ಹರ್ಯಾಣ: ಸುಟ್ಟು ಕರಕಲಾಗಿದ್ದ ಬೊಲೆರೋ ವಾಹನವೊಂದರಲ್ಲಿ ಮನುಷ್ಯರ ಎರಡು ಅಸ್ಥಿಪಂಜರಗಳು (Skeletons) ಸಿಕ್ಕಿರುವ ಅಚ್ಚರಿಯ ಘಟನೆ (Crime News) ಹರ್ಯಾಣ ರಾಜ್ಯದಲ್ಲಿ (Haryana) ನಡೆದಿದೆ. ಹರ್ಯಾಣದ ಭಿವಾನಿಯ ಲೋಹರು ಪೊಲೀಸ್ ಠಾಣೆ ವ್ಯಾಪ್ತಿಯ ಬರ್ವಾಸ್ ಗ್ರಾಮದಲ್ಲಿ ಈ ಘಟನೆ ವರದಿಯಾಗಿದ್ದು, ಸ್ಥಳೀಯರ ಸಹಕಾರದಿಂದ ಪೊಲೀಸರು ವಿಧಿ ವಿಜ್ಞಾನ ತಂಡದ ಜೊತೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇನ್ನೊಂದೆಡೆ ಕಾರ್‌ನ ಇಂಜಿನ್ ರಿಜಿಸ್ಟ್ರೇಶನ್ ನಂಬರ್ ಅದೇ ದಿನ ರಾಜಸ್ಥಾನದ ಭರತ್‌ಪುರದಲ್ಲಿ ದಾಖಲಾಗಿರುವ ನಾಪತ್ತೆಯಾದ ವ್ಯಕ್ತಿಯ ಹೆಸರಿನಲ್ಲಿದ್ದು, ಇದು ಈ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದೆ. ಘಟನೆಯ ಕುರಿತು ಎಲ್ಲಾ ವಿವರಗಳನ್ನು ಪರಿಶೀಲಿಸಲು ರಾಜಸ್ಥಾನ ಪೊಲೀಸರು ಹರ್ಯಾಣಕ್ಕೆ ತಂಡವನ್ನು ಕಳುಹಿಸಿದ್ದಾರೆ. ನಿನ್ನೆ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ವಾಹನದಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ಆ ಇಬ್ಬರೂ ವ್ಯಕ್ತಿಗಳು ಸುಟ್ಟುಹೋಗಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಲೋಹರು ಡಿಎಸ್ಪಿ ಜಗತ್ ಸಿಂಗ್ ಮೋರೆ ಹೇಳಿದ್ದಾರೆ.
ಕಾರ್ ಸಂಖ್ಯೆಯಿಂದ ಸತ್ಯದ ಶೋಧ
ಅತ್ತ ರಾಜಸ್ಥಾನದ ಭರತ್‌ಪುರದಲ್ಲಿ ನಾಸಿರ್ ಮತ್ತು ಜುನೈದ್ ಎಂಬ ಇಬ್ಬರು ವ್ಯಕ್ತಿಗಳನ್ನು ಅಪಹರಿಸಿ ಕೊಲ್ಲಲಾಗಿದೆ ಎಂದು ದೂರು ದಾಖಲಾಗಿದ್ದು, ಇವರಿಬ್ಬರೂ ಬೊಲೆರೋ ವಾಹನದಲ್ಲಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಭಿವಾನಿಯಲ್ಲಿ ಪತ್ತೆಯಾದ ಬೊಲೆರೊ ಕಾರ್‌ನ ಇಂಜಿನ್ ನೋಂದಣಿ ಸಂಖ್ಯೆಯು ನಾಸಿರ್ ಮತ್ತು ಜುನೈದ್ ಪರಾರಿಯಾಗಿದ್ದ ಕಾರ್‌ನ ನಂಬರ್‌ಗೂ ಹೊಂದಾಣಿಕೆಯಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಡೆದು ಅಪಹರಣ ಮಾಡಲಾಗಿದೆ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಐಜಿಪಿ ಭರತ್‌ಪುರ ಗೌರವ್ ಶ್ರೀವಾಸ್ತವ, ಇಬ್ಬರು ಯುವಕರನ್ನು ರಾತ್ರಿ ವೇಳೆ ಅಪಹರಣ ಮಾಡಿದ್ದಾರೆ ಎಂದು ಅವರ ಸಂಬಂಧಿಕರು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಬಳಿಕ ನಾವು ಅವರ ಫೋನ್‌ಗಳನ್ನು ಟ್ರೇಸ್ ಮಾಡಲು ಪ್ರಯತ್ನಿಸಿದ್ದೇವೆ. ಆದರೆ ಅದು ಆಗ ಸ್ವಿಚ್‌ಆಫ್ ಆಗಿತ್ತು. ನಾವು ಅವರನ್ನು ಹತ್ತಿರದ ಪ್ರದೇಶಗಳಲ್ಲಿ ಹುಡುಕಲು ಪ್ರಯತ್ನ ಪಟ್ಟಿದ್ದೇವೆ. ಬಳಿಕ ಅವರು ಬೊಲೆರೋ ವಾಹನದಲ್ಲಿದ್ದರು, ಅವರನ್ನು ಹೊಡೆದು ಅಪಹರಣ ಮಾಡಲಾಗಿದೆ ಎಂದು ನಮಗೆ ಸುದ್ದಿ ಸಿಕ್ಕಿತ್ತು ಎಂದು ಹೇಳಿದರು.
ಇದನ್ನೂ ಓದಿ: Smart City Project: ಪ್ರಧಾನಿ ಮೋದಿ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆ ಕರ್ನಾಟಕದಲ್ಲಿ ಈ ವರ್ಷನೂ ಪೂರ್ಣಗೊಳ್ಳಲ್ವಂತೆ!
ಫೊರೆನ್ಸಿಕ್ ವರದಿ ಮತ್ತು ಡಿಎನ್ಎ ಪರೀಕ್ಷೆಯ ನಂತರ ವಾಸ್ತವಾಂಶ ಬಯಲು
ಸದ್ಯ ಸಂತ್ರಸ್ತರ ಗುರುತನ್ನು ಖಚಿತ ಪಡಿಸಿಕೊಳ್ಳಲು ರಾಜಸ್ಥಾನ ಪೊಲೀಸರ ತಂಡ ನಾಸೀರ್ ಮತ್ತು ಜುನೈದ್ ಅವರ ಸಂಬಂಧಿಕರನ್ನು ಕಾರ್ ಮತ್ತು ಅಸ್ತಿಪಂಜರ ಪತ್ತೆಯಾದ ಜಾಗಕ್ಕೆ ಕರೆತಂದಿದ್ದು, ಫೊರೆನ್ಸಿಕ್ ವರದಿ ಮತ್ತು ಡಿಎನ್ಎ ಪರೀಕ್ಷೆಯ ನಂತರವೇ ನಾವು ಮೃತ ಸಂತ್ರಸ್ತರ ಗುರುತನ್ನು ಖಚಿತಪಡಿಸಲು ಸಾಧ್ಯವಾಗುತ್ತದೆ ಎಂದು ಐಜಿಪಿ ಭರತ್‌ಪುರ ಗೌರವ್ ಶ್ರೀವಾಸ್ತವ ಹೇಳಿದ್ದಾರೆ.
ಸದ್ಯ ನಾಸೀರ್ ಮತ್ತು ಜುನೈದ್ ಅವರ ಸಂಬಂಧಿಕರಲ್ಲಿ ಮನೆಯಲ್ಲಿ ಆತಂಕ ಆವರಿಸಿದ್ದು, ಮಕ್ಕಳು ಜೀವಂತವಾಗಿ ಬರಲಿ ಎಂದು ಹೆತ್ತವರು ಕನವರಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ