ಚೆನ್ನೈ: ತಮಿಳುನಾಡು (Tamil Nadu) ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ (BJP Chief Annamalai) ವಿರುದ್ಧ ಪೊಲೀಸರು (Police)ಹಿಂಸಾಚಾರ ಪ್ರಚೋದನೆ ಹಾಗೂ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ (Migrant workers) ಮೇಲೆ ನಡೆಯುತ್ತಿರುವ ದಾಳಿಗಳ ವಿಚಾರದಲ್ಲಿ ಆಡಳಿತಾರೂಢ ಡಿಎಂಕೆ (DMK) ಪಕ್ಷವನ್ನು ಹೊಣೆಗಾರರನ್ನಾಗಿ ಮಾಡಿ ಆರೋಪಿಸಿದ ಮರು ದಿನವೇ ಅಣ್ಣಾಮಲೈ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಹಿಂಸಾಚಾರಕ್ಕೆ ಪ್ರಚೋದನೆ ಹಾಗೂ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ತಮಿಳುನಾಡು ಸೈಬರ್ ಕ್ರೈಂ ವಿಭಾಗವು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದೆ.
ರಾಜ್ಯದ ಜನರು ಮತ್ತು ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರ ನಡುವೆ ಗಲಭೆಯನ್ನು ಉತ್ತೇಜಿಸಲು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಸಿಸಿಬಿಯ ಸೈಬರ್ ಕ್ರೈಂ ವಿಭಾಗವು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ಭಾರತೀಯ ದಂಡ ಸಂಹಿತೆಯ ನಾಲ್ಕು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಲಸಿಗರನ್ನು ಡಿಎಂಕೆ ದ್ವೇಷಿಸುತ್ತಿದೆ ಎಂದಿದ್ದ ಅಣ್ಣಾಮಲೈ
ರಾಜ್ಯದಲ್ಲಿ ವಲಸೆ ಕಾರ್ಮಿಕರು ತಮಿಳುನಾಡಿನಲ್ಲಿ ಸುರಕ್ಷಿತರಾಗಿದ್ದಾರೆ. ಆದರೆ ಸಿಎಂ ಎಂಕೆ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ ಹಾಗೂ ಅದರ ಮಿತ್ರ ಪಕ್ಷದ ನಾಯಕರು ಅವರ ವಿರುದ್ಧದ ದ್ವೇಷ ಕಾರುತ್ತಿದ್ದಾರೆ ಎಂದು ಕೆ ಅಣ್ಣಾಮಲೈ ಅವರು ಶನಿವಾರ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: Annamalai: ಡಬಲ್ ಇಂಜಿನ್ ಸರ್ಕಾರದ ಪವರ್ ತೋರಿಸಿ; ಕರಾವಳಿಯಲ್ಲಿ ಅಣ್ಣಾಮಲೈ ಮಿಂಚಿನ ಸಂಚಾರ
ಉತ್ತರ ಭಾರತೀಯರನ್ನು ಹೊರಗಿಡುವ ಪ್ರಯತ್ನ?
" ಉತ್ತರ ಕರ್ನಾಟಕದ ಜನರನ್ನು ಡಿಎಂಕೆ ಸಂಸದರು ಕೆಟ್ಟ ಪದಗಳನ್ನು ಬಳಸಿ ಟೀಕೆ ಮಾಡಿದ್ದಾರೆ. ಡಿಎಂಕೆ ಸಚಿವರೊಬ್ಬರು ಅವರನ್ನು ಪಾನಿಪೂರಿ ವಾಲಾ ಎಂದು ಕರೆದಿದ್ದಾರೆ. ಡಿಎಂಕೆ ಯಾವಾಗಲೂ ವಿಭಜನೆ ನೀತಿಯ ಮೇಲೆ ನಿಂತಿದೆ. ಅವರ ಜೊತೆ ಮೈತ್ರಿ ಮಾಡಿಕೊಂಡುವವರು ಉತ್ತರ ಭಾರತೀಯರನ್ನು ಹೊರಗಟ್ಟಬೇಕೆಂದು ಸಲಹೆ ನೀಡುತ್ತಾರೆ. ಇದರ ಫಲಿತಾಂಶವೇ ನಾವು ಇಂದು ನೋಡುತ್ತಿರುವ ಸ್ಥಿತಿ" ಎಂದು ಅಣ್ಣಾಮಲೈ ಆರೋಪಿಸಿದ್ದರು.
ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿಗಳು ನಡೆಯುತ್ತಿವೆ ಎಂಬ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನೋವುಂಟುಮಾಡುತ್ತಿದೆ. ನಾವು ತಮಿಳಿಗರು ಜಗತ್ತು ಒಂದೇ ಎಂಬ ಪರಿಕಲ್ಪನೆಯಲ್ಲಿ ನಂಬಿಕೆಯಿಟ್ಟಿದ್ದೇವೆ. ನಾವು ಪ್ರತ್ಯೇಕತಾ ವಾದವನ್ನು ಒಪ್ಪುವುದಿಲ್ಲ ಮತ್ತು ಉತ್ತರ ಭಾರತದ ಸಹೋದರರ ಮೇಲೆ ದ್ವೇಷ ಕಾರುವುದಿಲ್ಲ " ಎಂದು ಸರಣಿ ಟ್ವೀಟ್‌ಗಳಲ್ಲಿ ಅಣ್ಣಾಮಲೈ ಡಿಎಂಕೆ ವಿರುದ್ಧ ಕಿಡಿ ಕಾರಿದ್ದರು.
ನಾಲ್ಕು ಮಂದಿ ವಿರುದ್ಧ ಪ್ರಕರಣ
ಅಣ್ಣಾಮಲೈ ಅಲ್ಲದೆ, ಪತ್ರಕರ್ತ ಮೊಹಮ್ಮದ್ ತನ್ವೀರ್, ಬಿಹಾರ ಬಿಜೆಪಿ ವಕ್ತಾರ ಪ್ರಶಾಂತ್ ಪಟೇಲ್ ಉಮ್ರಾವ್ ಮತ್ತು ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಪ್ರಭಾವಿಗಳಾದ ಶುಭಂ ಶುಕ್ಲಾ ಮತ್ತು ಯುವರಾಜ್ ಸಿಂಗ್ ರಜಪೂತ್ ಎಂಬುವವರ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಲಾಗಿದೆ. ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಲಾಗಿದೆ ಎಂಬ ಸುಳ್ಳು ಮಾಹಿತಿಯನ್ನು ಹಂಚಿ ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ.
ದೈರ್ಯವಿದ್ದರೆ ಬಂಧಿಸಿ ಎಂದ ಅಣ್ಣಾ ಮಲೈ
ತಮ್ಮ ಮೇಲೆ ಪ್ರಕರಣ ದಾಖಲಾಗಿದೆ ಎಂಬುದಕ್ಕೆ ಪ್ರತಿಕ್ರಿಯಿಸಿರುವ ಅಣ್ಣಾಮಲೈ " ಉತ್ತರ ಭಾರತದ ಸಹೋದರರ ವಿರುದ್ಧ ಅವರ 7 ದಶಕಗಳ ಪ್ರಚಾರವನ್ನು ಬಹಿರಂಗಪಡಿಸಿದ್ದಕ್ಕಾಗಿ ಡಿಎಂಕೆ ನನ್ನ ವಿರುದ್ಧ ಪ್ರಕರಣಗಳನ್ನು ದಾಖಲಿಸಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ನೀವು ಪ್ರಜಾಪ್ರಭುತ್ವವನ್ನು ಹತ್ತಿಕ್ಕಬಹುದು ಎಂದು ಭಾವಿಸಿದ್ದೀರಿ. ನಾನು ನಿಮಗೆ 24 ಗಂಟೆ ಸಮಯ ಕೊಡುತ್ತೇನೆ, ಧೈರ್ಯವಿದ್ದರೆ ನನ್ನನ್ನು ಬಂಧಿಸಿ "ಎಂದು ಅವರು ಸವಾಲು ಹಾಕಿದ್ದಾರೆ
ಭೀತಿ ಹುಟ್ಟಿಸಿದ ನಕಲಿ ವಿಡಿಯೋಗಳು
ದಕ್ಷಿಣ ಭಾರತದ ರಾಜ್ಯಗಳಲ್ಲಿ ಉತ್ತರದಿಂದ ವಲಸೆ ಬಂದ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಡಿಯೋಗಳು ವೈರಲ್ ಆಗಿವೆ. ಇದು ತಿರುಪ್ಪೂರ್, ಕೊಯಮತ್ತೂರು, ತೂತುಕುಡಿ ಮತ್ತು ಚೆನ್ನೈನಂತಹ ಜಿಲ್ಲೆಗಳಲ್ಲಿ ವಲಸೆ ಕಾರ್ಮಿಕರಲ್ಲಿ ಭೀತಿಗೆ ಉಂಟುಮಾಡಿವೆ. ಅಲ್ಲಿನ ಜಿಲ್ಲಾಡಳಿತಗಳೊಂದಿಗೆ ಕಾರ್ಮಿಕರು ವಿಡಿಯೋಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇದರ ನಂತರ, ರಾಜ್ಯ ಆಡಳಿತ ವ್ಯಾಪಕ ವದಂತಿಗಳ ನಂತರ ವಲಸೆ ಕಾರ್ಮಿಕರನ್ನು ತಲುಪಲು ಸಂಘಟಿತ ಪ್ರಯತ್ನವನ್ನು ಪ್ರಾರಂಭಿಸಿದೆ. ತಮಿಳುನಾಡು ಡಿಜಿಪಿ ಕೂಡ ರಾಜ್ಯದಲ್ಲಿ ಹಿಂಸಾಚಾರದ ವರದಿಗಳನ್ನು ಸುಳ್ಳು ಎಂದು ಹೇಳಿಕೆ ಬಿಡುಗಡೆ ಮಾಡಿ, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ