಿ ಮಾತು ಮೀರಲು ಸಿದ್ಧರಿಲ್ಲ. ಹಾಗಾಗಿ ನಾವು ಸೋಮವಾರ ಬಂದ್ ನಡೆಸುತ್ತೇವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಇತ್ತ ಮಸೂದೆಗಳಿಗೆ ತೀವ್ರ ವಿರೋಧ ಮತ್ತು ತೀವ್ರ ಸ್ವರೂಪದ ಪ್ರತಿಭಟನೆಗಳು ನಡೆಸುತ್ತಿರುವ ಪಂಜಾಬ್ನಲ್ಲಿ ರೈಲು ಹಳಿಗಳ ಮೇಲೆ ಕುಳಿತು ರೈಲ್ ರೋಕೋ ಚಳವಳಿ ನಡೆಸುತ್ತಿದ್ದಾರೆ. ಈ ಚಳುವಳಿಯನ್ನು ಸೆ.29ರವರೆಗೂ ಈ ಚಳುವಳಿಯನ್ನು ಮುಂದುವರೆಸುತ್ತೇವೆ ಎಂದು ರೈತ ಸಂಘದ ಮುಖಂಡರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಈಗಾಗಲೇ ಉತ್ತರ ರೈಲ್ವೇ ವಿಭಾಗ ಈ ಭಾಗದಲ್ಲಿ ಸಂಚರಿಸುವ ಕೆಲವು ರೈಲುಗಳನ್ನ ರದ್ದುಗೊಳಿಸಿದೆ. ಪಂಜಾಂಬ್ ಸಿಎಂ ಅಮರೀಂದರ್ ಸಿಂಗ್ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಪ್ರತಿಭಟನಾಕಾರಲ್ಲಿ ಮನವಿ ಮಾಡಿದ್ದಾರೆ. ಆದರೆ, ಪ್ರತಿಭಟನಾಕಾರರು ಮಾತ್ರ ಯಾವ ಮನವಿಗೂ ಕಿವಿಗೊಡುವಂತೆ ಕಾಣಿಸುತ್ತಿಲ್ಲ.
ಇನ್ನೂ ಕೃಷಿ ಮಸೂದೆಗಳನ್ನು ರೈತರು ವಿರೋಧಿಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮಾತ್ರ ವಿರೋಧ ಪಕ್ಷಗಳು ಮಸೂದೆಗಳ ವಿರುದ್ಧ ಸುಳ್ಳು ವದಂತಿ ಹರಡುತ್ತಿವೆ ಎನ್ನುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ರೈತರಿಗೆ ಈ ಕಾಯ್ದೆಗಳ ಮಹತ್ವ ತಿಳಿಸಿ ಎಂದು ಸಲಹೆ ನೀಡುತ್ತಿದ್ದಾರೆ.
ಈ ನಡುವೆ ಕೃಷಿ ಮಸೂದೆಗಳನ್ನು ಟೀಕಿಸಿ ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿರುವ ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ, “ಕೇಂದ್ರ ಸರ್ಕಾರ ಕೃಷಿ ಕಾಯ್ದೆಯ ಮೂಲಕ ರೈತರನ್ನು ಗುಲಾಮರನ್ನಾಗಿಸಲು ಯತ್ನಿಸುತ್ತಿದೆ. ದೋಷ ಪೂರಿತ ಜಿಎಸ್ಟಿ ತೆರಿಗೆ ಪದ್ಧತಿಯನ್ನು ಜಾರಿಗೆ ತರುವ ಮೂಲಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಮುಗಿಸಿದ ಹಾಗೆ ಕೃಷಿ ಕಾಯ್ದೆ ಮೂಲಕ ರೈತರನ್ನು ಮುಗಿಸಲು ಸಂಚು ಹೂಡಿದೆ. ಹೀಗಾಗಿ ಈ ಕಾಯ್ದೆಯನ್ನು ವಿರೋಧಿಸಿ ರೈತರು ರಾಷ್ಟ್ರವ್ಯಾಪಿ ಕರೆ ನೀಡಿರುವ ಭಾರತ್ ಬಂದ್ಗೆ ನನ್ನ ಬೆಂಬಲ ಇದೆ” ಎಂದು ತಿಳಿಸಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ