ಏಟಿಗೆ ತಿರುಗೇಟು; ಸಿಬಿಐಗೆ ನೋಟಿಸ್​ ನೀಡಿದ ಪಶ್ಚಿಮ ಬಂಗಾಳ ಪೊಲೀಸರು

ಸುಪ್ರೀಂಕೋರ್ಟ್​ ಸೂಚನೆಯಂತೆ ನಾವು ರೋಸ್​ವ್ಯಾಲಿ ಮತ್ತು ಶಾರದಾ ಚಿಟ್​ಫಂಡ್​ ಹಗರಣದ ತನಿಖೆ ನಡೆಸಲು ಸಾಧ್ಯವಾಗದಿದ್ದರೆ ಬೇರೆ ಪ್ರಕರಣಗಳಲ್ಲಿ ನಾವು ನಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುತ್ತೇವೆ ಎಂಬ ನಂಬಿಕೆಯನ್ನೇ ಕಳೆದುಕೊಳ್ಳುತ್ತೇವೆ ಎಂದು ಸಿಬಿಐ ಅಧಿಕಾರಿ ಪಂಕಜ್​ ಕುಮಾರ್​ ಶ್ರೀವಾಸ್ತವ್​ ಹೇಳಿದ್ದಾರೆ.

Sushma Chakre | news18
Updated:February 4, 2019, 9:34 PM IST
ಏಟಿಗೆ ತಿರುಗೇಟು; ಸಿಬಿಐಗೆ ನೋಟಿಸ್​ ನೀಡಿದ ಪಶ್ಚಿಮ ಬಂಗಾಳ ಪೊಲೀಸರು
ಪಂಕಜ್​ ಕುಮಾರ್​ ಶ್ರೀವಾಸ್ತವ್
  • News18
  • Last Updated: February 4, 2019, 9:34 PM IST
  • Share this:
ಕೊಲ್ಕತಾ (ಫೆ. 4): ಪಶ್ಚಿಮ ಬಂಗಾಳದ ನಗರ ಪೊಲೀಸ್​ ಕಮಿಷನರ್ ರಾಜೀವ್​ ಕುಮಾರ್​ ಮನೆಗೆ ಸಿಬಿಐ ಅಧಿಕಾರಿಗಳು ಮುತ್ತಿಗೆ ಹಾಕಿದ ನಂತರ ಕೊಲ್ಕತಾದಲ್ಲಿ ನಡೆಯುತ್ತಿರುವ ಹೈಡ್ರಾಮಕ್ಕೆ ಹೊಸ ತಿರುವು ಸಿಕ್ಕಿದೆ. ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ಸಿಬಿಐ ವಿರುದ್ಧ ಕೊಲ್ಕತಾ ಹೈಕೋರ್ಟ್​ನಲ್ಲಿ ದೂರು ದಾಖಲಿಸುವ ಮೂಲಕ ಪಶ್ಚಿಮ ಬಂಗಾಳ ಪೊಲೀಸರು ಎದುರೇಟು ನೀಡಿದ್ದಾರೆ.

ಸಿಬಿಐಗೆ ತಿರುಗು ಬಾಣ​ ಹೂಡಿರುವ ಪಶ್ಚಿಮ ಬಂಗಾಳದ ಪೊಲೀಸರು ಕೊಲ್ಕತಾದ ಸಿಬಿಐ ಮುಖ್ಯಸ್ಥ ಪಂಕಜ್ ಕುಮಾರ್​ ಶ್ರೀವಾಸ್ತವ್​ ಅವರಿಗೆ ನೋಟಿಸ್​ ಜಾರಿಗೊಳಿಸಿದ್ದಾರೆ. 2018ರಲ್ಲಿ ಇಬ್ಬರು ಉದ್ಯಮಿಗಳನ್ನು ಅನಧಿಕೃತವಾಗಿ ವಶದಲ್ಲಿಟ್ಟುಕೊಂಡಿದ್ದ ಮತ್ತು ಕಟ್ಟಿಹಾಕಿದ್ದ ಆರೋಪದಲ್ಲಿ ಶ್ರೀವಾಸ್ತವ್​ ಅವರಿಗೆ ನೋಟಿಸ್​ ಜಾರಿ ಮಾಡಲಾಗಿದೆ.

ಯಾವುದೇ ಮುನ್ಸೂಚನೆ ನೀಡದೆ ರಾಜ್ಯದೊಳಗೆ ಪ್ರವೇಶಿಸಿ ಪೊಲೀಸ್​ ಕಮಿಷನರ್​ ಅವರನ್ನು ವಿಚಾರಣೆ ನಡೆಸಲು ಮುಂದಾಗಿದ್ದ ಸಿಬಿಐ ಅಧಿಕಾರಿಗಳನ್ನು ಪಶ್ಚಿಮ ಬಂಗಾಳದ ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ, ಸಿಎಂ ಮಮತಾ ಬ್ಯಾನರ್ಜಿ ತಮ್ಮ ಬೆಂಬಲಿಗರೊಂದಿಗೆ ಕೇಂದ್ರ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿಗೆ ಕುಳಿತಿದ್ದರು.

ಕೊಲ್ಕತಾದಲ್ಲಿ ಪೊಲೀಸ್ ಮತ್ತು ಸಿಬಿಐ ಹಣಾಹಣಿ; ಕಮಿಷನರ್ ಮನೆಗೆ ಮುತ್ತಿಗೆ ಹಾಕಿದ ಸಿಬಿಐ ಅಧಿಕಾರಿಗಳ ಬಂಧನ

ಈ ಹೈಡ್ರಾಮ ಇಂದು ಮತ್ತೊಂದು ತಿರುವು ಪಡೆದಿದ್ದು, ಇಂದು ಬೆಳಗ್ಗೆ ಪಶ್ಚಿಮ ಬಂಗಾಳದ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ಸಿಬಿಐ ಪೊಲೀಸ್​ ಆಯುಕ್ತ ರಾಜೀವ್​ ಕುಮಾರ್​ ಶಾರದಾ ಚಿಟ್​ಫಂಡ್​ ಮತ್ತು ರೋಸ್​ವ್ಯಾಲಿ ಹಗರಣದ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆರೋಪ ಮಾಡಿತ್ತು. ಅದರ ವಿಚಾರಣೆಯನ್ನು ಸುಪ್ರೀಂಕೋರ್ಟ್​ ನಾಳೆಗೆ ಮುಂದೂಡಿತ್ತು. ಇಂದು ಪಶ್ಚಿಮ ಬಂಗಾಳದ ಪೊಲೀಸರು ಸಿಬಿಐ ಅಧಿಕಾರಿ ಪಂಕಜ್ ಕುಮಾರ್​ ಶ್ರೀವಾಸ್ತವ್ ಅವರಿಗೆ ನೋಟಿಸ್​ ಜಾರಿ ಮಾಡುವ ಮೂಲಕ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವಿನ ತಿಕ್ಕಾಟಕ್ಕೆ ಕಾನೂನಿನ ಮುದ್ರೆಯೊತ್ತಲಾಗಿದೆ.

ಕೋಲ್ಕತಾ ಪೊಲೀಸ್ ವಿರುದ್ಧ ಸುಪ್ರೀಂ ಕೋರ್ಟ್​ಗೆ ಸಿಬಿಐ ಮೊರೆ; ನಾಳೆಗೆ ವಿಚಾರಣೆ ಮುಂದೂಡಿದ ನ್ಯಾಯಪೀಠ

ಶ್ರೀವಾಸ್ತವ್​ ಅವರಿಗೆ ನೀಡಿರುವ ನೋಟಿಸ್​ನಲ್ಲಿ ಉದ್ಯಮಿಗಳನ್ನು ಅನಧಿಕೃತವಾಗಿ ವಶದಲ್ಲಿರಿಸಿಕೊಂಡಿದ್ದ ಬಗ್ಗೆ ಮಾಹಿತಿಯನ್ನು ನೀಡಬೇಕು. ಹಾಗೇ, 2018ರ ಆಗಸ್ಟ್​ 17 ಮತ್ತು 18ರ ನಿಜಾಮ್​ ಪ್ಯಾಲೇಸ್​ನ ಸಿಬಿಐ (ಎಸಿಬಿ) ಸಿಸಿಟಿವಿ ದೃಶ್ಯಾವಳಿಯನ್ನು ನೀಡಬೇಕು. ಈ ಬಗ್ಗೆ ಕಳೆದ ವರ್ಷವೇ ವಿವರ ನೀಡುವಂತೆ ಕೇಳಿದ್ದರೂ ನಿಮ್ಮಿಂದ ಇದುವರೆಗೂ ಯಾವ ಪ್ರತಿಕ್ರಿಯೆಯೂ ಬಂದಿಲ್ಲ ಎಂದು ನಮೂದಿಸಲಾಗಿದೆ.ಇನ್ನು, ಈ ನೋಟಿಸ್​ಗೆ ಉತ್ತರಿಸುವ ಮುನ್ನ ಕಾನೂನು ತಜ್ಞರ ಸಲಹೆ ಪಡೆಯುವುದಾಗಿ ತಿಳಿಸಿರುವ ಶ್ರೀವಾಸ್ತವ್​ ದೆಹಲಿಯ ಸಿಬಿಐ ಮುಖ್ಯಸ್ಥರನ್ನು ಭೇಟಿಯಾಗಲು ತೆರಳಿದ್ದಾರೆ.

ಕೊಲ್ಕತಾ ಹೈಡ್ರಾಮ; ಕೇಂದ್ರ ಸರ್ಕಾರದ ವಿರುದ್ಧ ಧರಣಿ ಕುಳಿತ ಸಿಎಂ ಮಮತಾ ಬ್ಯಾನರ್ಜಿ

ನಿನ್ನೆ ಘಟನೆ ನಡೆದ ನಂತರ ಪ್ರತಿಕ್ರಿಯೆ ನೀಡಿದ್ದ ಶ್ರೀವಾಸ್ತವ್​, ಯಾವ ಸಮಯದಲ್ಲಿ ಬೇಕಾದರೂ ಇಲ್ಲಿನ ಸ್ಥಳೀಯ ಪೊಲೀಸರು ನನ್ನನ್ನು ಬಂಧಿಸಬಹುದು. ಮನೆಯ ಸುತ್ತ 40ಕ್ಕೂ ಹೆಚ್ಚು ಪೊಲೀಸರು ಸೇರಿದ್ದಾರೆ. ನನ್ನದೇ ಮನೆಯೊಳಗೆ ನಾನು ಖೈದಿಯಂತೆ ಬಂಧಿಸಲ್ಪಟ್ಟಿದ್ದೇನೆ. ನನ್ನ ಕುಟುಂಬದವರು ಗಾಬರಿಗೊಂಡಿದ್ದಾರೆ, ಮನೆಯಲ್ಲಿ ಚಿಕ್ಕ ಮಗಳು ಮತ್ತು ಹೆಂಡತಿ ಇದ್ದಾರೆ. ಅವರಿಗೆ ನನ್ನ ಸುರಕ್ಷತೆಯ ಬಗ್ಗೆ ಚಿಂತೆಯಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಪಶ್ಚಿಮ ಬಂಗಾಳದ ಪೊಲೀಸರು ತನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸುಳಿವನ್ನು ನೀಡಿದ್ದರು.

ಸುಪ್ರೀಂಕೋರ್ಟ್​ ಸೂಚನೆಯಂತೆ ನಾವು ರೋಸ್​ವ್ಯಾಲಿ ಮತ್ತು ಶಾರದಾ ಚಿಟ್​ಫಂಡ್​ ಹಗರಣದ ತನಿಖೆ ನಡೆಸಲು ಸಾಧ್ಯವಾಗದಿದ್ದರೆ ಬೇರೆ ಪ್ರಕರಣಗಳಲ್ಲಿ ನಾವು ನಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುತ್ತೇವೆ ಎಂಬ ನಂಬಿಕೆಯನ್ನೇ ಕಳೆದುಕೊಳ್ಳುತ್ತೇವೆ. ಹೀಗಾಗಿ, ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ನಾನು ಈ ಬಗ್ಗೆ ನಮ್ಮ ಉಸ್ತುವಾರಿ ನಿರ್ದೇಶಕರಿಗೆ ಮಾಹಿತಿ ನೀಡಿದ್ದೇನೆ ಎಂದು ಶ್ರೀವಾಸ್ತವ್​ ನ್ಯೂಸ್​18ಗೆ ತಿಳಿಸಿದ್ದಾರೆ.

ಕೋಲ್ಕತಾದ ಎಲ್ಲಾ ಸಿಬಿಐ ಕಚೇರಿ ಹಾಗೂ ಅಧಿಕಾರಿಗಳ ಮನೆಗಳಿಗೆ ಅರೆಸೇನಾ ಪಡೆ ನಿಯೋಜನೆ

ಇನ್ನು, ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಬಿಐ ಮಧ್ಯಂತರ ನಿರ್ದೇಶಕ ನಾಗೇಶ್ವರ ರಾವ್​, ಸಿಬಿಐ ಅಧಿಕಾರಿಗಳನ್ನು ಗುರಿಯಾಗಿಸಲಾಗಿದೆ. ಈ ಮೂಲಕ ಚಿಟ್​ಫಂಡ್​ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಧ್ವಂಸಗೊಳಿಸುವ ಹುನ್ನಾರವನ್ನು ಪಶ್ಚಿಮ ಬಂಗಾಳ ಸರ್ಕಾರ ಮಾಡುತ್ತಿದೆ. ನಮ್ಮ ಸಿಬ್ಬಂದಿಯನ್ನು ಯಾವ ಸೆಕ್ಷನ್​ನಡಿ ವಶಕ್ಕೆ ಪಡೆಯಲಾಗಿತ್ತು ಎಂಬುದೇ ನನಗೆ ತಿಳಿಯುತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿರುವ ಸಿಬಿಐ ಕಚೇರಿಗಳ ಮೇಲೂ ಅಲ್ಲಿನ ಪೊಲೀಸರು ಮುತ್ತಿಗೆ ಹಾಕಿ ಸಾಕ್ಷಿಗಳನ್ನು ನಾಶಗೊಳಿಸುತ್ತಾರೆ ಎಂಬ ಭಯ ನನ್ನನ್ನು ಕಾಡುತ್ತಿದೆ. ನಾವು ಯಾರ ಪರವಾಗಿಯೂ ಕೆಲಸ ಮಾಡುತ್ತಿಲ್ಲ. ನಾವು ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಿದ್ದೇವೆ. ಅದಕ್ಕೆ ಸಹಕರಿಸಬೇಕಾದ್ದು ಎಲ್ಲರ ಕರ್ತವ್ಯ. ನಾವು ರಾಜಕಾರಣಿಗಳಲ್ಲ, ತನಿಖಾಧಿಕಾರಿಗಳು ಎಂಬುದನ್ನು ಬಂಗಾಳದ ರಾಜಕಾರಣಿಗಳು ಮರೆಯಬಾರದು. ರಾಜೀವ್​ ಕುಮಾರ್​ ತನಿಖೆಗೆ ಸಹಕರಿಸದ ಕಾರಣದಿಂದಲೇ ನಾವು ದಾಳಿ ನಡೆಸಬೇಕಾಯಿತು ಎಂದು ಹೇಳಿದ್ದರು.

First published:February 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading