ಬಿಹಾರ (ಅಕ್ಟೋಬರ್ 29); ಸುಳ್ಳು ಹೇಳುವ ವಿಚಾರದಲ್ಲಿ ನಾವು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ಮೋದಿಯನ್ನು 'ಸುಳ್ಳುಗಾರ' ಎಂದು ದೂರಿದ್ದಾರೆ. ಬಿಹಾರದಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಬುಧವಾರವಾದ ನಿನ್ನೆ ಮೊದಲ ಹಂತದ ಮತದಾನ ಮುಗಿದಿದೆ. ಇನ್ನೂ ಎರಡು ಹಂತದ ಮತದಾನ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ನಿನ್ನೆ ಬಿಹಾರದಲ್ಲಿ ಕಾಂಗ್ರೆಸ್-ಆರ್ಜೆಡಿ ಮಹಾ ಘಟಬಂಧನ ಅಭ್ಯರ್ಥಿಯ ಪರವಾಗಿ ಚುನಾವಣಾ ಪ್ರಚಾರ ನಡೆಸಿರುವ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೊಮ್ಮೆ ಟೀಕಾಸ್ತ್ರಗಳನ್ನು ಪ್ರಯೋಗಿಸಿದ್ದಾರೆ. ಅಲ್ಲದೆ, ಸುಳ್ಳು ಹೇಳುವ ವಿಚಾರದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಸ್ಪರ್ಧಿಸಲು ನಮ್ಮಿಂದ ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬಿಹಾರದ ವಾಲ್ಮೀಕಿ ನಗರದಲ್ಲಿ ಬುಧವಾರ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ನೋಟು ಅಮಾನ್ಯೀಕರಣ, ಜಿಎಸ್ಟಿ ಮತ್ತು ಯೋಜನೆಯಿಲ್ಲದ ಲಾಕ್‌ಡೌನ್ ಸಣ್ಣ ವ್ಯಾಪಾರಿಗಳು, ಕಾರ್ಮಿಕರು ಮತ್ತು ರೈತರನ್ನು ಬೀದಿಗೆ ತಳ್ಳಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಈಗ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ಭಾಷಣಗಳಲ್ಲಿ ಹೇಳುತ್ತಿಲ್ಲ. ಏಕೆಂದರೆ ಈ ಹಿಂದೆ ನೀಡಿದ ಆಶ್ವಾಸನೆಗಳನ್ನೇ ಅವರು ಈಡೇರಿಸಿಲ್ಲ.
Congress gave direction to the country. We gave MNREGA, waived off farmers' loans. We know how to run the country, stand with farmers and generate employment, but yes, we do lack one thing - we don't know how to lie. We cannot compete with him (PM) at lying: Rahul Gandhi https://t.co/AAgU2Jf71V
— ANI (@ANI) October 28, 2020
"ಪ್ರಧಾನಿ ಮೋದಿ ದೇಶದ ಅತ್ಯುನ್ನತ ಸ್ಥಾನದಲ್ಲಿ ಕುಳಿತು ಸುಳ್ಳು ಹೇಳಿದ್ದಾರೆಂದು ಜನರಿಗೆ ತಿಳಿದಿದೆ. ಆದರೆ, ಕಾಂಗ್ರೆಸ್ ಪಕ್ಷವು ಈವರೆಗೂ ದೇಶಕ್ಕೆ ನಿರ್ದೇಶನ ನೀಡುತ್ತ ಬಂದಿದೆ. ನಾವು ನರೇಗಾ ಯೋಜನೆ ತಂದಿದ್ದೇವೆ. ಸಾಲ ಮನ್ನಾ ಮಾಡಿದ್ದೇವೆ. ದೇಶ ನಡೆಸುವುದು, ರೈತರೊಂದಿಗೆ ನಿಲ್ಲುವುದು ಮತ್ತು ಉದ್ಯೋಗ ಸೃಷ್ಟಿಸುವುದು ನಮಗೆ ತಿಳಿದಿದೆ. ಆದರೆ, ಸುಳ್ಳು ಹೇಳುವ ಒಂದು ವಿಷಯ ನಮಗೆ ತಿಳಿದಿಲ್ಲ. ಸುಳ್ಳು ಹೇಳುವ ವಿಚಾರದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಸ್ಪರ್ಧಿಸಲು ನಮ್ಮಿಂದ ಸಾಧ್ಯವಿಲ್ಲ" ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
"ಸರ್ಕಾರವು ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ಪರವಾಗಿದೆ. ನೋಟು ಅಮಾನ್ಯೀಕರಣ ಮತ್ತು ಲಾಕ್‌ಡೌನ್‌ಗಳ ಉದ್ದೇಶ ಎರಡು ಒಂದೇ ಆಗಿತ್ತು. ರೈತರು, ಸಣ್ಣ ವ್ಯಾಪಾರಿಗಳು ಮತ್ತು ಕಾರ್ಮಿಕರನ್ನು ಇಂದು ಬೀದಿಗೆ ಬೀಳುವ ಮೂಲಕ ಆ ಉದ್ದೇಶ ಏನು? ಎಂಬುದು ಇದೀಗ ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರದಿಂದ ಬಿಹಾರದಲ್ಲಿ ಉದ್ಯೋಗ ನೀಡಲು ಸಾಧ್ಯವಿಲ್ಲ. ಇದು ವಾಸ್ತವ. ರಾಜ್ಯದ ರೈತರು ಮತ್ತು ಯುವಕರೊಂದಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಸಮಸ್ಯೆ ಇರುವುದು ನಿಮ್ಮ ಸಿಎಂ ನಿತೀಶ್ ಕುಮಾರ್ ಮತ್ತು ಪಿಎಂ ಅವರೊಂದಿಗೆ. ಅವರುಗಳು ನಿಮಗೆ ಸತ್ಯವನ್ನು ಹೇಳುವುದಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : CoviShield - ಡಿಸೆಂಬರ್ನಷ್ಟರಲ್ಲಿ ಕೊರೋನಾ ಲಸಿಕೆ ತಯಾರಿಕೆ ಸಾಧ್ಯ ಎಂದ ಸೆರಮ್ ಇನ್ಸ್ಟಿಟ್ಯೂಟ್
"ಲಾಕ್‌ಡೌನ್ ಸಮಯದಲ್ಲಿ ಲಕ್ಷಾಂತರ ಬಿಹಾರ ಕಾರ್ಮಿಕರು ರಾಜ್ಯಕ್ಕೆ ಮರಳಿದ್ದನ್ನು ನೀವು ನೋಡಿದ್ದೀರಿ. ಇದು ಚುನಾವಣಾ ಸಮಯ, ಕಾಲ್ನಡಿಗೆಯಲ್ಲಿ ಪ್ರಯಾಣಿಸಿದ ನೀವು ಅದನ್ನು ಮರೆಯಬಾರದು. ದಸರಾದಲ್ಲಿ ರೈತರು ಮತ್ತು ಕಾರ್ಮಿಕರು ಪ್ರಧಾನಿ ಮೋದಿಯವರ ಪ್ರತಿಕೃತಿ ದಹಿಸಿ ಕೋಪ ಹೊರಹಾಕಿದ್ದಾರೆ. ದೇಶದ ರೈತರು ಮತ್ತು ಯುವಕರು ಪ್ರಧಾನಿಯವರ ವಿರುದ್ಧ ಕೋಪಗೊಂಡಿದ್ದಾರೆ" ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ