Alok Verma vs Narendra Modi: ಸಿಬಿಐ ನಿರ್ದೇಶಕ ವರ್ಮಾರನ್ನೇ ವಜಾ ಮಾಡಿದ ಮೋದಿ ನೇತೃತ್ವದ ಸಮಿತಿ

ಸುಪ್ರೀಂ ಕೋರ್ಟ್ ನೆರವಿನಿಂದ ಸಿಬಿಐ ನಿರ್ದೇಶಕನಾಗಿ ಕರ್ತವ್ಯಕ್ಕೆ ಮರಳಿದ್ದ ಅಲೋಕ್ ವರ್ಮಾ ಅವರು ತಮ್ಮ ಸೀಮಿತಾಧಿಕಾರದಲ್ಲೇ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದರು.

Vijayasarthy SN | news18
Updated:January 10, 2019, 8:06 PM IST
Alok Verma vs Narendra Modi: ಸಿಬಿಐ ನಿರ್ದೇಶಕ ವರ್ಮಾರನ್ನೇ ವಜಾ ಮಾಡಿದ ಮೋದಿ ನೇತೃತ್ವದ ಸಮಿತಿ
ಅಲೋಕ್​​ ವರ್ಮಾ
Vijayasarthy SN | news18
Updated: January 10, 2019, 8:06 PM IST
ನವದೆಹಲಿ(ಜ. 10): ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ಅವರನ್ನು ಉಚ್ಛಾಟಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಸಮಿತಿಯು ಅಲೋಕ್ ವರ್ಮಾ ಅವರನ್ನ ಸಿಬಿಐ ನಿರ್ದೇಶಕ ಸ್ಥಾನದಿಂದ ಕೆಳಗಿಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರೊಂದಿಗೆ ಕೇಂದ್ರ ವರ್ಸಸ್ ಸಿಬಿಐ ನಡುವಿನ ಗುದ್ದಾಟಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಅಲೋಕ್ ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಸಂಬಂಧ ತನಿಖೆ ನಡೆಸಿದ್ದ ಕೇಂದ್ರ ವಿಚಕ್ಷಣ ದಳ ಸಲ್ಲಿಸಿದ್ದ ವರದಿಯ ಆಧಾರದ ಮೇಲೆ ಉನ್ನತಾಧಿಕಾರ ಸಮಿತಿಯು ಅಲೋಕ್ ವರ್ಮಾ ಅವರನ್ನು ಪದಚ್ಯುತಗೊಳಿಸಲು ನಿರ್ಧರಿಸಿತೆನ್ನಲಾಗಿದೆ. ಅಲೋಕ್ ವರ್ಮಾ ಅವರನ್ನು ಸದ್ಯಕ್ಕೆ ದೆಹಲಿ ಅಗ್ನಿಶಾಮಕ ದಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಕೇಂದ್ರದಿಂದ ಕಡ್ಡಾಯ ರಜೆ ಪಡೆದು ಕರ್ತವ್ಯದಿಂದ ಹೊರಗುಳಿದಿದ್ದ ಅಲೋಕ್ ವರ್ಮಾ ಅವರನ್ನು ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ವಾಪಸ್ ಕರೆಸಿತ್ತು. ಉನ್ನತಾಧಿಕಾರ ಸಮಿತಿಯ ಅಂತಿಮ ನಿರ್ಧಾರ ಬರುವವರೆಗೂ ಯಾವುದೇ ವಿಶೇಷ ಅಧಿಕಾರ ಇಲ್ಲದೆಯೇ ಪದವಿಯಲ್ಲಿ ಮುಂದುವರಿಯುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಈ ಸೀಮಿತ ಅಧಿಕಾರದಲ್ಲೇ ಅಲೋಕ್ ವರ್ಮಾ ಅವರು ನಿನ್ನೆ 10 ಅಧಿಕಾರಿಗಳ ವರ್ಗಾವಣೆಗೆ ತಡೆ ತಂದು ವಾಪಸ್ ಕರೆಸಿಕೊಂಡಿದ್ದರು. ಇವತ್ತು ತಮ್ಮ ಐವರು ಆಪ್ತ ಅಧಿಕಾರಿಗಳನ್ನು ಆಯಕಟ್ಟಿನ ಜಾಗಕ್ಕೆ ವರ್ಗ ಮಾಡಿದ್ದರು. ಇದರೊಂದಿಗೆ ಅವರು ಕೇಂದ್ರದ ಬಗ್ಗೆ ಮುಲಾಜಿಲ್ಲದೇ ಕರ್ತವ್ಯ ನಿಭಾಯಿಸುವ ಸೂಚನೆ ನೀಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಉನ್ನತಾಧಿಕಾರಿ ಸಮಿತಿಯು ಅಲೋಕ್ ವರ್ಮಾ ಅವರನ್ನೇ ವಜಾಗೊಳಿಸುವ ನಿರ್ಧಾರಕ್ಕೆ ಬಂದಿರುವುದು ಗಮನಾರ್ಹ.

ಇದನ್ನೂ ಓದಿ: ಹಂಗಾಮಿ ನಿರ್ದೇಶಕರ ವರ್ಗಾವಣೆ ಆದೇಶ ರದ್ದುಪಡಿಸಿದ ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ

ಮೋದಿ ನೇತೃತ್ವದ ಈ ಉನ್ನತಾಧಿಕಾರ ಸಮಿತಿಯಲ್ಲಿ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಮತ್ತು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿದ್ದಾರೆ. ಆದರೆ, ವರ್ಮಾ ಅವರನ್ನು ನಿರ್ದೇಶಕ ಸ್ಥಾನದಿಂದ ಕೆಳಗಿಳಿಸುವ ನಿರ್ಧಾರಕ್ಕೆ ಖರ್ಗೆ ಅವರು ವಿರೋಧ ವ್ಯಕ್ತಪಡಿಸಿದ್ದರೆನ್ನಲಾಗಿದೆ.

ಕೇಂದ್ರ ಸರಕಾರವನ್ನು ಎದುರುಹಾಕಿಕೊಂಡು ಸುಪ್ರೀಂ ಕೋರ್ಟ್ ನೆರವಿನಿಂದ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಕಂಬ್ಯಾಕ್ ಮಾಡಿದ್ದ ಅಲೋಕ್ ವರ್ಮಾ ಅವರು ಕ್ಷಣವೂ ವ್ಯರ್ಥ ಮಾಡದೆ ಕಾರ್ಯಾಚರಣೆಗಿಳಿದಿದ್ದರು. ತಮ್ಮ 10 ಆಪ್ತರನ್ನು ವರ್ಗಾವಣೆ ಮಾಡಲಾಗಿದ್ದ ಕ್ರಮವನ್ನು ನಿನ್ನೆ ಅವರು ರದ್ದುಗೊಳಿಸಿ ಅವರೆಲ್ಲರನ್ನೂ ಮೂಲ ಸ್ಥಾನಕ್ಕೆ ಕರೆತಂದಿದ್ದರು. ಅಲೋಕ್ ವರ್ಮಾ ಇವತ್ತು ಐವರು ಸಿಬಿಐ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರು. ಸಿಬಿಐ ಡಿಐಜಿಗಳಾದ ಎಂಕೆ ಸಿನ್ಹಾ ಮತ್ತು ತರುಣ್ ಗಾಭ, ಜಂಟಿ ನಿರ್ದೇಶಕರಾದ ವಿ. ಮುರುಗೇಸನ್ ಮತ್ತು ಅಜಯ್ ಭಟ್ನಾಗರ್, ಹೆಚ್ಚುವರಿ ನಿರ್ದೇಶಕ ಎಕೆ ಶರ್ಮಾ ಅವರು ಇವತ್ತು ವರ್ಗಾವಣೆಯಾದ ಅಧಿಕಾರಿಗಳಾಗಿದ್ದಾರೆ. ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ವಿರುದ್ಧದ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದ ಸಿಬಿಐ ತಂಡಕ್ಕೆ ತರುಣ್ ಗಭಾ ಮತ್ತು ವಿ.ಮುರುಗೇಸನ್ ಅವರನ್ನು ಹಾಕಿದ್ದರು. ಈ ಪ್ರಕರಣದಲ್ಲಿ ತನಿಖೆಯ ಮೇಲುಸ್ತುವಾರಿಯ ಜವಾಬ್ದಾರಿಯನ್ನು ಮುರುಗೇಸನ್ ಅವರಿಗೆ ವಹಿಸಿಕೊಟ್ಟಿದ್ದರು. ರಾಕೇಶ್ ಅಸ್ಥಾನ ವಿರುದ್ಧದ ಪ್ರಕರಣದ ತನಿಖೆಯಲ್ಲಿ ಎಲ್ಲಿಯೂ ಲೋಪ ಉಂಟಾಬಾರದೆಂದು ಅಲೋಕ್ ವರ್ಮಾ ಈ ನಿರ್ಧಾರ ಕೈಗೊಂಡಿದ್ದರೆನ್ನಲಾಗಿದೆ.

ಇದನ್ನೂ ಓದಿ: ಠಾಕ್ರೆ ಮಗನ ಮದುವೆಗೆ ಪ್ರಧಾನಿ ಮೋದಿಗಿಲ್ಲ ಆಹ್ವಾನ; ಏನಿದರ ಹಿಂದಿನ ರಾಜಕೀಯ ಲೆಕ್ಕಾಚಾರ?

ಸಿಬಿಐಯೊಳಗೆ ಅಲೋಕ್ ವರ್ಮಾ ಮತ್ತು ರಾಕೇಶ್ ಅಸ್ಥಾನ ನಡುವಿನ ವೈಮನಸ್ಸು ಬೀದಿಗೆ ಬಂದ ಹಿನ್ನೆಲೆಯಲ್ಲಿ ಅವರಿಬ್ಬರನ್ನೂ ಕೇಂದ್ರ ಸರಕಾರ ಕಡ್ಡಾಯ ರಜೆ ಕೊಟ್ಟು ಕರ್ತವ್ಯದಿಂದ ದೂರ ಉಳಿಸಿತು. ಇಬ್ಬರ ಮೇಲೂ ಭ್ರಷ್ಟಾಚಾರದ ಆರೋಪಗಳಿದ್ದು, ತನಿಖೆ ನಡೆಯುತ್ತಿದೆ. ಆದರೆ, ಅಲೋಕ್ ಕುಮಾರ್ ತಮಗೆ ಕಡ್ಡಾಯ ರಜೆ ಕೊಟ್ಟ ಕ್ರಮವನ್ನು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಕೆಲ ಷರತ್ತುಗಳೊಂದಿಗೆ ಸುಪ್ರೀಂ ಕೋರ್ಟ್ ಅಲೋಕ್ ಕುಮಾರ್ ಅವರನ್ನು ಮತ್ತೆ ತಂದು ಕೂರಿಸಿದೆ. ಆದರೆ, ಅಲೋಕ್ ವರ್ಮಾ ಅವರಿಗೆ ಸದ್ಯಕ್ಕೆ ಯಾವುದೇ ವಿಶೇಷಾಧಿಕಾರವಿಲ್ಲ. ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಸಮಿತಿಯು ಅಲೋಕ್ ವರ್ಮಾ ಅವರಿಗೆ ಯಾವ್ಯಾವ ಅಧಿಕಾರ ನೀಡಬೇಕೆಂದು ನಿರ್ಧರಿಸಲಿದೆ. ಅಲ್ಲಿಯವರೆಗೆ ಅಲೋಕ್ ವರ್ಮಾ ಅವರು ಸಿಬಿಐ ನಿರ್ದೇಶಕರಾಗಿ ಸ್ವತಂತ್ರವಾಗಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವಂತಿಲ್ಲವೆಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆದರೆ, ತಾವು ಕೈಗೊಂಡ ಅಧಿಕಾರಿಗಳ ವರ್ಗಾವಣೆ ಕ್ರಮದಿಂದ ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆಯಾಗುವುದಿಲ್ಲವೆಂಬುದು ಅಲೋಕ್ ವರ್ಮಾ ವಾದವಾಗಿತ್ತು.
Loading...

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ