ನವದೆಹಲಿ (ಜುಲೈ 08): ತೆರಿಗೆ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ನ್ಯಾಯಮಂಡಳಿಯ ತೀರ್ಪಿನ ಹಿನ್ನೆಲೆಯಲ್ಲಿ ಕೇರ್ನ್ ಎನರ್ಜಿ ಎಂಬ ತೈಲ ಉತ್ಪಾದಕ ಸಂಸ್ಥೆ ವಿವಿಧ ದೇಶಗಳಲ್ಲಿರುವ ಭಾರತ ಸರ್ಕಾರದ ಕೆಲ ಆಸ್ತಿಗಳನ್ನ ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಫ್ರಾನ್ಸ್ ದೇಶದಲ್ಲಿ ಕೇರ್ನ್ ಎನರ್ಜಿ ಮೊದಲ ಹೆಜ್ಜೆ ಹಾಕುತ್ತಿದೆ. ಫ್ರಾನ್ಸ್ ದೇಶದಲ್ಲಿರುವ ಭಾರತ ಸರ್ಕಾರದ ಕೆಲ ಆಸ್ತಿಗಳನ್ನ ಮುಟ್ಟುಗೋಲು ಹಾಕಿಕೊಳ್ಳಲು ಕೇರ್ನ್ ಎನರ್ಜಿ ಅನುಮಪತಿ ಪಡೆದಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಸ್ಕಾಟ್ಲೆಂಡ್ ಮೂಲದ ಕೇರ್ನ್ ಎನರ್ಜಿ ಕಂಪನಿಗೆ ಅನಗತ್ಯವಾಗಿ ತೆರಿಗೆ ಹಾಕುವ ಮೂಲಕ ಭಾರತ ಸರ್ಕಾರ 2014ರ ಭಾರತ-ಬ್ರಿಟನ್ ದ್ವಿಪಕ್ಷೀಯ ಹೂಡಿಕೆ ಒಪ್ಪಂದದ ನಿಯಮಗಳನ್ನ ಉಲ್ಲಂಘನೆ ಮಾಡಿದೆ ಎಂದು 2020, ಡಿಸೆಂಬರ್ನಲ್ಲಿ ಅಂತರರಾಷ್ಟ್ರೀಯ ನ್ಯಾಯಮಂಡಳಿಯೊಂದು ತೀರ್ಪು ನೀಡಿತ್ತು. ಕೇರ್ನ್ ಎನರ್ಜಿಗೆ ವಿಧಿಸಲಾದ ತೆರಿಗೆಯ ಮೊತ್ತವನ್ನು ಭಾರತ ಸರ್ಕಾರ ಆ ಕಂಪನಿಯ ಲಾಭಾಂಶ (Dividend), ಟ್ಯಾಕ್ಸ್ ರೀಫಂಡ್, ಷೇರ್ಗಳ ಮಾರಾಟ ಇತ್ಯಾದಿ ಕ್ರಮದ ಮೂಲಕ ವಸೂಲಿ ಮಾಡಿತ್ತು. ಇದನ್ನ ಪ್ರಶ್ನಿಸಿ ಕೇರ್ನ್ ಎನರ್ಜಿ ಸಂಸ್ಥೆ ಸಂಸ್ಥೆ ಇಂಟರ್ನ್ಯಾಷನಲ್ ಟ್ರಿಬ್ಯುನಲ್ ಮೆಟ್ಟಿಲೇರಿತು. ಕೇರ್ನ್ ಸಂಸ್ಥೆಗೆ 1.2 ಬಿಲಿಯನ್ ಡಾಲರ್ (ಸುಮಾರು 8-9 ಸಾವಿರ ಕೋಟಿ ರೂಪಾಯಿ) ಹಾಗೂ ಅದಕ್ಕೆ ಬಡ್ಡಿ ಸೇರಿಸಿ ಹಣ ಕೊಡುವಂತೆ ನ್ಯಾಯಮಂಡಳಿಯು ಭಾರತ ಸರ್ಕಾರಕ್ಕೆ ಆದೇಶ ಹೊರಡಿಸಿತು.
ಆದರೆ, ಈ ಆದೇಶ ಬಂದು ಒಂದು ವರ್ಷದ ಮೇಲಾದರೂ ಭಾರತ ಸರ್ಕಾರ ನ್ಯಾಯಮಂಡಳಿ ಆದೇಶದ ಪ್ರಕಾರ ಯಾವುದೇ ಹಣ ಪಾವತಿ ಮಾಡಲಿಲ್ಲ. ನಂತರ ಕೇರ್ನ್ ಎನರ್ಜಿ ಸಂಸ್ಥೆ ಈ ಪ್ರಕರಣವನ್ನು ವಿವಿಧ ದೇಶಗಳ ಗಮನಕ್ಕೆ ತರಲು ಯತ್ನಿಸಿತು. ಅಮೆರಿಕ, ಬ್ರಿಟನ್, ನೆದರ್ಲೆಂಡ್ಸ್, ಕೆನಡಾ, ಫ್ರಾನ್ಸ್, ಸಿಂಗಾಪುರ್, ಜಪಾನ್, ಯುಎಇ ಮತ್ತು ಕೇಮನ್ ಐಲೆಂಡ್ಸ್ ದೇಶಗಳಲ್ಲಿ ಈ ಪ್ರಕರಣವನ್ನು ಪರಿಗಣಿಸುವಂತೆ ಅಲ್ಲಿನ ನ್ಯಾಯಾಲಯಗಳ ಮೊರೆ ಹೋಗಿದೆ. ಈ ವರ್ಷದ ಆರಂಭದಲ್ಲೂ ಭಾರತ ಸರ್ಕಾರಕ್ಕೆ ಪತ್ರ ಬರೆದಿರುವ ಕೇರ್ನ್ ಸಂಸ್ಥೆ, ಒಂದು ವೇಳೆ ತನಗೆ ಸಂದಾಯವಾಗಬೇಕಿರುವ ಹಣ ಬರದೇ ಹೋದಲ್ಲಿ ವಿದೇಶಗಳಲ್ಲಿರುವ ಅದರ ಬ್ಯಾಂಕ್ ಖಾತೆಗಳು, ವಿಮಾನ, ಹಡಗು ಇತ್ಯಾದಿ ಆಸ್ತಿಗಳನ್ನ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ತನಗೆ ಇದೆ ಎಂದು ಎಚ್ಚರಿಕೆ ನೀಡಿತ್ತು. ಒಂದು ಸುದ್ದಿಯ ಪ್ರಕಾರ, ಕೇರ್ನ್ ಎನರ್ಜಿ ಸಂಸ್ಥೆಗೆ ಭಾರತ ಸರ್ಕಾರ 1.72 ಬಿಲಿಯನ್ ಡಾಲರ್ ಹಣ ಪಾವತಿಸಬೇಕಾಗುತ್ತದೆ. ಇದರ ಹಣ ವಸೂಲಿಗಾಗಿ ಕೇರ್ನ್ ಸಂಸ್ಥೆ ವಿದೇಶಗಳಲ್ಲಿ ಭಾರತ ಸರ್ಕಾರಕ್ಕೆ ಸೇರಿದ, ಮುಟ್ಟುಗೋಲು ಹಾಕಿಕೊಳ್ಳಬಹುದಾದಂಥ 70 ಬಿಲಿಯನ್ ಡಾಲ್ ಮೌಲ್ಯದ ಆಸ್ತಿಗಳನ್ನ ಗುರುತಿಸಿದೆ.
ಇದನ್ನೂ ಓದಿ: ಮಮತಾ ಬ್ಯಾನರ್ಜಿ ವಿರುದ್ಧದ ವಾಗ್ದಾಳಿಯನ್ನು ನಿಲ್ಲಿಸಿ; ಸುವೆಂಧು ಅಧಿಕಾರಿಗೆ ಬಿಜೆಪಿ ಹೈಕಮಾಂಡ್ ಸೂಚನೆ
ಇದರ ಮೊದಲ ಹೆಜ್ಜೆಗೆ ಫ್ರಾನ್ಸ್ ನ್ಯಾಯಾಲಯದ ತೀರ್ಪು ಅನುವು ಮಾಡಿಕೊಟ್ಟಿದೆ. ಕೇರ್ನ್ ಎನರ್ಜಿ ಪರವಾಗಿ ಅಂತರರಾಷ್ಟ್ರೀಯ ನ್ಯಾಯಮಂಡಳಿ ನೀಡಿರುವ ತೀರ್ಪನ್ನು ಭಾರತ ಸರ್ಕಾರ ಕೆಲ ತಿಂಗಳ ಹಿಂದೆ ಮೇಲ್ಮನವಿ ಮಾಡಿದೆ. ಇದಾದ ಬೆನ್ನಲ್ಲೇ ಜೂನ್ 11ರಂದು ಫ್ರಾನ್ಸ್ ಕೋರ್ಟ್ ತೀರ್ಪ ಬಂದಿದೆ. ಫ್ರಾನ್ಸ್ನಲ್ಲಿ ಭಾರತ ಸರ್ಕಾರಕ್ಕೆ ಸೇರಿದ 20 ಆಸ್ತಿಗಳನ್ನ ಕೇರ್ನ್ ಎನರ್ಜಿ ಗುರುತಿಸಿದೆ. ಇದರಲ್ಲಿ ಫ್ಲಾಟ್ ಇತ್ಯಾದಿ ಆಸ್ತಿಗಳೇ ಹೆಚ್ಚಿನವು. ಕೋರ್ಟ್ ಅನುಮತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಈ ಆಸ್ತಿಗಳಿಗೆ ಕೇರ್ನ್ ಎನರ್ಜಿಯೇ ವಾರಸುದಾರವಾಗುತ್ತದೆ. ಇವುಗಳ ಮಾರಾಟ ಮಾಡುವ ಹಕ್ಕು ಕೇರ್ನ್ ಎನರ್ಜಿಗೆ ಸೇರಿದ್ದಾಗಿರುತ್ತದೆ ಎಂಬುದು ಫೈನಾನ್ಷಿಯಲ್ ಟೈಮ್ಸ್ ವರದಿಯ ಅಭಿಪ್ರಾಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ