ಇಲ್ಲಿನ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೈಗೆ ಜಾತಿ ಸೂಚಕ ಬ್ಯಾಂಡ್​ಗಳು ಕಡ್ಡಾಯವಂತೆ; ಮಕ್ಕಳ ಎದೆಗೆ ವಿಷಬೀಜ ಬಿತ್ತುತ್ತಿರುವ ಶಿಕ್ಷಣ ಸಂಸ್ಥೆಗಳು!

ಕೋಯಮತ್ತೂರು ಜಿಲ್ಲೆಯ ಪೊಲ್ಲಾಚಿ ತಾಲೂಕಿನ ಶಾಲೆಯ ಶಿಕ್ಷಕಿಯೊಬ್ಬರು ದಲಿತ ಮಕ್ಕಳನ್ನು ಮೈನಸ್ ಎಂದು ಮೇಲ್ ಜಾತಿಯ ಮಕ್ಕಳನ್ನು ಪ್ಲಸ್ ಎಂದು ಕರೆದಿರುವುದು ಸಹ ಇದೀಗ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

MAshok Kumar | news18
Updated:August 13, 2019, 1:14 PM IST
ಇಲ್ಲಿನ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೈಗೆ ಜಾತಿ ಸೂಚಕ ಬ್ಯಾಂಡ್​ಗಳು ಕಡ್ಡಾಯವಂತೆ; ಮಕ್ಕಳ ಎದೆಗೆ ವಿಷಬೀಜ ಬಿತ್ತುತ್ತಿರುವ ಶಿಕ್ಷಣ ಸಂಸ್ಥೆಗಳು!
ಸಾಂದರ್ಭಿಕ ಚಿತ್ರ.
  • News18
  • Last Updated: August 13, 2019, 1:14 PM IST
  • Share this:
ಜಾತಿ ವಿಷವನ್ನು ಬೇರು ಮಟ್ಟದಿಂದ ತೊಲಗಿಸಬೇಕು ಎಂದು ರಾಷ್ಟ್ರಾದಾದ್ಯಂತ ಎಲ್ಲಾ ರಾಜ್ಯಗಳ ಶಿಕ್ಷಣ ಇಲಾಖೆಗಳು ಸಾಕಷ್ಟು ಪ್ರಯತ್ನಪಡುತ್ತಿವೆ. ಆದರೆ, ಇಂತಹ ಸಂದರ್ಭದಲ್ಲಿ ತಮಿಳುನಾಡಿನ ಮಧುರೈ ಜಿಲ್ಲೆಯ ಹಲವು ಖಾಸಗಿ ಶಾಲೆಗಳಲ್ಲಿ ಮಕ್ಕಳ ವಿದ್ಯಾರ್ಥಿ ಜೀವನದಿಂದಲೇ ಈ ವಿಷವನ್ನು ಮತ್ತಷ್ಟು ಬಲವಾಗಿ ಮನಸ್ಸಿನ ಆಳಕ್ಕೆ ಇಳಿಸುವ ಪ್ರಯತ್ನ ನಡೆಸಲಾಗುತ್ತಿದೆ.

ಇಲ್ಲಿ ಶಿಶುವಿಹಾರದಿಂದಲೇ ಮಕ್ಕಳು ಕಡ್ಡಾಯವಾಗಿ ಅವರರವರ ಜಾತಿಯನ್ನು ಸೂಚಿಸುವ ಬಣ್ಣ ಬಣ್ಣದ ಪಟ್ಟಿಯನ್ನು ಕೈಗೆ ಕಟ್ಟಿಕೊಂಡು ಬರಬೇಕು ಎಂಬ ಕೆಟ್ಟ ಸಂಪ್ರದಾಯವನ್ನು ಆಚರಿಸಲಾಗುತ್ತಿದೆ ಎಂಬ ಆಘಾತಕಾರಿ ವಿಚಾರ ವರದಿಯಾಗಿದೆ.

ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಕೆಂಪು, ಹಳದಿ, ಹಸಿರು ಹಾಗೂ ಬಿಳಿ ಬಣ್ಣದ ಪಟ್ಟಿಗಳನ್ನು ಕಟ್ಟಿಕೊಂಡು ಬರುತ್ತಾರೆ. ಈ ಮೂಲಕ ಅವರು ಯಾವ ಜಾತಿಯವರು ಎಂಬುದು ಶಿಕ್ಷಕರಿಗೆ ಖಚಿತವಾಗುತ್ತದೆ. ಹೀಗೆ ದಲಿತರನ್ನು ಮೇಲ್ವರ್ಗದ ವಿದ್ಯಾರ್ಥಿಗಳಿಂದ ಬೇರ್ಪಡಿಸಿ ಕೂರಿಸುವ ಹಾಗೂ ತಾರತಮ್ಯದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿ ಜೀವನದಿಂದಲೇ ಮಕ್ಕಳ ಮನಸ್ಸಿನಲ್ಲಿ ಜಾತಿ ಎಂಬ ಸಂಕೋಲೆಯನ್ನು ಬೆಳೆಸಲಾಗುತ್ತಿದೆ.

ಈ ಕುರಿತು ಇಡೀ ದೇಶದ ಗಮನ ಸೆಳೆದಿರುವ ದಲಿತ ಪರ ಸಾಮಾಜಿಕ ಹೋರಾಟಗಾರ ಕದಿರ್ ಎಂಬವರು, “ಇಂತಹ ನೀಚ ಪದ್ಧತಿಯನ್ನು ಮಧುರೈ ಮಾತ್ರವಲ್ಲದೆ ತಮಿಳುನಾಡಿನ ನಾನಾ ಭಾಗಗಳ ಶಾಲೆಗಳಲ್ಲಿ ಈಗಲೂ ಆಚರಿಸಿಕೊಂಡು ಬರಲಾಗುತ್ತಿದೆ. ಅಂಗನವಾಡಿಯಿಂದಲೇ ಈ ಆಚರಣೆ ಆರಂಭವಾಗುತ್ತಿದೆ. ದಲಿತ ಮಕ್ಕಳು ನೀರು ಕುಡಿಯುವುದಕ್ಕಾಗಿ ಅವರಿಗಾಗಿ ಪ್ರತ್ಯೇಕ ಬಾಟಲ್​ಗಳನ್ನು ತರಬೇಕು ಎಂದು ಶಾಲೆಗಳಲ್ಲಿ ತಾಕೀತು ಮಾಡಲಾಗುತ್ತಿದೆ. ಇಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ದಲಿತ ವಿದ್ಯಾರ್ಥಿಗಳಿಗೆ ತಾರತಮ್ಯವೆಸಗಲಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕೋಯಮತ್ತೂರು ಜಿಲ್ಲೆಯ ಪೊಲ್ಲಾಚಿ ತಾಲೂಕಿನ ಶಾಲೆಯ ಶಿಕ್ಷಕಿಯೊಬ್ಬರು “ದಲಿತ ಮಕ್ಕಳನ್ನು ಮೈನಸ್ ಎಂದು ಮೇಲ್ ಜಾತಿಯ ಮಕ್ಕಳನ್ನು ಪ್ಲಸ್” ಎಂದು ಕರೆದಿರುವುದು ಸಹ ಇದೀಗ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ಶಿಕ್ಷಣ ವ್ಯವಸ್ಥೆಯಲ್ಲಿನ ಈ ತಾರತಮ್ಯವನ್ನು ಖಂಡಿಸಿರುವ ಅಲ್ಲಿನ ಶಿಕ್ಷಣ ಇಲಾಖೆ ಎಲ್ಲಾ ಜಿಲ್ಲೆಯ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದು,  “ಯಾವ ಜಿಲ್ಲೆಯ ಯಾವ ಶಾಲೆಗಳಲ್ಲಿ ಇಂತಹ ಪದ್ಧತಿಯನ್ನು ಆಚರಿಸಲಾಗುತ್ತಿದೆ ಎಂಬುದನ್ನು ಪತ್ತೆಹಚ್ಚಿ, ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ಕ್ರಮ ಜರುಗಿಸಿ ಹಾಗೂ ಈ ಪದ್ಧತಿಯ ನಿರ್ಮೂಲನೆಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಜರುಗಿಸಿ" ಎಂದು ಸುತ್ತೋಲೆ ಹೊರಡಿಸಿದೆ.

ಆದರೆ, ಈ ಕಾಲದಲ್ಲೂ ಶಾಲೆಗಳಲ್ಲಿ ದಲಿತ ಮಕ್ಕಳಿಗೆ ಈ ಪರಿ ತಾರತಮ್ಯವೆಸಗಲಾಗುತ್ತಿದೆಯೇ? ಈ ಪರಿ ಶೋಷಣೆಗೆ ನಮ್ಮ ಮಕ್ಕಳು ಒಳಗಾಗುತ್ತಿದ್ದಾರೆಯೇ? ಎಂಬುದೇ  ಮಾನವೀಯ ಸಮಾಜ ನಾಚಿ ತಲೆತಗ್ಗಿಸಬೇಕಾದ ವಿಚಾರ ಎಂದರೆ ತಪ್ಪಾಗಲಾರದು.
First published:August 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ