ಭೋಪಾಲ್: "ನಮ್ಮ ಚಪ್ಪಲಿ ಎತ್ತಲಷ್ಟೇ ಅಧಿಕಾರಿಗಳು ಯೋಗ್ಯರು" ಎಂದು ಹೇಳುವ ಮೂಲಕ ಬಿಜೆಪಿ (BJP) ಹಿರಿಯ ನಾಯಕಿ, ಮಧ್ಯಪ್ರದೇಶದ ಮಾಜಿ ಸಿಎಂ ಉಮಾ ಭಾರತಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಉಮಾ ಭಾರತಿ (Uma Bharti) ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಆಗಿಂದಾಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸದಾ ಸುದ್ದಿಯಲ್ಲಿರುವುದು ಉಮಾ ಭಾರತಿ ಅವರಿಗೆ ವಾಡಿಕೆ. ಇದೇ ಕಾರಣಕ್ಕೆ ಅವರು ಕುಖ್ಯಾತಿಯೂ ಆಗಿದ್ದಾರೆ. ಆದರೆ, ಇದೀಗ ಅಧಿಕಾರಶಾಹಿ ಗಳ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಮತ್ತೆ ಕುಖ್ಯಾತಿಗೆ ಒಳಗಾಗಿ ದ್ದಾರೆ. "ಅಧಿಕಾರಿಗಳು ನಮ್ಮ ಚಪ್ಪಲಿ ಎತ್ತಲಷ್ಟೇ ಯೋಗ್ಯರು" ಎಂದಿರುವ ಅವರು, "ಅವರಿಗೆ ಯಾವುದೇ ಸ್ವತಂತ್ರ ನಿಲುವು ಇರುವುದಿಲ್ಲ" ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದ್ದು, ಈ ವಿಚಾರ ಪ್ರಸ್ತುತ ದೇಶದಾದ್ಯಂತ ದೊಡ್ಟ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಾತನಾಡಿರುವ ಉಮಾ ಭಾರತಿ, "ಅಧಿಕಾರಶಾಹಿಗಳು ರಾಜಕಾರಣಿಗಳನ್ನು ನಿಯಂತ್ರಿಸುತ್ತಾರೆ ಎಂದು ನೀವು ಭಾವಿಸುತ್ತೀರಾ? ಇಲ್ಲ. ಮೊದಲು ಖಾಸಗಿಯಾಗಿ ಚರ್ಚೆಗಳು ನಡೆಯುತ್ತವೆ ಮತ್ತು ನಂತರ ಅಧಿಕಾರಶಾಹಿಗಳು ಒಂದು ಕಡತವನ್ನು ತಯಾರಿಸುತ್ತಾರೆ. ನನ್ನನ್ನು ಕೇಳಿ, 11 ವರ್ಷಗಳಿಂದ ನಾನು ಕೇಂದ್ರ ಸಚಿವೆ ಮತ್ತು ಮುಖ್ಯಮಂತ್ರಿಯಾಗಿದ್ದೇನೆ. ಮೊದಲು ನಾವು ಚರ್ಚೆ ನಡೆಸುತ್ತೇವೆ ಮತ್ತು ನಂತರ ಫೈಲ್ ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.
ಅಧಿಕಾರಶಾಹಿ ರಾಜಕಾರಣಿಗಳನ್ನು ನಿಯಂತ್ರಿಸುವುದು ಎಲ್ಲಾ ಅಸಂಬದ್ಧ. ಅವರಿಗೆ ಸಾಧ್ಯವಿಲ್ಲ … ಅವರ ನಿಲುವು ಏನು? ನಾವು ಅವರಿಗೆ ಸಂಬಳ ನೀಡುತ್ತಿದ್ದೇವೆ, ನಾವು ಅವರಿಗೆ ಪೋಸ್ಟಿಂಗ್ ನೀಡುತ್ತಿದ್ದೇವೆ, ನಾವು ಅವರಿಗೆ ಬಡ್ತಿ ಮತ್ತು ಪದವಿಯನ್ನು ನೀಡುತ್ತಿದ್ದೇವೆ – ಅವರು ಏನು ಮಾಡಬಹುದು? ಸತ್ಯವೆಂದರೆ ನಾವು ಅವರನ್ನು ನಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.
ಒಬಿಸಿ ಮುಖಂಡರ ನಿಯೋಗವು ಜಾತಿ ಆಧಾರಿತ ಜನಗಣತಿ ಮತ್ತು ಖಾಸಗಿ ಉದ್ಯೋಗಗಳಲ್ಲಿ ಕೋಟಾದ ಬೇಡಿಕೆಯನ್ನು ಅವರ ಮುಂದಿಟ್ಟ ವೇಳೆ ಈ ಹೇಳಿಕೆ ನೀಡಿದ್ದಾರೆ. ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಜಾತಿಗಣತಿ ಕುರಿತು ಬೇಗನೆ ನಿರ್ಧಾರ ತೆಗೆದುಕೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದೆ.
ಉಮಾಭಾರತಿ ಹೇಳಿಕೆಯನ್ನು ಪ್ರತಿಪಕ್ಷ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಅವರ ಹೇಳಿಕೆಯನ್ನು ನಾಚಿಕೆಗೇಡು ಎಂದಿರುವ ಕಾಂಗ್ರೆಸ್ ನಾಯಕ ಕೆಕೆ ಮಿಶ್ರಾ "ಅಧಿಕಾರಿಗಳು ರಾಜಕಾರಣಿಗಳ ಚಪ್ಪಲಿ ಎತ್ತುತ್ತಾರೆಯೇ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸ್ಪಷ್ಟಪಡಿಸಬೇಕು" ಎಂದು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ