ಕಾವೇರಿ ನೀರು ನಿರ್ವಹಣಾ ಸಭೆ ಮುಂದೂಡಿಕೆ: ಅಧಿಕೃತ ಪ್ರಮಾಣಕ್ಕಿಂತ ಹೆಚ್ಚಿಗೆ ನೀರು ಹರಿಸಿರುವ ಕರ್ನಾಟಕ


Updated:August 9, 2018, 6:07 PM IST
ಕಾವೇರಿ ನೀರು ನಿರ್ವಹಣಾ ಸಭೆ ಮುಂದೂಡಿಕೆ: ಅಧಿಕೃತ ಪ್ರಮಾಣಕ್ಕಿಂತ ಹೆಚ್ಚಿಗೆ ನೀರು ಹರಿಸಿರುವ ಕರ್ನಾಟಕ

Updated: August 9, 2018, 6:07 PM IST
ನ್ಯೂಸ್​-18 ಕನ್ನಡ

ನವದೆಹಲಿ(ಆಗಸ್ಟ್​.08): ಕಾವೇರಿ ನೀರು ನಿರ್ವಹಣಾ ಸಭೆ ಅಂತ್ಯಗೊಂಡಿದ್ದು, ಸೆಪ್ಟೆಂಬರ್ ಎರಡನೇ ವಾರಕ್ಕೆ ಮುಂದೂಡಲಾಗಿದೆ. ಸಭೆಯಲ್ಲಿ ಪ್ರಮುಖವಾಗಿ ಜುಲೈ ತಿಂಗಳ ಹೊರ ಹರಿವಿನ ಕುರಿತು ಚರ್ಚೆ ನಡೆಸಲಾಗಿದೆ. ಕರ್ನಾಟಕ ತಮಿಳುನಾಡಿಗೆ ಹರಿಸಬೇಕಾದ ನೀರಿನ ಮಾಹಿತಿ ಪಡೆದಿರುವ ಸಮಿತಿಯೂ, ಹರಿಸಬೇಕಾದ ನೀರಿಗಿಂತ ಹೆಚ್ಚಿನ ನೀರು ಬಿಡಲಾಗಿದೆ ಎಂದು ಹೇಳಲಾಗಿದೆ.

ನಿರ್ವಹಣಾ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ನೇತೃತ್ವದಲ್ಲಿ ನವದೆಹಲಿಯ ಕೇಂದ್ರ ಜಲ ಆಯೋಗದ ಕಚೇರಿಯಲ್ಲಿ ಸಭೆ ನಡೆದಿದ್ದು, ಈ ವೇಳೆ ಕರ್ನಾಟಕ 140 ಟಿಎಂಸಿ ನೀರು ತಮಿಳುನಾಡಿಗೆ ಹರಿಸಬೇಕಿತ್ತು. ಆದರೆ, ತಾತ್ರಿಕ ದೋಷಗಳ ಕಾರಣದಿಂದಾಗಿ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಿನ ನೀರು ಹರಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಕಾವೇರಿ ನೀರು ನಿರ್ವಹಣಾ ಸಮಿತಿಯನ್ನು ಭಾರತ ಸರ್ಕಾರದ ಗೆಜೆಟ್ ನಲ್ಲಿ ಅಧಿಕೃತವಾಗಿ ಸೇರ್ಪಡೆ ಮಾಡಲಾಯಿತು. ಕೇಂದ್ರ ಜಲ ಸಂಪನ್ಮೂಲ ಇಲಾಖೆ ಗೆಜೆಟ್ ಸೇರಿಸಲು ಸೂಚಿಸಿದ ಬೆನ್ನೆಲ್ಲೇ ಕೇಂದ್ರ ಸರ್ಕಾರ ಅಧಿಕೃತ ಗೆಜೆಟ್ ಗೆ ಸಮಿತಿಯನ್ನು ಸೇರ್ಪಡೆ ಮಾಡಿಕೊಂಡಿದೆ.

ಈ ಮೂಲಕ ಮೂರು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ನಡುವೆ ಇದ್ದ ಹಗ್ಗ ಜಗ್ಗಾಟಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಲಾಗಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಫೆಬ್ರವರಿ 16 ರಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ನೀರು ಹಂಚಿಕೆಗೆ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ಸುಪ್ರೀಂ ಸೂಚನೆ ಹಿನ್ನೆಲೆ ಅಂತರಾಜ್ಯ ನದಿ ನೀರು ವಿವಾದ 1956 ರ ಕಾಯ್ದೆ ಅನ್ವಯ ಕರಡು ತಯಾರಿಸಿದ್ದ ಕೇಂದ್ರ ಸರ್ಕಾರ ಮೇ ಮೊದಲ ವಾರದಲ್ಲಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿತ್ತು. ಈ ವೇಳೆ ಕೆಲ ಮಾರ್ಪಾಡುಗಳೊಂದಿಗೆ ಒಪ್ಪಿಗೆ ಸೂಚಿಸಿದ್ದ ಸುಪ್ರೀಂ ಕೋರ್ಟ್ ಸಮಿತಿ ಅನುಷ್ಠಾನಕ್ಕೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ಗೆಜೆಟ್ ಮುದ್ರಣ ವಿಭಾಗದ ಹಿರಿಯ ಜಂಟಿ ಆಯುಕ್ತರು ಭಾರತ ಸರ್ಕಾರಿ ಮುದ್ರಣದ ಮ್ಯಾನೇಜರ್‍ಗೆ ಪ್ರಾಧಿಕಾರ ರಚನೆ ಕುರಿತಾಗಿ ಗ್ಯಾಜೆಟ್ ನಲ್ಲಿ ಪ್ರಕಟಿಸಲು ನಿರ್ದೇಶನ ನೀಡಿದರು. ಅದರಂತೆ ಗೆಜೆಟ್ ಮುದ್ರಣವಾಗಿದ್ದು ಅಧಿಕೃತವಾಗಿ ಕಾವೇರಿ ನೀರು ನಿರ್ವಹಣಾ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿತ್ತು.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ