ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಜ. 30ರಂದು ಸರ್ವ ಪಕ್ಷ ನಾಯಕರ ಸಭೆ ಕರೆದ ಪ್ರಧಾನಿ ಮೋದಿ

ಫೆ. 1ಕ್ಕೆ ಬಜೆಟ್ ಇದ್ದು ಜ. 29ರಿಂದ ಅಧಿವೇಶನ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಜ. 30ರಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸರ್ವ ಪಕ್ಷ ನಾಯಕರ ಸಭೆ ಕರೆದಿದ್ದಾರೆ.

ನರೇಂದ್ರ ಮೋದಿ

ನರೇಂದ್ರ ಮೋದಿ

  • Share this:
ನವದೆಹಲಿ(ಜ. 20): ಕೊರೊನಾ ಕಾರಣದಿಂದ ಅನಿಶ್ಚಿತಗೊಂಡಿದ್ದ ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ದಿನಾಂಕ ನಿಗದಿಗೊಂಡಿದ್ದು ಅಧಿವೇಶನದ ಹಿನ್ನೆಲೆಯಲ್ಲಿ ಜನವರಿ 30ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ವ ಪಕ್ಷ ನಾಯಕರ ಸಭೆ ಕರೆದಿದ್ದಾರೆ. ಜನವರಿ 29ರಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದೆ. ಫೆಬ್ರವರಿ 1ಕ್ಕೆ ಬಹು ನಿರೀಕ್ಷಿತ ಕೇಂದ್ರದ ಬಜೆಟ್ ಮಂಡನೆ ಆಗಲಿದೆ‌. ಈ ಎರಡು ದಿನಗಳ ನಡುವೆ ಜನವರಿ 30ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸರ್ವ ಪಕ್ಷ ನಾಯಕರ ಸಭೆ ಕರೆಯಲಾಗಿದೆ‌.

ಸಭೆಯಲ್ಲಿ ಕೊರೋನಾ ಕಾರಣಕ್ಕೆ ಜಂಟಿ ಅಧಿವೇಶನ ಮತ್ತು ಬಜೆಟ್ ಅಧಿವೇಶನವನ್ನು ಒಟ್ಟಾಗಿ ನಡೆಸುತ್ತಿರುವ ಬಗ್ಗೆ, ಕಡಿಮೆ ದಿನಗಳ ಕಾಲ ನಡೆಸುತ್ತಿರುವ ಬಗ್ಗೆ, ಶಿಫ್ಟ್ ನಲ್ಲಿ ನಡೆಸುತ್ತಿರುವ ಬಗ್ಗೆ, ಅಂದರೆ ದಿನದಲ್ಲೂ ಕಡಿಮೆ ಅವಧಿ ಅಧಿವೇಶನ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿ ಪ್ರತಿಪಕ್ಷಗಳ ಸಹಕಾರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನವಿ ಮಾಡಲಿದ್ದಾರೆ.

ಅಲ್ಲದೆ ಪ್ರತಿಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ವಿವಾದಾತ್ಮಕ ಕೃಷಿ ಕಾನೂನುಗಳ ಬಗ್ಗೆ, ರೈತರ ಪ್ರತಿಭಟನೆ ಬಗ್ಗೆ, ಕೊರೋನಾ ಬಗ್ಗೆ, ಭಾರತ ಮತ್ತು ಚೀನಾ ಗಡಿಯಲ್ಲಿ ‌ನಿರ್ಮಾಣವಾಗಿರುವ ಉದ್ವಿಗ್ನತೆ ಬಗ್ಗೆ, ಪುಲ್ವಾಮಾ ದಾಳಿಯ ಮಾಹಿತಿಗಳು ಸೋರಿಕೆಯಾದ ಬಗ್ಗೆ, ದೇಶದಲ್ಲಿ ಹಿಂದೆಂದೂ ಕಂಡರಿಯದ ಆರ್ಥಿಕ‌ ಬಿಕ್ಕಟ್ಟು ಸೃಷ್ಟಿಯಾಗಿರುವ ಬಗ್ಗೆ, ನಿರುದ್ಯೋಗ ಸಮಸ್ಯೆ ಬಗ್ಗೆ ಮತ್ತು ಪೆಟ್ರೋಲ್, ಡೀಸೆಲ್‌, ಗ್ಯಾಸ್ ಸಿಲಿಂಡರ್ ಗಳ ಬೆಲೆ ಏರಿಕೆ ಆಗಿರುವ ಬಗ್ಗೆ ಚರ್ಚಿಸಲು ಪ್ರಯತ್ನಿಸಲಿದೆ. ಈ ಹಿನ್ನೆಲೆಯಲ್ಲಿ ಇತರೆ ಪಕ್ಷಗಳನ್ನು ಮೊದಲೇ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸರ್ವ ಪಕ್ಷ ಸಭೆ ಕರೆಯಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Rahul Gandhi: ಜೆ.ಪಿ. ನಡ್ಡಾ ಯಾರು, ನನ್ನ ಪ್ರಾಧ್ಯಾಪಕರೇ, ಅವರಿಗೇಕೆ ನಾನು ಉತ್ತರಿಸಲಿ?; ರಾಹುಲ್ ಗಾಂಧಿ ಕಿಡಿ

ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಜನವರಿ 29ರಿಂದ ಏಪ್ರಿಲ್ 8ರವರೆಗೆ ಬಜೆಟ್ ಅಧಿವೇಶನ ನಡೆಸುವಂತೆ ಶಿಫಾರಸು ಮಾಡಿದೆ.‌ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಶಿಫಾರಸು ಮೇರೆಗೆ ಜನವರಿ 29 ರಿಂದ ಫೆಬ್ರವರಿ 15ರವರೆಗೆ ಮೊದಲ ಹಂತದ ಅಧಿವೇಶನ ನಡೆಸಲಾಗುವುದು.‌ ಮಾರ್ಚ್ 8 ರಿಂದ ಏಪ್ರಿಲ್ 8ರವರೆಗೆ ಎರಡನೇ ಹಂತದ ಅಧಿವೇಶನ ನಡೆಸಲಾಗುವುದು. ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಂಸತ್ ಸದಸ್ಯರು RT-PCR ಟೆಸ್ಟ್ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.

ದೇಶದಲ್ಲಿ ಇನ್ನು ಕೂಡ ಕೊರೋನಾ ವೈರಸ್ ಹರಡುವಿಕೆ ಕಡಿಮೆ ಆಗಿಲ್ಲದ ಕಾರಣ ಬಜೆಟ್ ಅಧಿವೇಶನವನ್ನೂ ಮಳೆಗಾಲದ ಅಧಿವೇಶನದಂತೆ ಶಿಫ್ಟ್ ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ರಾಜ್ಯಸಭೆಯ ಕಲಾಪಗಳು ನಡೆಯಲಿವೆ.  2 ಗಂಟೆಗಳ ಬಿಡುವಿನಲ್ಲಿ ಕಲಾಪ ನಡೆಯುವ ಸ್ಥಳವನ್ನು ಸ್ಯಾನಿಟೈಸ್ ಮಾಡಿ ಮತ್ತೆ ಸಂಜೆ 4ರಿಂದ ರಾತ್ರಿ 9 ಗಂಟೆವರೆಗೆ ಲೋಕಸಭೆಯ ಕಲಾಪ ನಡೆಸಲಾಗುವುದು ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Mamata Banerjee; ಮಾವೋವಾದಿಗಳಿಗಿಂತ ಬಿಜೆಪಿ ಹೆಚ್ಚು ಅಪಾಯಕಾರಿ: ಮಮತಾ ಬ್ಯಾನರ್ಜಿ ಆಕ್ರೋಶ

ಸಮಯಾವಕಾಶ ಕಡಿಮೆ ಇರುವುದರಿಂದ ಕಲಾಪದಲ್ಲಿ ಶೂನ್ಯ ವೇಳೆ ಮತ್ತು ಪ್ರಶ್ನೋತ್ತರಕ್ಕೆ ಅವಕಾಶ ನೀಡಲಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿತ್ತು. ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಓಂ ಬಿರ್ಲ, ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಶೂನ್ಯ ವೇಳೆ ಮತ್ತು ಪ್ರಶ್ನೋತ್ತರಗಳು ಇರಲಿವೆ ಎಂದು ತಿಳಿಸಿದ್ದಾರೆ.

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಜನವರಿ 29 ರಂದು ಲೋಕಸಭೆ ಮತ್ತು ರಾಜ್ಯಸಭೆ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಫೆಬ್ರವರಿ 1ಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುವರು. ಕೊರೋನಾ ಮತ್ತು ಲಾಕ್ಡೌನ್ ನಂತರ ಮಂಡನೆ ಆಗುತ್ತಿರುವ ಮೊದಲ ಬಜೆಟ್ ಇದಾಗಿರುವುದರಿಂದ ಈ ಬಜೆಟ್ ತೀವ್ರ ಕುತೂಹಲ ಮೂಡಿಸಿದೆ. ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಸೃಷ್ಟಿಯಾಗಿದ್ದು ಆರ್ಥಿಕ ಪುನಶ್ಚೇತನಕ್ಕೆ ಪೂರಕವಾದ ಬಜೆಟ್ ಮಂಡಿಸುವ ಗುರುತರ ಹೊಣೆಗಾರಿಕೆ ನಿರ್ಮಲಾ ಸೀತಾರಾಮನ್ ಅವರ ಮೇಲಿದೆ.

ವರದಿ: ಧರಣೀಶ್ ಬೂಕನಕೆರೆ
Published by:Vijayasarthy SN
First published: