ಸಿಬಿಐ ಹೆಗಲಿಗೆ ಹತ್ರಾಸ್​ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ

ಘಟನೆ ಕುರಿತು ಸತ್ಯಾಂಶ ಹೊರಬರಬೇಕಾದರೆ, ಸಿಬಿಐ ಈ ಪ್ರಕರಣದ ತನಿಖೆ ನಡೆಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂಕೋರ್ಟ್​ಗೆ ಅಫಿಡವಿಡ್​ ಸಲ್ಲಿಸಿತ್ತು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ (ಅ.10): ದೇಶದಲ್ಲಿ ತಲ್ಲಣ ಮೂಡಿಸಿದ್ದ ಹತ್ರಾಸ್​ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ನಡೆಸಲಿದೆ. ಉತ್ತರ ಪ್ರದೇಶದಲ್ಲಿ ದಲಿತ ಯುವತಿ ಮೇಲೆ ಮೇಲ್ಜಾತಿಯ ನಾಲ್ವರು ಯುವಕರು ನಡೆಸಿದ ಈ ಸಾಮೂಹಿ ಅತ್ಯಾಚಾರ ಪ್ರಕರಣದ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸರ್ಕಾರ ಆರೋಪಿಗಳ ರಕ್ಷಣಾ ಕಾರ್ಯ ನಡೆಸುತ್ತಿದೆ ಎಂಬ ಆರೋಪಗಳನ್ನು ಕಾಂಗ್ರೆಸ್​ ಸೇರಿದಂತೆ ಅನೇಕ ವಿಪಕ್ಷಗಳು ಟೀಕಿಸಿದ್ದರುಎಲ್ಲೆಡೆ ಈ ಪ್ರಕರಣ ಹಾಗೂ ಉತ್ತರ ಪ್ರದೇಶ ಸರ್ಕಾರದ ತನಿಖೆ ಕುರಿತು ಟೀಕೆ ವ್ಯಕ್ತವಾದ ಹಿನ್ನಲೆ ಕೇಂದ್ರಿಯ ತನಿಖಾ ದಳಕ್ಕೆ (ಸಿಬಿಐ)ಗೆ ಒಪ್ಪಿಸುವಂತೆ ಯೋಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಘಟನೆ ಕುರಿತು ಸತ್ಯಾಂಶ ಹೊರಬರಬೇಕಾದರೆ, ಸಿಬಿಐ ಈ ಪ್ರಕರಣದ ತನಿಖೆ ನಡೆಸಬೇಕು ಎಂದು ಸುಪ್ರೀಂಕೋರ್ಟ್​ಗೆ ಅಫಿಡವಿಡ್​ ಸಲ್ಲಿಸಿತ್ತು. 

  ಈ ಶಿಫಾರಸ್ಸಿನ ಹಿನ್ನಲೆ ಕೇಂದ್ರಿಯ ತನಿಖಾ ದಳ ಈಗ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಶನಿವಾರ ಈ ಕುರಿತು ಕೇಂದ್ರ ಸಿಬ್ಬಂದಿ ಮತ್ತು ತನಿಖಾ ವಿಭಾಗ ಈ ಪ್ರಕರಣವನ್ನು ತನಿಖೆ ಮಾಡುವಂತೆ ಸಿಬಿಐಗೆ ಸೂಚಿಸಿದೆ. ಲಕ್ನೋ ವಲಯದಲ್ಲಿರುವ ಗಾಜಿಯಾಬಾದ್​ ಸಿಬಿಐ ಬ್ರಾಂಚ್​ ಈ ಪ್ರಕರಣದ ತನಿಖೆ ನಡೆಸಲಿದೆ. ಇನ್ನು ಪ್ರಕರಣದ ಕುರಿತು ಸಿಬಿಐ ಎಫ್​ಐಆರ್​ ದಾಖಲಿಸಬೇಕಿದೆ.

  ಇದೇ ವೇಳೆ ಸಿಬಿಐ ಉ.ಪ್ರ ಪೊಲೀಸರು ದಾಖಲಿಸಿದ್ದ ಎಫ್​ಐಆರ್​ ಕುರಿತು ತನಿಖೆ ನಡೆಸಲಿದ್ದಾರೆ. ಸಾಮಾಜಿಕ ಸಾಮರಸ್ಯ ಹಾಳುವ ಮಾಡುವ ಸಲುವಾಗಿ ಕೆಲ ದೇಶದ್ರೋಹಿಗಳು ಹಿಂಸಾತ್ಮಕ ಪ್ರತಿಭಟನೆ ನಡೆಸಲು ಸಂಚು ರೂಪಿಸಿದ್ದಾರೆ ಎಂದು ದಾಖಲಿಸಲಾಗಿದ್ದ ಎಫ್​ಐಆರ್​ ಕುರಿತು ತನಿಖೆ ನಡೆಯಲಿದೆ.

  ಹತ್ರಾಸ್​ ಪ್ರಕರಣವನ್ನು ನಿರ್ವಹಿಸುವಲ್ಲಿ ಉತ್ತರ ಪ್ರದೇಶ ಪೊಲೀಸರು ವಿಫಲರಾಗಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಎಸ್​ಪಿ ಸೇರಿದಂತೆ ನಾಲ್ವರು ಪೊಲೀಸ್​ ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿತ್ತು.

  ಹಥ್ರಾಸ್​ ಅತ್ಯಾಚಾರ ಸಂತ್ರಸ್ತೆ ಕುಟುಂಬ ಭೇಟಿಗೆ  ಕಾಂಗ್ರೆಸ್​ ನಾಯಕರ ರಾಹುಲ್​ ಗಾಂಧಿ ಹಾಗೂ  ಪ್ರಿಯಾಂಕಾ ವಾದ್ರಾ ತೀವ್ರ ವಿರೋಧ ಬೆನ್ನಲ್ಲಿ ತೆರಳಿ ಸಾಂತ್ವಾನ ಹೇಳಿದ್ದರು. ಇದಾದ ಬಳಿಕ ಟಿಎಂಸಿ ನಾಯಕರು, ಭೀಮ್​ ಆರ್ಮಿ ಮುಖ್ಯಸ್ಥರು ಭೇಟಿ ಯಾಗಿ ಸಾಂತ್ವಾನಿಸಿದ್ದರು.

  ಹಥ್ರಾಸ್​ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಸಾವಿರಾರು ಜನರು ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸಿದರು. ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಭೀಮ್​ ಆರ್ಮಿ ನಾಯಕ ಚಂದ್ರಶೇಖರ್​ ಆಜಾದ್​, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐ ನಾಯಕ ಡಿ ರಾಜಾ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರು ಸಿಎಂ ಯೋಗಿ ರಾಜೀನಾಮೆಗೆ ಆಗ್ರಹಿಸಿದ್ದರು.

  ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶದ ಹತ್ರಾಸ್ ಎಂಬ ಹಳ್ಳಿಯಲ್ಲಿ ತನ್ನ ಕುಟುಂಬದೊಂದಿಗೆ ಹೊಲದಲ್ಲಿ ಹುಲ್ಲು ಕತ್ತರಿಸುತ್ತಿದ್ದ 19 ವರ್ಷದ ಯುವತಿಯನ್ನು ಆಕೆಯ ದುಪಟ್ಟಾದಿಂದ ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿತ್ತು. ಈ ವೇಳೆ ಕುತ್ತಿಗೆ ಹಿಸುಕಿದ್ದರಿಂದ ಆಕೆಯ ನಾಲಿಗೆ ಕಚ್ಚಿ, ಮಾತನಾಡಲು ಆಗದಂತಾಗಿತ್ತು. ಅರ್ಧ ಕತ್ತರಿಸಿದಂತಾಗಿದ್ದ ನಾಲಿಗೆಯ ನೋವು ಮತ್ತು ದೇಹದಲ್ಲಾದ ನೋವಿನಿಂದ ಯುವತಿಯ ಸ್ಥಿತಿ ಗಂಭೀರವಾಗಿತ್ತು. ಆಕೆಯನ್ನು ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಐಸಿಯುನಲ್ಲಿರಿಸಲಾಗಿತ್ತು. ಆದರೂ ಆಕೆ ಚೇತರಿಸಿಕೊಳ್ಳದ ಕಾರಣ ದೆಹಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಳು.

  ಬಳಿಕ ಆಕೆಯ ಮೃತದೇಹವನ್ನು ಮನೆಯವರಿಗೆ ಒಪ್ಪಿಸದೇ ಉತ್ತರ ಪ್ರದೇಶ ಪೊಲೀಸರು ಬೆಳಗ್ಗಿನ ಜಾವ 2.30ರ ಸುಮಾರಿಗೆ ಅಂತ್ಯ ಸಂಸ್ಕಾರ ಮಾಡಿದ್ದರು. ಕೊನೆಯ ಬಾರಿ ಮಗಳ ಮುಖ ನೋಡಲು ಮನೆಯವರಿಗೆ ಅವಕಾಶ ನೀಡಿರಲಿಲ್ಲ. ಮನೆಯವರನ್ನು ಬಂಧಿಸಿ, ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಪೋಲಿಸರು ಅಂತ್ಯ ಸಂಸ್ಕಾರ ಮಾಡಿದ ಕಾರ್ಯಕ್ಕೆ ಖಂಡನೆ ವ್ಯಕ್ತವಾಗಿತ್ತು.
  Published by:Seema R
  First published: