ಮಧ್ಯಪ್ರದೇಶ (ನವೆಂಬರ್ 10); ಬಹು ನಿರೀಕ್ಷಿತ ಬಿಹಾರದ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಈ ಫಲಿತಾಂಶವನ್ನು ಭವಿಷ್ಯದ ರಾಜಕೀಯ ದಿಕ್ಸೂಚಿ ಎಂದು ಬಣ್ಣಿಸಲಾಗುತ್ತಿದ್ದು, ಇದೇ ಕಾರಣಕ್ಕಾಗಿ ಎಲ್ಲಾ ಪಕ್ಷಗಳು ಮತ್ತು ಇಡೀ ದೇಶ ಈ ಫಲಿತಾಂಶದ ಬಗ್ಗೆ ಕುತೂಹಲದಿಂದಿವೆ. ಆದರೆ, ಬಿಹಾರದ ಚುನಾವಣೆ ಜೊತೆ ಜೊತೆ ಮಧ್ಯಪ್ರದೇಶ, ಕರ್ನಾಟಕ, ಒಡಿಸ್ಸಾ ಸೇರಿದಂತೆ ದೇಶದ 12ಕ್ಕೂ ಹೆಚ್ಚು ರಾಜ್ಯಗಳ 56 ವಿಧಾನ ಸಭಾ ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೂ ಉಪ ಚುನಾವಣೆ ನಡೆದಿದೆ. ಈ ಪೈಕಿ ಇತ್ತೀಚೆಗೆ ಆಪರೇಷನ್ ಕಮಲದ ಕಾರಣಕ್ಕೆ ಕಾಂಗ್ರೆಸ್ ಕೈತಪ್ಪಿದ ಮಧ್ಯಪ್ರದೇಶದಲ್ಲೂ ಉಪ ಚುನಾವಣೆ ನಡೆದಿದ್ದು, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಈ ಉಪ ಚುನಾವಣಾ ಫಲಿತಾಂಶ ಸ್ವ ಪ್ರತಿಷ್ಠಯ ಕಣವಾಗಿದೆ. ಈ ಗೆಲುವಿನ ಆಧಾರದಲ್ಲಿ ಅವರಿಗೆ ಈಗಲೂ ಮಧ್ಯಪ್ರದೇಶದಲ್ಲಿ ವರ್ಚಸ್ಸು ಇದೆಯೇ? ಎಂಬ ಅಂಶ ಬಯಲಾಗಲಿದೆ ಎಂದು ಚುನಾವಣಾ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಜ್ಯೋತಿರಾದಿತ್ಯ ಸಿಂಧಿಯಾ ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಫೈರ್ ಬ್ರ್ಯಾಂಡ್ ಯುವ ನಾಯಕನಾಗಿ ಗುರುತಿಸಿಕೊಂಡಿದ್ದ ವ್ಯಕ್ತಿ. ಅಲ್ಲದೆ, ರಾಹುಲ್ ಗಾಂಧಿಯ ಜೊತೆಗೆ ಆತ್ಮೀಯ ಒಡನಾಟ ಹೊಂದಿದ್ದರು. ಹೀಗಾಗಿ ಜ್ಯೋತಿರಾದಿತ್ಯ ಸಿಂಧಿಯಾ ಅವರೇ ಮುಂದಿನ ಮಧ್ಯಪ್ರದೇಶದ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಎಂಬ ಮಟ್ಟಕ್ಕೆ ಪ್ರಚಾರ ನೀಡಲಾಗಿತ್ತು. ಆದರೆ, ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಂದಿನ ಸಿಎಂ ಕಮಲನಾಥ್ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.
ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆ ಸಿಂಧಿಯಾ ಬಣದ ಎಲ್ಲಾ ಶಾಸಕರು ಬಿಜೆಪಿ ಪಾಲಾಗಿದ್ದರು. ಪರಿಣಾಮ ಆಪರೇಷನ್ ಕಮಲದ ಮೂಲಕ ಬಿಜೆಪಿ ಮಧ್ಯಪ್ರದೇಶದಲ್ಲಿ ಕಮಲವನ್ನು ಅರಳಿಸಿತ್ತು. ಆದರೆ, ಈ ಘಟನೆಯಿಂದಾಗಿ ಸಿಂಧಿಯಾ ಅವರ ವರ್ಚಸ್ಸು ಮಧ್ಯಪ್ರದೇಶದಲ್ಲಿ ಕುಸಿದಿದೆ ಎಂಬ ಮಾತುಗಳು ರಾಜಕೀಯ ವಠಾರದಲ್ಲಿ ಕೇಳಿಬರಲಾರಂಭಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ