ದಲಿತ ಕ್ರಿಶ್ಚಿಯನ್ನರು (Dalit Christians) ಮತ್ತು ಮುಸ್ಲಿಮರನ್ನು (Muslims) ಪರಿಶಿಷ್ಟ ಜಾತಿಗೆ (Scheduled Caste) ಸೇರಿಸುವ ವಿಷಯದ ಕುರಿತು ತ್ರಿಸದಸ್ಯ ಆಯೋಗದ ವರದಿಯನ್ನು ಸಲ್ಲಿಸುವವರೆಗೆ ನ್ಯಾಯಾಲಯ ಕಾಯಬೇಕು ಎಂಬ ಕೇಂದ್ರ ಮನವಿ ಮಾಡಿತ್ತು. ಇದನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್ (Supreme Court) ಮೀಸಲಾತಿ ನೀಡುವ ನಿರ್ಧಾರಕ್ಕೆ ನ್ಯಾಯಾಲಯ ಬದ್ಧವಾಗಿದೆ. ಯಾವುದೇ ವರದಿಯನ್ನು ಕಾಯಬೇಕಾಗಿಲ್ಲ ಎಂದು ತಿಳಿಸಿದೆ. ಸುಮಾರು ಎರಡು ದಶಕಗಳಿಂದ ಇತ್ಯರ್ಥವಾಗದಿರುವ ಪ್ರಕರಣವಾಗಿ ಇದು ಬಾಕಿಯಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಎರಡನೇ ಸಮಿತಿ ಸ್ಥಾಪಿಸಿದ್ದ ಕೇಂದ್ರ
ಸಮುದಾಯಕ್ಕೆ ಸೇರ್ಪಡೆಗೊಂಡವರೆಂದು ತಮ್ಮನ್ನು ತಾವೇ ಕರೆದುಕೊಂಡಿರುವ, ಇತರ ಧರ್ಮಗಳಿಗೆ ಮತಾಂತರಗೊಂಡವರಿಗೆ ಎಸ್‌ಸಿ ಸ್ಥಾನಮಾನ ನೀಡಬಹುದೇ ಎಂದು ಪರಿಶೀಲಿಸಲು ಕೇಂದ್ರವು ಮಾಜಿ ಸಿಜೆಐ ಕೆ ಜಿ ಬಾಲಕೃಷ್ಣನ್ ನೇತೃತ್ವದ ಸಮಿತಿಯನ್ನು ನೇಮಿಸಿತ್ತು. ಅವರು ಸೇರ್ಪಡೆಗೊಳ್ಳಬಹುದು ಎಂದು ಶಿಫಾರಸು ಮಾಡಿದ್ದ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಆಯೋಗದ ಅಂಶಗಳನ್ನು ತಿರಸ್ಕರಿಸಿದ ಕೇಂದ್ರವು ಎರಡನೇ ಸಮಿತಿಯನ್ನು ಸ್ಥಾಪಿಸಿತ್ತು.
ವರದಿ ಮರುಪರಿಶೀಲನೆಗೆ ನ್ಯಾಯಾಲಯದ ಸೂಚನೆ
ಮಿಶ್ರಾ ಆಯೋಗದ ವರದಿಯನ್ನು ಯಾವುದೇ ಕ್ಷೇತ್ರ ಅಧ್ಯಯನ ಮತ್ತು ಸಮಾಲೋಚನೆಗಳಿಲ್ಲದೆ ಸಿದ್ಧಪಡಿಸಲಾಗಿದೆ ಎಂದು ಸರಕಾರ ಆರೋಪಿಸಿದರೆ ನ್ಯಾಯಪೀಠವು ವರದಿ ಅಷ್ಟೊಂದು ಪರಿಣಾಮಕಾರಿಯಲ್ಲ ಎಂದು ತಿಳಿಸಿದೆ. ನ್ಯಾಯಾಲಯಕ್ಕೆ ಯಾವುದೇ ವರದಿಯನ್ನು ಸಲ್ಲಿಸುವ ಮೊದಲು ಸಂಶೋಧನೆಗಳು ಹಾಗೂ ಅಂಕಿಅಂಶಗಳನ್ನು ಪ್ರಸ್ತುತಪಡಿಸಬೇಕು ಆದರೆ ಸರಕಾರ ಈ ವಿಷಯದಲ್ಲಿ ಸಾಮಾನ್ಯ ಹೇಳಿಕೆ ನೀಡುತ್ತಿದ್ದು ವರದಿಯನ್ನು ಮರುಪರಿಶೀಲಿಸಬೇಕು ಎಂದು ತಿಳಿಸಿದೆ.
ಕಾಲಾವಾಕಾಶ ನೀಡಿದ ನ್ಯಾಯಾಲಯ
ಕಾಲಮಿತಿಯಲ್ಲಿ ವಿಚಾರಣೆಯನ್ನು ಮುಕ್ತಾಯಗೊಳಿಸುವುದಾಗಿ ತಿಳಿಸಿರುವ ನ್ಯಾಯಾಲಯವು ಎಲ್ಲಾ ಪಕ್ಷಗಳು ವಿವರವಾದ ಸಲ್ಲಿಕೆಯನ್ನು ಸಲ್ಲಿಸಲು ಹಾಗೂ ಪ್ರಕರಣದಲ್ಲಿ ಸುಗಮ ವಿಚಾರಣೆ ನಡೆಸಲು ದಾಖಲೆಗಳನ್ನು ಸಲ್ಲಿಸಲು ಸಮಯಾವಕಾಶ ನೀಡಿದ್ದು ಎರಡೂ ಕಡೆಯವರು ತಮ್ಮ ವಾದ ಮುಕ್ತಾಯಗೊಳಿಸಲು ತಲಾ ಎರಡೆರಡು ದಿನಗಳನ್ನು ಪಡೆಯುತ್ತಾರೆ.
ಹಿಂದಿನ ವರದಿಯನ್ನು ತಿರಸ್ಕರಿಸಿದ ನಂತರ ಹೊಸ ಆಯೋಗ ಸಂಗ್ರಹಿಸಿರುವ ವಿವರಕ್ಕಾಗಿ ನ್ಯಾಯಾಲಯ ಕಾಯಬೇಕು ಎಂಬ ಸಾಲಿಸಿಟರ್ ಜನರಲ್ ಕೆಎಂ ನಟರಾಜ್ ಅವರ ವಿನಂತಿಗೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ನಾಳೆ ಹೊಸ ವರದಿಯಲ್ಲಿ ವಿಭಿನ್ನ ರೀತಿಯ ವಿವರಗಳಿರುತ್ತವೆ ಅಂತೆಯೇ ರಾಜಕೀಯ ಹಂಚಿಕೆಯೂ ನಡೆಯುತ್ತದೆ ಇದು ಸ್ವೀಕಾರಾರ್ಹವಲ್ಲ ಇದಕ್ಕಾಗಿ ಎಷ್ಟು ಸಮಿತಿಗಳನ್ನು ನೇಮಿಸಲಾಗಿದೆ? ಎಂದು ಪ್ರಶ್ನಿಸಿದೆ.
ನ್ಯಾಯಾಲಯವೇ ತೀರ್ಪು ನೀಡಬೇಕು
ದಲಿತ ಮುಸ್ಲಿಮರು ಮತ್ತು ದಲಿತ ಕ್ರಿಶ್ಚಿಯನ್ನರನ್ನು ಅಸ್ಪೃಶ್ಯರು ಎಂದು ಪರಿಗಣಿಸುವ ಮತ್ತು ತಾರತಮ್ಯದಿಂದ ವರ್ತಿಸುವ ವಿಷಯದ ಬಗ್ಗೆ ಸಾಕಷ್ಟು ತರ್ಕಗಳು ಇರುವುದರಿಂದ ನ್ಯಾಯಾಲಯವೇ ಈ ಸಮಸ್ಯೆಯನ್ನು ಪರಿಹರಿಸಲು ಸಮರ್ಥ ಎಂಬುದಾಗಿ ಹಿರಿಯ ವಕೀಲರಾದ ರಾಜು ರಾಮಚಂದ್ರನ್, ಸಿ ಡಿ ಸಿಂಗ್, ಕಾಲಿನ್ ಗೊನ್ಸಾಲ್ವೆಸ್ ಮತ್ತು ಪ್ರಶಾಂತ್ ಭೂಷಣ್ ಅಭಿಪ್ರಾಯಪಟ್ಟಿದ್ದಾರೆ. ದಲಿತ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರನ್ನು ಇನ್ನೂ ಅಸ್ಪೃಶ್ಯರೆಂದು ಪರಿಗಣಿಸಿದರೆ ಆ ಪಂಗಡದವರು ಕಾನೂನಿನ ಸಲಹೆಯನ್ನು ತೆಗೆದುಕೊಳ್ಳಬಹುದು ಎಂದು ಮನವಿಯನ್ನು ವಿರೋಧ ಬಣವು ಮನವಿ ಸಲ್ಲಿಸಿದೆ.
ಸಾಮಾಜಿಕ ಕಳಂಕವೆಂಬ ಸೂಕ್ಷ್ಮ ವಿಷಯ
ಸಾಮಾಜಿಕ ಹಾಗೂ ಧಾರ್ಮಿಕ ಕಳಂಕವೆಂಬುದು ವಿಭಿನ್ನ ವಿಷಯಗಳಾಗಿವೆ. ಮತಾಂತರದ ನಂತರವೂ ಸಾಮಾಜಿಕ ಕಳಂಕ ಇದ್ದೇ ಇರುತ್ತದೆ. ಈ ಅಂಶಗಳು ತೀವ್ರವಾಗಿ ಸಾಂವಿಧಾನಿಕವಾಗಿರುವುದರಿಂದ ಸೂಕ್ತವಾದ ನಿರ್ಧಾರವನ್ನು ಪ್ರಕಟಿಸಬೇಕಾಗುತ್ತದೆ ಎಂದು ಪೀಠ ವ್ಯಕ್ತಪಡಿಸಿದೆ.
ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಆ ಧಾರ್ಮಿಕ ಸಮುದಾಯಗಳಲ್ಲಿ ಹಿಂದುಳಿದಿರುವಿಕೆ ಅಥವಾ ದಬ್ಬಾಳಿಕೆ ಇಲ್ಲದಿರುವುದರಿಂದ ಅವರಿಗೆ ಎಸ್‌ಸಿ ಸ್ಥಾನಮಾನ ನೀಡಲಾಗುವುದಿಲ್ಲ ಎಂದು ಕೇಂದ್ರವು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿತ್ತು.
ಅಫಿಡವಿಟ್‌ನಲ್ಲಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 1950 ರ ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶವು ಯಾವುದೇ ಅಸಂವಿಧಾನಿಕತೆಯಿಂದ ಬಳಲುತ್ತಿಲ್ಲ ಮತ್ತು ಇದು ಕಾನೂನು ಮತ್ತು ಮಾನ್ಯವಾಗಿದೆ ಎಂದು ಹೇಳಿದೆ. ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಎಂಬ ಎನ್‌ಜಿಒ 2004 ರಲ್ಲಿ ಸಲ್ಲಿಸಿದ ಮನವಿಗೆ ಕೇಂದ್ರವು ಪ್ರತಿಕ್ರಿಯಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ