ಉತ್ತರ ಪ್ರದೇಶ ಚುನಾವಣೆ ಇನ್ನೇನು ಹತ್ತಿರದಲ್ಲೇ ಇದೆ ಎನ್ನುವ ಹೊತ್ತಿಗಾಗಲೇ ಎಲ್ಲಾ ಪಕ್ಷಗಳು ತಮ್ಮ ರಾಜಕೀಯ ದಾಳಗಳನ್ನು ಉರುಳಿಸಲು ಶುರು ಮಾಡಿದ್ದು ಬಿಎಸ್ಪಿ ಉತ್ತರಪ್ರದೇಶ ಬ್ರಾಹ್ಮಣರ ಓಲೈಕೆಗೆ ನಿಂತಿದೆ. ಕಳೆದ ವರ್ಷ ಹತ್ಯೆಗೀಡಾದ ದರೋಡೆಕೋರ ವಿಕಾಸ್ ದುಬೆ ಅವರ ಸಂಬಂಧಿ 17 ವರ್ಷದ ವಿಧವೆ ಖುಷಿ ದುಬೆ ಅವರಿಗೆ ಜಾಮೀನು ಕೊಡಿಸುವ ಸಲುವಾಗಿ ಕಾನೂನು ಹೋರಾಟಕ್ಕೆ ಇಳಿಯಲಿದೆ ಎಂದು ವರದಿಯಾಗಿದೆ.
ಬಿಎಸ್ಪಿಯ ಬ್ರಾಹ್ಮಣ ಮುಖಂಡ ಮತ್ತು ಹಿರಿಯ ವಕೀಲ ಸತೀಶ್ ಮಿಶ್ರಾ ಅವರು ಖುಷಿಯನ್ನು ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದಾರೆ, ಕಳೆದ ಒಂದು ವರ್ಷದಿಂದ ಬರಾಬಂಕಿಯ ಬಾಲಾಪರಾಧಿ ಕೇಂದ್ರದಲ್ಲಿ ಈ ಹುಡುಗಿಯು ಕಾಲ ಕಳೆಯುತ್ತಿದೆ.
ಖುಷಿ ಎನ್ನುವ ದುರಾದೃಷ್ಟವಂತ ಹುಡುಗಿಯ ಕತೆ ಇದು
ಖುಷಿ ದುಬೆಯು ಜುಲೈ 2, 2020 ರಂದು ಕುಖ್ಯಾತ ಬಿಕ್ರೂ ಹತ್ಯಾಕಾಂಡಕ್ಕೆ ಕೇವಲ ಮೂರು ದಿನಗಳ ಮೊದಲು ಅಭಯ್ ದುಬೆ (ವಿಕಾಸ್ ಅವರ ಸೋದರಸಂಬಂಧಿ) ಅವರನ್ನು ವಿವಾಹವಾದರು, ಈ ಹತ್ಯಾಕಾಂಡದಲ್ಲಿ ಒಂಬತ್ತು ಪೊಲೀಸರು ಕೊಲ್ಲಲ್ಪಟ್ಟರು. ಈ ಘಟನೆ ನಡೆದು 11 ದಿನಗಳ ನಂತರ, ಜುಲೈ 13 ರಂದು, ಅಭಯ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಪರಾರಿಯಾಗುತ್ತಿದ್ದ ವೇಳೆ ಎನ್ಕೌಂಟರ್ ಮೂಲಕ ಪೊಲೀಸರು ಕೊಂದಿದ್ದರು.
ಈ ಹತ್ಯಾಕಾಂಡ ನಡೆಯುವುದಕ್ಕೂ ಮೂರು ದಿನ ಮೊದಲು ಮದುವೆಯಾಗಿದ್ದ ಖುಷಿ ತನ್ನ ಗಂಡನ ಜೊತೆ ಬಾಳಿದ್ದು ಕೇವಲ ಎರಡೇ ದಿನ.
ದುಬೆ ಮನೆಯೊಳಗೆ ಪ್ರವೇಶಿಸಿದ್ದ ಪೊಲೀಸರು ಈ ಬಾಲಕಿಯನ್ನು ಗ್ಯಾಂಗ್ ಸದಸ್ಯಳೆಂದು ಆರೋಪಿಸಿ ತಕ್ಷಣವೇ ಬಂಧಿಸಿದ್ದರು. ವಿಪರ್ಯಾಸವೆಂದರೇ ಈವರೆಗೆ ಆಕೆಯ ವಿರುದ್ಧ ಯಾವುದೇ ಚಾರ್ಜ್ಶೀಟ್ ದಾಖಲಾಗಿಲ್ಲ. ನಂತರ, ಅವಳು ಅಪ್ರಾಪ್ತ ವಯಸ್ಕಳು ಎಂದು ಸಾಬೀತಾದ ನಂತರ ಕಾನ್ಪುರ ಜೈಲಿನಿಂದ ಬರಾಬಂಕಿ ಮಹಿಳಾ ಬಾಲಾ ಮಂದಿರಕ್ಕೆ ಕಳುಹಿಸಲಾಯಿತು.
ಇದರ ಮಧ್ಯೆ ಪೊಲೀಸರು ಆ ಹುಡುಗಿಯ ಮೇಲೆ ಹೊಸಾ ಆರೋಪವನ್ನು ಹೊರಿಸಿದರು. ಬೇರೆ ಯಾವುದೋ ಹೆಸರಿನ ಸಿಮ್ ಬಳಸುತ್ತಿದ್ದಾಳೆ ಈ ಹುಡುಗಿ ಎಂದು ಆರೋಪಿಸಲಾಯಿತು. ಆದರೆ, ಇದು ಆಕೆಯ ತಾಯಿಯ ಹೆಸರಿನಲ್ಲಿರುವುದು ಕಂಡುಬಂದಿದೆ. ಖುಷಿ ಈಗ ಅನಾರೋಗ್ಯದಿಂದ ಬಳಲುತ್ತಿದ್ದು, ಇತ್ತೀಚೆಗೆ ಅವಳನ್ನು ಲಕ್ನೋ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆತರಲಾಗಿದೆ.
ಖುಷಿ ದುಬೆಗೆ ಆಗಿರುವ ಈ ಅನ್ಯಾಯವನ್ನು ಭಾವನಾತ್ಮಕವಾಗಿ ಬಳಸಿಕೊಳ್ಳಲು ಬಿಎಸ್ಪಿ ತಂತ್ರ ರೂಪಿಸಿದೆ ಎಂದೇ ಹೇಳಬಹುದು. ಈ ಪ್ರಕರಣ 2022 ರಲ್ಲಿ ನಡೆಯುವ ಉತ್ತರ ಪ್ರದೇಶ ಚುನಾವಣೆಯಲ್ಲಿ ನೆಲಕಚ್ಚಿರುವ ಬಿಎಸ್ಪಿಗೆ ಸಾಕಷ್ಟು ಮೈಲೇಜ್ ನೀಡಬಹುದು ಎಂದು ಹೇಳಲಾಗುತ್ತಿದೆ.
2007 ರಲ್ಲಿ ಪಕ್ಷವು 403 ವಿಧಾನಸಭಾ ಸ್ಥಾನಗಳಲ್ಲಿ 206 ಸ್ಥಾನಗಳನ್ನುಗಳಿಸಿ ಬ್ರಾಹ್ಮಣರ 30% ಮತಗಳನ್ನು ಪಕ್ಷವು ತನ್ನ ಕಡೆಗೆ ಸೆಳೆದಿತ್ತು. ಇಷ್ಟು ಪ್ರಮಾಣದ ಓಟುಗಳನ್ನು ಗಳಿಸಿದ್ದು ಕಾಕತಾಳೀಯವಲ್ಲ, ಆದರೆ ಬಿಎಸ್ಪಿ ಮುಖ್ಯಸ್ಥ ಮಾಯಾವತಿಯವರ ಉತ್ತಮ ತಂತ್ರದ ಫಲಿತಾಂಶವಾಗಿತ್ತು. ಪಕ್ಷವು ಒಬಿಸಿ, ದಲಿತ, ಬ್ರಾಹ್ಮಣ ಮತ್ತು ಮುಸ್ಲಿಮರ ಸೌಹಾರ್ದಯುತ ಪಡೆ ಕಟ್ಟಿದ ಪರಿಣಾಮ ಇದು ಸಾಧ್ಯವಾಯಿತು ಎಂದು ಹೇಳಲಾಗುತ್ತಿದೆ.
ಮೇಲ್ಜಾತಿಯ ಸಮುದಾಯವನ್ನು ಮೆಚ್ಚಿಸಲು ಬಹುಜನ ಸಮಾಜವಾದಿ ಪಕ್ಷವು ಜುಲೈ 23 ರಂದು ಅಯೋಧ್ಯೆಯಲ್ಲಿ ‘ಬ್ರಾಹ್ಮಣ ಸಮ್ಮೇಳನ’ ನಡೆಸಲಿದೆ. 2007 ರಲ್ಲಿ ಬಿಎಸ್ಪಿ ನಡೆಸಿದ ಅಭಿಯಾನದಂತೆಯೇ ಮೊದಲ ಹಂತದ ಬ್ರಾಹ್ಮಣ ಸಮ್ಮೇಳನವನ್ನು ಜುಲೈ 23-29ರ ನಡುವೆ ಯುಪಿಯ ಆರು ಜಿಲ್ಲೆಗಳಲ್ಲಿ ನಡೆಸಲಾಗುವುದು ಮತ್ತು 2007ರಲ್ಲಿ ಬ್ರಾಹ್ಮಣರಿಗೆ ಸಾಕಷ್ಟು ಸಂಖ್ಯೆಯಲ್ಲಿ ಟಿಕೆಟ್ ನೀಡಲಾಗಿತ್ತು.
ಆದಾಗ್ಯೂ ಈ ಕ್ರಮವು ಪಕ್ಷದ ಎಲ್ಲಾ ಮುಖಂಡರಿಗೆ ಒಪ್ಪಿಗೆಯಾಗಿಲ್ಲ ಅಲ್ಲದೇ. ಅಮಾನತುಗೊಂಡ ಬಿಎಸ್ಪಿ ಶಾಸಕ ಅಸ್ಲಾಮ್ ರೈನಿ ಬಹುಜನ ಸಮಾಜವಾದಿ ಪಕ್ಷವನ್ನು "ಮುಳುಗುವ ಹಡಗು" ಎಂದು ಕರೆದಿದ್ದಾರೆ ಮತ್ತು ಪಕ್ಷದ ಬ್ರಾಹ್ಮಣರ ಮೇಲಿನ ಪ್ರೀತಿ ಕೇವಲ "ಚುನಾವಣಾ ಸಾಹಸ" ಎಂದು ವ್ಯಂಗ್ಯವಾಡಿದ್ದಾರೆ.
“ಹಿಂದುಳಿದ ವರ್ಗ, ಮೇಲ್ಜಾತಿ ಮತ್ತು ಅಲ್ಪಸಂಖ್ಯಾತರ ಜನರು ಇನ್ನು ಮುಂದೆ ಯಾವತ್ತೂ ಬಿಎಸ್ಪಿಯೊಂದಿಗೆ ಇಲ್ಲ, ಇರುವುದಿಲ್ಲ. ಪಕ್ಷದಲ್ಲಿ ಪ್ರಮುಖ ಬ್ರಾಹ್ಮಣ ನಾಯಕರಾದ ಬ್ರಜೇಶ್ ಪಾಠಕ್ ಇದ್ದರು. ಇಂದು ಬ್ರಾಹ್ಮಣರು ಸತೀಶ್ ಚಂದ್ರ ಮಿಶ್ರಾ ಹೆಸರನ್ನು ನೋಡಿಕೊಂಡು ಮುಳುಗುವ ಹಡಗಿನಂತಿರುವ ಬಿಎಸ್ಪಿಯನ್ನು ಹತ್ತುವುದಿಲ್ಲ"ಎಂದು ಅವರು ಸುದ್ದಿಗಾರರ ಎದುರು ಹೇಳಿದ್ದಾರೆ.
ಲಖಿಂಪುರ ಖೇರಿ, ಸೀತಾಪುರ, ಗೋರಖ್ಪುರ, ಬಲರಾಂಪುರ್, ಬಹ್ರೈಚ್, ಗೊಂಡಾ ಮತ್ತು ಶ್ರಾವಸ್ತಿಗಳಲ್ಲಿ ಬ್ರಾಹ್ಮಣರೊಂದಿಗೆ ಮಾತನಾಡಿದ್ದೇನೆ ಮತ್ತು ಬ್ರಾಹ್ಮಣ ಸಮುದಾಯವು ಸಮಾಜವಾದಿ ಪಕ್ಷಕ್ಕೆ ಮತ ಚಲಾಯಿಸುತ್ತದೆ ಎಂದು ಅವರೆಲ್ಲಾ ಮಾತನಾಡಿದರೆ ಹೊರತು ಬಿಎಸ್ಪಿ ಕಡೆಗೆ ತಿರುಗಿಯೂ ನೋಡುವುದಿಲ್ಲ ಎಂದು ರೈನಿ ಹೇಳಿದ್ದಾರೆ. "ಇದಲ್ಲದೆ, ಅಲ್ಪಸಂಖ್ಯಾತ ಸಮುದಾಯದವರು ಕೂಡ ಸಮಾಜವಾದಿ ಪಕ್ಷಕ್ಕೆ ಮತ ಚಲಾಯಿಸುತ್ತಾರೆ, ಮತ್ತು ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲಿದ್ದಾರೆ" ಎಂದು ಅವರು ಹೇಳಿದ್ದಾರೆ.
2020 ರ ಅಕ್ಟೋಬರ್ನಲ್ಲಿ ರೈನಿ ಸೇರಿದಂತೆ ಏಳು ಬಿಎಸ್ಪಿ ಶಾಸಕರನ್ನು ಪಕ್ಷದ ಅಧ್ಯಕ್ಷೆ ಮಾಯಾವತಿ ಅಮಾನತುಗೊಳಿಸಿದ್ದರು. ರಾಜ್ಯಸಭೆ ಚುನಾವಣೆಗೆ ಪಕ್ಷದ ಅಧಿಕೃತ ಅಭ್ಯರ್ಥಿ ರಾಮ್ ಜೀ ಗೌತಮ್ ಅವರ ನಾಮನಿರ್ದೇಶನ ಮಾಡುವುದನ್ನು ವಿರೋಧಿಸಿದ್ದರು. ಜೂನ್ 15 ರಂದು ರೈನಿ ಸೇರಿದಂತೆ ಅಮಾನತುಗೊಂಡ ಕೆಲವು ಬಿಎಸ್ಪಿ ಶಾಸಕರು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಲಕ್ನೋದಲ್ಲಿ ಭೇಟಿ ಮಾಡಿದ್ದರು.
ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ ಬಲ ಪ್ರದರ್ಶನ; ಸಿಧು 62 -ಕ್ಯಾಪ್ಟನ್ 15: ಈಗ ಆಟ ಶುರು ಎಂದ ಬಿಜೆಪಿ
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಯಾವತಿ, ಕಳೆದ ಚುನಾವಣೆಯಲ್ಲಿ "ಮೇಲ್ಜಾತಿಯ" ಜನರು ಬಿಜೆಪಿಗೆ ಮತ ಚಲಾಯಿಸಿ ಪಶ್ಚಾತ್ತಾಪ ಪಡುತ್ತಿದ್ದಾರೆ. ನಮ್ಮ ಬಿಎಸ್ಪಿ ಅಧಿಕಾರಕ್ಕೆ ಬಂದರೆ ಅವರ ಹಿತಾಸಕ್ತಿಗಳನ್ನು ಕಾಪಾಡಲಾಗುವುದು ಎಂದು ಹೇಳಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ