ಜಾರ್ಖಂಡ್ನ ನ್ಯಾಯಾಧೀಶರೊಬ್ಬರು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಅದು ಢಿಕ್ಕಿ ಹೊಡೆದು ಪರಾರಿ ಆಗಿರುವ ಪ್ರಕರಣ ಎಂದು ಪೊಲೀಸರು ಭಾವಿಸಿದ್ದರು. ಆದರೆ ಘಟನಾ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳು, ಅಸಲಿಗೆ ಅದು ಕೇವಲ ಢಿಕ್ಕಿ ಹೊಡೆದು ಪರಾರಿ ಆಗಿರುವ ಪ್ರಕರಣವಲ್ಲ ಬದಲಿಗೆ ಅವರ ಹತ್ಯೆಯ ಸಂಚು ಎಂಬುವುದನ್ನು ಸೂಚಿಸಿರುವುದರಿಂದ ಪ್ರಕರಣದ ತನಿಖೆಗೆ ಒಂದು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಹೆಚ್ಚುವರಿ ಸೇಷೆನ್ಗಳು ಮತ್ತು ಜಿಲ್ಲಾ ನ್ಯಾಯಾಧೀಶ ಉತ್ತಮ್ ಆನಂದ್ ಎಂದಿನಂತೆ ತಮ್ಮ ಬೆಳಗ್ಗಿನ ಜಾಗಿಂಗ್ಗೆ ಹೋಗಿದ್ದಾಗ, ಸಡನ್ನಾಗಿ ಒಂದು ತ್ರಿಚಕ್ರ ವಾಹನ ಢಿಕ್ಕಿ ಹೊಡೆದಿದೆ. ಆ ಜಾಗದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆ ವಾಹನ ಬೇಕೆಂದೇ ರಸ್ತೆಯ ತೀರಾ ಎಡಕ್ಕೆ ಬಂದು, ನ್ಯಾಯಾಧೀಶರಿಗೆ ಢಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದೆ ಎಂಬುವುದು ಕಂಡು ಬಂತು. ಅದನ್ನು ನೋಡಿದ ಕೂಡಲೇ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಯಿತು.
ದಾರಿಹೋಕರು, ನ್ಯಾಯಾಧೀಶ ಆನಂದ್ ಅವರನ್ನು ನಗರದ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋದರು, ಆದರೆ ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಹೇಳಿದ್ದಾರೆ. ಅವರು ಏಳು ಗಂಟೆಗೆ ಮರಳಿ ಬರದಿದ್ದಾಗ ಮನೆಯವರು , ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಬಳಿಕ ಪೊಲೀಸರು, ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ವ್ಯಕ್ತಿ ಅವರೇ ಎಂಬುದನ್ನು ಖಚಿತ ಪಡಿಸಿದರು.
ಟೆಂಪೋ ಉದ್ದೇಶಪೂರ್ವಕವಾಗಿ ಅವರಿಗೆ ಢಿಕ್ಕಿ ಹೊಡೆದಿದೆ ಎಂಬುದನ್ನು ಸಿಸಿಟಿವಿ ದೃಶ್ಯಾವಳಿಗಳು ಸ್ಪಷ್ಟವಾಗಿ ತೋರಿಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಧೀಶರಿಗೆ ಢಿಕ್ಕಿ ಹೊಡೆಯುವ ಕೆಲವೇ ಗಂಟೆಗಳ ಮೊದಲು ಆ ವಾಹನವನ್ನು ಕದಿಯಲಾಗಿತ್ತು ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ , ಆಟೋ ರಿಕ್ಷಾ ಚಾಲಕ ಮತ್ತು ಅವನ ಇಬ್ಬರು ಸಹವರ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ನ್ಯಾಯಾಧೀಶ ಆನಂದ್ ಅವರ ಪ್ರಕರಣ ಕುರಿತು ಗಮನ ಕೇಂದ್ರೀಕರಿಸಿದ್ದಾರೆ. ಅವರು ಧನ್ಬಾದ್ನ ಹಲವಾರು ಮಾಫಿಯಾ ಕೊಲೆಗಳ ಪ್ರಕರಣಗಳನ್ನು ನಿರ್ವಹಿಸುತ್ತಿದ್ದರು ಮತ್ತು ಇತ್ತೀಚೆಗೆ ಇಬ್ಬರು ಗ್ಯಾಂಗ್ಸ್ಟರ್ಗಳ ಜಾಮೀನು ಅರ್ಜಿಯನ್ನು ನಿರಾಕರಿಸಿದ್ದರು.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ (ಎಸ್ಸಿಬಿಎ) ಗುರುವಾರ, ಹತ್ಯೆಯ ಕುರಿತು ಸುಯೋ ಮೋಟೋ ನೋಟೀಸ್ ತೆಗೆದುಕೊಳ್ಳಲು ಮತ್ತು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ದಾಖಲೆಯಲ್ಲಿ ತೆಗೆದುಕೊಳ್ಳುವಂತೆ ಉಚ್ಚ ನ್ಯಾಯಾಲಯಕ್ಕೆ ಹೇಳಿದೆ. “ಇದು ನ್ಯಾಯಾಲಯದ ಸ್ವಾತಂತ್ರ್ಯದ ಮೇಲಿನ ಆಕ್ರಮಣವಾಗಿದೆ ಮತ್ತು ನ್ಯಾಯಾಧೀಶರ ಮೇಲೆ ಪೂರ್ವ ನಿಯೋಜಿತ ದಾಳಿಯಂತೆ ಕಂಡು ಬರುತ್ತಿದೆ” ಎಂದು ಅದು ಹೇಳಿದೆ.
ಜಾರ್ಖಂಡ್ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರ ಬಳಿ ತಾವು ಮಾತನಾಡಿರುವುದಾಗಿ ಮುಖ್ಯ ನ್ಯಾಯಾಧೀಶ ಎನ್ ವಿ ರಮಣ ಹೇಳಿದ್ದಾರೆ. “ಹೈ ಕೋರ್ಟ್ ಮುಖ್ಯ ನ್ಯಾಯಾಧೀಶರು ಈ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ ಮತ್ತು ಪ್ರಕರಣ ಈಗ ಹೈ ಕೋರ್ಟ್ನಲ್ಲಿದೆ. ನಮಗೆ ಈ ಪ್ರಕರಣ ಬಗ್ಗೆ ಮಾಹಿತಿ ಇದೆ ಮತ್ತು ನಾವದನ್ನು ನೋಡಿಕೊಳ್ಳುತ್ತೇವೆ” ಎಂದು ನ್ಯಾಯಾಧೀಶರಾದ ರಮಣ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ