ನವದೆಹಲಿ(ಜೂ. 01): ಪ್ರಕೃತಿ ವಿಕೋಪ ಮತ್ತು ಅಸಮರ್ಪಕ ಮಾರುಕಟ್ಟೆ ವ್ಯವಸ್ಥೆಯಿಂದ ಹೈರಾಣಗೊಂಡಿರುವ ರೈತರಿಗೆ ಕೇಂದ್ರ ಸರ್ಕಾರ ನೆರವಿನ ಹಸ್ತ ಚಾಚಿದೆ. ಮುಂಗಾರು ಬಿತ್ತನೆಯ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ನೀಡಿದ ಮಾಹಿತಿ ಪ್ರಕಾರ 14 ಬೆಳೆಗಳಿಗೆ ಶೇ. 50ರಿಂದ ಶೇ. 83ರಷ್ಟು ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ.
ಈಗಿನ ಸರ್ಕಾರಕ್ಕೆ 1 ವರ್ಷದ ಪೂರೈಸಿದ ನಂತರ ಮೊದಲ ಬಾರಿಗೆ ಪ್ರಧಾನಿ ಕರೆದ ಸಂಪುಟ ಸಭೆಯಲ್ಲಿ ರೈತರ ಬೆಳೆಗೆ ಬೆಂಬಲ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ವಲಯಗಳಲ್ಲಿ ವಿವಿಧ ಕ್ರಮಗಳಿಗೆ ಅನುಮೋದನೆ ನೀಡಲಾಗಿದೆ.
ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಈಗಿರುವ ಎಪಿಎಂಸಿ ಕಾಯ್ದೆ ಬದಲು ಹೊಸ ಕಾನೂನು ಜಾರಿಗೆ ತರಲು ಇದೇ ವೇಳೆ ಕೇಂದ್ರ ಸರ್ಕಾರ ಚಿಂತಿಸಿದೆ. ಹಾಗೆಯೇ, ರೈತರು ತಮ್ಮ ಉತ್ಪನ್ನಗಳನ್ನ ಬೇರೆ ರಾಜ್ಯಗಳಲ್ಲಿ ಮಾರುವ ಅವಕಾಶ ನೀಡಲೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ರೈತರಿಗಾಗಿ ಕೇಂದ್ರ ಸರ್ಕಾರದ ಈ ಯೋಜನೆಗೆ ನೊಂದಾಯಿಸಲು ಜುಲೈ 31 ಕೊನೆಯ ದಿನ
ಇದೇ ವೇಳೆ, ಇವತ್ತಿನ ಸಂಪುಟ ಸಭೆಯಲ್ಲಿ ಎಂಎಸ್ಎಂಇ ವಲಯಗಳಿಗೆ ಪುಷ್ಟಿ ನೀಡುವ ಕ್ರಮಗಳಿಗೆ ಒಪ್ಪಿಗೆ ನೀಡಲಾಯಿತು. ಸಂಕಷ್ಟದಲ್ಲಿರುವ ಮಧ್ಯಮ ಮತ್ತು ಸಣ್ಣ ಉದ್ಯಮ (ಎಂಎಸ್ಎಂಇ)ಗಳಿಗೆ 20 ಸಾವಿರ ಕೋಟಿ ರೂ ಸಬಾರ್ಡಿನೇಟ್ ಸಾಲವನ್ನು ಸಂಪುಟ ಸಭೆಯಲ್ಲಿ ಮಂಜೂರು ಮಾಡಲಾಗಿದೆ. ಇದರಿಂದ ದೇಶದ 2 ಲಕ್ಷ ಸಣ್ಣ ಉದ್ಯಮಗಳಿಗೆ ಲಾಭವಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: 20 ಲಕ್ಷ ಕೋಟಿ ರೂ ಪ್ಯಾಕೇಜ್ಗೆ ಹಂತಹಂತವಾಗಿ ಒಪ್ಪಿಗೆ ನೀಡುತ್ತಿರುವ ಕೇಂದ್ರ ಸಂಪುಟ; ಯಾರಿಗೆ ಏನೇನು?
ಹಾಗೆಯೇ, ಎಂಎಸ್ಎಂಇ ವಲಯದ ಮಾನದಂಡವನ್ನೂ ಸ್ವಲ್ಪ ಬದಲಿಸಲಾಗಿದೆ. ಮಧ್ಯಮ ಮಟ್ಟದ ಉದ್ಯಮಗಳ ಟರ್ನೋವರ್ ಮಿತಿಯನ್ನು 100 ಕೋಟಿ ಬದಲಿಗೆ 250 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಅಂದರೆ, 250 ಕೋಟಿಗಿಂತ ಕಡಿಮೆ ವಹಿವಾಟು ಹೊಂದಿರುವ ಕಂಪನಿ ಎಂಎಸ್ಎಂಇ ಕೆಟಗರಿಯಲ್ಲೇ ಉಳಿಯುತ್ತದೆ. ಅದನ್ನು ಬೃಹತ್ ಉದ್ಯಮ ವಲಯಕ್ಕೆ ಸೇರಿಸಲಾಗುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ