ನವದೆಹಲಿ (ಜ. 20): ಕೊರೋನಾ ವೈರಸ್ ಸೋಂಕಿನಿಂದಾಗಿ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಈ ಬಾರಿ ಬಜೆಟ್ ಅಧಿವೇಶನ ನಡೆಸಲು ಸಕಲ ಸಿದ್ಧತೆ ನಡೆಸಲಾಗಿದೆ. ಜ. 29ರಿಂದ ಅಧಿವೇಶನ ಆರಂಭವಾಗಲಿದ್ದು, ಫೆ. 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಕೋವಿಡ್ ಹಿನ್ನಲೆಯಲ್ಲಿ ಚಳಿಗಾಲದ ಅಧಿವೇಶನ ನಡೆಸದ ಸರ್ಕಾರ ಮೂರು ತಿಂಗಳ ವಿರಾಮದ ಬಳಿಕ ಬಜೆಟ್ ಅಧಿವೇಶನ ನಡೆಸಲು ಸಜ್ಜಾಗಿದೆ. ಈ ಬಾರಿ ಬಜೆಟ್ ಅಧಿವೇಶನದಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಸಂಸತ್ ಸದಸ್ಯರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದ್ದು, ಸಾಮಾಜಿಕ ಅಂತರ ಕಾಪಾಡುವುದು ಅತ್ಯವಶ್ಯಕವಾಗಿದೆ. ಈ ಹಿನ್ನಲೆ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿಯೇ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೆಲವು ಪ್ರಮುಖ ಘೋಷಣೆಗಳನ್ನು ವಿವರಿಸಿದ್ದಾರೆ.
- ಜನವರಿ 29ರಿಂದ ಆರಂಭಗೊಳ್ಳಲಿರುವ ಬಜೆಟ್ ಎರಡು ಭಾಗಗಳಲ್ಲಿ ನಡೆಯಲಿದೆ.
- ಮೊದಲ ಹಂತದ ಅಧಿವೇಶನ ಜ. 29ರಿಂದ ಆರಂಭವಾಗಿ ಫೆ. 15ಕ್ಕೆ ಮುಗಿಯಲಿದೆ. ಎರಡನೇ ಹಂತದ ಅಧಿವೇಶನ ಮಾರ್ಚ್ 8ರಂದು ಪ್ರಾರಂಭಗೊಂಡು ಎಪ್ರಿಲ್ 8ಕ್ಕೆ ಮುಕ್ತಾಯಗೊಳ್ಳಲಿದೆ.
- ಕೋವಿಡ್ ಹಿನ್ನಲೆ ಈ ಬಾರಿ ಎರಡು ಶಿಫ್ಟ್ನಲ್ಲಿ ಅಧಿವೇಶನ ನಡೆಯಲಿದೆ. ಬೆಳಗ್ಗೆ ರಾಜ್ಯಸಭಾ ಅಧಿವೇಶನ ನಡೆದರೆ, ಲೋಕಸಭಾ ಅಧಿವೇಶನ ಸಂಜೆ ನಡೆಯಲಿದೆ.
- ರಾಜ್ಯಸಭಾ ಅಧಿವೇಶನ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆದರೆ. ಲೋಕಸಭಾ ಅಧಿವೇಶನ ಸಂಜೆ ನಾಲ್ಕು ಗಂಟೆಯಿಂದ 8 ಗಂಟೆವರೆಗೆ ನಡೆಯಲಿದೆ.
- ಬಜೆಟ್ ಅಧಿವೇಶನದಲ್ಲಿ ಒಂದು ಗಂಟೆ ಪ್ರಶ್ನೆ ಅವಧಿಯನ್ನು ನಿಗದಿಸಲಾಗಿದೆ.
ಅಧಿವೇಶನದಲ್ಲಿ ಪ್ರಶ್ನಾವಳಿ ಅವಧಿ, ಶೂನ್ಯಾವಧಿಯನ್ನು ನಿಯಮ 377ರ ಅಡಿಯಲ್ಲಿ ಚರ್ಚೆ ಸೇರಿದಂತೆ ಎಲ್ಲವನ್ನು ನಡೆಸಲಾಗುವುದು.
- ಅಧಿವೇಶನ ಆರಂಭಕ್ಕೂ ಮುನ್ನ ಸಂಸದರಿಗೆ ಆರ್ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯವಾಗಿದೆ.
- ಸಂಸತ್ ಭವನದಲ್ಲಿ ಕೂಡ ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಲಾಗಿದೆ.
ಸಂಸದರಿಗೆ ಸಬ್ಸಿಡಿಯಲ್ಲಿ ನೀಡಲಾಗುತ್ತಿರುವ ಕ್ಯಾಟೀನ್ ಆಹಾರವನ್ನು ನಿಲ್ಲಿಸಲಾಗಿದೆ. ಇದರಿಂದ 8 ಕೋಟಿ ಉಳಿತಾಯವಾಗಲಿದೆ.
- ಈ ಮುಂಚೆ ಉತ್ತರ ರೈಲ್ವೆ ಸಂಸತ್ ಕ್ಯಾಂಟೀನ್ ಸೇವೆ ನಿರ್ವಹಿಸುತ್ತಿತ್ತು. ಇನ್ಮುಂದೆ ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕ್ಯಾಟೀನ್ ಜವಾಬ್ದಾರಿವಹಿಸಿಕೊಳ್ಳಲಿದೆ.