HOME » NEWS » National-international » CBI RECOVERS WEAPON FROM MAHARASHTRA CREEK WHICH USED IN NARENDRA DABHOLKAR MURDER CASE SCT

7 ವರ್ಷಗಳ ನಂತರ ವಿಚಾರವಾದಿ ದಾಬೋಲ್ಕರ್ ಕೊಲೆಗೆ ಬಳಸಿದ್ದ ಪಿಸ್ತೂಲ್ ಪತ್ತೆ?; ಗೌರಿ, ಕಲಬುರ್ಗಿ ಪ್ರಕರಣಕ್ಕೂ ಸಿಗುತ್ತಾ ಮರುಜೀವ?

ನರೇಂದ್ರ ದಾಬೋಲ್ಕರ್ ಅವರನ್ನು ಕೊಲೆ ಮಾಡಿದ್ದ ಆರೋಪಿಗಳು ಆ ಪಿಸ್ತೂಲ್ ಅನ್ನು ನದಿಗೆ ಎಸೆದಿದ್ದರು. ನೌಕಾದಳದ ಮುಳುಗು ತಜ್ಞರ ನೆರವು ಪಡೆದು ಸಿಬಿಐ ಅಧಿಕಾರಿಗಳು ಆ ಪಿಸ್ತೂಲನ್ನು ವಶಕ್ಕೆ ಪಡೆದಿದ್ದಾರೆ.

Sushma Chakre | news18-kannada
Updated:March 5, 2020, 3:58 PM IST
7 ವರ್ಷಗಳ ನಂತರ ವಿಚಾರವಾದಿ ದಾಬೋಲ್ಕರ್ ಕೊಲೆಗೆ ಬಳಸಿದ್ದ ಪಿಸ್ತೂಲ್ ಪತ್ತೆ?; ಗೌರಿ, ಕಲಬುರ್ಗಿ ಪ್ರಕರಣಕ್ಕೂ ಸಿಗುತ್ತಾ ಮರುಜೀವ?
ಎಂಎಂ ಕಲಬುರ್ಗಿ, ಗೌರಿ ಲಂಕೇಶ್, ದಾಬೋಲ್ಕರ್
  • Share this:
ಪುಣೆ (ಮಾ. 5): ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್ ಅವರನ್ನು 2013ರ ಆಗಸ್ಟ್​ 20ರಂದು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಕಳೆದ 7 ವರ್ಷಗಳಿಂದ ಈ ಪ್ರಕರಣದ ಜಾಡನ್ನು ಹಿಡಿದು ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರಿಗೆ ಕೊನೆಗೂ ದಾಬೋಲ್ಕರ್ ಹತ್ಯೆಗೆ ಬಳಸಲಾಗಿದ್ದ ಪಿಸ್ತೂಲ್ ಪತ್ತೆಯಾಗಿದೆ ಎಂದು ವರದಿಯಾಗಿದೆ.

ವಿಚಾರವಾದಿ ನರೇಂದ್ರ ದಾಬೋಲ್ಕರ್, ಮಹಾರಾಷ್ಟ್ರದ ಮತ್ತೋರ್ವ ಚಿಂತಕ ಗೋವಿಂದ ಪನ್ಸಾರೆ, ಕರ್ನಾಟಕದ ವಿಚಾರವಾದಿಗಳಾದ ಗೌರಿ ಲಂಕೇಶ್ ಹಾಗೂ ಎಂ.ಎಂ. ಕಲಬುರ್ಗಿ ಹತ್ಯೆಗೂ ಸಂಬಂಧವಿದೆ ಎಂಬುದು ಈಗಾಗಲೇ ಪೊಲೀಸರ ವಿಚಾರಣೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇದೀಗ ದಾಬೋಲ್ಕರ್ ಹತ್ಯೆಗೆ ಸಂಬಂಧಿಸಿದಂತೆ ಸಿಕ್ಕಿರುವ ಸಾಕ್ಷ್ಯದಿಂದ ಎಂ.ಎಂ. ಕಲಬುರ್ಗಿ ಹಾಗೂ ಗೌರಿ ಲಂಕೇಶ್​ ಕೊಲೆಯ ಪ್ರಕರಣ ಮತ್ತಷ್ಟು ಪ್ರಗತಿ ಕಾಣುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಆರೋಪಿಗಳು ವಿವಿಧ ಜೈಲುಗಳಿಗೆ ಸ್ಥಳಾಂತರ

ನರೇಂದ್ರ ದಾಬೋಲ್ಕರ್ ಅವರನ್ನು 2013ರ ಆಗಸ್ಟ್ 20ರಂದು ಪುಣೆಯ ಓಂಕಾರೇಶ್ವರ ಸೇತುವೆ ಬಳಿ ಗುಂಡು ಹಾರಿಸಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಅಂದು ಬೆಳಗ್ಗೆ ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ವಾಕಿಂಗ್ ಹೋಗುತ್ತಿದ್ದ ದಾಬೋಲ್ಕರ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು. ಈ ಪ್ರಕರಣ ಇಡೀ ದೇಶವೇ ಬೆಚ್ಚಿ ಬೀಳಿಸಿತ್ತು. ದಾಬೋಲ್ಕರ್ ಹತ್ಯೆಯ ಹಿಂದಿನ ಪ್ರಭಾವಿಗಳ ಕೈವಾಡದ ಕುರಿತು ಸಮಗ್ರ ತನಿಖೆಯಾಗಬೇಕು ಕಠಿಣ ಶಿಕ್ಷೆಯಾಗಬೇಕೆಂದು ಪ್ರಗತಿಪರ ಚಿಂತಕರು, ಎಡಪಂಥೀಯ ನಾಯಕರು ಹಾಗೂ ವಿಚಾರವಾದಿಗಳು ದೇಶದಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಚಾರವಾದಿ ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.

ಇದನ್ನೂ ಓದಿ: ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಪ್ರಕರಣ; ಜಾರ್ಖಂಡ್​ನಲ್ಲಿ 18ನೇ ಆರೋಪಿಯನ್ನು ಬಂಧಿಸಿದ ಎಸ್​ಐಟಿ

ಪ್ರಕರ ಸಂಬಂಧ ಪರಿಣಾಮಕಾರಿಯಾಗಿ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು ಪ್ರಮುಖ ಆರೋಪಿ ಶರದ್​ ಕಲಾಸ್ಕರ್​ನನ್ನು ಬಂಧಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ಆತ ದಾಬೋಲ್ಕರ್ ಹತ್ಯೆಯನ್ನು ತಾನೇ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದ. "ನಾನೇ ದಾಬೋಲ್ಕರ್ ಅವರ ತಲೆಗೆ ಎರಡು ಸುತ್ತು ಗುಂಡು ಹಾರಿಸಿದ್ದೆ, ತಕ್ಷಣ ಕುಸಿದುಬಿದ್ದ ಅವರ ಪ್ರಾಣ ಅಲ್ಲೇ ಹೊರಟುಹೋಗಿತ್ತು" ಎಂದು ಹೇಳಿಕೆ ನೀಡಿದ್ದ.

ನರೇಂದ್ರ ದಾಬೋಲ್ಕರ್ ಅವರನ್ನು ಕೊಲೆ ಮಾಡಿದ್ದ ಆರೋಪಿಗಳು ಆ ಪಿಸ್ತೂಲ್ ಅನ್ನು ನದಿಗೆ ಎಸೆದಿದ್ದರು. ಆರೋಪಿ ಶರದ್ ಕಲಾಸ್ಕರ್ ವಿಚಾರಣೆ ವೇಳೆ ಈ ಬಗ್ಗೆ ಆತ ಮಾಹಿತಿ ನೀಡಿದ್ದ. ಮುಳುಗು ತಜ್ಞರ ನೆರವು ಪಡೆದು ಸಿಬಿಐ ಅಧಿಕಾರಿಗಳು ಆ ಪಿಸ್ತೂಲನ್ನು ಇದೀಗ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ, ದಾಬೋಲ್ಕರ್ ಹತ್ಯೆಗೆ ಬಳಸಲಾದ ಪಿಸ್ತೂಲ್ ಅದೇ ಹೌದಾ? ಅಲ್ಲವಾ? ಎಂಬ ಬಗ್ಗೆ ಇನ್ನಷ್ಟೇ ಖಚಿತತೆ ಸಿಗಬೇಕಾಗಿದೆ.ಈಗಾಗಲೇ ಆ ಪಿಸ್ತೂಲನ್ನು ಫಾರೆನ್ಸಿಕ್ ಲ್ಯಾಬೋರೇಟರಿಗೆ ಕಳುಹಿಸಲಾಗಿದೆ. "ದಾಬೋಲ್ಕರ್ ಹತ್ಯೆಗೆ ಕಾರಣವಾದ ಪಿಸ್ತೂಲಿನ ಗುಂಡಿಗೂ, ಈ ಪಿಸ್ತೂಲ್​ನಲ್ಲಿರುವ ಗುಂಡಿಗೂ ಹೋಲಿಕೆ ಇದೆಯೇ? ಎಂಬುದು ಶೀಘ್ರದಲ್ಲೇ ತಿಳಿಯಲಿದೆ. ಇದು ತಿಳಿಯುವವರೆಗೆ ಇದೇ ಪಿಸ್ತೂಲ್​ನಲ್ಲಿ ಹತ್ಯೆ ಮಾಡಲಾಗಿದೆ ಎಂದು ದೃಢಪಡಿಸಲು ಸಾಧ್ಯವಿಲ್ಲ" ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮೋದಿ, ಶಾ ವಿರುದ್ಧ ಮಾತಾಡುವವರಿಗೆ ಗೌರಿ ಲಂಕೇಶ್​ ಗತಿಯೇ ಬರಲಿದೆ; ಅಂದೋಲ ಶ್ರೀ ವಿವಾದಾತ್ಮಕ ಹೇಳಿಕೆ

ಈ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯಾಗಿದ್ದ ವಕೀಲ ಸಂಜೀವ್ ಪುನಲೇಕರ್ ಸದ್ಯಕ್ಕೆ ಜಾಮೀನಿನ ಮೇಲೆ ಹೊರಗಿದ್ದಾನೆ. ಆತ ದಾಬೋಲ್ಕರ್ ಹತ್ಯೆಗೆ ಬಳಸಲಾಗಿದ್ದ ಪಿಸ್ತೂಲನ್ನು ನಾಶಪಡಿಸುವಂತೆ ಅಥವಾ ಯಾರಿಗೂ ಕಾಣದಂತೆ ನಿಗಾ ವಹಿಸಲು ಶರದ್ ಕಲಾಸ್ಕರ್​ಗೆ ಎಚ್ಚರಿಕೆ ನೀಡಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿತ್ತು. ಆಗಾಗ ಕಲಾಸ್ಕರ್ ಮತ್ತು ಪುನಲೇಕರ್ ಭೇಟಿ ಮಾಡುತ್ತಿದ್ದರು ಎಂಬುದಕ್ಕೆ ಬಲವಾದ ಸಾಕ್ಷಿಯೂ ಸಿಕ್ಕಿತ್ತು. "ಬೆಂಗಳೂರಿನ ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಪ್ರಕರಣದಲ್ಲೂ ಯಾವುದೇ ಸಾಕ್ಷಿಗಳು ಸಿಗದಂತೆ ಎಚ್ಚರವಹಿಸಲು ಸೂಚಿಸಿದ್ದ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ" ಎಂದು 2018ರಲ್ಲಿ ಸಿಬಿಐ ಅಧಿಕಾರಿಗಳು ಪುಣೆ ಕೋರ್ಟ್​ಗೆ ತಿಳಿಸಿದ್ದರು.

ಇದನ್ನೂ ಓದಿ: ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯಗೆ ಗೌರಿ ಲಂಕೇಶ್ ರೀತಿ ಆಗುವ ಆಸೆ; ಪೊಲೀಸ್ ತನಿಖೆಯಲ್ಲಿ ಬಯಲು

2013ರಲ್ಲಿ ನರೇಂದ್ರ ದಾಬೋಲ್ಕರ್, 2015ರ ಫೆಬ್ರವರಿಯಲ್ಲಿ ಗೋವಿಂದ ಪನ್ಸಾರೆ, 2015ರ ಆಗಸ್ಟ್​ನಲ್ಲಿ ಎಂ.ಎಂ. ಕಲಬುರ್ಗಿ, 2017ರಲ್ಲಿ ಗೌರಿ ಲಂಕೇಶ್​ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಎಲ್ಲಾ ಹತ್ಯೆಗಳಿಗೂ ಒಂದಕ್ಕೊಂದು ಸಂಬಂಧವಿದೆ ಎಂಬ ಅನುಮಾನ ಆರಂಭದಿಂದಲೂ ಪೊಲೀಸರಿಗೆ ಮೂಡಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಆ ಅನುಮಾನಕ್ಕೆ ಪೂರಕವಾಗಿ ಹಲವು ಸಾಕ್ಷ್ಯಗಳು ಕೂಡ ಸಿಕ್ಕಿದ್ದವು. ಈ ಹಿನ್ನೆಲೆಯಲ್ಲಿ ಪ್ರಸ್ತುತ ದಾಬೋಲ್ಕರ್ ಹತ್ಯೆಗೆ ಬಳಸಲಾಗಿದೆ ಎನ್ನಲಾದ ಪಿಸ್ತೂಲ್ ಸಿಕ್ಕಿರುವುದರಿಂದ ಈ ಹತ್ಯೆಗೂ ಉಳಿದ ಮೂರು ಹತ್ಯೆಗೂ ನಡುವಿನ ಕೊಂಡಿ ಏನು? ಎಂಬ ಒಗಟನ್ನು ಬಿಡಿಸುವುದಕ್ಕೆ ಪೊಲೀಸರಿಗೆ ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ.
First published: March 5, 2020, 3:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories