ಕೋಲ್ಕತ್ತಾ (ಮೇ 24); ನಾರದಾ ಲಂಚ ಪ್ರಕರಣದ ಆರೋಪಿಗಳಾದ ನಾಲ್ವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರನ್ನು ಗೃಹಬಂಧನಕ್ಕೆ ಅನುಮತಿಸಿ ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿದೆ. ಆದರೆ, ಈ ಆದೇಶವನ್ನು ಪ್ರಶ್ನಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ಸುಪ್ರೀಂ ಕೋರ್ಟ್‌ಗೆ ವಿಶೇಷ ರಜೆ ಅರ್ಜಿ ಸಲ್ಲಿಸಿ ಈ ಜಾಮೀನು ಅರ್ಜಿಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದೆ ಎಂದು ತಿಳಿದುಬಂದಿದೆ. ಕೋಲ್ಕತ್ತಾ ಹೈಕೋರ್ಟ್, ಇತ್ತೀಚೆಗೆ ಮೇ 21 ರಂದು ನೀಡಿದ ಆದೇಶದಲ್ಲಿ, ನಾರದಾ ಪ್ರಕರಣದ ಆರೋಪಿಗಳಾದ ಇಬ್ಬರು ಸಿಟ್ಟಿಂಗ್ ಮಂತ್ರಿಗಳು ಸೇರಿದಂತೆ ನಾಲ್ಕು ಟಿಎಂಸಿ ಮುಖಂಡರಿಗೆ ಜಾಮೀನು ನೀಡಲು ಮತ್ತು ಗೃಹಬಂಧನದಲ್ಲಿಡಲು ಅವಕಾಶ ನೀಡಿತ್ತು.
ಅಲ್ಲದೆ, ಅರ್ಜಿನ್ನು ವಿಚಾರಣೆ ನಡೆಸಿದ ಇಬ್ಬರು ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಪೀಠವು ವಿಭಜಿತ ತೀರ್ಪನ್ನು ಅಂಗೀಕರಿಸಿದ ನಂತರ, ನಾಲ್ವರು ಟಿಎಂಸಿ ನಾಯಕರ ಜಾಮೀನು ಅರ್ಜಿಯನ್ನು ಐದು ನ್ಯಾಯಾಧೀಶರ ಪೀಠದಿಂದ ವಿಚಾರಣೆಗೆ ಒಳಪಡಿಸಬೇಕೆಂದು ಸೂಚಿಸಿತ್ತು.
ಈ ಪ್ರಕರಣದ ಆರೋಪಿಗಳಾದ ಪಶ್ಚಿಮ ಬಂಗಾಳದ ನಾಲ್ವರು ರಾಜಕಾರಣಿಗಳು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಇಬ್ಬರು ಸಿಟ್ಟಿಂಗ್ ಮಂತ್ರಿಗಳಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ ಮತ್ತು ಟಿಎಂಸಿ ಶಾಸಕರಾದ ಮದನ್ ಮಿತ್ರ ಮತ್ತು ಮಾಜಿ ಶಾಸಕ ಸೋವನ್ ಚಟರ್ಜಿ ಇದೀಗ ನಾರದಾ ಲಂಚ ಪ್ರಕರಣಕ್ಕೆ ಸಿಲುಕಿ ಸಿಬಿಐ ನಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಅಲ್ಲದೆ, ಸಿಬಿಐ ಕಳೆದ ವಾರ ಮಮತಾ ಬ್ಯಾನರ್ಜಿಯವರ ಹೆಸರನ್ನೂ ಉಲ್ಲೇಖಿಸಿ ಈ ಪ್ರಕರಣವನ್ನು ಕೇಂದ್ರಕ್ಕೆ ವರ್ಗಾಯಿಸಬೇಕು ಎಂದು ನ್ಯಾಯಾಲಯದಲ್ಲಿ ಮನವಿ ಮಾಡಿತ್ತು. 2016 ರ ನಾರದ ಲಂಚ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅವರ ಕಾನೂನು ಸಚಿವ ಮೊಲೊಯ್ ಘಟಕ್ ಮತ್ತು ಪಕ್ಷದ ಮುಖಂಡ ಕಲ್ಯಾಣ್ ಬ್ಯಾನರ್ಜಿ ಅವರ ಹೆಸರನ್ನು ಕೇಂದ್ರ ತನಿಖಾ ದಳ (ಸಿಬಿಐ) ತನ್ನ ಅರ್ಜಿಯಲ್ಲಿ ಸೇರಿಸಿತ್ತು ಎಂಬುದು ಉಲ್ಲೇಖಾರ್ಹ.
ಏನಿದು ನಾರದಾ ಲಂಚ ಪ್ರಕರಣ:
ಪಶ್ಚಿಮ ಬಂಗಾಳದ ಸುದ್ದಿ ಮಾಧ್ಯಮವಾದ ನಾರದಾ ನ್ಯೂಸ್ ಕುಟುಕು ಕಾರ್ಯಾಚರಣೆ ನಡೆಸಿದ್ದು, ಆ ಕಾರ್ಯಾಚರಣೆಯಲ್ಲಿ ಆಗ ಸುಮಾರು 12 ಮಂದಿ ಟಿಎಂಸಿ ಮಂತ್ರಿಗಳು, ಮುಖಂಡರು ಮತ್ತು ಐಪಿಎಸ್ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದಾರೆ ಎಂದು ತೋರಿಸಲಾಗಿದೆ. 2016 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಆರೋಪಿಗಳನ್ನು ಬಹಿರಂಗಪಡಿಸಲು ಈ ಪ್ರಕರಣದಲ್ಲಿ ಸ್ಟಿಂಟ್ ಆಪರೇಷನ್ ಟೇಪ್‌ಗಳನ್ನು ಬಿಡುಗಡೆ ಮಾಡಲಾಗಿದೆ.
ನಾರದಾ ಟೇಪ್ಸ್ ಸ್ಟಿಂಗ್ ಆಪರೇಷನ್ ಪ್ರಕರಣದ ಬಗ್ಗೆ ಸಮಗ್ರ, ನಿಷ್ಪಕ್ಷಪಾತ ಮತ್ತು ಸ್ವತಂತ್ರ ತನಿಖೆಯನ್ನು ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿದ ಪರಿಣಾಮ ಕೋಲ್ಕತ್ತಾ ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಸಿಬಿಐ ಗೆ ವರ್ಗಾಯಿಸಿ ಆದೇಶಿಸಿತ್ತು. ಪರಿಣಾಮ ಕಳೆದ ವಾರ, ನಾಲ್ಕು ಟಿಎಂಸಿ ಸಚಿವರಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಶಾಸಕ ಮದನ್ ಮಿತ್ರ ಮತ್ತು ಮಾಜಿ ಮೇಯರ್ ಸೋವನ್ ಚಟರ್ಜಿಯನ್ನು ನಾರದ ಹಗರಣದಲ್ಲಿ ಸಿಬಿಐ ಬಂಧಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ