ಸುಶಾಂತ್ ಸಿಂಗ್ರದ್ದು ಕೊಲೆಯಲ್ಲ? ಶೀಘ್ರದಲ್ಲೇ ಸಿಬಿಐ ತನಿಖಾ ವರದಿ ಸಲ್ಲಿಕೆ ಸಾಧ್ಯತೆ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಅವರ ಸಾವು ಕೊಲೆಯಿಂದ ಆಗಿರುವುದಕ್ಕೆ ಸಿಬಿಐಗೆ ಯಾವುದೇ ಪ್ರಬಲ ಸಾಕ್ಷ್ಯಗಳು ಸಿಕ್ಕಿಲ್ಲವೆನ್ನಲಾಗಿದೆ. ತನಿಖೆ ಬಹುತೇಕ ಪೂರ್ಣಗೊಳಿಸಿರುವ ಸಿಬಿಐ ಶೀಘ್ರದಲ್ಲೇ ವರದಿ ಸಲ್ಲಿಸುವ ಸಾಧ್ಯತೆ ಇದೆ.
ನವದೆಹಲಿ(ಅ. 15): ನಾಲ್ಕು ತಿಂಗಳ ಹಿಂದೆ ಮುಂಬೈನಲ್ಲಿ ಸಾವನ್ನಪ್ಪಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆ ಎಂಬ ಅಭಿಪ್ರಾಯಕ್ಕೆ ಸಿಬಿಐ ಬಂದಿದೆ ಎಂದು ಮೂಲಗಳು ಹೇಳುತ್ತಿವೆ. ಸುಶಾಂತ್ ಸಿಂಗ್ ಅವರನ್ನ ಕೊಲೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಅವರ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಇದೀಗ ತನಿಖೆ ಬಹುತೇಕ ಮುಗಿದಿದೆ ಎನ್ನಲಾಗಿದೆ. ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಸುಶಾಂತ್ ಸಿಂಗ್ ಅವರ ಕೊಲೆಯಾಗಿರುವುದಕ್ಕೆ ಸಿಬಿಐಗೆ ಯಾವುದೇ ದೃಢ ಸಾಕ್ಷ್ಯಾಧಾರಗಳು ಸಿಕ್ಕಿಲ್ಲವೆನ್ನಲಾಗಿದೆ. ಸದ್ಯದಲ್ಲೇ ಸಿಬಿಐ ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟರೆ, ಅವರ ಆತ್ಮಹತ್ಯೆಗೆ ಯಾರಾದರೂ ಪ್ರಚೋದನೆ ನೀಡಿದ್ದಾರಾ ಎಂಬ ಅಂಶದ ಆಧಾರದ ಮೇಲೆ ನ್ಯಾಯಾಲಯ ಸಿಬಿಐಗೆ ಮುಂದಿನ ನಿರ್ದೇಶನ ನೀಡುವ ಸಾಧ್ಯತೆ ಇದೆ ಎಂದು ಝೀ ನ್ಯೂಸ್ನಲ್ಲಿ ಪ್ರಕಟವಾದ ಒಂದು ವರದಿ ಹೇಳುತ್ತಿದೆ. ಸುಶಾಂತ್ ಸಿಂಗ್ ರಾಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಆರೋಪ ಇದೆ. ಸಿಬಿಐ ವರದಿಯಲ್ಲಿ ಈ ಬಗ್ಗೆ ಏನಾದರೂ ಸುಳಿವು ಇದೆಯಾ ಎಂಬುದು ಮುಂದಿನ ದಿನಗಳಲ್ಲಿ ಸಿಗಲಿದೆ.
ದೆಹಲಿಯ ಏಮ್ಸ್ ಆಸ್ಪತ್ರೆಯ ವಿಧಿ ವಿಜ್ಞಾನ ತಜ್ಞರು ನಡೆಸಿದ ಪರೀಕ್ಷೆಯ ವರದಿ ಪ್ರಕಾರ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಅವರು ಆತ್ಮಹತ್ಯೆಯಿಂದಲೇ ಸಾವನ್ನಪ್ಪಿದ್ದರೆಂದು ಹೇಳಲಾಗಿದೆ. ಈ ಏಮ್ಸ್ ವರದಿ ಸಿಬಿಐ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸುಶಾಂತ್ ತಮ್ಮ ಬಾಂದ್ರಾದ ಅಪಾರ್ಟ್ಮೆಂಟ್ನಲ್ಲಿ ಕೊಲೆಯಾಗಿದ್ದಕ್ಕೆ ಸಿಬಿಐಗೆ ಯಾವುದೇ ಗಟ್ಟಿ ಪುರಾವೆ ಸಿಕ್ಕಿಲ್ಲ ಎಂದೂ ಮೂಲಗಳು ಹೇಳುತ್ತಿವೆ.
ಇದೇ ಜೂನ್ 14ರಂದು ಸುಶಾಂತ್ ಅವರು ತಮ್ಮ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದು ಕಂಡು ಬಂದಿತ್ತು. ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ತೀರ್ಮಾನಿಸಿದರು. ನಂತರ ಹಲವು ಪ್ರತಿಭಟನೆಗಳ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಇದೇ ವೇಳೆ, ಜಾರಿ ನಿರ್ದೇಶನಾಲಯ ಮತ್ತು ಮಾದಕವಸ್ತು ನಿಯಂತ್ರಣ ದಳ (ಎನ್ಸಿಬಿ) ಸಂಸ್ಥೆಗಳೂ ಕೂಡ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದ್ದ ಹಣಕಾಸು ಅವ್ಯವಾಹ ಮತ್ತು ಡ್ರಗ್ಸ್ ಮಾಫಿಯಾ ವಿಚಾರವನ್ನು ಕೆದಕಿ ತನಿಖೆ ನಡೆಸುತ್ತಿವೆ.
ಡ್ರಗ್ಸ್ ಪ್ರಕರಣದಲ್ಲಿ ಸೆ. 8ರಂದು ಬಂಧಿತರಾಗಿದ್ದ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಅವರು ಕಳೆದ ವಾರ ಬಿಡುಗಡೆಯಾಗಿದ್ದಾರೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ