HOME » NEWS » National-international » CANDIDATE PROMISES ICEBERG ROCKET LAUNCHER FREE HELICOPTERS MOON TRIPS ETC SNVS

ಚಂದ್ರಯಾನ, ಹೆಲಿಕಾಪ್ಟರ್, ಕೋಟಿ ಹಣ, ಬಂಗಲೆ ಇತ್ಯಾದಿ ಇತ್ಯಾದಿ – ತಮಿಳುನಾಡಲ್ಲಿ ಒಬ್ಬ ಅಭ್ಯರ್ಥಿ ಕೊಟ್ಟ ಭರವಸೆಗಳು

ತಮಿಳುನಾಡಿನ ದಕ್ಷಿಣ ಮದುರೈ ಕ್ಷೇತ್ರದಿಂದ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಸರವಣನ್ ಎಂಬುವವರು ಪ್ರಪಂಚದಲ್ಲಿ ಯಾರೂ ನೀಡಿರದ ಆಶ್ವಾಸನೆಗಳಿರುವ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿ ರಾಜಕೀಯ ಪಕ್ಷಗಳಿಗೆ ಟಾಂಟ್ ಮಾಡಿದ್ದಾರೆ.

news18-kannada
Updated:March 25, 2021, 9:32 AM IST
ಚಂದ್ರಯಾನ, ಹೆಲಿಕಾಪ್ಟರ್, ಕೋಟಿ ಹಣ, ಬಂಗಲೆ ಇತ್ಯಾದಿ ಇತ್ಯಾದಿ – ತಮಿಳುನಾಡಲ್ಲಿ ಒಬ್ಬ ಅಭ್ಯರ್ಥಿ ಕೊಟ್ಟ ಭರವಸೆಗಳು
ಪ್ರಾತಿನಿಧಿಕ ಚಿತ್ರ
  • Share this:
ಚೆನ್ನೈ: ಚುನಾವಣೆಗಳಲ್ಲಿ ಪಕ್ಷಗಳು ಎಂಥವೆಲ್ಲಾ ಭರವಸೆಗಳನ್ನ ಕೊಟ್ಟಿದ್ದಾರೆಂದು ನಾವು ನೋಡಿದ್ದೇವೆ. ತ್ಯಾಜ್ಯ ವಿಲೇವಾರಿಯಿಂದ ಹಿಡಿದು ನಗರವನ್ನು ಸಿಂಗಾಪುರ ಮಾಡುವವರೆಗೂ ನಾವು ಅನೇಕ ಚುನಾವಣಾ ಆಶ್ವಾಸನೆಗಳನ್ನ ನೋಡಿದ್ದೇವೆ. ಅವೆಲ್ಲವೂ ಈಡೇರುವ ಲಕ್ಷಣ ಕಾಣದೇ ಅಂತಿಮವಾಗಿ ಹತಾಶೆಗೊಳ್ಳುವುದನ್ನೂ ನಿಲ್ಲಿಸಿಬಿಟ್ಟಿದ್ದೇವೆ. ಈಗ ತಮಿಳುನಾಡಿನಲ್ಲಿ ಅಭ್ಯರ್ಥಿಯೊಬ್ಬ ಕೊಟ್ಟಿರುವ ಭರವಸೆಗಳನ್ನ ಕೇಳಿದರೆ ಎಂಥವರಿಗೂ ಆಘಾತವಾಗುತ್ತದೆ. ಐಫೋನ್​ನಿಂದ ಹಿಡಿದು ಚಂದ್ರ ಗ್ರಹಕ್ಕೆ 100 ದಿನ ಟ್ರಿಪ್​ವರೆಗೆ ಅನೇಕ ಭರಪೂರ ಆಶ್ವಾಸನೆಗಳ ಸುರಿಮಳೆಯನ್ನೇ ಈ ಅಭ್ಯರ್ಥಿ ನೀಡಿದ್ಧಾನೆ. 34 ವರ್ಷದ ಪಕ್ಷೇತರ ಅಭ್ಯರ್ಥಿ ಸರವಣನ್ ಅವರು ತಮ್ಮ ಭರವಸೆಗಳ ಬಗ್ಗೆ ಹಾಗೂ ತಾನು ಚುನಾವಣೆಗೆ ಕಣಕ್ಕಿಳಿದಿರುವ ಬಗ್ಗೆ ನೀಡಿರುವ ಕಾರಣ ಕೂಡ ನಿಮ್ಮನ್ನು ಅಚ್ಚರಿಗೆ ತಳ್ಳುತ್ತದೆ.

ದಕ್ಷಿಣ ಮದುರೈ ಕ್ಷೇತ್ರದಿಂದ ಸ್ಪರ್ಧಿಸಿರುವ ಶರವಣನ್ ಅವರು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಅದರಲ್ಲಿ ಅವರು ತಮ್ಮ ಕ್ಷೇತ್ರದಲ್ಲಿ ಮಾಡಬೇಕೆಂದಿರುವ ಸೌಕರ್ಯ ಯೋಜನೆಗಳನ್ನ ತಿಳಿಸಿದ್ದಾರೆ. ಭಯಂಕರ ಬೇಸಿಗೆ ಬಿಸಿಲನ್ನು ನಿಯಂತ್ರಿಸಲು ತಮ್ಮ ಕ್ಷೇತ್ರದಲ್ಲಿ 300 ಅಡಿ ಎತ್ತರದ ಕೃತಕ ಮಂಜುಗಡ್ಡೆಯನ್ನೇ ನಿರ್ಮಿಸುತ್ತೇನೆ. ಒಂದು ಬಾಹ್ಯಾಕಾಶ ಸಂಶೋಧನಾ ಕೇಂದ್ರ, ರಾಕೆಟ್ ಲಾಂಚರ್ ಕೇಂದ್ರಗಳನ್ನ ಸ್ಥಾಪಿಸುವುದಾಗಿ ಹೇಳಿಕೊಂಡಿದ್ಧಾರೆ.

ಅಷ್ಟೇ ಅಲ್ಲ, ಕ್ಷೇತ್ರದ ಪ್ರತಿಯೊಬ್ಬರಿಗೂ ಒಂದೊಂದು ಐಫೋನ್, ಯುವಕರಿಗೆ 1 ಕೋಟಿ ರೂಪಾಯಿ, ಚಂದ್ರ ಗ್ರಹಕ್ಕೆ 100 ದಿನ ಉಚಿತ ಟ್ರಿಪ್ ಕೊಡುತ್ತೇನೆ ಎಂದಿದ್ದಾರೆ. ಅಷ್ಟೇ ಅಲ್ಲ ಪ್ರತೀ ಕುಟುಂಬಕ್ಕೂ ಸ್ವಿಮ್ಮಿಂಗ್ ಪೂಲ್ ಇರುವ ಮೂರಂತಸ್ತಿನ ಬಂಗಲೆ, ಹೆಲಿಕಾಪ್ಟರ್, ದೋಣಿ, ಕಾರು, ರೋಬೋಗಳನ್ನ ಉಚಿತವಾಗಿ ಕೊಡುತ್ತೇನೆ ಎಂದು ಅವರು ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ಅಂದಹಾಗೆ ಇವರ ಚುನಾವಣೆ ಚಿಹ್ನೆ ‘ಕಸದಬುಟ್ಟಿ’ ಅಂತೆ.

ಇದನ್ನೂ ಓದಿ: ಐಸ್‌ಲ್ಯಾಂಡ್‌ನಲ್ಲಿ ಬೆಂಕಿ ಉಗುಳುತ್ತಿರುವ ಜ್ವಾಲಾಮುಖಿಯ ನಡುವಲ್ಲೇ ಹಾರಿದ ಡ್ರೋನ್: ವಿಡಿಯೋ ವೈರಲ್‌

ಇಂಥ ಆಶ್ವಾಸನೆಗಳು ಯಾಕೆ? 

ತಮಿಳುನಾಡಿನಲ್ಲಿ ರಾಜಕೀಯ ಪಕ್ಷಗಳು ಮನೆ ಮನೆಗೆ ಫ್ರಿಜ್, ಟಿವಿ ಇತ್ಯಾದಿ ಕೊಡುವುದು ಸಾಮಾನ್ಯ. ಶರವಣನ್ ಕೊಟ್ಟಿರುವ ಭರವಸೆಗಳು ಆ ಎಲ್ಲಾ ದಾಖಲೆಗಳನ್ನ ಮೆಟ್ಟಿ ನಿಲ್ಲುತ್ತವೆ. ಅಷ್ಟಕ್ಕೂ ಈಡೇರಿಸಲಾಗದ ಆಶ್ವಾಸನೆಗಳನ್ನ ಕೊಟ್ಟು ನಗೆಪಾಟಲಿಗೆ ಗುರಿಯಾಗಬಹುದು ಎಂದು ಈ ಯುವಕನಿಗೆ ಅನಿಸಿಲ್ಲವೇ? ಈ ಬಗ್ಗೆ ಶರವಣನ್ ಹೇಳುವುದು ಹೀಗೆ: “ಕಳೆದ 50 ವರ್ಷಗಳಿಂದ ರಾಜಕೀಯ ಪಕ್ಷಗಳು ವಿವಿಧ ಕಲ್ಯಾಣ ಯೋಜನೆಗಳನ್ನ ಘೋಷಣೆ ಮಾಡಿಕೊಂಡು ಚುನಾವಣೆ ಗೆಲ್ಲುತ್ತಾ ಬಂದಿವೆ. ಅವರ ಸರ್ಕಾರಗಳು ಯಾವತ್ತೂ ಜನಸೇವೆ ಮಾಡಿಲ್ಲ. ಈ ಬಗ್ಗೆ ನಾನು ಜನರಲ್ಲಿ ಅರಿವು ಮೂಡಿಸಬೇಕಿತ್ತು. ಅದಕ್ಕಾಗಿ, ಇಡೀ ವಿಶ್ವದಲ್ಲಿ ಯಾರೂ ಕೂಡ ನೀಡದಂಥ ಹಾಗೂ ಯಾರೂ ಈಡೇರಿಸಲಾಗದಂಥ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದ್ಧೇನೆ. ಜನರನ್ನು ಜಾಗೃತಿಗೊಳಿಸುವ ಉದ್ದೇಶ ಇದು” ಎಂದು ಅವರು ಹೇಳುತ್ತಾರೆ.

ಚುನಾವಣೆ ಬಗ್ಗೆ ಅರಿವು: ಇವರು ಕೇವಲ ಪ್ರಚಾರಕ್ಕಾಗಿ ಚುನಾವಣೆಗೆ ನಿಂತರಾ? ಅಲ್ಲ, ತಾನು ಚುನಾವಣೆ ಬಗ್ಗೆ ಯುವಸಮುದಾಯದವರನ್ನು ಜಾಗೃತಿಗೊಳಿಸಲು ಕಣಕ್ಕಿಳಿದಿರುವುದಾಗಿ ಇವರು ತಿಳಿಸುತ್ತಾರೆ. “ನಮ್ಮಲ್ಲಿ ಬಹಳ ಜನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಹೇಗೆಂದು ಗೊತ್ತಿಲ್ಲ. ಈ ಪ್ರಕ್ರಿಯೆಯನ್ನು ಕಲಿಯಲು ನಾನು ಸ್ಪರ್ಧಿಸುತ್ತಿದ್ದೇನೆ. ಜನರಿಗೆ ತಿಳಿವಳಿಕೆ ಬಂದರೆ ರಾಜಕಾರಣಿಗಳು ಭಯಭೀತರಾಗುತ್ತಾರೆ. ಆಗ ಉತ್ತಮ ಆಡಳಿತಕ್ಕೆ ದಾರಿಯಾಗಬಹುದು” ಎಂದು ಅವರು ಅಭಿಪ್ರಾಯಪಡುತ್ತಾರೆ.

ನಾಮಪತ್ರ ಸಲ್ಲಿಕೆಗೆ ನಾನು 10 ಸಾವಿರ ರೂ ಖರ್ಚು ಮಾಡಿದ್ದೇನೆ ಎಂದು ಲೆಕ್ಕ ಬಿಚ್ಚಿಡುವ ಇವರು, “ದಕ್ಷಿಣ ಮದುರೈ ಕ್ಷೇತ್ರದಲ್ಲಿ 2.3 ಲಕ್ಷ ಮತದಾರರಿದ್ದಾರೆ. ಇಲ್ಲಿ 5000 ಮಂದಿ ಯುವಕರು ಚುನಾವಣೆಗೆ ಸ್ಪರ್ಧಿಸಿ ಪ್ರತಿಯೊಬ್ಬರೂ 50 ಮತಗಳನ್ನ ಪಡೆದರೆ ಯಾವ ಪಕ್ಷವೂ ಸ್ಪರ್ಧೆಗಿಳಿಯಲು ಸಾಧ್ಯವೇ ಆಗುವುದಿಲ್ಲ. ಈ ರಾಜಕಾರಣಿಗಳು ಜನಸಾಮಾನ್ಯರನ್ನು ಕಂಡರೆ ಭಯಪಡುವಂತಾಗುತ್ತದೆ. ಈ ಬಗ್ಗೆ ಅರಿವು ಮೂಡಿಸಲೆಂದೇ ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ” ಎಂದು ಹೇಳುತ್ತಾರೆ.
Published by: Vijayasarthy SN
First published: March 25, 2021, 9:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories