ಪಾಟ್ನಾ(ಆ.24): ಬಿಹಾರದಲ್ಲಿಂದು ನಿತೀಶ್ ಕುಮಾರ್ (Nitish Kumar) ಸರ್ಕಾರ ವಿಶ್ವಾಸ ಮತ (Floor Test) ಸಾಬೀತುಪಡಿಸಬೇಕಿದೆ. ಈ ನಿಟ್ಟಿನಲ್ಲಿ ಎರಡು ದಿನಗಳ ವಿಶೇಷ ಅಧಿವೇಶನ ನಡೆಯಲಿದೆ. ಆದರೀಗ ಈ ಅಗ್ನಿಪರೀಕ್ಷೆಗೂ ಮುನ್ನ ಲಾಲು ಕುಟುಂಬದ ಆಪ್ತ ಮತ್ತು ಆರ್‌ಜೆಡಿಯ (RJD) ಎಂಎಲ್‌ಸಿ ಸುನಿಲ್ ಸಿಂಗ್ ಸೇರಿದಂತೆ ಆರ್‌ಜೆಡಿ ನಾಯಕರ ಹಲವು ಸ್ಥಳಗಳ ಮೇಲೆ ಸಿಬಿಐ ದಾಳಿ (CBI Raid) ನಡೆದಿದೆ. ಸುನಿಲ್ ಸಿಂಗ್ ಬಿಸ್ಕೊಮೌನ್ ಅಧ್ಯಕ್ಷರಾಗಿದ್ದಾರೆ. ಪಿಎಫ್ ಹಗರಣದ ಆರೋಪ ಅವರ ಮೇಲಿದೆ. ಆರ್‌ಜೆಡಿಯ ರಾಜ್ಯಸಭಾ ಸದಸ್ಯ ಅಶ್ಫಾಕ್ ಕರೀಂ ಅವರ ನಿವಾಸದ ಮೇಲೂ ತನಿಖಾ ಸಂಸ್ಥೆ ದಾಳಿ ನಡೆಸಿದೆ. ಉದ್ಯೋಗದ ಬದಲಿಗೆ ಜಮೀನು ಪಡೆದ ಪ್ರಕರಣದಲ್ಲಿ ಈ ದಾಳಿ ನಡೆದಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಬ್ಬ ಆರ್‌ಜೆಡಿ ಸದಸ್ಯ ಫಯಾಜ್ ಅಹ್ಮದ್ ನಿವಾಸದ ಮೇಲೂ ಸಿಬಿಐ ತಂಡ ದಾಳಿ ನಡೆಸಿದೆ. ಮಧುಬನಿಯಲ್ಲಿರುವ ಫಯಾಜ್ ನಿವಾಸದ ಮೇಲೆ ಕೇಂದ್ರ ತನಿಖಾ ಸಂಸ್ಥೆ ದಾಳಿ ನಡೆಸಿದೆ. ಇದಲ್ಲದೇ ರಾಷ್ಟ್ರೀಯ ಜನತಾ ದಳದ ಮಾಜಿ ಶಾಸಕ ಸುಬೋಧ್ ರೈ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಇದನ್ನೂ ಓದಿ: Bihar Cabinet Expansion: ಪ್ರಮುಖ ಖಾತೆ ವಹಿಸಿಕೊಂಡ ನಿತೀಶ್-ತೇಜಸ್ವಿ: ಯಾರಿಗೆ ಯಾವ ಇಲಾಖೆ? ಇಲ್ಲಿದೆ ಲಿಸ್ಟ್
ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಇಂದು ಬೆಳಿಗ್ಗೆ, ಸಿಬಿಐ ತಂಡವು ಆರ್‌ಜೆಡಿಯ ಎಂಎಲ್‌ಸಿ ಸುನಿಲ್ ಸಿಂಗ್ ಅವರ ನಿವಾಸಕ್ಕೆ ತಲುಪಿದೆ. ಬಿಸ್ಕೊಮೌನ್ ಅಧ್ಯಕ್ಷ ಮತ್ತು ಇತ್ತೀಚೆಗಷ್ಟೇ ಆರ್‌ಜೆಡಿಯ ಎಂಎಲ್‌ಸಿ ಆಗಿರುವ ಸುನಿಲ್ ಸಿಂಗ್ ಅವರ ಪಾಟ್ನಾದಲ್ಲಿರುವ ನಿವಾಸದ ಮೇಲೆ ಸಿಬಿಐ ತಂಡ ಪರಿಶೀಲನೆ ನಡೆಸುತ್ತಿದೆ. ಸುನಿಲ್ ಸಿಂಗ್ ಅವರನ್ನು ಲಾಲು ಕುಟುಂಬಕ್ಕೆ ತುಂಬಾ ಹತ್ತಿರವೆಂದು ಪರಿಗಣಿಸಲಾಗಿದ್ದು, ಅವರು ರಾಬ್ರಿ ದೇವಿ ಸಹೋದರ ಎಂದೂ ಹೇಳಲಾಗಿದೆ. ಪಾಟ್ನಾದಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಲು ಸಿಆರ್‌ಪಿಎಫ್ ತುಕಡಿಯನ್ನೂ ನಿಯೋಜಿಸಲಾಗಿದೆ. ಸಿಬಿಐನ ಈ ದಾಳಿಗೆ ಸಂಬಂಧಿಸಿದಂತೆ ಸುನಿಲ್ ಸಿಂಗ್, ಇಂದೇ ಏಕೆ ಈ ದಾಳಿ ನಡೆಸುತ್ತಿದ್ದಾರೆ? ನಮಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗುತ್ತಿದ್ದು, ಎಲ್ಲವೂ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಪಾಟ್ನಾದಲ್ಲಿಯೇ, ಮತ್ತೊಬ್ಬ ಆರ್‌ಜೆಡಿ ನಾಯಕ ಮತ್ತು ರಾಜ್ಯಸಭಾ ಸಂಸದ ಅಶ್ಫಾಕ್ ಕರೀಂ ಅವರ ನಿವಾಸದ ಮೇಲೆ ಕೇಂದ್ರ ಏಜೆನ್ಸಿ ದಾಳಿ ನಡೆಸಿದ್ದಾರೆನ್ನಲಾಗಿದೆ. ಈ ದಾಳಿಯ ವೇಳೆ ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದಾಳಿಯ ಬಗ್ಗೆ ಯಾವೊಬ್ಬ ಅಧಿಕಾರಿಯೂ ಏನೂ ಹೇಳುತ್ತಿಲ್ಲ. ಮೂಲಗಳ ಪ್ರಕಾರ, ಉದ್ಯೋಗದ ಬದಲು ಜಮೀನು ಪಡೆದಿರುವ ಕಾರಣ ಈ ದಾಳಿ ನಡೆದಿದೆ ಎನ್ನಲಾಗಿದೆ. ರಾಜ್ಯಸಭಾ ಸಂಸದ ಅಶ್ಫಾಕ್ ಕರೀಂ ಅವರು ಕತಿಹಾರ್ ವೈದ್ಯಕೀಯ ಕಾಲೇಜಿನ ಸರ್ವೇಯರ್ ಆಗಿದ್ದಾರೆ. ಆದರೆ, ದಾಳಿಗೆ ಕಾರಣಗಳನ್ನು ಸಿಬಿಐ ಅಧಿಕಾರಿಗಳು ಖಚಿತಪಡಿಸಿಲ್ಲ.
ಇದನ್ನೂ ಓದಿ: Bihar: ಬಹುಮತ ಸಾಬೀತುಪಡಿಸಲಿದೆ ಮಹಾಘಟಬಂಧನ್ ಸರ್ಕಾರ, ಶಾಸಕರಿಗೆ ವಿಪ್ ಜಾರಿ ಮಾಡಿದ ತೇಜಸ್ವಿ ಯಾದವ್!
ಆರ್‌ಜೆಡಿ ಶಾಸಕರಿಗೆ ವಿಪ್
ಆರ್‌ಜೆಡಿ ಶಾಸಕಾಂಗ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ. ವಿಧಾನ ಸಭೆಯ ವಿಶೇಷ ಅಧಿವೇಶನದ ವೇಳೆ ಆರಂಭದಿಂದ ಕೊನೆಯವರೆಗೂ ಎಲ್ಲಾ ಶಾಸಕರು ಸಭೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಶಾಸಕಾಂಗ ವ್ಯವಹಾರ ಮತ್ತು ಇತರ ರಾಜ್ಯ ವ್ಯವಹಾರಗಳ ಸಂದರ್ಭದಲ್ಲಿ ಮತ ವಿಭಜನೆಯ ಸಂದರ್ಭದಲ್ಲಿ ಬಿಹಾರ ವಿಧಾನಸಭೆಯ ಸ್ಪೀಕರ್ ಸ್ಥಾನದಿಂದ ವಜಾಗೊಳಿಸುವುದು, ಪ್ರಸ್ತುತ ಮಹಾಮೈತ್ರಿಕೂಟ ಸರ್ಕಾರದ ವಿಶ್ವಾಸಮತ ಯಾಚನೆಗೆ ಸಂಬಂಧಿಸಿದ ನಿರ್ಣಯಗಳನ್ನು ಮಾಡುವಂತೆ ತೇಜಸ್ವಿ ಯಾದವ್ ಶಾಸಕರಿಗೆ ಸೂಚನೆ ನೀಡಿದರು. ಸರ್ಕಾರದ ಪರವಾಗಿ ಮತ ಚಲಾಯಿಸುವಂತೆಯೂ ಈ ವೇಳೆ ಸೂಚಿಸಿದ್ದಾರೆ.
ಬಿಹಾರ ಸರ್ಕಾರದ 23 ಸಚಿವರ ಮೇಲೆ ಕ್ರಿಮಿನಲ್ ಕೇಸ್! ಆಸ್ತಿಯೂ ಕಡಿಮೆಯಿಲ್ಲ
ಬಿಹಾರದಲ್ಲಿ ಹೊಸದಾಗಿ ರಚನೆಯಾದ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ನೇತೃತ್ವದ ಸರ್ಕಾರದ ಸಂಪುಟದಲ್ಲಿ ಬರೋಬ್ಬರಿ 72 ಪ್ರತಿಶತ ಸಚಿವರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅಂದರೆ ನಿತೀಶ್ ಕುಮಾರ್ ಸಚಿವ ಸಂಪುಟದ ಒಟ್ಟು 23 ಸಚಿವರ ವಿರುದ್ಧ ಅಪರಾಧ ಪ್ರಕರಣಗಳಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಅಷ್ಟೇ ಅಲ್ಲದೇ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಸಚಿವರ ಸಂಖ್ಯೆಯೂ ಕಡಿಮೆಯಿಲ್ಲ. ಬರೋಬ್ಬರಿ 53 ಪ್ರತಿಶತದಷ್ಟು ಸಚಿವರು ಅಥವಾ 17 ಸಚಿವರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ